ತುರುವೇಕೆರೆ: ‘ಮಕ್ಕಳು ತಮ್ಮ ಪಾತ್ರಗಳಿಗೆ ತಾವೇ ಬಣ್ಣ ಹಚ್ಚಿ, ವೇಷ ಭೂಷಣ, ಆಭರಣ ತೊಟ್ಟು, ಕತ್ತಿ, ಗದೆ, ತ್ರಿಷೂಲ, ಬಿಲ್ಲು, ಬಾಣ ತಯಾರಿಸಿ ವೃತ್ತಿಪರ ಕಲಾವಿದರನ್ನೂ, ನೋಡುಗರನ್ನೂ ಹುಬ್ಬೇರುವಂತೆ ಮಾಡಿ ಜಾನಪದ ಉತ್ಸವದಂತೆ ಕಂಡು ಬಂದಿತು.
ಹೀಗೆ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಹಾಗು ಪಟ್ಟಣದ ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಪಟ್ಟಣದ ಜಿಜೆಸಿ ಕಾಲೇಜು ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ 2023-24ನೇ ಸಾಲಿನ ತಾಲ್ಲೂಕು ಮಟ್ಟದ ಪ್ರತಿಭಾಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮದಲ್ಲಿ.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎಂ.ಟಿ.ಕೃಷ್ಣಪ್ಪ ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಪ್ರತಿಭಾವಂತ ಮಕ್ಕಳಿದ್ದು ಅವರಲ್ಲಿರುವ ವಿಶಿಷ್ಟವಾದ ಸೃಜನಶೀಲ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕಿದೆ ಎಂದರು.
ಪ್ರತಿಭಾಕಾರಂಜಿಯಲ್ಲಿ ಸ್ಪಧರ್ಿಸುವ ಮಕ್ಕಳಲ್ಲಿ ಪಕ್ಷಪಾತ ಮಾಡದೇ ಯಾರು ಅರ್ಹ ಪ್ರತಿಭಾವಂತನಿದ್ದಾರೆ ಆ ವಿದ್ಯಾರ್ಥಿಯನ್ನು ಹುಡುಕಿ ಜಿಲ್ಲಾ ರಾಜ್ಯ, ರಾಷ್ಟ್ರ ಮಟ್ಟಕ್ಕೆ ಕಳುಹಿಸಿ ತಾಲ್ಲೂಕಿನ ಕೀರ್ತಿ ಹೆಚ್ಚಿಸಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಸೋಮಶೇಖರ್ ಮಾತನಾಡಿ ನಮ್ಮ ನಾಡು ಸಾಂಸ್ಕೃತಿಕವಾಗಿ ವೈವಿಧ್ಯವಾಗಿದೆ ಅದೇ ರೀತಿ ಮಕ್ಕಳಲ್ಲಿಯೂ ಬಗೆಬಗೆಯ ಕೌಶಲ್ಯಗಳಿವೆ. ಅಂತಹ ಸುಪ್ತ ಪ್ರತಿಭೆಯನ್ನು ಹೊರ ಹಾಕಲು ಕಲೋತ್ಸವ ಒಂದು ಉತ್ತಮ ವೇದಿಕೆಯಾಗಿದೆ. ಮಕ್ಕಳು ಪಠ್ಯ ವಿಷಯದ ಜೊತೆ ಜೊತೆಯಲ್ಲೇ ಪಠ್ಯೇತರ ಚಟುವಟಿಕೆಯಲ್ಲಿಯೂ ಭಾಗವಹಿಸಿ ತಮ್ಮ ವ್ಯಕ್ತಿತ್ವವನ್ನು ವೃದ್ದಿಸಿಕೊಳ್ಳ ಬೇಕು. ಇದಕ್ಕೆ ಪ್ರತಿಭಾ ಕಾರಂಜಿ ಪೂರಕವಾಗಿ ಕೆಲಸ ಮಾಡುತ್ತಿದೆ ಎಂದರು.
ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಮಾತನಾಡಿ, ನಾನು ತಾಲ್ಲೂಕಿನ ಸರ್ಕಾರಿ ಶಾಲೆಗಳಿಗೆ ಭೇಟಿ ನೀಟಿದ ಮಕ್ಕಳೊಂದಿಗೆ ಸಂವಾದ ಮಾಡುವಾಗ ಅವರುಗಳು ಉತ್ತರಿಸುತ್ತಿದ್ದ ರೀತಿಯನ್ನು ನೋಡಿದರೆ ಯಾವುದೇ ಖಾಸಗಿ ಶಾಲೆಗಳಿಗೆ ನಾವೇನು ಕಡಿಮೆ ಇದ್ದೇವೆ ಎನ್ನುವ ರೀತಿ ಇತ್ತು ಎಂದರಲ್ಲದೆ ಜಿಲ್ಲಾ ಮಟ್ಟಕ್ಕೆ ಕ್ರಿಯಾಶೀಲ ಮಕ್ಕಳನ್ನು ಆಯ್ಕೆ ಮಾಡಿ ಕಳುಹಿಸಿ ಎಂದು ಕಿವಿ ಮಾತು ಹೇಳಿದರು.
ಕನಕದಾಸ, ಶಾರದೆ, ಪರಿಸರ ಜಾಗೃತಿ, ಒನಕೆ ಓಬವ್ವ, ಭದ್ರಕಾಳಿ, ಎಡೆಯೂರು ಸಿದ್ದಲಿಂಗೇಶ್ವರ ಛದ್ಮ ವೇಷ, ವೀರಗಾಸೆ ಕುಣಿತ, ಧ್ವಜಕುಣಿತ, ವಿಜ್ಞಾನ ಮಾದರಿ, ಕ್ಲೈ ಮಾಡೆಲಿಂಗ್, ಸೋಮನ ಕುಣಿತ ಹಾಗು ಜಾನಪದ ನೃತ್ಯಗಳು ಪ್ರೇಕ್ಷಕರ ಗಮನ ಸೆಳೆಯಿತು.
ತಾಲ್ಲೂಕು ಮಟ್ಟದಲ್ಲಿ ಪ್ರಥಮಸ್ಥಾನ ಪಡೆದ 5 ರಿಂದ 12 ನೇತರಗತಿ ವರೆಗಿನ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು. ಎಲ್ಲ ಶಾಲೆಗಳ ಮಕ್ಕಳು, ಗ್ರಾಮಸ್ಥರು, ಪೋಷಕರು, ಕಲೋತ್ಸವದಲ್ಲಿ ಭಾಗವಹಿಸಿದ್ದರು. ಮಕ್ಕಳಿಗೆ ತಿಂಡಿ, ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಸಮಾರಂಭದಲ್ಲಿ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಂರಾಜು ಮುನಿಯೂರು, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಪಿ.ರಾಜು, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಷಣ್ಮುಖಪ್ಪ, ಅಕ್ಷರ ದಾಸೋಹದ ಪ್ರಭಾರೆ ನಿರ್ದೇಶಕ ರವಿಕುಮಾರ್, ಇಸಿಒ ಸಿದ್ದಪ್ಪ, ಸಿಆರ್.ಪಿ, ಆರ್.ಪಿ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.