ತುಮಕೂರು ನಗರದ ಮಹಾನಗರ ಪಾಲಿಕೆ ವ್ಯಾಪ್ತಿಯ ಕುಣಿಗಲ್ ರಸ್ತೆಯಲ್ಲಿರುವ ರೈಲ್ವೆ ಅಂಡರ್ ಪಾಸ್ ದುರಸ್ಥಿ ಕಾಮಗಾರಿ ಮಾಡುವ ಉದ್ದೇಶದಿಂದ ಮಳೆಗಾಲದಲ್ಲಿ ಒಂದು ತಿಂಗಳ ಕಾಲ ಈ ಮಾರ್ಗ ಬಂದ್ ಮಾಡುವ ಜಿಲ್ಲಾಡಳಿತ ನಿರ್ಧಾರದಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಲಿದೆ. ಕೂಡಲೇ ಜಿಲ್ಲಾಡಳಿತ ಈ ನಿರ್ಧಾರವನ್ನು ಕೈಬಿಡಬೇಕು ಎಂದು ಜನಪರ ಹೋರಾಟಗಾರ ಹೆತ್ತೇನಹಳ್ಳಿ ಮಂಜುನಾಥ್ ಒತ್ತಾಯಿಸಿದ್ದಾರೆ.
ಕುಣಿಗಲ್ ಅಂಡರ್ ಪಾಸ್ ದುರಸ್ತಿ ಕಾಮಗಾರಿಯಿಂದಾಗಿ ಔಟರ್ ರಿಂಗ್ ರೋಡ್‌ನಲ್ಲಿ ತುಂಬಾ ವಾಹನಗಳು ಸಂಚಾರಿಸುವ ಕಾರಣ ಮಕ್ಕಳನ್ನು ಶಾಲೆಗೆ ಬಿಡಲು, ವಯೋವೃದ್ಧರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ತುಂಬಾ ಸಮಸ್ಯೆಯಾಗುತ್ತಿದೆ. ಜಿಲ್ಲಾಡಳಿತ ಮುಂದಾಲೋಚನೆ ಇಲ್ಲದೆ ನಗರದ ಅಮಾನಿಕೆರೆ ಕೋಡಿ ಹಳ್ಳಕ್ಕೆ ಸೇತುವೆ ನಿರ್ಮಾಣ ಕಾಮಗಾರಿ ಸಲುವಾಗಿ ಶಿರಾ ಗೇಟ್ ರಸ್ತೆ ಬಂದ್ ಮಾಡಿದ್ದಾಗ ಸಂಚಾರ ಮಾಡಲು ಜನರು ಪರದಾಡಿದ್ದು ಮಾಸುವ ಮುನ್ನವೇ ಸಾರ್ವಜನಿಕರ ಅಭಿಪ್ರಾಯ ಪಡೆಯದೆ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.
ಶಾಲೆ, ಕಾಲೇಜುಗಳು ಆರಂಭವಾಗಿದ್ದು ಮಕ್ಕಳನ್ನು ಶಾಲೆಗೆ ಬಿಡಲು ತೊಂದರೆಯಾಗುತ್ತದೆ. ಇಂತಹ ಕಾಮಗಾರಿಗಳನ್ನು ಶಾಲೆ, ಕಾಲೇಜುಗಳು ರಜೆ ಇರುವಾಗ ಮತ್ತು ಮಳೆ ಇಲ್ಲದ ಸಂದರ್ಭದಲ್ಲಿ ಮಾಡಿದರೆ ಸಾರ್ವಜನಿಕರಿಗೆ ಅನುಕೂಲಕರವಾಗಿರುತ್ತದೆ ಎಂದರು.
ಈ ಹಿನ್ನೆಲೆಯಲ್ಲಿ ಸುಮಾರ 50 ಲಕ್ಷ ರೂ. ವೆಚ್ಚದಲ್ಲಿ ಅಂಡರ್‌ಪಾಸ್ ರಸ್ತೆ, ಚರಂಡಿ ವ್ಯವಸ್ಥೆ, ಫುಟ್‌ಪಾತ್ ಹಾಗೂ ರೈಲಿಂಗ್ಸ್ ನವೀಕರಣ ಮಾಡುವುದು, ಗ್ರಾಂಟಿಗ್ಸ್ ಅಳವಡಿಸುವುದು, ರಸ್ತೆ ದುರಸ್ಥಿ, ತಡೆಗೋಡೆ ದುರಸ್ಥಿ, ಚರಂಡಿ ದುರಸ್ಥಿ ಕಾಮಗಾರಿ, ಆರ್‌ಸಿಸಿ ರೈಲಿಂಗ್ಸ್ ಅಳವಡಿಕೆ ಸೇರಿದಂತೆ ಹಲವು ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ಈ ಮಾರ್ಗವನ್ನು ಬಂದ್ ಮಾಡಲಾಗಿದೆ. ಸಾರ್ವಜನಿಕರ ಸುಗಮ ಸಂಚಾರದ ದೃಷ್ಠಿಯಿಂದ ಕಾಮಗಾರಿಯನ್ನು ದಸರ ರಜೆ, ಮತ್ತು ಬೇಸಿಗೆ ರಜೆ ಸಮಯದಲ್ಲಿ ಮಾಡಬೇಕು. ಮಳೆಗಾಲದಲ್ಲಿ ಇಂತಹ ಹುಚ್ಚಾಟಕ್ಕೆ ಕೈ ಹಾಕಬಾರದು ಎಂದರು.
ಒಂದು ತಿಂಗಳಲ್ಲಿ ಕಾಮಗಾರಿ ಮುಗಿಸುವುದಾಗಿ ಹೇಳಿದ್ದಾರೆ. ಅದು ಸಾಧ್ಯವೇ ಎಂಬುದನ್ನು ಜಿಲ್ಲಾಡಳಿತ ಸ್ಪಸ್ಟಪಡಿಸಬೇಕು. ಕುಣಿಗಲ್, ಹೆಬ್ಬೂರು, ನಾಗವಲ್ಲಿ, ಗೂಳೂರು ಸೆರಿದಂತೆ ತುಮಕೂರು ನಗರದ ವಿವಿಧ ಬಡಾವಣೆಯ ನಾಗರಿಕರಿಗೆ ಮಳೆಗಾಲದಲ್ಲಿ ಈ ಕಾಮಾಗಾರಿ ಮಾಡುವುದರಿಂದ ತೀವ್ರ ತೊಂದರೆಯಾಗುತ್ತದೆ.
ಅಂಡರ್ ಪಾಸ್ ಕಾಮಗಾರಿಯಿಂದಾಗಿ ಒಂದು ತಿಂಗಳ ಕಾಲ ಭಾನುವಾರ ಬೆಳಿಗ್ಗೆಯಿಂದ ಈ ಅಂಡರ್‌ಪಾಸ್ ಬಂದ್ ಮಾಡಲಾಗಿದೆ. ಕುಣಿಗಲ್ ಕಡೆಗೆ ಹೋಗುವ ಮತ್ತು ಕುಣಿಗಲ್ ಕಡೆಯಿಂದ ತುಮಕೂರು ನಗರಕ್ಕೆ ಬರುವ ವಾಹನಗಳ ಮಾರ್ಗ ಬದಲಾವಣೆ ಮಾಡಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ. ಅದರೆ ಈ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಪಡೆಯದೆ ಏಕಮುಖವಾಗಿ ಈ ರೀತಿ ನಿರ್ಧಾರ ಮಾಡುವುದು ಸಾರ್ವಜನಿಕ ಹಿತದೃಷ್ಠಿಯಿಂದ ಒಳ್ಳೆಯದಲ್ಲ.ಕೂಡಲೇ ಈ ಭಾಗದ ಸಾರ್ವಜನಿಕರ ಸಭೆ ನಡೆಸಿ ಅಭಿಪ್ರಾಯ ಪಡೆದು ಕಾಮಗಾರಿ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.