Publicstory
ತುರುವೇಕೆರೆ: ಮೀನುಗಾರರು ಮತ್ತು ಅವರ ಕುಟುಂಬದ ಹಿತ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಅನೇಕ ಸೌಲಭ್ಯಗಳನ್ನು ನೀಡುತ್ತಿದ್ದು ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಆರ್ಥಿಕವಾಗಿ ಸದೃಢರಾಗ ಬೇಕೆಂದು ಶಾಸಕ ಮಸಾಲಜಯರಾಂ ಹೇಳಿದರು.
ಪಟ್ಟಣದಲ್ಲಿ ನಡೆದ ರಾಜ್ಯ ವಲಯ ಯೋಜನೆಯಡಿ ಆಯ್ಕೆಯಾದ ತಾಲ್ಲೂಕಿನ ಫಲಾನುಭವಿಗಳಿಗೆ ಮೀನು ಹಿಡಿಯುವ ದೋಣಿ, ಹುಟ್ಟು ಸೇರಿದಂತೆ ಇತರೆ ಸಲಕರಣೆಗಳನ್ನು ವಿತರಿಸುವ ಸಮಾರಂಭದಲ್ಲಿ ಮಾತನಾಡಿದರು.
ತಾಲ್ಲೂಕಿನಲ್ಲಿ ಹೇಮಾವತಿ ನಾಲಾ ನೀರು ಸಂಮೃದ್ಧವಾಗಿ ಹರಿಯುತ್ತಿರುವುದರಿಂದ ಮಲ್ಲಾಘಟ್ಟ, ವಡವಘಟ್ಟ, ಕೊಳಾಲ, ತಂಡಗ, ಸಂಪಿಗೆ, ಸೂಳೇಕೆರೆ, ತುರುವೇಕೆರೆ, ಮಾಯಸಂದ್ರ, ಸಾರಿಗೇಹಳ್ಳಿ ಸೇರಿದಂತೆ ಅನೇಕ ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿದ್ದು ಇದರಿಂದ ತಾಲ್ಲೂಕಿನಲ್ಲಿ ಸು.50ರಿಂದ 100 ಟನ್ ತನಕ ಮೀನುಗಾರರಿಗೆ ಮೀನು ಕೃಷಿ ಮಾಡಲು ಅನುಕೂಲಗಳಿವೆ ಎಂದರು.
ಎಲ್ಲ ಸಮುದಾಯದ ಸು.200 ಮೀನು ವೃತ್ತಿ ಕೆಲಸ ಮಾಡುವ ಕುಟುಂಬಗಳು ತಾಲ್ಲೂಕಿನಲ್ಲಿ ಸಕ್ರಿಯವಾಗಿವೆ. ಇಂತಹ ಕುಟುಂಬಗಳಿಗೆ ನಮ್ಮ ಸರ್ಕಾರ ಮನೆ ನೀಡುವುದು, ಕಿಟ್, ದೋಣಿ, ಬಲೆ ಮೊದಲಾದ ಸೌಲಭ್ಯಗಳನ್ನು ನೀಡುತ್ತಾ ಹೆಚ್ಚು ಹೆಚ್ಚು ಮೀನು ಕೃಷಿಯನ್ನು ಪ್ರೋತ್ಸಾಹಿಸುತ್ತಾ ಬಂದಿದೆ ಎಂದು ತಿಳಿಸಿದರು.
ಇತ್ತೀಚಿ ದಿನಗಳಲ್ಲಿ ಕೆಲ ರೈತರು ತಮ್ಮ ಜಮೀನುಗಳ ಹೊಂಡಗಳಲ್ಲಿ ಮೀನುಮರಿ ಪಾಲನ ಕೇಂದ್ರಗಳನ್ನು ತೆರೆದುಕೊಂಡು ಉತ್ಪಾದನೆಯಾದ ಮರಿಗಳನ್ನು ಕೆರೆಗಳಲ್ಲಿ ಮೀನು ಸಾಕುವವರಿಗೆ ಮಾರಾಟ ಮಾಡುತ್ತಿದ್ದಾರೆ. ಅಲ್ಲದೆ ಎಸ್ಸಿಪಿಟಿಎಸ್ಪಿ ಯೋಜನೆಯಡಿ ಜಿಲ್ಲಾ ಪಂಚಾಯಿತಿಯಿಂದ ತಾಲ್ಲೂಕಿನ ಮೀನುಗಾರರಿಗೆ ಮೀನಿನ ಬಲೆ ಕಿಟ್ ಸಹ ನೀಡಲಾಗುತ್ತದೆ ಎಂದರು.
ಇದೇ ವೇಳೆ ಜಗದೀಶ್, ಕಾಳಯ್ಯ, ಕುಮಾರ್, ಬಸವರಾಜು, ನಾಗರಾಜು. ಕೃಷ್ಣ, ಶಿವರಾಂ, ಅಭಿಲಾಷ್, ಸವಿತಾ ಮತ್ತು ಗಂಗಾಧರ್ ಫಲಾನುಭವಿ ಮೀನುಗಾರರಿಗೆ ದೋಣಿ, ಹುಟ್ಟು , ಇನ್ನಿತರ ಪರಿಕರಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಾಗರತ್ನ, ಉಪಾಧ್ಯಕ್ಷ ಭೈರಪ್ಪ, ಮೀನುಗಾರಿಕೆ ಸಹಾಯಕ ನಿರ್ದೇಶಕ ಮೋಹನ್ ಕುಮಾರ್ ಮತ್ತು ಮೀನುಗಾರರು ಉಪಸ್ಥಿತರಿದ್ದರು.