ತುಮಕೂರು: ಕುಣಿಗಲ್ ಕ್ಷೇತ್ರದಿಂದ ಟಿಕೆಟ್ ಬಯಸಿ ಬಿಜೆಪಿಗೆ ಸೇರಿದ್ದ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಅವರಿಗೆ ಟಿಕೆಟ್ ತಪ್ಪಿದ್ದು ಅವರ ಮುಂದಿನ ನಡೆ ಕುತೂಹಲ ಮೂಡಿಸಿದೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕಾರಣದಿಂದಾಗಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ತಪ್ಪಿಸಿಕೊಂಡು ಅತಂತ್ರರಾಗಿದ್ದ ಅವರೀಗ ಮತ್ತೇ ಅತಂತ್ರ ಸ್ಥಿತಿಗೆ ತಲುಪುವಂತಾಗಿದೆ.
ಜಿಲ್ಲೆಯಲ್ಲಿ ಸಜ್ಜನ ರಾಜಕಾರಣಿಯೆಂದೇ ಹೆಸರಾಗಿರುವ ಅವರು, ರಾಜಕೀಯವಾಗಿ ತಪ್ಪು ಹೆಜ್ಜೆ ಇರಿಸಿದ್ದೆ ಅವರಿಗೆ ಮುಳುವಾಗ ತೊಡಗಿದೆ.
ಕಾಂಗ್ರೆಸ್ ನಲ್ಲಿ ರಾಜಕಾರಣ ಆರಂಭಿಸಿದ ಅವರು ಆ ಪಕ್ಷದಲ್ಲಿ ಶಾಸಕರು, ಜಿಲ್ಲಾ ಘಟಕದ ಅಧ್ಯಕ್ಷರು ಆಗಿದ್ದರು. ಆದರೂ ಅವರಿಗೆ ಅಲ್ಲಿ ಟಿಕೆಟ್ ತಪ್ಪಿಸಲಾಯಿತು. ಅಲ್ಲಿಂದ ಅವರು ಜೆಡಿಎಸ್ ಗೆ ಬಂದರು.
ಜೆಡಿಎಸ್ ನಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಮತಗಳ ಅಂತರದಲ್ಲಿ ಸೋತರು. ಆ ಪಕ್ಷದಲ್ಲೂ ಇರಲಾರದೇ ಮತ್ತೇ ಕಾಂಗ್ರೆಸ್ ಸೇರಿದ್ದರು.
ಡಾ.ಜಿ.ಪರಮೇಶ್ವರ್ ಅವರ ಒತ್ತಾಸೆ ಹಾಗೂ ಕಾರಣದಿಂದಾಗಿ ಅವರು ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಈಗಿನ ಸಂಸದ ಜಿ.ಎಸ್.ಬಸವರಾಜ್ ವಿರುದ್ಧ ಸ್ಪರ್ಧಿಸಿ ಗೆದ್ದರು. ಆದರೆ ಸಮ್ಮಿಶ್ರ ಸರ್ಕಾರದ ಧರ್ಮ ಸಂಕಟ ಅವರ ತಲೆ ದಂಡಕ್ಕೆ ಕಾರಣವಾಯಿತು.
ಲೋಕಸಭಾ ಕ್ಷೇತ್ರಕ್ಕೆ ಎಚ್.ಡಿ.ದೇವೇಗೌಡರು ಕಾಂಗ್ರೆಸ್, ಜೆಡಿಎಸ್ ಜಂಟಿ ಅಭ್ಯರ್ಥಿಯಾಗಿ ನಿಂತಾಗ ಎಸ್ ಪಿಎಂ ತೆಗೆದುಕೊಂಡ ನಿರ್ಧಾರ ಅವರನ್ನು ಕಾಂಗ್ರೆಸ್ ನಲ್ಲೂ ಮೂಲೆಗುಂಪು ಮಾಡುವಂತೆ ಮಾಡಿತು.
ಪರಮೇಶ್ವರ್ ಅವರನ್ನು ಶತಾಯ ಗತಾಯ ವಿರೋಧಿಸುವ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರ ಪರ ಎಸ್ ಪಿ ಎಂ ನಿಂತಿದ್ದು ಅವರು ರಾಜಕೀಯ ಬಲ ಕಳೆದುಕೊಳ್ಳಲು ಕಾರಣವಾಯಿತು ಎಂದು ವಿಶ್ಲೇಷಿಸಲಾಗುತ್ತಿದೆ.
ದೇವೇಗೌಡರ ಸೋಲಿಗೆ ರಾಜಣ್ಣ ಅವರ ಜತೆ ಎಸ್ ಪಿಎಂ ಕೈ ಜೋಡಿಸಿದ ಆರೋಪ ಅವರನ್ನು ಪರಮೇಶ್ವರ್ ಅವರಿಂದ ದೂರ ಸರಿಯುವಂತೆ ಮಾಡಿತು ಎನ್ನುತ್ತಾರೆ ಆ ಪಕ್ಷದ ಮೂಲಗಳು.
ರಾಜ್ಯಸಭಾ ಸದಸ್ಯನಾಗಿ ಮಾಡುವುದಾಗಿ ರಾಹುಲ್ ಗಾಂಧಿ ಮಾತುಕೊಟ್ಟಿದ್ದರು. ಆದರೆ ನನ್ನನ್ನು ಬಿಟ್ಟು ದೇವೇಗೌಡರನ್ನು ರಾಜ್ಯಸಭೆಗೆ ಕಳುಹಿಸುವ ಕೆಲಸ ಕಾಂಗ್ರೆಸ್ ಮಾಡಿತು. ಮಾತು ಕೊಟ್ಟಿದ್ದ ರಾಹುಲ್ ಗಾಂಧಿ ವಚನ ಮರೆತರು ಎಂಬ ಸಿಟ್ಟಿನಲ್ಲಿ ಎಸ್ ಪಿಎಂ ಕುದಿಯುತ್ತಿದ್ದರು. ಡಿ.ಕೆ. ಶಿವಕುಮಾರ್ ಸಹ ಕಾರಣ ಎಂಬುದು ಅವರ ಸಿಟ್ಟು ಹೆಚ್ಚಿಸಲು ಇದ್ದ ಮತ್ತೊಂದು ಕಾರಣ.
ಎಸ್ ಪಿಎಂ ಮನಸ್ಥಿತಿಯನ್ನು ಸರಿಯಾಗಿಯೇ ಅರಿತಿದ್ದ ಬಿಜೆಪಿ ನಾಯಕರು ಅವರನ್ನು ಬಿಜೆಪಿಗೆ ಸೆಳೆದುಕೊಂಡರು. ಕುಣಿಗಲ್ ನಲ್ಲಿ ಸೀಟು ಕೊಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಎಸ್ ಪಿಎಂ ಚುನಾವಣಾ ಪ್ರಚಾರ ಸಹ ನಡೆಸಿದ್ದರು. ಈಗ ಆ ಪಕ್ಷವೂ ಕೈಕೊಟ್ಟಿದೆ.
ಡಿ.ಕೆ.ಶಿವಕುಮಾರ್ ಸಂಬಂಧಿ ಡಾ.ರಂಗನಾಥ್ ಅವರನ್ನು ಸೋಲಿಸಬೇಕಬ ಏಕೈಕ ಗುರಿ ಎಸ್ ಪಿ ಎಂ ಅವರದು. ಇದೇ ರೀತಿಯ ಗುರಿಯನ್ನು ಇನ್ನೊಬ್ಬ ಮಾಜಿ ಶಾಸಕ ರಾಮಸ್ವಾಮಿಗೌಡ ಅವರದು ಸಹ ಆಗಿದೆ. ಈ ಇಬ್ಬರೂ ಒಂದುಗೂಡಿದರೆ ಕುಣಿಗಲ್ ನ ರಾಜಕೀಯ ಚಿತ್ರಣ ಬದಲಾದರೂ ಬದಲಾಗಬಹುದು.
ಏನೇ ಆದರೂ ಮುದ್ದಹನುಮೇಗೌಡ ಅವರು ಸ್ವತಂತ್ರವಾಗಿ ಅಥವಾ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿಯಾದರೂ ನಿಲ್ಲುವುದು ಖಚಿತ ಎಂದು ಎಸ್ ಪಿಎಂ ಹೇಳಿದ್ದಾರೆ.
ಈಗಾಗಲೇ ಬಿಜೆಪಿಯ ಮತ್ತೊಬ್ಬ ಆಕಾಂಕ್ಷಿ ರಾಜೇಶಗೌಡ, ಎಸ್ ಪಿಎಂ, ರಾಮಸ್ವಾಮಿ ಗೌಡ ಅವರ ಬೆಂಬಲಿಗರ ಸಭೆಯೂ ನಡೆದಿದೆ. ಎಲ್ಲರೂ ಸೇರಿ ಒಮ್ಮತದ ಅಭ್ಯರ್ಥಿ ನಿಲ್ಲಿಸುವ ಮಾತುಕತೆಯೂ ನಡೆದಿದೆ.
ಈ ಮೂವರು ಸೇರಿ ಕುಣಿಗಲ್ ಅಸ್ಮಿತೆಯನ್ನು ಚುನಾವಣಾ ಕಣಕ್ಕೆ ಒಡ್ಡುವ ಹೊಸ ಪ್ರಯತ್ನ ಮಾಡುತ್ತಾರೆಯೇ ಕಾದು ನೋಡಬೇಕಾಗಿದೆ.