ತುರುವೇಕೆರೆ: ಮೇ ಹತ್ತರಂದು ನಡೆಯುವ ತುರುವೇಕೆರೆ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಏ.13 ರಿಂದ ನಾಮ ಪತ್ರ ಸಲ್ಲಿಕೆ ಆರಂಭವಾಗುವ ಕಾರಣ ಪಟ್ಟಣದ ತಾಲ್ಲೂಕು ಕಚೇರಿಯ ಚುನಾವಣಾ ಕಾರ್ಯಾಲಯದಲ್ಲಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಎಂ.ಎನ್. ಮಂಜುನಾಥ್ ತಿಳಿಸಿದರು.
ಇಲ್ಲಿನ ಚುನಾವಣಾ ಕಾರ್ಯಾಲಯದ ಸುತ್ತಮುತ್ತಲಿನ 100 ಮೀಟರ್ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಯಲ್ಲಿದ್ದು ತಾಲ್ಲೂಕು ಕಚೇರಿ ಆಸುಪಾಸು ಪೊಲೀಸ್ ಬಿಗಿಭದ್ರತೆ ಹಾಕಲಾಗಿದೆ. ಯಾವುದೇ ಪಕ್ಷಗಳ ಅಭ್ಯರ್ಥಿ ಮತ್ತು ಆತನ ನಾಲ್ಕು ಮಂದಿ ಬೆಂಬಲಿಗರೊಂದಿಗೆ ಮಾತ್ರ ನಾಮ ಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯ ತನಕ ನಾಮಪತ್ರ ಸಲ್ಲಿಸಬಹುದಾಗಿದೆ. ಏ. 14ರಂದು ಅಂಬೇಡ್ಕರ್ ಜಯಂತಿ ಮತ್ತು 15 ರಂದು ಭಾನುವಾರ ರಜಾದಿನ ಹೊರತುಪಡಿಸಿ ಉಳಿದ ದಿನ ನಾಮ ಪತ್ರ ಸ್ವೀಕರಿಸಲಾಗುವುದು. ಏ.20ರಂದು ನಾಮ ಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ.
ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಚುನಾವಣಾ ಅಧಿಕಾರಿಗಳ ಕಾರ್ಯಾಲಯದಲ್ಲಿ ಸಿಗುವ ನಾಮಪತ್ರಗಳನ್ನು ಪಡೆದು ಅದರೊಂದಿಗೆ ಸಂಬಂಧಪಟ್ಟ ದಾಖಲೆಗಳೊಂದಿಗೆ ನಾಮಪತ್ರ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು