ತುಮಕೂರು: ಭಾರತೀಯ ಮಹಿಳೆಯರಿಗೆ ಅಕ್ಕ ಮಹಾದೇವಿ ಸಮಾನತೆ, ಸ್ವಾತಂತ್ರ್ಯದ ದಾರಿಯನ್ನು ತೋರಿಸಿಕೊಟ್ಟರು ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಕೆ.ಬಿ. ಗೀತಾ ಹೇಳಿದರು.
ಸುಫಿಯ ಕಾನೂನು ಕಾಲೇಜಿನಲ್ಲಿ ಆಯೋಜಿಸಿದ್ದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ವೇದಗಳ ಕಾಲದಲ್ಲಿ ಮಹಿಳಾ ಸಮಾನತೆ ಇತ್ತು. ಮೈತ್ರೇಯಿ, ಗಾರ್ಗಿಯೆ ಮುಂತಾದ ಮಹಿಳಾ ವಿದ್ವಾಂಸರು ಇದ್ದರು. ಮಹಿಳೆಯರು ನಿರ್ಭಿಡೆಯಿಂದ ಬದುಕಬಹುದಿತ್ತು. ಆದರೆ ಕ್ರಮೇಣ ಮಹಿಳೆಯರನ್ನು ಕೋಣೆಯೊಳಗೆ ಬಂಧಿಯಾಗಿಸಲಾಯಿತು ಏಕೆ ಎಂಬುದನ್ನು ಎಲ್ಲರೂ ಅವಲೋಕಿಸಬೇಕಾಗಿದೆ ಎಂದರು.
ಸಾಕಷ್ಟು ಸುಧಾರಣೆ ಕಂಡರೂ ಇನ್ನೂ ಮಹಿಳಾ ಶೋಷಣೆ ನಿಂತಿಲ್ಲ. ಕಾನೂನು ಕ್ಷೇತ್ರದಲ್ಲಿ ಕರ್ನಾಟಕದ ಮಹಿಳೆಯರ ಸಾಧನೆ ಅಗಣಿತ ಎಂದು ಹೇಳಿದರು.
ಮಹಿಳೆಯರಿಗೆ ಗೌರವ ಕೊಡುವುದು ಮನೆಯಿಂದಲೇ ಆರಂಭವಾಗಬೇಕು. ಮಹಿಳೆಯರ ಸಾಧನೆಗೆ ಕೆಲವು ಗಂಡಸರೂ ಉದಾಸೀನ ತೋರುವುದು ಇದೆ. ಇದು ನಿಲ್ಲಬೇಕು ಎಂದರು.
ಮಹಿಳೆ ಮತ್ತು ಕಾನೂನುಗಳ ಕುರಿತು ಮಾತನಾಡಿದ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶೆ ನೂರುನ್ನೀಸಾ, ಮೇಲ್ವರ್ಗದ ಸಾಧಕ ಮಹಿಳೆಯರ ಬಗ್ಗೆ ಮಾತ್ರ ಇತಿಹಾಸ ಮಾತನಾಡುತ್ತದೆ. ಕೆಳ ವರ್ಗ, ಬಡತನದ ಮಹಿಳೆಯರ ಬಗ್ಗೆ ಎಲ್ಲೂ ಮಾತನಾಡುವುದಿಲ್ಲ ಎಂದರು.
ಮಹಿಳೆಯರಿಗಾಗಿ ಅನೇಕ ಕಾನೂನು ತರಲಾಗಿದೆ. ಲೈಂಗಿಕ ದೌರ್ಜನ್ಯದ ವಿರುದ್ಧ ಕಾನೂನುಗಳು ಗಟ್ಟಿಯಾಗಿವೆ. ಆಸಿಡ್ ದಾಳಿಗೆ ಒಳಗಾದ ಹೆಣ್ಣು ಮಕ್ಕಳಿಗೆ ಪ್ರಾಧಿಕಾರ ಹತ್ತು ಲಕ್ಷ ಹಣದ ನೆರವು ನೀಡುತ್ತದೆ ಎಂದರು.
ಹಿರಿಯ ವಕೀಲ ನಾಗೇಶ್ ರಾವ್ ಗಾಯಕವಾಡ್ ಹಿಂದೂ ಉತ್ತರದಾಯಿ ಕಾಯ್ದೆ ಕುರಿತು ಮಾತನಾಡಿದರು.
ಪ್ರಾಂಶುಪಾಲ ಡಾ.ಎಸ್.ರಮೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ ಮಹಿಳೆಯರು ಅನೇಕ ರಂಗಗಳಲ್ಲಿ ಸಾಧನೆ ಮಾಡಿದ್ದಾರೆ. ಮಹಿಳಾ ಕಾನೂನು ಜಾಗೃತಿ ಅಗತ್ಯ ಎಂದರು.
ಕಾರ್ಯಕ್ರಮದಲ್ಲಿ ವಕೀಲೆ ಶೋಭಾ, ಉಪ ಪ್ರಾಂಶುಪಾಲರಾದ ಓಬಯ್ಯ, ಸಹ ಪ್ರಾಧ್ಯಪಕರಾದ ಸಿ.ಕೆ.ಮಹೇಂದ್ರ, ಮಮತಾ, ರೇಣುಕಾ, ತಬಸ್ಸಮ್, ಶ್ರೀನಿವಾಸ್, ರಂಗಧಾಮಯ್ಯ, ಕಾಲೇಜಿನ ಅಧೀಕ್ಷಕ ಜಗದೀಶ್, ಗ್ರಂಥಪಾಲಕ ಸುಬ್ರಹ್ಮಣ್ಯ ಇತರರು ಇದ್ದರು.