ತುಮಕೂರು: ಅಪರಾಧ ಪ್ರಕರಣಗಳಲ್ಲಿ ಪೊಲೀಸರು ನಡೆಸುವ ತನಿಖೆ ಹಾಗೂ ಆಧುನಿಕ ಕಾಲದಲ್ಲಿ ಎದುರಿಸಬೇಕಾದ ಸವಾಲುಗಳ ಕುರಿತು ತುಮಕೂರು ಸಿಟಿ ಡಿವೈ ಎಸ್ಪಿ ಹಾಗೂ ಖ್ಯಾತ ತನಿಖಾಧಿಕಾರಿಯೂ ಆದ ಕೆ.ಆರ್. ಚಂದ್ರಶೇಖರ್ ಅವರಿಂದ ಕಾನೂನು ವಿದ್ಯಾರ್ಥಿಗಳು, ಯುವ ವಕೀಲರು, ಪತ್ರಿಕೋದ್ಯಮ ವಿದ್ಯಾರ್ಥಿಗಳಿಗಾಗಿ ಉಪನ್ಯಾಸ ಆಯೋಜಿಸಲಾಗಿದೆ.
ಹಲವು ಗಂಭೀರ ಪ್ರಕರಣಗಳನ್ನು ಭೇದಿಸಿರುವ ಚಂದ್ರಶೇಖರ್ ಅವರು ಜನಸ್ನೇಹಿ ಪೊಲೀಸ್ ಹಾಗೂ ತಮ್ಮದೇ ಆದ ತನಿಖಾ ವಿಧಾನಗಳಿಗೆ ಹೆಸರುವಾಸಿಯಾಗಿದ್ದಾರೆ.
ಮೇ 23 ರಂದು ನಗರದ ಜಯನಗರ ಶೆಟ್ಟಿಹಳ್ಳಿ ಮುಖ್ಯರಸ್ತೆಯಲ್ಲಿರುವ ಸುಫಿಯಾ ಕಾನೂನು ಕಾಲೇಜಿನಲ್ಲಿ ಬೆಳಿಗ್ಗೆ 10 ಕ್ಕೆ ಕಾರ್ಯಕ್ರಮ ನಡೆಯಲಿದೆ.
ಇದೇ ಗೋಷ್ಠಿಯಲ್ಲಿ ಸೈಬರ್ ಕ್ರೈಮ್, ಅಪರಾಧ ಕೃತ್ಯದ ಜಾಗದ ಮಹತ್ವದ ಬಗ್ಗೆಯೂ ಉಪನ್ಯಾಸ ಗೋಷ್ಠಿಗಳು ನಡೆಯಲಿವೆ.
ಅಂತರ ಕಾಲೇಜಿನ ಈ ಗೋಷ್ಠಿಯಲ್ಲಿ ಹಲವು ಕಾನೂನು ಕಾಲೇಜುಗಳ ವಿದ್ಯಾರ್ಥಿಗಳು, ಪತ್ರಿಕೋದ್ಯಮ ವಿದ್ಯಾರ್ಥಿಗಳು, ವಕೀಲರು ಭಾಗವಹಿಸುವರು ಎಂದು ಕಾರ್ಯಕ್ರಮದ ಸಂಯೋಜಕರಾದ ಕಾಲೇಜಿನ ಪ್ರೊ. ಬಿ.ಸಿ. ಗೌರಿಶಂಕರ್, ಪ್ರೊ. ಸೈಯದ್ ಜೈನಾಬಿ ತರುಣಮ್ ತಿಳಿಸಿದ್ದಾರೆ.
ಮುಖ್ಯ ಅತಿಥಿಯಾಗಿ ಹಿರಿಯ ಪತ್ರಕರ್ತರಾದ ಹರೀಶ್ ಆಚಾರ್ಯ ಭಾಗವಹಿಸುವರು. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ಎಸ್. ಷಫೀ ಅಹಮದ್ ಅಧ್ಯಕ್ಷತೆ ವಹಿಸುವರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್. ರಮೇಶ್ ಹಾಜರಿರುವರು. ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಗುವುದು ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.