Friday, December 27, 2024
Google search engine
Homeಸಾಹಿತ್ಯ ಸಂವಾದಅಜ್ಞಾತಿಗಳ ಆತ್ಮ ಚರಿತ್ರೆ

ಅಜ್ಞಾತಿಗಳ ಆತ್ಮ ಚರಿತ್ರೆ

(ಡಾ.ಎಚ್.ಶ್ವೇತಾರಾಣಿ ಮೂಲತಃ ನೆಲಮಂಗಲದವರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಯಲ್ಲಿ ಕನ್ನಡ ವಿಭಾಗದಲ್ಲಿ ಮಂಡಿಸಿದ ಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪಡೆದಿದ್ದಾರೆ. ಏಳು ಮಲ್ಲಿಗೆ ಗನ್ನೆ ಮತ್ತು ಇತರ ಕತೆಗಳು ಅವರ ಸಂಪಾದಿತ ಕೃತಿ. ಒಳಗುದಿ ಅವರ ವಿಮರ್ಶಾ ಕೃತಿ. ಕವಯತ್ರಿ ಹೌದು. ಇದು ಅವರ ಮೊದಲ ಕಾದಂಬರಿ. ಧಾರವಾಹಿ ರೂಪದಲ್ಲಿ ಪ್ರಕಟವಾಗಲಿದೆ.)

ಪಾಳೇಗಾರ ನಾಯಕ ಹೇಳಿ ಕಳಿಸಿದ್ದ ಮಾತು ಕೇಳಿದ ಮನೆಯವರೆಲ್ಲರಿಗೂ ಗರ ಸಿಡಿಲು ಬಡಿದಂತಾಗಿತ್ತು. ಮನೆಯ ಗಂಡು ಮಕ್ಕಳು ಕೋಪಕ್ಕೆ ಸಿಲುಕಿ ದವಡೆ ಕಡಿಯುತ್ತಿದ್ದರು. ಆದರೂ ಒಂದಿಬ್ಬರು ತುಟಿ ಬಿಚ್ಚಿ ಮಾತು ಮೀರಿ ಒಂದೆರಡು ಮಾತುಗಳನ್ನು ಆಡಿಯೇ ಬಿಟ್ಟಿದ್ದರು.

ಮನೆಯ ಕರಣಿಕನೆದುರು ಇದೂವರೆಗೂ ಯಾರು ಮಾತನಾಡಿದ ಉದಾಹಣೆಯೇ ಆ ಕುಟುಂಬದಲ್ಲಿ ಇರಲಿಲ್ಲ. ಕರಣಿಕ ಬಿಟ್ಟರೆ ಕರಣಿಕನ ತಾಯಿ ಮಾತ್ರ ಇಂಥ ಸಂದರ್ಭಗಳಲ್ಲಿ ಏನಾದರೂ ಮಾತನಾಡಿ, ಸಲಹೆ ನೀಡುವುದು ಆ ಮನೆತನಕ್ಕೆ ಬಂದಿದ್ದ ರೂಢಿ.

ಸಂಜೆಯನ್ನು ಸುಮ್ಮನೇ ಬಿಡಲು ಸಾಧ್ಯವೇ ಇಲ್ಲ ಎನ್ನುವಂತೆ ಸೂರ್ಯನನ್ನು ಭೂಮಿ ನುಂಗುತ್ತಿದ್ದ. ಬೆಳಕು ಹರಿದ ಮೇಲೆ ರಾತ್ರಿ ಆಗಲೇಬೇಕಲ್ಲವೇ, ಯಾಕೋ ಕರಣಿಕನ ಮನೆಯವರಿಗೆ ಹೊತ್ತು ಮೀರಿ ಕತ್ತಲು ಜಗತ್ತನ್ನು ಆವರಿಸುತ್ತಿದ್ದದ್ದು ಗಮನಕ್ಕೆ ಬಂದಂತೆಯೇ ಇರಲಿಲ್ಲ. ಕರಣಿಕರ ಮನೆ ಮುಂದಿನ ಜಾಗ ಎಂದರೆ ಒಂದರ್ಥದಲ್ಲಿ ಜಾತ್ರೆಯೇ ಸರಿ. ಸಾವಿರಕ್ಕೂ ಮೀರಿ ಕುರಿಗಳು, ಆಳು ಕಾಳುಗಳು, ಐವತ್ತು ಜತೆ ದನ ಕರುಗಳು, ಹಾಲು ಕರೆಯುವವರು, ಹುಲ್ಲು ತರುವವರು, ಕತ್ತಿ ಮಸೆಯುವವರು, ಎಲ್ಲೋ ಪರವೂರಿನಿಂದ ಕೆಲಸ ಹುಡುಕಿಕೊಂಡು ಬಂದವರು … ಹೀಗೆ ಯಾವಾಗಲೂ ಜನ ಜಂಗುಳಿ. ಆದರೆ ಈ ದಿನ ಮನೆಯ ಹಿತ್ತಲಕೋಣೆಯಿಂದ ಕರಣಿಕರ ಯಾರೂ ಈಚೆ ಬರದಿರುವುದನ್ನು ಕಂಡು, ಆಳು ಮಕ್ಕಳಿಗೆ ಇದೇನಪ್ಪ ಎಂಬ ಚಿಂತೆ.

‘ಯಾವೊತ್ತು ಹೀಂಗಾಗಿರಲಿಲ್ಲ, ಅದೇನೋ ಗುಸು-ಗುಸು ಮಾತು ಕೇಳ್ತಪ್ಪ, ಕರಣಿಕರು ಕೂತಾರೆ, ದೊಡ್ಡರೋ ವಿಸಯ ನಮಗ್ಯಾಕವ್ವ’ ಎಂದು ಬೋರಲಿಂಗ ಎಲ್ಲರ ಎದುರು ಹೇಳಿದ ಮೇಲೆ ಹಟ್ಟಿಯಲ್ಲಿದ್ದ ಆಳು-ಮಕ್ಕಳು ಸ್ವಲ್ಪ ನಿರಾಳವಾದರು. ಉಗಾದಿ ಬಂತಲ್ಲ ಅದಕ್ಕ, ಬ್ಯಾಟೆ ವಿಚಾರ ಏನಾರಾ ಮಾತಡ್ತಿರಬಹುದು ಎಂದು ಒಂದಿಬ್ಬರು ಪಿಸುಗುಟ್ಟಿದರು. ಈಗ್ಲೆ ಎಂಥದ್ಲೆ ಬ್ಯಾಟ ವಿಚಾರ, ಕೆಂಚವ್ವನ ಮದುವೆ ವಿಚಾರ ಏನಾರ ಮಾತಡ್ತಾರೇನೋ ಎಂದು ಒಂದಿಬ್ಬರು ಪಿಸುಗುಟ್ಟಿದರು. ಮನೆಯವರು ಯಾಕೆ ಈಟೊತ್ತಾದರೂ ಹೊರಗೆ ಬರಲಿಲಲ್ಲ ಎಂಬದು ಕೊನೆಗೂ ಯಾರಿಗೂ ಗೊತ್ತಾಗಲೇ ಇಲ್ಲ.

ಇದು ಹಾಸನ ಜಿಲ್ಲೆಯ ದಿಡಿಗದ ಕತೆ. ಎಲ್ಲೆಲ್ಲೂ ಬ್ರಿಟಿಷರದೇ ಕಾರುಬಾರು. ಆದರೆ ಈ ಊರಿಗಿನ್ನೂ ಬ್ರಿಟಿಷರು, ಪಟೀಷರು ಬಂದಿರಲಿಲ್ಲ. ಮೈಸೂರು ಅರಸರ ಸಂಸ್ಥಾನಕ್ಕೆ ಹಾಸನ ಸೇರಿತ್ತು. ಆದರೂ ಇನ್ನೂ ನಾಯಕರ ಅಟ್ಟಹಾಸ ನಿಂತಿರಲಲ್ಲ, ಅಲ್ಲಲ್ಲೇ ಪಾಳ್ಯ ಪಟ್ಟ ಕಟ್ಟಿಕೊಂಡು ಆಡಳಿತ ನಡೆಸುತ್ತಲೇ ಇದ್ದರು. ಪಾಳೇಗಾರನ್ನೊಬ್ಬನ ಆಡಳಿತಕ್ಕೆ ದಿಡಿಗವು ಸೇರಿತ್ತು. ದಿಡಿಗದ ನರಸೇಗೌಡರು ಪಾಳೇಗಾರನ ಕರಣಿಕರಾಗಿದ್ದರು. ನರಸೇಗೌಡರು ಜೋರು ಆಸಾಮಿಯೇ ಸರಿ. ರೊಟ್ಟೆ ಗಾತ್ರದ ಮೀಸೆ. ಬಲಾಢ್ಯ ದೇಹ ಎಂಥವರನ್ನು ಕೆಲ ಕಾಲ ನಿಂತು ನೋಡುವಂತೆ ಮಾಡುತ್ತಿತ್ತು. ಈ ಮನೆತನದವರು ಅಷ್ಟೇ ಸುಂಕ ಅದು- ಇದು ವಸೂಲಿ ಮಾಡಿ ಪಾಳೆಗಾರನಿಗೆ ಕೊಡುವ ಕೆಲಸ ಮಾಡುತ್ತಿತ್ತು. ನರಸೇಗೌಡರು ಅದೇ ಕೆಲಸ ಮಾಡುತ್ತಿದ್ದರು.

ನರಸೇಗೌಡರೆಂದರೆ ದಿಡಿಗದವರಿಗೆ ಎಲ್ಲಿಲ್ಲದ ಪ್ರೀತಿ. ಊರಲ್ಲಿ ಯಾವುದೇ ಸಮಸ್ಯೆ ಬರಲಿ, ಪಾಳೇಗಾರನ ಮುಂದೆ ಹೋಗುವುದಕ್ಕೆ ಮುಂಚೆ ಅದು ಕರಣಿಕರ ಮುಂದೆ ಬರುತ್ತಿತ್ತು. ಕರಣಿಕರು ನ್ಯಾಯ ಪಂಚಾಯಿತಿ ಮಾಡಿದ ಮೇಲೆ ಅದು ಮುಗಿದಂತೆಯೇ ಸರಿ. ಮತ್ತೊಬ್ಬರು ಬಾಯಿ ಸೇರಿಸುವಂತಿರಲಿಲ್ಲ.

ನರಸೇಗೌಡರ ಚಿಕ್ಕಮಗಳು ಕೆಂಚಮ್ಮ. ಆಕೆ ಸೌಂದರ್ಯ ದೇವತೆ. ಆ ಕಾಲದಲ್ಲಿ ಅಷ್ಟೊಂದು ಬೆಳ್ಳಗೆ ಹಾಲುನೊರೆಯಂತೆ ಇದ್ದ ಹೆಣ್ಣು ಇರಲಿಲ್ಲವೇನೋ. ಕಾಲಿನವರೆಗೂ ಬರುವ ಜಡೆ. ಕೆಂಚಮ್ಮನನ್ನು ನೋಡಿದರೆ ಯಾರೋ ದೇವತೆಯೇ ಹುಟ್ಟಿ ಭೂಮಿಗೆ ಬಂದಿರಬೇಕು ಎಂದು ಹೇಳುತ್ತಿದ್ದರು. ಊರವರಿಗೆ ಆಗೊಮ್ಮೆ-ಹೀಗೊಮ್ಮೆ ಕೆಂಚಮ್ಮನನ್ನು ನೋಡಿ ಬರೋದಂದ್ರೆ ಬಾಳ ಖುಷಿ. ತನ್ನ ಸೌಂದರ್ಯದ ಬಗ್ಗೆ ಹೆಚ್ಚೇನು ಅಹಂ ಬೆಳೆಸಿಕೊಳ್ಳದ ಕೆಂಚಮ್ಮ ಕರಣಿಕರ ಮನೆಯಲ್ಲಿದ್ದ ರೀತಿ ರಿವಾಜುಗಳಿಗೆ ಅನುಸಾರವಾಗಿಯೇ ಬೆಳೆದಿದ್ದಳು. ತುಂಬಿದ ಮನೆಯಲ್ಲಿ ಒಬ್ಬರಿಗೊಂದು, ಮತ್ತೊಬ್ಬರಿಗೊಂದು ಎಂಬ ನ್ಯಾಯವೇ ಆ ಮನೆಯಲ್ಲಿ ಇರಲಿಲ್ಲ.. ನಮ್ಮ ಮನೆತನದಲ್ಲೇ ಇಂಥ ಹುಡುಗಿ ಹುಟ್ಟಿರಲಿಲ್ಲ ಎಂದು ಎಲ್ಲರೂ ಬಾಯಿ ತುಂಬಾ ಹೊಗಳುತ್ತಿದ್ದರು. ಹಟ್ಟಿಗೆ ಬಂದ ಆಳು-ಕಾಳುಗಳು ಮಾತ್ರ ದೇವತೆ ಎಂದೇ ಕರೆಯುತ್ತಿದ್ದರು. ಮನೆಯ ಮಕ್ಕಳು ಸಂಜೆ ಬಂದ ಹಸು-ಕರುಗಳನ್ನು ಗೊಂತುಗಳಿಗೆ ಕಟ್ಟುವ ಕೆಲಸವನ್ನು ಮಾಡಬೇಕಿತ್ತು. ಕೆಂಚಮ್ಮನೂ ಅದೇ ಕೆಲಸ ಮಾಡಬೇಕಿತ್ತು. ದಿನಾ ಸಂಜೆ ಮನೆಗೆ ಮೇಯ್ದು ಬಂದ ಹಸುಗಳನ್ನು, ಗಿಡ್ಡ ಕರುಗಳನ್ನು ಮನೆಯ ಮುಂದೆ ಇರುತ್ತಿದ್ದ ಗೊಂತುಗಳಿಗೆ ಕಟ್ಟುವ ಕೆಲಸ ಕೆಂಚಮ್ಮ ಮಾಡುತ್ತಿದ್ದಳು. ಕೆಂಪಮ್ಮನಿಗೆ ವಹಿಸಿದ್ದ ಈ ಕೆಲಸವೇ ಮುಂದೊಂದು ದಿನ ಕುಟುಂಬಕ್ಕೆ ಮುಳುವಾಗಲಿದೆ ಎಂಬುದು ಗೊತ್ತಿದ್ದರೆ ಕರಣಿಕರಾದರೂ ಏಕೆ ಈ ಕೆಲಸ ವಹಿಸುತ್ತಿದ್ದರು.

(ಮುಂದುವರೆಯುವುದು)……….

RELATED ARTICLES

1 COMMENT

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?