ಅಂತರಾಳ

ಅಲ್ಲಿ ಪುಸ್ತಕಗಳು ಮಾತನಾಡಿತು…

ಜಿ.ಎನ್.ಮೋಹನ್


‘ಇವರು ಬರೆದಿರುವ ಎಲ್ಲಾ ಪುಸ್ತಗಳೂ ಸುಡಲಿಕ್ಕೆ ಯೋಗ್ಯ’ ಎಂದೆ

ತಕ್ಷಣ ವೇದಿಕೆಯ ಮೇಲಿದ್ದ ಎಲ್ಲಾ ಗಣ್ಯರೂ, ಸಭಾಂಗಣದಲ್ಲಿದ್ದ ಕೇಳುಗರೂ ಆವಾಕ್ಕಾದರು.

ನನಗಂತೂ ಹಾಗೆ ಅನಿಸಿಹೋಗಿತ್ತು- ಅವರ ಪುಸ್ತಕ ಸುಡಲು ಯೋಗ್ಯ ಅಂತ.

ಅದು ವಿನಯಾ ವಕ್ಕುಂದ ಅವರ ಬರಹಗಳನ್ನು ಮೆಚ್ಚಿ ಅವರಿಗೆ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಹೆಸರಿನ ಪ್ರಶಸ್ತಿ ನೀಡುವ ಸಂದರ್ಭ.

ಕೃತಿಕಾರ್ತಿಯ ಬಗ್ಗೆ ಮಾತನಾಡಲು ನನ್ನನ್ನು ಕರೆಸಿದ ಸಂಘಟಕರಿಗೂ ಇರಿಸುಮುರಿಸು.

ಇಂದಿನ ಕಾರ್ಯಕ್ರಮದ ಕೇಂದ್ರಬಿಂದು, ಎಲ್ಲರ ಮೆಚ್ಚುಗೆಯ ವಿನಯಾ ಬರೆದಿರುವ ಕೃತಿಗಳು..ಸುಡಲು ಲಾಯಕ್ಕಾದ ಪುಸ್ತಕಗಳೇ?? ಎಂದು ಎಲ್ಲರೂ ಕಣ್ಣುಬಿಟ್ಟು ನನ್ನನ್ನು ನೋಡುತ್ತಿದ್ದರು

ನಾನು ಮಾತು ಮುಂದುವರೆಸಿದೆ-

ಹಾನಿಕಾರಕ ಪುಸ್ತಕಗಳನ್ನು ಸಾರ್ವಜನಿಕವಾಗಿ ಸುಡಬೇಕೆಂದು ಸರಕಾರ ಸುಗ್ರೀವಾಜ್ಞೆ ಹೊರಡಿಸಿತ್ತು

ಎಲ್ಲೆಲ್ಲೂ ಪುಸ್ತಕಗಳನ್ನು ಎತ್ತಿನಗಾಡಿಗಳಲ್ಲಿ ಹೇರಿ
ಸುಡುಕೊಂಡಕ್ಕೆ ಹೊಡೆದುಕೊಂಡು ಹೋಗುತ್ತಿದ್ದರು
ಆಗ ಒಬ್ಬ ಬಹಿಷ್ಕೃತ ಸಾಹಿತಿ, ಶ್ರೇಷ್ಠರಲ್ಲೊಬ್ಬ,
ಸುಡಲಿರುವ ಪುಸ್ತಕಗಳ ಪಟ್ಟಿಯಲ್ಲಿ
ತನ್ನ ಕೃತಿಗಳ ಹೆಸರಿಲ್ಲದ್ದನ್ನು ನೋಡಿ ಹೌಹಾರಿದ.
ತಕ್ಷಣ ಕೋಪದ ಭರದಲ್ಲಿ ಮೇಜಿಗೆ ಧಾವಿಸಿ, ಪಾತ್ರ ಗೀಚಿದ:
ಸುಡಿ, ನನ್ನನ್ನು ಸುಡಿ! – ಲೇಖನಿ ಹಕ್ಕಿವೇಗದಲ್ಲಿ ಹಾರಿತ್ತು
ನನ್ನನ್ನು ಸುಡಿ!
ನನಗೇನೂ ಪರವಾಗಿಲ್ಲ!, ನನ್ನನ್ನು ಬಿಡಬೇಡಿ!
ನನ್ನ ಪುಸ್ತಕಗಳು ಯಾವಾಗಲೂ ಸತ್ಯವನ್ನೇ ಸಾರಿಲ್ಲವೇ?
ಈಗ ನಿಮ್ಮಿಂದ ನಾನು ಸುಳ್ಳನ್ನೆಣಿಸಿಕೊಳ್ಳಬೇಕೇನು!
ಇದು ನನ್ನ ಆಜ್ಞೆ, ನನ್ನನ್ನು ಸುಡಿ!

-ಬ್ರೆಕ್ಟ್ ನ ಈ ಕವಿತೆಯನ್ನು ಆ ಸಭೆಯಲ್ಲಿ ಓದಿದೆ. ಶಾ ಬಾಲೂರಾವ್ ಅನುವಾದಿಸಿದ್ದು.

’ಈಗ ನೀವೇ ಹೇಳಿ ವಿನಯಾ ವಕ್ಕುಂದ ಬರೆದಿರುವ ಕೃತಿಗಳೆಲ್ಲವೂ ಬೆಂಕಿಗೆ ಹಾಕಲು ಯೋಗ್ಯ ಹೌದೋ ಅಲ್ಲವೋ..?’ ಎಂದೆ

ತಕ್ಷಣ ಕೇಳುಗರು, ಅತಿಥಿಗಳು ನಿಟ್ಟುಸಿರುಬಿಟ್ಟರು. ಎಲ್ಲರೂ ‘ಹೌದು, ಹೌದು ಅವರ ಕೃತಿಗಳು ಸುಡಲಿಕ್ಕೆ ಯೋಗ್ಯ’ ಎಂದು ನನಗೆ ಸಾಥ್ ನೀಡಿದ್ದರು.

ಬ್ರೆಕ್ಟ್ ಗೆ ಗೊತ್ತಿತ್ತು ಅಕ್ಷರಗಳು ಬೆಳಕಿನ ಕಂದೀಲುಗಳು ಎಂದು.

ಅವನಿಗಿಂತಲೂ ಜರ್ಮನಿಯ ನಾಜಿ ದೊರೆಗಳಿಗೆ ಪುಸ್ತಕಗಳ ಬಗ್ಗೆ ಇನ್ನೂ ಹೆಚ್ಚು ಗೊತ್ತಿತ್ತು.

ಅವು ಆಲೋಚನೆಗಳನ್ನು ಹರಿತ ಮಾಡುತ್ತದೆ, ತಿಕ್ಕಿ ತಿಕ್ಕಿ ಚೂಪುಗೊಳಿಸುತ್ತದೆ, ಎಲ್ಲವನ್ನೂ ಪ್ರಶ್ನಿಸುತ್ತದೆ, ಕೊನೆಗೆ ಅದು ರಾಜನನ್ನೂ, ಪ್ರಭುತ್ವವನ್ನೂ ಪ್ರಶ್ನಿಸುವ ಮಟ್ಟಕ್ಕೆ ಬರುತ್ತದೆ.

ಅಷ್ಟೇ ಅಲ್ಲ, ಅದು ಬೀದಿ ಬೀದಿಯಲ್ಲಿ ಜನ ಅಣಿನೆರೆಯುವಂತೆ ಮಾಡುತ್ತದೆ. ಮುಷ್ಠಿ ಬಿಗಿ ಹಿಡಿದು ಘೋಷಣೆ ಕೂಗಲು ಹಚ್ಚುತ್ತದೆ, ದಂಗೆ ಏಳುತ್ತದೆ, ಕುರ್ಚಿ ಅಲುಗಾಡಿಸದೆ ಅದು ಬಿಡುವುದಿಲ್ಲ.

ಹಾಗಾಗಿಯೇ ಅವರಿಗೆ ಭಾರೀ ಸಿಟ್ಟಿತ್ತು- ಪುಸ್ತಕಗಳ ಬಗ್ಗೆ.

ಎದುರಿಗೆ ಏರಿ ಬರುವವವರನ್ನು ಒಂದೇ ಏಟಿಗೆ ಕತ್ತಿಯಲ್ಲಿ ಕೊಚ್ಚಿ ಹಾಕಬಹುದಿತ್ತು. ರುಂಡವನ್ನು ಬೇಕಾದರೆ ರಸ್ತೆಯಲ್ಲಿ ಮೆರವಣಿಗೆ ಮಾಡಬಹುದಿತ್ತು.

ಆದರೆ ಪುಸ್ತಕಗಳು?

ಹಾಗಾಗಿಯೇ ಯಾವ ಯಾವ ಪುಸ್ತಕದೊಳಗೆ ಜೀವವಿತ್ತೋ ಅದೆಲ್ಲವನ್ನೂ ಆಯ್ದುಕೊಂಡರು, ಯಾವ ಪುಸ್ತಕಗಳು ಜನರ ನೋವಿಗೆ ಮಿಡಿಯುತ್ತಿತ್ತೋ ಅದನ್ನೂ ಆಯ್ದುಕೊಂಡರು, ಯಾವ ಪುಸ್ತಕಕ್ಕೆ ಪ್ರಶ್ನೆ ಮಾಡುವ ಶಕ್ತಿ ಇತ್ತೋ ಅದನ್ನೂ ಎಳೆದುಕೊಂಡರು, ಯಾವ ಪುಸ್ತಕ ತಮ್ಮ ಬದುಕಿನ ಕಥೆಗಳನ್ನೇ ವಿವರಿಸ್ಸಿ ಮನಸ್ಸು ಮಿಡಿಯುವಂತೆ ಮಾಡುತ್ತಿತ್ತೋ ಅದನ್ನೂ ಎಳೆದುಕೊಂಡರು.

‘ಪುಸ್ತಕಗಳು ಮಾತಾಡುತ್ತವೆ, ಮಾತಾಡುತ್ತವೆ ಪುಸ್ತಕಗಳು’ ಎಂದು ಅನಿಸಿದ್ದೆಲ್ಲವನ್ನೂ ಹೇರಿಕೊಂಡರು

ಜನ ನೋಡ ನೋಡುತ್ತಿದ್ದಂತೆಯೇ ಅದನ್ನು ನಗರದ ಮುಖ್ಯ ರಸ್ತೆಯಲ್ಲಿ ಸುರಿದು ಬೆಂಕಿ ಹಚ್ಚಿ ಅಟ್ಟಹಾಸ ದಿಂದ ನಕ್ಕರು.

ಇದೆಲ್ಲಾ ಬ್ರೆಕ್ಟ್ ಕಣ್ಣ ಮುಂದೆಯೇ ನಡೆದಿತ್ತೇನೋ?. ಪುಸ್ತಕಗಳನ್ನು ಸುಟ್ಟು ಸಾರ್ವಭೌಮತ್ವ ರಕ್ಷಿಸಿಕೊಳ್ಳಬಹುದು ಎನ್ನುವ ಆಲೋಚನೆಯ ಬಗ್ಗೆ ಬ್ರೆಕ್ಟ್ ಎಷ್ಟು ನಕ್ಕಿದ್ದನೋ!.

ಆತನಂತೂ ಕವಿತೆ ಬರೆದ, ನಾಟಕ ಬರೆದ ಜರ್ಮನಿಯ ಮಾತು ಬಿಡಿ, ಇಡೀ ಜಗತ್ತಿಗೆ ಆಲೋಚನೆ ಮಾಡುವಂತೆ ಪ್ರೇರೇಪಿಸಿದ, ಪ್ರಶ್ನಿಸುವ ಕಿಡಿ ಹೊತ್ತಿಸಿಬಿಟ್ಟ.

ಆದರೆ ಇನ್ನೂ ಹಲವರಿದ್ದರು.

ಅವರು ಯಾವ ಯಾವ ಪುಸ್ತಕಗಳನ್ನು ಸುಡಲಾಗಿತ್ತೋ ಆ ಪುಸ್ತಕಗಳ ಪಟ್ಟಿ ತಯಾರಿಸಿದರು. ಯಾವ ಪುಸ್ತಕಗಳನ್ನು ನಾಜಿ ಸರ್ಕಾರ ನಿಷೇಧಿಸಿತ್ತೋ ಅದನ್ನೂ ಪಟ್ಟಿ ಮಾಡಿದರು.

ಲೇಖಕರ ಮನೆ ಮನೆಗೆ ತೆರಳಿದರು. ಆ ನಿಮ್ಮ ಪುಸ್ತಕಗಳನ್ನು ಕೊಡಿ ಎಂದರು. ನಾಲ್ಕಾರು ಪ್ರತಿ ಹೇರಿಕೊಂಡರು. ಅವರೂ ದೇಶ ದೇಶ ಸುತ್ತಿದರು. ಎಲ್ಲವನ್ನೂ ಜರ್ಮನಿಗೆ ಹೊತ್ತುಕೊಂಡು ಬಂದರು.

ಎಲ್ಲಿ ಪುಸ್ತಕಗಳನ್ನು ಸುಡಲಾಗಿತ್ತೋ, ಜರ್ಮನಿಯ ಅದೇ ಸ್ಥಳದಲ್ಲಿ ಆ ಎಲ್ಲಾ ಪುಸ್ತಕಗಳನ್ನು ಹರಡಿ ಕೂತರು. ಅದು ಒಂದೆರಡಲ್ಲ1 ಲಕ್ಷ ಪುಸ್ತಕಗಳು.

ಜಗತ್ತಿನ ಎಲ್ಲೆಡೆ ಪುಸ್ತಕಗಳು ಕಣ್ಣು ಕೆಂಪಗಾಗಿಸುತ್ತಲೇ ಇವೆ.

ಐನ್ ಸ್ಟೀನ್ ನಿಂದ ಹಿಡಿದು ಹ್ಯಾರಿ ಪಾಟರ್ ಬರೆದ ಜೆ ಕೆ ರೌಲಿಂಗ್ ವರೆಗೆ ಪ್ರಭುತ್ವಗಳು ಪುಸ್ತಕ ಎಂದರೆ ಸಾಕು ಹೆದರಿ ನಡುಗುತ್ತಲೇ ಇದೆ.

ವಾಲ್ಟಮಿರ್ ಬೆಂಜಮಿನ್, ಬ್ರೆಕ್ಟ್, ಮಾರ್ಕ್ಸ್, ಎಂಗೆಲ್ಸ್, ಫ್ರಾಯ್ಡ್ , ದಾಸ್ತೋವಸ್ಕಿ, ಗಾರ್ಕಿ, ಟಾಲ್ ಸ್ಟಾಯ್, ರೋಸಾ ಲುಕ್ಸೆಮ್ಬರ್ಗ್, ವಿಕ್ಟರ್ ಹ್ಯೂಗೋ, ಹೆಮಿಂಗ್ವೇ, ಹೆಲೆನ್ ಕೆಲರ್, ಜೋಸೆಫ್ ಕಾನ್ರಾಡ್.. ಹೀಗೆ ನಾಜಿ ಸರ್ಕಾರ ಬಹಿಷ್ಕರಿಸಿದ, ಆ ನಂತರ ಜಗತ್ತಿನಾದ್ಯಂತ ವಿವಿಧ ಸರ್ಕಾರಗಳಿಂದ ಬಹಿಷ್ಕಾರಕ್ಕೆ ಒಳಗಾದ ಎಲ್ಲ ಪುಸ್ತಕಗಳ ಪಟ್ಟಿ ತಯಾರಿಸಲಾಯಿತು.

ಹೀಗೆ ಪ್ರಭುತ್ವವನ್ನು ನಡುಗಿಸಿದ ಪುಸ್ತಕಗಳು ಸಾವಿರಗಟ್ಟಲೆ ಇದ್ದವು. ಕೊನೆಗೆ ಅದರಲ್ಲಿ 170 ಪುಸ್ತಕಗಳನ್ನು ಮಾತ್ರ ಆಯ್ದುಕೊಂಡು ಆ ಕೃತಿಕಾರರ ಮನೆಗೆ ತೆರಳಿದರು. ಜರ್ಮನಿಗೆ ಬಂದು ತಲುಪಿದ್ದು ಆ 170 ಕೃತಿಗಳ ಒಟ್ಟು 1 ಲಕ್ಷ ಪ್ರತಿಗಳು.

ಜನ ನೋಡನೋಡುತ್ತಿದ್ದಂತೆಯೇ ದೊಡ್ಡ ಕಂಬಗಳು, ಅದರ ಎತ್ತರಕ್ಕೆ ಏರಲು ಕ್ರೇನ್ ಗಳು. ಯಾವ ನೆಲದಲ್ಲಿ ಪುಸ್ತಕಗಳನ್ನು ಯುವಕರು ತಮ್ಮ ಕೈಯಾರ ಸುಟ್ಟು ಹಾಕಿದ್ದಾರೋ ಅದೇ ನೆಲದಲ್ಲಿ ಯುವಕರ ದಂಡೇ ನೆರೆಯಿತು.

ಅಷ್ಟೂ ಪುಸ್ತಕಗಳನ್ನು ಸೇರಿಸಿ, ವಿಂಗಡಿಸಿ ನೋಡ ನೋಡುತ್ತಿದ್ದಂತೆಯೇ ಜಗತ್ತಿನ ಮೊದಲ ಪ್ರಜಾಪ್ರಭುತ್ವದ ಸಂಕೇತ ಎನಿಸಿಕೊಂಡ ಗ್ರೀಕ್ ದೇಗುಲ, ಅಥೆನಾ ಪ್ರಜಾಪ್ರಭುತ್ವದ ಸಂಕೇತವಾದ ‘ಪಾರ್ಥೇನಾನ್’ ಪ್ರತಿಕೃತಿಯನ್ನು ನಿರ್ಮಿಸಿಯೇಬಿಟ್ಟರು.

ಅವರು ಪುಸ್ತಕವನ್ನು ಸುಟ್ಟರು, ಪ್ರಭುತ್ವ ಕಾಪಾಡಿಕೊಳ್ಳಲು
ಇವರು ಪುಸ್ತಕಗಳ ಮೂಲಕ ಕಟ್ಟಿದರು ಪ್ರಜಾ ಪ್ರಭುತ್ವವನ್ನು

ಅರ್ಜೆಂಟೈನಾದ ಮಾರ್ತಾ ಮಿನುಜಿನ್ ಕಲಾವಿದೆ. ತನ್ನೊಳಗೆ ಒಂದು ಬೆಂಕಿಯ ಕಿಡಿ ಇಟ್ಟುಕೊಂಡು ಬೆಳೆದ ಕಲಾವಿದೆ. ಅರ್ಜೆಂಟೈನಾದಲ್ಲಿ ಜುಂಟಾ ಸರ್ವಾಧಿಕಾರಿ ಸರ್ಕಾರ ಹೀಗೇ ಪುಸ್ತಕಗಳ ಮೇಲೆ ಕೆಂಪುಗಣ್ಣು ಬೀರಿದ್ದು ಗೊತ್ತಿದ್ದಾಕೆ. ಆಗಲೇ ಅರ್ಜೆಂಟೈನಾದಲ್ಲಿ ಪುಸ್ತಕಗಳನ್ನು ಒಟ್ಟುಮಾಡಿ ಪ್ರತಿಕೃತಿ ನಿರ್ಮಿಸಿದ್ದಳು.

ಆದರೆ ಯಾವಾಗ ಜರ್ಮನಿಯಲ್ಲಿ ಕಲಾ ಉತ್ಸವ ಎಂದು ಗೊತ್ತಾಯಿತೋ ಆಕೆ ಹತ್ತು ಪಟ್ಟು ಉತ್ಸಾಹದಿಂದ ಎದ್ದು ನಿಂತಳು.

ವರ್ಷಗಟ್ಟಲೆ ಪುಸ್ತಕದ ಮೂಲಕ ಸ್ವಾತಂತ್ರ್ಯದ ಸಂದೇಶ ಬಿತ್ತುವ ಕನಸಿಗೆ ರೆಕ್ಕೆ ಕೊಟ್ಟಳು.

1933, 10 ಮೇ ಜರ್ಮನಿಯಲ್ಲಿ ಟ್ರಕ್ ಗಟ್ಟಲೆ ಪುಸ್ತಕಗಳನ್ನು ಹೇರಿಕೊಂಡು ಬಂದು ಸುಟ್ಟಿದ್ದರು. ’ಜರ್ಮನ್ ಅಲ್ಲದ ಭಾವನೆಗಳನ್ನು ಸುಟ್ಟುಹಾಕಬೇಕು’ ಎನ್ನುವುದೇ ಆಗಿನ ನಾಜಿ ಸರ್ಕಾರದ ಉದ್ಧೇಶವಾಗಿತ್ತು.

ಅದನ್ನು ಕೈಗೆತ್ತಿಕೊಂಡದ್ದು ಅಲ್ಲಿನ ವಿದ್ಯಾರ್ಥಿ ಯುವ ಸೇನೆ. ಬೀದಿ ಬೀದಿಗಳಲ್ಲಿ ಪ್ರಚಾರ ನಡೆಸಿ ಕೇಕೆ ಹಾಕಿ ರಾಷ್ಟ್ರ ಗೀತೆ ಹಾಡಿ ಪುಸ್ತಕ ಸುಟ್ಟರು.

ಗೊಬೆಲ್ಸ್ ಭರ್ಜರಿ ಭಾಷಣ ಬಿಗಿದು ಪುಸ್ತಕಗಳಿಂದ ಅಲ್ಲದ ವ್ಯಕ್ತಿತ್ವ ಕಟ್ಟಿಕೊಳ್ಳಿ ಎಂದು ಕರೆ ನೀಡಿದ. ಜರ್ಮನ್ ಶುದ್ಧತೆ ಇಲ್ಲದ ಎಲ್ಲವನ್ನೂ ಸುಡಲಾಯಿತು. ಅದು ಬಿಡಿ ಕೊನೆಗೆ ಅದೇ ನೆಲದಲ್ಲಿ ಜರ್ಮನ್ ಅಲ್ಲದವರನ್ನೂ ಸುಟ್ಟು ಹಾಕಿದರು.

ಮನೆಗಳ ಮೇಲೆ ದಾಳಿ ನಡೆಸುತ್ತಿದ್ದವರು ಮನದ ಮೇಲೆ ದಾಳಿ ನಡೆಸುವುದು ಹೇಗೆ ಎಂದು ಸಂಚು ಹೂಡಿದರು. ಪರಿಣಾಮ ಬೃಹತ್ ಲೈಬ್ರರಿಗಳ ಮೇಲೆ ಬಾಂಬ್ ದಾಳಿ ನಡೆಸಿ ನಾಶ ಮಾಡಲಾಯಿತು.

ಯಾವ ಮಿಲಿಟರಿ ಹೀಗೆ ದಾಳಿ ಮಾಡುತ್ತಾ ಪುಸ್ತಕಗಳನ್ನು ನಾಶ ಮಾಡುತ್ತಾ ಹೋಯಿತೋ ಅದಕ್ಕೆ ವಿರುದ್ಧವಾಗಿ ಈ ನಾಜಿ ಕ್ರೌರ್ಯವನ್ನು ಖಂಡಿಸಲು ಅಮೆರಿಕಾದಲ್ಲಿ ಸೇನೆ ಪುಸ್ತಕಗಳ ಸಂಗ್ರಹಕ್ಕೆ ಮುಂದಾಯಿತು.

ಸಾಹಿತಿಗಳ ವಿಚಾರವಂತರ ಮನೆ ಮನೆಗೆ ತೆರಳಿ ಪುಸ್ತಕಗಳನ್ನು ಸಂಗ್ರಹಿಸಿತು. ಬೀದಿ ಬೀದಿಗಳಲಿಲಿ ಪುಸ್ತಕ ಸಂಗ್ರಹಿಸುವ ಅಡ್ಡೆಗಳನ್ನು ನಿರ್ಮಿಸಿತು. ನಂತರ ಅದನ್ನು ಯೋಧರಿಗೆ, ಸೇನಾ ಕ್ಯಾಂಪ್ ಗಳಿಗೆ ವಿತರಿಸಿತು. ಪುಸ್ತಕ ಓದಿ, ಗೆದ್ದು ಬನ್ನಿ ಎಂದು ಹಾರೈಸಿತು.

ಇರಲಿ ಬಿಡಿ, ಈ ಎಲ್ಲವೂ ನೆನಪು ಮಾಡುವಂತೆ ಮಾಡಿದ್ದು ಮಾತ್ರ ಜರ್ಮನಿಯಲ್ಲಿ ಭವ್ಯವಾಗಿ ತಲೆ ಎತ್ತಿ ನಿಂತ ಪುಸ್ತಕಗಳ ಕಲಾಕೃತಿಯೇ.

ಆ ಬೃಹತ್ ಕಲಾಕೃತಿಯನು ನೋಡಲು ಬಂದವರು ಅದರ ಕಂಬದಲ್ಲಿದ್ದ ಒಂದೊಂದೇ ಪುಸ್ತಕಗಳನ್ನು ಕಿತ್ತುಕೊಂಡು ಹೋಗುತ್ತಿದ್ದರು. ಆ ಕಲಾವಿದೆ, ಸಂಘಟಕರು ಹಾಗೆ ಒಬ್ಬೊಬ್ಬರೂ ಪುಸ್ತಕ ಕಿತ್ತುಕೊಂಡು ಹೋಗುವಾಗಲೆಲ್ಲಾ ಚಪ್ಪಾಳೆ ತಟ್ಟಿ ಹುರಿದುಂಬಿಸುತ್ತಿದ್ದರು.

ಯಾವ ದೇಶದಲ್ಲಿ ಪುಸ್ತಕಗಳನ್ನು ಜನರ ಕೈಗಳಿಂದ ಕಿತ್ತುಕೊಳ್ಳಲಾಯಿತೋ ಅದೇ ದೇಶದಲ್ಲಿ ಜನರೇ ಪುಸ್ತಕಗಳನ್ನು ಕಿತ್ತುಕೊಳ್ಳುತ್ತಿದ್ದರು. ಚಕ್ರ ಒಂದು ಸುತ್ತು ಬಂದಿತ್ತು.

‘ಅಕ್ಷರವೆಂದರೆ ಅಕ್ಷರವಲ್ಲ, ಅರಿವಿನ ಗೂಡು, ಚಿಲಿಪಿಲಿ ಎನ್ನುತ ಮೇಲಕ್ಕೆ ಹಾರುವ ಹಕ್ಕಿಯ ಹಾಡು ಕೇಳು’ ಎನ್ನುವ ಸಾಲು ನನ್ನ ಮನದೊಳಗೆ…

Comment here