Monday, April 15, 2024
Google search engine
Homeಸಾಹಿತ್ಯ ಸಂವಾದಅಂತರಾಳಅವರು ‘ತೆರೆದ ಬಾಗಿಲು’

ಅವರು ‘ತೆರೆದ ಬಾಗಿಲು’

ಜಿ.ಎನ್.ಮೋಹನ್


‘ಬನ್ನಿ ಹಾಗೇ ಒಂದು ನಿಮಿಷ ನಮ್ಮ ಮ್ಯೂಸಿಯಂ ನೋಡಿಬಿಡುವರಂತೆ..’ ಎಂದರು

ಮ್ಯೂಸಿಯಂ ಎಂದರೆ ಸಾಕು ನಾನು ಮೊದಲಿನಿಂದಲೂ ಮಾರು ದೂರ.

ಆ ವಿಜ್ಞಾನಕ್ಕೂ, ನನ್ನ ಅಜ್ಞಾನಕ್ಕೂ ಎಲ್ಲೆಂದೆಲ್ಲಿಯೂ ಸಂಬಂಧವಿರಲಿಲ್ಲ. ಇನ್ನು ಚರಿತ್ರೆ, ಪಳೆಯುಳಿಕೆ ಉಹ್ಞೂ ಸಾಧ್ಯವೇ ಇಲ್ಲ

ಆದರೆ ಏನು ಮಾಡುವುದು ಈಗ ಒತ್ತಾಯಿಸುತ್ತಿದ್ದವರು ನನ್ನ ಒಂದು ಕಾಲದ ಗುರು, ಈಗಿನ ಸನ್ಮಿತ್ರ ಎಚ್ ವಿ ವೇಣುಗೋಪಾಲ್ ಅವರು.

ಹಾಗಾಗಿ ‘ನೋ’ ಎನ್ನುವ ಅವಕಾಶವೇ ಇರಲಿಲ್ಲ.

ನಾನು ತಕ್ಷಣ ಎದುರಿಗೆ ಇದ್ದ ಬಹುಮಹಡಿ ಕಟ್ಟಡದತ್ತ ಹೆಜ್ಜೆ ಹಾಕಿದೆ. ವೇಣುಗೋಪಾಲ್ ‘ಅಲ್ಲಿಗೇಕೆ ಹೋಗುತ್ತೀರಿ ಈ ಕಡೆ ಬನ್ನಿ’ ಎಂದರು.

ಇಡೀ ಅಂಗಳದಲ್ಲಿ ದೊಡ್ಡದು ಎನ್ನುವಂತಿದ್ದದ್ದು ಆ ಕಟ್ಟಡ ಮಾತ್ರ. ಹಾಗಾಗಿ ನಾನು ಮ್ಯೂಸಿಯಂ ಎಂದ ತಕ್ಷಣ ಆ ಕಡೆ ಹೆಜ್ಜೆ ಹಾಕಿದ್ದೆ.

ನಾನಿದ್ದದ್ದು ನ್ಯಾಷನಲ್ ಕಾಲೇಜಿನಲ್ಲಿ.

ಆದರೆ ಅವರು ನನ್ನನ್ನು ಅದರ ವಿರುದ್ಧ ದಿಕ್ಕಿಗೆ ಕರೆದುಕೊಂಡು ಹೋದರು.

ಆ ವೇಳೆಗಾಗಲೇ ಕಾಫಿಯ ಘಮ ಅಲ್ಲೆಲ್ಲಾ ಹರಡಿಕೊಳ್ಳುತ್ತಿತ್ತು. ಕಣ್ಣ ದೂರಕ್ಕೆ ಕ್ಯಾಂಟೀನ್ ಕಾಣಿಸಿತು. ಬಹುಷಃ ಹೊರಡುವ ಮುನ್ನ ಕಾಫಿಯ ಹನಿಯೊಂದು ನಾಲಿಗೆಯ ಮೇಲಿರಲಿ ಎಂದು ಆ ಕಡೆ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಹೆಜ್ಜೆ ಹಾಕಿದೆ.

ಇಲ್ಲ ನನ್ನ ಆ ನಿರೀಕ್ಷೆಯೂ ಸುಳ್ಳಾಯಿತು.

ಕ್ಯಾಂಟೀನ್ ಕೋಣೆಗೆ ಇನ್ನೂ ಹತ್ತು ಹೆಜ್ಜೆ ಮುಂಚೆಯೇ ಇದ್ದ ಕೋಣೆಯೊಂದಕ್ಕೆ ಕರೆದೊಯ್ದರು.

ಒಂದು ಕ್ಷಣ ನನಗೆ ಮಾತೇ ಹೊರಡಲಿಲ್ಲ.

ನಾನು ಇದ್ದದ್ದು ಒಂದು ಪುಟ್ಟ ಕೋಣೆಯಲ್ಲಿ.

ಅಲ್ಲಿಯಾದರೂ ಏನಿತ್ತು? ಒಂದು ಹಾಸಿಗೆ, ಒಂದು ಕುಕ್ಕರ್, ಎರಡು ತಟ್ಟೆ ಇನ್ನೆರಡು ಲೋಟ, ಒಂದು ಸೂಟ್ ಕೇಸ್, ಒಂದು ಚೊಂಬು, ನಾಲ್ಕೈದೇ ಪಂಚೆ, ಅಷ್ಟೇ ಜುಬ್ಬಾ, ಒಂದು ಕುರ್ಚಿ. ಒಂದು ಕೋಲು..

ಅಷ್ಟೇ..

ಎಷ್ಟೋ ಮ್ಯೂಸಿಯಂಗಳನು ಹೊಕ್ಕಿದ್ದೇನೆ, ರಾಜ ಮಹಾರಾಜರ ಕಥೆ ಕಂಡಿದ್ದೇನೆ, ಇದ್ದ ರಾಜಕಾರಣಿಗಳು, ಬಿದ್ದು ಹೋದ ರಾಜಕಾರಣಿಗಳ ವೈಭವದ ಉಳಿಕೆಗಳನ್ನು ನೋಡಿದ್ದೇನೆ, ಬಿಚ್ಚುಗತ್ತಿಯ ಬಂಟರ ಕಥೆ ಸಾರುವ ಕೋಣೆಗಳಲ್ಲಿ ಅಡ್ಡಾಡಿದ್ದೇನೆ. ಆದರೆ ಇಲ್ಲಿ ಒಂದು ಬದುಕೇ ಪುಟ್ಟ ಕೋಣೆಯಲ್ಲಿ ಹರಡಿಕೊಂಡಿತ್ತು.

ಉಳಿದ ಯಾವುದೇ ಮ್ಯೂಸಿಯಂನಲ್ಲಿ ಹೆಜ್ಜೆ ಹಾಕುವಾಗ ಒಂದು ಗತದ ವಾಸನೆ ಸುಳಿಯುತ್ತಿತ್ತು. ಆದರೆ ಇಲ್ಲಿ ತದ್ವಿರುದ್ಧ. ಜೀವವೊಂದು ಇಲ್ಲವಾಗಿ ದಶಕ ಉರುಳಿದರೂ ಅವರು ಇನ್ನೂ ಇಲ್ಲೇ ಇದ್ದಾರೆ ಎನ್ನುವ ಒಂದು ಆತ್ಮೀಯ ಭಾವ.

ಹೌದು, ಅದು ಎಚ್ಚೆನ್ ಅವರ ನೆನಪನ್ನು ಹೊತ್ತ ಕೋಣೆ.

‘ಎಚ್ ಎನ್’ ಎಂದೇ ಎಲ್ಲರೂ ಪ್ರೀತಿಯಿಂದ ಕರೆಯುತ್ತಿದ್ದ ಎಚ್ ನರಸಿಂಹಯ್ಯವರು ಅಲೆಯ ವಿರುದ್ಧ ಈಜಿದವರು.

ಸಾಮ್ರಾಟ್ ಅಶೋಕನಂತೆ ಬದುಕುವವರ, ಬೆಳಕಿದ್ದ ಸಮಾಜದಲ್ಲೂ ಕತ್ತಲೆ ಕೋಣೆಯಲ್ಲಿ ಇರಲು ಇಚ್ಚಿಸಿದವರ, ಮಂತ್ರಕ್ಕೆ ಮಾವಿನಕಾಯಿ ಉದುರುತ್ತದೆ ಎಂದು ನಂಬಿದ್ದವರ, ಹಾಗೆ ನಂಬಿಸುತ್ತಿದ್ದವರ ವಿರುದ್ಧ ಈಜಿದವರು. ಹಾಗಾಗಿಯೇ ಅವರ ಬದುಕೊಂದು ತೆರೆದ ಬಾಗಿಲು. ಅವರೊಂದು ‘ತೆರೆದ ಮನ’.

ಸಾಯಿಬಾಬಾ ಅವರನ್ನು ನೇರಾನೇರಾ ಪುಟ್ಟಪರ್ತಿಯಲ್ಲಿ ಪ್ರಶ್ನಿಸಿದಾಗಲೇ ಅವರು ದೇಶಾದ್ಯಂತ ಹೆಸರಾಗಿ ಹೋಗಿದ್ದರು.

ಅದು ಎಲ್ಲರೂ ಸಾಯಿಬಾಬಾರತ್ತ ನೋಡುತ್ತಿದ್ದ ಕಾಲ. ಜನ ಮರುಳೋ ಜಾತ್ರೆ ಮರುಳೋ ಎಂದು ಎಲ್ಲರೂ ಶರಣಾಗುತ್ತಿದ್ದಾಗ ಎಚ್ ಎನ್ ಅವರೊಳಗಿದ್ದ ಒಬ್ಬ ವೈಜ್ಞಾನಿಕ ಚಿಂತಕ ಅವರನ್ನು ಸುಮ್ಮನೆ ಕೂರಲು ಬಿಡಲಿಲ್ಲ.

ಬೂದಿ. ವಾಚು ಎಲ್ಲವನ್ನೂ ಗಾಳಿಯಿಂದ ಸೃಷ್ಟಿಸಿಕೊಡುತ್ತಿದ್ದ ಸಾಯಿಬಾಬಾರ ಎದುರು ನಿಂತು ಎಚ್ ಎನ್ ಕೇಳಿಯೇಬಿಟ್ಟರು- ನನಗೊಂದು ಕುಂಬಳಕಾಯಿ ಸೃಷ್ಟಿಸಿಕೊಡಿ.

ಎಚ್ ಎನ್ ದೇವರ ಅಸ್ತಿತ್ವದ ಬಗ್ಗೆ ಮಾತನಾಡಿದ್ದು ಕಡಿಮೆ. ಆದರೆ ಅವರಿಗೆ ದೇವರನ್ನು ಬೀದಿಗೆ ತರುವವರ ಬಗ್ಗೆ ಸಿಟ್ಟಿತ್ತು. ಮೌಢ್ಯವನ್ನು ಮೆಟ್ಟಿಲಾಗಿಸಿಕೊಳ್ಳುವವರ ಬಗ್ಗೆ ಅಸಹನೆಯಿತ್ತು. ಬೆಳಕು ತರಲಾಗದಿದ್ದರೂ ಪರವಾಗಿಲ್ಲ, ಕತ್ತಲೆಯನ್ನು ಹರಡದಿರೋಣ ಎನ್ನುವುದು ಅವರ ನಿಲುವು.

ಒಂದು ಬಿಳಿ ಪಂಚೆ, ಖಾದಿ ಬಿಳಿ ಜುಬ್ಬಾ, ಹಾಗೂ ಒಂದು ಬಿಳಿ ಖಾದಿ ಟೋಪಿ ಎಂದು ಮಾತ್ರ ಎಲ್ಲರಿಗೂ ಗೊತ್ತಿರುವ ಎಚ್ ಎನ್ ತಮ್ಮ ಆತ್ಮೀಯರಿಗೆ ಅಷ್ಟೇ ಆಗಿರಲಿಲ್ಲ ಅವರು ಸದಾ ಬಿಳಿ ಹಲ್ಲುಗಳನ್ನು ಪ್ರದರ್ಶಿಸುತ್ತಾ ತನ್ನ ಸುತ್ತಾ ಇರುವವರ ಹಲ್ಲುಗಳೂ ಎಲ್ಲರಿಗೂ ಗೋಚರವಾಗುವಂತೆ ಮಾಡುತ್ತಿದ್ದ ಮಹಾನ್ ಹಾಸ್ಯಪ್ರೇಮಿ ಕೂಡಾ.

ನಾನು ನಿಂತದ್ದು ಐದು ನಿಮಿಷದಲ್ಲಿ, ಒಂದು ಕಣ್ಣು ಹಾಯಿಸುವಿಕೆಯಲ್ಲಿ ಮುಗಿದುಹೋಗಬಹುದಾದ ಮ್ಯೂಸಿಯಂ.

ಆದರೆ ಎಷ್ಟೋ ಮ್ಯೂಸಿಯಂ ಕೋಣೆಗಟ್ಟಲೆ, ಎಕರೆಗಟ್ಟಲೆ ಹರಡಿಕೊಡಿದ್ದರೂ ಬೇಗ ಅಲ್ಲಿಂದ ಕಾಲು ಕೀಳಬೇಕು ಎಂದೇ ಅನಿಸುವ ನನಗೆ ಇಲ್ಲಿ ನೋಡಿದಷ್ಟೂ ನೆನಪಿಸಿಕೊಳ್ಳುವ ವಿಷಯಗಳಿತ್ತು. ಮನದ ರಂಗದಲ್ಲಿ ನೆನಪುಗಳ ಚಿತ್ರ ಸಾಲೆ.

ಕೋಲಾರದಲ್ಲಿ ಹುಟ್ಟಿದ ನರಸಿಂಹಯ್ಯನವರು ಬದುಕು ಕಟ್ಟಿಕೊಳ್ಳಲು ಸಾಧ್ಯವೇ ಇರಲಿಲ್ಲ- ಛಲವೊಂದಿಲ್ಲದಿದ್ದರೆ.

ಅಂತಹ ಬಡತನದ ಎಚ್ ಎನ್ ಸರಿಯಾಗಿ ಹೆಜ್ಜೆ ಇಡುವುದು ಕಲಿತ ತಕ್ಷಣವೇ ಬಸ್ ಚಾರ್ಜ್ ಗೆ ಹಣ ಇಲ್ಲದ ಕಾರಣ ೫೩ ಮೈಲಿ ದೂರ ನಡದೇ ಬೆಂಗಳೂರಿಗೆ ಬಂದರು. ಆ ನಂತರವೂ ಅವರು ನಡದೇ ನಡೆದರು, ನಡದೇ ನಡೆದರು.. ಹೋರಾಟದ ಹಾದಿಯಲ್ಲಿ.

‘ಪ್ರಶ್ನೆ ಕೇಳುವುದಕ್ಕೆ ಹೆದರದಿರು ಒಡನಾಡಿ’ ಎನ್ನುತ್ತಾನೆ ಬ್ರೆಕ್ಟ್. ಪ್ರಶ್ನೆಗಳ ಮೂಲಕವೇ ಸಮಾಜವನ್ನು ತಿದ್ದಲು ಅದೇ ರೀತಿಯಲ್ಲಿ ಹೊರಟುಬಿಟ್ಟವರು ಎಚ್ ಎನ್.

ಅವರು ಮೊದಲು ಪ್ರಶ್ನಿಸಿಕೊಂಡದ್ದು ತಮ್ಮನ್ನು. ಹಾಗಾಗಿ ಅವರು ಆಸ್ಥಾನಗಳನ್ನು ತಿರಸ್ಕರಿಸಿದರು ಸಿಂಹಾಸನಗಳಿಂದ ದೂರ ನಿಂತರು. ಕಿರೀಟ ಪ್ರಭಾವಳಿಗಳನ್ನು ತಾವೇ ತೆಗೆದಿಟ್ಟರು.

ಹಾಗೆ ಪ್ರಶ್ನೆ ಮಾಡಿಕೊಂಡ ಕಾರಣಕ್ಕಾಗಿಯೇ ಅವರಿಗೆ ಈ ಪುಟ್ಟ ಕೋಣೆಯೊಂದು ಬೆಳಕಿನ ಅರಮನೆಗೆ ಸಾಗುವ ಹಾದಿಯಾಯಿತು.

ನ್ಯಾಷನಲ್ ಹೈಸ್ಕೂಲ್, ನ್ಯಾಷನಲ್ ಕಾಲೇಜಿನಲ್ಲಿ ಓದಿ ಅದೇ ಕಾಲೇಜಿನಲ್ಲಿ ಉಪನ್ಯಾಸಕರಾದ ಎಚ್ ಎನ್ ಹಲವು ದೇಶ ಸುತ್ತಿದರೂ ಮರಳಿದ್ದು ಅದೇ ನ್ಯಾಷನಲ್ ಕಾಲೇಜಿಗೆ.

ಬಡತನದಲ್ಲಿ ತನ್ನಂತೆ ಹೆಜ್ಜೆ ಹಾಕಿ ಬೆಳಕು ಬಯಸುತ್ತಿರುವವರಿಗೆ ಶಿಕ್ಷಣ ಎನ್ನುವುದು ಹೇಗೆ ಕಂದೀಲಾಗುತ್ತದೆ ಎನ್ನುವುದು ಅವರಿಗೆ ಗೊತ್ತಿತ್ತು.

ಆ ಕಾರಣದಿಂದ ನ್ಯಾಷನಲ್ ಶಿಕ್ಷಣ ಸಂಸ್ಥೆಯ ಭಾಗವಾಗಿ ಹೋದರು. ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾದರು. ಮೇಲ್ಮನೆಯ ಸದಸ್ಯರಾಗಿದ್ದರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು. ಆದರೂ ಆದರೂ ಅವರಿಗೆ ಈ ಪುಟ್ಟ ಕೋಣೆಯೇ ಉಸಿರಿನ ತಾಣ.

ಅವರು ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ ಹಾಸ್ಟೆಲ್ ಕೋಣೆ ಹೊಕ್ಕವರು ತಮ್ಮ ಅಂತಿಮ ಯಾತ್ರೆಯವರೆಗೆ ಅದೇ ಹಾಸ್ಟೆಲ್ ನಲ್ಲಿ ಜೀವಿಸಿದ್ದರು.

ಪ್ರಶ್ನೆ ಮಾಡುವುದು ಅವರಿಗೆ ಎಷ್ಟು ಇಷ್ಟ ಎಂದರೆ ಅವರೂ ಮೊದಲಾಗಿ ಆರಂಭಿಸಿದ ‘ಸೈನ್ಸ್ ಫೋರಂ’ನ ಚಿಹ್ನೆಯೇ ಪ್ರಶ್ನಾರ್ಥಕ ಚಿಹ್ನೆಯಾಗಿತ್ತು.

ಅವರ ಪುಟ್ಟ ಕೊಠಡಿಗೆ ಹೆಸರಿಗೆ ಮಾತ್ರ ಬಾಗಿಲಿತ್ತು. ಆದರೆ ಅದು ತೆರೆದ ಬಾಗಿಲೇ ಆಗಿತ್ತು. ಯಾವ ವಿದ್ಯಾರ್ಥಿಯಾಗಲೀ, ಮುಖ್ಯಮಂತ್ರಿಯಾಗಲೀ ಆ ಕೋಣೆಗೆ ಸೀದಾ ನಡೆದುಬರುತ್ತಿದ್ದರು. ನೆಲದ ಮೇಲೆ ಕುಳಿತು ಪಕ್ಕದ ಕ್ಯಾಂಟೀನ್ ನ ಒಂದು ಕಾಫಿ ಕುಡಿದು ಹೋಗುತ್ತಿದ್ದರು. ಗಾಂಧಿ ಎನ್ನುವ ಪವಾಡವೊಂದೇ ಅವರಿಗೆ ಹತ್ತಿರವಾದದ್ದು.

‘ಏನು ಗೊತ್ತಾ ಮೋಹನ್, ನಾನು ಗಾಂಧಿಯವರ ಕೈ ಮುಟ್ಟಿದ್ದೇನೆ’ ಎಂದು ಅವರು ಬಣ್ಣಿಸುವಾಗ ಅವರ ಮುಖದಲ್ಲಿ ಒಂದು ದೀಪಾವಳಿ.

ಕಾಲೇಜಿಗೆ ಹೋಗುವಾಗಲೇ ಪುಸ್ತಕಗಳನ್ನು ಬದಿಗಿಟ್ಟು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ಎಚ್ ಎನ್ ಅಂದು ತೊಟ್ಟ ಗಾಂಧಿ ಟೋಪಿಯನ್ನು ಎಂದೂ ಬದಿಗಿಡಲಿಲ್ಲ.

ಗಾಂಧಿ ಬೆಂಗಳೂರಿಗೆ ಬಂದಾಗ ಜೊತೆಗಿದ್ದು ಅವರ ಭಾಷಣವನ್ನು ಕನ್ನಡಕ್ಕೆ ಅನುವಾದಿಸಿ ಹೇಳಿದ ಕ್ಷಣ ಅವರ ಬದುಕಿನ ಪ್ರಶಸ್ತಿಗಳಲ್ಲೊಂದು. ಪದ್ಮ ಭೂಷಣ, ತಾಮ್ರ ಪತ್ರ ಹೀಗೆ ಅನೇಕ ಗೌರವಕ್ಕೆ ಪಾತ್ರರಾಗಿದ್ದರೂ ಅಲ್ಲ, ಅದೊಂದೇ ಸರಿಯಾದ ಪ್ರಶಸ್ತಿ ಎಂದು ಭಾವಿಸಿದ್ದರು.

ನಾನು ಓದಿದ ಸಂಗೀತ, ನೃತ್ಯ, ನಾಟಕ ವಿಭಾಗವಂತೂ ಎಚ್ ಎನ್ ಅವರ ನೆನಪುಗಳನ್ನೇ ಹೊದ್ದು ಮಲಗಿದೆ.

ದಶಕಗಳ ಕಾಲ ನ್ಯಾಷನಲ್ ಕಾಲೇಜಿನಲ್ಲಿ ಅಂತರ ವರ್ಗೀಯ ನಾಟಕಗಳ ಹಬ್ಬವನ್ನೇ ನಡೆಸಿದ ಎಚ್ ಎನ್ ಕುಲಪತಿಯಾದಾಗ ಮಾಡಿದ ಸ್ಮರಣೀಯ ಕೆಲಸಗಳಲ್ಲೊಂದು ಈ ವಿಭಾಗದ ಕನಸು ಬಿತ್ತಿದ್ದು.

ಬ್ರಿಟಿಷರ ವಿರುದ್ಧ ಹೋರಾಡಿ ಪ್ರಮುಖರೆಲ್ಲರೂ ಭೂಗತರಾದಾಗ, ಜೈಲು ಪಾಲಾದಾಗ ‘ಇಂಕಿಲಾಬ್’ ಎನ್ನುವ ಕೊರೆಯಚ್ಚಿನ ಪತ್ರಿಕೆಯನ್ನು ದಿನಗಟ್ಟಲೆ ನಡೆಸಿದ ಹುಡುಗ ಮೂಢನಂಬಿಕೆಯನ್ನು ಕಟ್ಟಿಹಾಕದೆ ಬಿಟ್ಟಾನೆಯೇ.. ಅದೇ ಕಾರಣಕ್ಕೆ ಇವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಿದ ಪವಾಡ, ಮೂಢನಂಬಿಕೆ ವಿರುದ್ಧದ ಸಮಿತಿ ಇಡೀ ದೇಶದಲ್ಲಿ ಎಲ್ಲರೂ ನಿಬ್ಬೆರಗಾಗುವಂತೆ ಮಾಡಿತು.

ಮಾಸಾಶನವನ್ನು ಕಣ್ಣೆತ್ತಿಯೂ ನೋಡದ, ಪರೀಕ್ಷಕರಿಲ್ಲದೆ ಪರೀಕ್ಷೆ ನಡೆಸಿದ, ಅಟೆಂಡೆನ್ಸ್ ನಲ್ಲಿ ತನ್ನ ಅಧ್ಯಾಪಕರು ರುಜು ಹಾಕುವುದು ಅವರಿಗೆ ತಾನು ಮಾಡುವ ಅಪಮಾನ ಎಂದು ನಂಬಿದ್ದ ಎಚ್ ಎನ್ ಆ ಕೋಣೆಯ ತೆರೆದ ಬಾಗಿಲಿನಿಂದ ಹೊರಟೇಬಿಟ್ಟರು.

ಇದೆಲ್ಲ ನೆನಪಾಗುತ್ತಾ.. ಆ ಕೋಣೆಯಲ್ಲಿ ನಾನು ನಿಂತು ಆಗಲೇ ಒಂದು ಗಂಟೆ ಮೀರಿತ್ತು. ಕ್ಯಾಂಟೀನ್ ನಿಂದ ಚಿಮ್ಮಿದ ಹೊಗೆಗೆ ಕೆಮ್ಮುತ್ತಾ ನಿಂತೆ. ತಕ್ಷಣ ಮತ್ತೆ ಎಚ್ ಎನ್ ನೆನಪಾದರು.

ಅವರು ತಮ್ಮ ಅಂತ್ಯಸಂಸ್ಕಾರ ಹೇಗಿರಬೇಕು ಎಂದು ಬದುಕಿದ್ದಾಗಲೇ ಬರೆದಿಟ್ಟಿದ್ದವರು. ತಮ್ಮ ಅಂತ್ಯ ಸಂಸ್ಕಾರಕ್ಕೆ ಬೇಕಾದ ಹಣವನ್ನು ಎತ್ತಿಟ್ಟಿದ್ದವರು.

ಅಷ್ಟೇ ಅಲ್ಲ ಗೆಳೆಯರ ಬಳಿ ಸದಾ ತಮ್ಮ ಬಿಳಿ ಹಲ್ಲುಗಳನ್ನು ಬಿಟ್ಟು ಎಲ್ಲರಿಗೂ ಕೇಳುವಂತೆ ಗೊಳ್ ಎಂದು ನಗುತ್ತ ‘ನೋಡಪ್ಪಾ ನನ್ನ ಅಂತ್ಯಸಂಸ್ಕಾರಕ್ಕೆ ಹಸಿ ಸೌದೆ ಬಳಸಬೇಡ, ಏಕೆಂದರೆ ನನಗೆ ಉಬ್ಬಸ, ಹೊಗೆ ತಡೆಯೋದಿಕ್ಕಾಗುವುದಿಲ್ಲ’ ಎಂದವರು.

ಆ ಕೋಣೆಯಿಂದ ಅವರು ಹೊರನಡೆದರು. ಈಗ ಸಮಾಜದಲ್ಲಿರುವುದು ಬೆಳಕೋ ಕತ್ತಲೋ.. ಗೊಂದಲ.


ನಾಡಿದ್ದು (ಶನಿವಾರ) ಎಚ್ ಎನ್ ಅವರ ಜನ್ಮ ಶತಮಾನೋತ್ಸವ.
ಅದರ ಅಂಗವಾಗಿ ಇನ್ನಿಲ್ಲದಂತೆ ನೆನಪಾದರು ಎಚ್ ಎನ್

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?