ಅಂತರಾಳ

ಆಸೆಯೆಂಬ ಬಿಸಿಲು ಕುದುರೆ ಏಕೆ ಏರುವೆ..?

ಜಿ.ಎನ್.ಮೋಹನ್


ಯಾರ್ ಹೇಳಿದ್ರು ನಿಮಗೆ ಆ ಚಾಕಲೇಟ್ ತಿನ್ನೋಕೆ?- ಅಂತ ಗದರಿಸಿದ್ದು ನಿಗೆಲ್ ಪ್ರಾಗ್ಬೇಡ್.

ಸಿ ಎನ್ ಎನ್ ನ ಕಾನ್ಫರೆನ್ಸ್ ರೂಮಲ್ಲಿ ಕುಳಿತಿದ್ದ ನಾನೆಂಬ ನಾನೂ, ಪಕ್ಕದಲ್ಲಿದ್ದ ದಕ್ಷಿಣ ಆಫ್ರಿಕಾದ ಶಬಲಾಲ, ಜಪಾನಿನ ಮೆಗ್, ಸ್ಲೊವೇನಿಯಾದ ಪೋಲೊಂಕಾ, ಆಸ್ಟ್ರೇಲಿಯಾದ ಗೆರ್ದಾ, ರುಮೇನಿಯಾದ ಕ್ರಿಸ್ಟಿ, ಇರಾನಿನ ಹಮೀದ್, ಕೆನ್ಯಾದ ಏಂಜೆಲೋ, ಜೆಕ್ ನ ಮೆರೆಕ್ ಎಲ್ಲರೂ ದಂಗಾಗಿಹೋದೆವು.

ನುಂಗಲೂ ಆಗದೇ, ಉಗುಳಲೂ ಆಗದಂತೆ ಚಾಕಲೇಟ್ ನಮ್ಮ ಬಾಯೊಳಗೆ ಕುಳಿತಿತ್ತು.

ಯಾವ್ಯಾವುದೋ ದೇಶದಿಂದ ಬಂದು ಇಲ್ಲಿ ಚಾಕಲೇಟ್ ತಿಂದು ಬೈಸಿಕೊಳ್ಳಬೇಕಾಗಿ ಬಂತಲ್ಲಪ್ಪಾ ಎನ್ನುವ ಭಾವವೇ ಎಲ್ಲರ ಮುಖದಲ್ಲಿ ನಾಟ್ಯವಾಡುತಿತ್ತು.

ಆಗಿದ್ದು ಇಷ್ಟೇ.

ಸಿಎನ್ ಎನ್ ಚಾನಲ್ ನಲ್ಲಿ ಪಬ್ಲಿಕ್ ರಿಲೇಶನ್ ನಿಭಾಯಿಸುವ ನಿಗೆಲ್ ಟಕಟಕ ಹೆಜ್ಜೆ ಹಾಕುತ್ತಾ ನಮ್ಮ ಕ್ಲಾಸ್ ರೂಂ ಒಳಗೆ ಬಂದರು. ಕೈಯಲ್ಲಿ ದೊಡ್ಡ ಚಾಕಲೇಟ್ ಪ್ಯಾಕೆಟ್. ಎದುರಿಗಿದ್ದ ಬೌಲ್ ಗೆ ಆ ಚಾಕಲೇಟ್ ಗಳನ್ನೆಲ್ಲಾ ಸುರಿದರು. ನಂತರ ತಮ್ಮ ಪಾಡಿಗೆ ತಾವು ಪಾಠ ಶುರು ಹಚ್ಚಿಕೊಂಡರು.

ಏನೋ ಬರೆಯಲು ನಿಗೆಲ್ ಬೋರ್ಡ್ ಕಡೆ ತಿರುಗಿದ್ದೇ ತಡ ನಮ್ಮ ತಂಡದಲ್ಲೇ ಅತಿ ತರಲೆ ಎನಿಸಿಕೊಂಡಿದ್ದ ಮೆಗ್ ಒಂದು ಚಾಕಲೇಟ್ ಎತ್ತಿ ಬಾಯಿಗೆ ಎಸೆದುಕೊಂಡವಳೇ ‘ಹೆಂಗೆ’ ಅನ್ನುವಂತೆ ಎಲ್ಲರ ಕಡೆ ನೋಡಿದಳು.

ಆ ಕಲೆ ಅವಳೊಬ್ಬಳಿಗೆ ಮಾತ್ರ ಬರುತ್ತದೆಯೇ? ಅಂತ ನಾವೆಲ್ಲರೂ ಪೈಪೋಟಿಗೆ ಬಿದ್ದೆವು.

ಆಮೇಲೆ ಬಟ್ಟಲು ಕುಳಿತ ಕಡೆ ಕುಳಿತಿರಲಿಲ್ಲ. ಎಲ್ಲರ ಮುಂದೆ ಸುತ್ತುತ್ತಾ ಹೋಯಿತು. ಆಗಲೇ ನಿಗೆಲ್ ನಮ್ಮೆಡೆ ತಿರುಗಿ ಗದರಿದ್ದು.

ನಮ್ಮ ಮುಖಗಳು ಕಪ್ಪಿಟ್ಟು ಹೋಗಿದ್ದು ನೋಡಿಯೇ ಇರಬೇಕು ನಿಗೆಲ್ ನಿಧಾನವಾಗಿ ತಮ್ಮ ‘ವಿಕ್ಕೋ ವಜ್ರದಂತಿ’ ಹಲ್ಲುಗಳನ್ನು ಪ್ರದರ್ಶಿಸುತ್ತಾ ‘yes! That is called temptation’ ಅಂದರು.

ಆಗ ಬಲ್ಬ್ ಹತ್ತಿತ್ತು.

ನಿಗೆಲ್ ಪಾಠ ಮಾಡಲು ಬಂದದ್ದು ‘ಮೀಡಿಯಾ ಎಥಿಕ್ಸ್’ ಬಗ್ಗೆ. ಒಬ್ಬ ಪತ್ರಕರ್ತ ಹೇಗೆ ಆಸೆ ಆಮಿಷಗಳನ್ನ ಗೆದ್ದು ನಿಲ್ಲಬೇಕು ಅನ್ನೋದರ ಬಗ್ಗೆ.

ಆದರೆ ಜಗತ್ತಿನ ಅಷ್ಟೂ ದೇಶಗಳ ‘ಘನಂಧಾರಿ’ ಪತ್ರಕರ್ತರಾದ ನಾವು ಅತ್ಯಂತ ಸುಲಭದಲ್ಲಿ ಖೆಡ್ಡಾದಲ್ಲಿ ಬಿದ್ದಿದ್ದೆವು.

ಚಾಕಲೇಟ್ ನಿಂದ ಹಿಡಿದು ರೋಲ್ಸ್ ರಾಯ್ ಕಾರ್ ನವರೆಗೆ ಎಲ್ಲಾ temptationಗೂ ನಾವು ಸುಲಭವಾಗಿ ತುತ್ತಾಗುವವರು ಎಂಬುದನ್ನು ನಿಗೆಲ್ ಸರಳವಾಗಿ ತಿಳಿಸಿ ಹೇಳಿಬಿಟ್ಟಿದ್ದ.

‘ಚಾಕಲೇಟ್ ಗೆ ಹೋದ ಮಾನ ಆನೆ ಕೊಟ್ಟರೂ ಬರುವುದಿಲ್ಲ’ ಅಂತ ಗೊತ್ತಾಗಿಹೋಯಿತು.

ಕಿಂಗ್ ಫಿಷರ್ ಏರ್ ಲೈನ್ಸ್ ತನ್ನ ಮೊದಲ ಹಾರಾಟಕ್ಕೆ ಸಜ್ಜಾಗಿತ್ತು. ಇದ್ದಕ್ಕಿದ್ದಂತೆ ರಾಮೋಜಿರಾಯರಿಂದ ನನಗೆ ಬುಲಾವ್ ಬಂತು. ಪ್ರಶ್ನಾರ್ಥಕ ಮುಖ ಹೊತ್ತು ಹೋದ ನನ್ನ ಕೈಗೆ ವಿಜಯ್ ಮಲ್ಯ ಕಂಪನಿಯ ಲೆಟರ್ ಇಟ್ಟರು.

ಕಿಂಗ್ ಫಿಷರ್ ತನ್ನ ಮೊದಲ ಹಾರಾಟದಲ್ಲಿ ಪತ್ರಕರ್ತರನ್ನು ಇಂಗ್ಲೆಂಡ್ ಗೆ ಹೊತ್ತೊಯ್ಯಲು ಸಜ್ಜಾಗಿತ್ತು. ಹಾರಾಟ, ಓಡಾಟ, ಊಟ ಎಲ್ಲಾ ಅವರ ಖರ್ಚಿನಲ್ಲೇ..

‘ಭಾರತಕ್ಕೊಂದು ಹೊಸ ಏರ್ ಲೈನ್ಸ್, ಅದೂ ಯಶಸ್ವಿ ಉದ್ಯಮಿಯಿಂದ ಅನ್ನೋದು ಖಂಡಿತಾ ನ್ಯೂಸ್. ಆದರೆ ‘ಅದಕ್ಕೆ ಇಂಗ್ಲೆಂಡ್ ಗೆ ಹೋಗೋ ಅಗತ್ಯ ಏನಿದೆ. ವಿಮಾನ ಹೊರಟಾಗ, ಬಂದಾಗ ಮುಂಬೈನಲ್ಲಿ ಬೈಟ್ ತಗೊಂಡ್ರೆ ಸಾಕಲ್ಲ’ ಅಂದರು.

ಹೌದಲ್ವಾ ಅನಿಸ್ತು.

ಆದರೆ ಆ ವೇಳೆಗೆ ನಮ್ಮ ದೇಶದ ಎಷ್ಟೋ ಪತ್ರಕರ್ತರು ದುಬೈ, ಸಿಂಗಾಪುರ್, ಶ್ರೀಲಂಕಾ, ಥೈಲ್ಯಾಂಡ್, ಮಲೇಶಿಯಾ ಅಂತ ಫ್ರೀ ಟ್ರಿಪ್ ಮಾಡಿ ತಮ್ಮ ಪಾಸ್ ಪೋರ್ಟ್ ನಲ್ಲಿ ಬಿದ್ದ ಸೀಲನ್ನೇ ಪದ್ಮ ಪ್ರಶಸ್ತಿ ಥರಾ ತಮ್ಮ ತಮ್ಮ ಕಲೀಗ್ ಗಳ ಎದುರು ಪ್ರದರ್ಶಿಸುತ್ತಿದ್ದರು.

ಈ ಮಧ್ಯೆ ಒಂದು ಕಗ್ಗಂಟು ಎದುರಾಯ್ತು. ಅಮೆರಿಕಾದಲ್ಲಿ ನಡೆಯೋ ‘ಅಕ್ಕ’ ಸಮ್ಮೇಳನ ಸಿಕ್ಕಾಪಟ್ಟೆ ಸುದ್ದಿ ಮಾಡಿದ್ದ ಕಾಲ ಅದು. ಅದನ್ನ ಚಾನಲ್ ಗೆ ಕವರ್ ಮಾಡಿದ್ರೆ ಅಲ್ಲಿನ, ಅಂತೆಯೇ ಇಲ್ಲಿನ ಕನ್ನಡಿಗರಿಗೆ ಒಳ್ಳೆಯ ಸುದ್ದಿ ಅಂತ ಯೋಚನೆ ಮಾಡಿದ್ದೆ.

‘ಸಂಘಟಕರಿಗೆ ಹೇಳಿ ಟಿಕೆಟ್ ಮಾಡಿಸಿದರೆ ನಮ್ಮ ರಿಪೋರ್ಟರ್ ಒಬ್ಬರನ್ನು ಅಮೆರಿಕಾಗೆ ಕಳಿಸಬಹುದು’ ಅಂತ ರಾಮೋಜಿರಾಯರ ಮುಂದೆ ಪ್ರಸ್ತಾಪ ಇಟ್ಟೆ.

ಅವರು ನನ್ನ ಮುಖ ನೋಡಿದವರೇ ‘ಅಲ್ಲ ಆರ್ಗನೈಸರ್ ಕೊಡೋ ಟಿಕೆಟ್ ನಲ್ಲಿ ಅಮೆರಿಕಾಗೆ ಹೋದವರು ತಮ್ಮ ಕಣ್ಣಿಗೆ ಕಂಡದ್ದೆಲ್ಲಾ ಹಾಗಾಗೇ ವರದಿ ಮಾಡೋದಿಕ್ಕೆ ಸಾಧ್ಯ ಅಂತೀರಾ’ ಅಂತ ಪ್ರಶ್ನಿಸಿದರು.

ನನ್ನ ಉಭಯ ಸಂಕಟ ಗೊತ್ತಾಯ್ತೋ ಏನೋ ‘ರಾಮೋಜಿ ಗ್ರೂಪ್ ಇನ್ನೂ ಬಡವಾಗಿಲ್ಲ ಮೋಹನ್. ನಿಮಗೆ ಅಗತ್ಯ ಅನ್ನಿಸಿದ್ರೆ ನಮ್ಮ ಹಣದಲ್ಲೇ ಕಳಿಸಿ’ ಅಂದರು.

ಒಂದು ಕ್ಯಾಲೆಂಡರ್, ಒಂದು ಪೆನ್ನು, ಒಂದು ಡೈರಿಗಾಗಿ ಮುಗಿಬೀಳೋ ಕಾಲ ಒಂದಿತ್ತು. ಅದನ್ನು ಪಡಕೊಂಡವರು ‘ಧನ್ಯೋಸ್ಮಿ’ ಅಂತ ನಿಟ್ಟುಸಿರು ಬಿಡ್ತಿದ್ರು.

ಆದ್ರೆ ಈಗ ಬದಲಾವಣೆಯ ಕಾಲ ಬಂದಿದೆ. ಜನ ಚೇಂಜ್ ಕೇಳ್ತಿದ್ದಾರೆ. ಹಾಗೇನೆ ಪತ್ರಕರ್ತರೂ ಕೂಡಾ. ಅಲಾರಾಂ ಕ್ಲಾಕ್, ಫ್ಲಾಸ್ಕ್, ಬ್ಯಾಗು, ವಿಐಪಿ ಸೂಟ್ ಕೇಸು, ಸೂಟ್ ಪೀಸು ಹೋಗಿ ವಾಚು, ಬೆಳ್ಳಿ ಲೋಟ, ಗೋಲ್ಡ್ ಕಾಯಿನ್ ಕಾಲ ಬಂತು. ಅದರ ಮಧ್ಯೆ ಗಿಫ್ಟ್ ವೋಚರ್ರು, ಕಂಪನಿ ಶೇರು, ಕ್ಲಬ್ ಮೆಂಬರ್ ಶಿಪ್ ಇಣುಕಿ ಹಾಕ್ತು.

ಈಗ ಅದೆಲ್ಲಾ ಯಾವ ಲೆಕ್ಕ ಅನ್ನೋ ಹಾಗೆ ಕಾರು, ಸೈಟು, ಸೀಟು, ಫಾರಿನ್ ಟ್ರಿಪ್ಪು ಕಾಲ ಬಂದಿದೆ. ಜರ್ನಲಿಸಂ ಖದರ್ರೇ ಬದಲಾಗಿದೆ. ಸಂಸ್ಥೆಗಳೇ ಇಷ್ಟು ದುಡ್ಡು ಕೊಟ್ರೆ ಇಷ್ಟು ಪ್ರಚಾರ ಫ್ರೀ. ಒಂದು ಬನಿಯನ್ ಕೊಂಡ್ಕೊಂಡ್ರೆ ಒಂದು ಕಾಚ ಫ್ರೀ ಅಂತ ನಿಂತಿರೋವಾಗ ಪತ್ರಕರ್ತರ ಸ್ಟೇಟಸ್ಸೂ ಬದಲಾಗಿದೆ.

ಮೊನ್ನೆ ಪಿ.ಸಾಯಿನಾಥ್ ಜೊತೆ ಮಾತಾಡ್ತಾ ಇದ್ದಾಗ ಅವರು ಹೇಳಿದ್ದೂ ಅದೇ- ಮೊದಲು ಗಿಫ್ಟು, ಲಂಚ ಅನ್ನೋದು ವ್ಯಕ್ತಿಗತವಾಗಿತ್ತು. ಈಗ ಸಾಂಸ್ಥಿಕ ರೂಪ ಪಡಕೊಂಡಿದೆ ಅಂತ. ಅದನ್ನೇ ‘ಪೇಯ್ಡ್ ನ್ಯೂಸ್’ ಅಂತ ಅವರು ಕರೆದಿದ್ದು.

ಮಂಗಳೂರಿನಲ್ಲಿದ್ದೆ. ನನ್ನ ವಾಚು ಬಿಲ್ಕುಲ್ ಕೆಲಸ ಮಾಡಲ್ಲ ಅಂತ ಮುಷ್ಕರ ಹೂಡಿತ್ತು. ಸರಿ ವಾಚ್ ಡಾಕ್ಟರ್ ಗಾದ್ರೂ ತೋರಿಸೋಣ ಅಂತ ಕರಕೊಂಡು ಹೋದೆ.

ಸ್ವಲ್ಪ ಹೊತ್ತಿಗೆ ನನ್ನ ಕಲೀಗ್ ಕೂಡಾ ಅಲ್ಲಿಗೆ ಬಂದ್ರು. ಏನ್ಸಮಾಚಾರ ಇಲ್ಲಿ ಅಂದೆ. ದರಿದ್ರ ಬರೀ ಜೆಂಟ್ಸ್ ವಾಚೇ ಕೊಡ್ತಾರೆ. ಮನೇಲಿ ಆಗಲೇ ಐದು ವಾಚಿದೆ. ಇವತ್ತು ಬೆಳಗ್ಗೆ ಪ್ರೆಸ್ ಕಾನ್ಫರೆನ್ಸ್ ನಲ್ಲಿ ಮತ್ತೆ ಅದೇ ವಾಚ್ ಬಂತು. ಅದಕ್ಕೆ ಆರ್ಗನೈಸರ್ ಹತ್ರ ಯಾವ ಅಂಗಡೀನಲ್ಲಿ ಕೊಂಡ್ಕೊಂಡರು ಅಂತ ಕೇಳಿಕೊಂಡು ಇಲ್ಲಿಗೆ ಬಂದೆ. ಇದನ್ನ ಕೊಟ್ಟು ನನ್ನ ಮಿಸೆಸ್ ಗೆ ಲೇಡೀಸ್ ವಾಚ್ ತಗೊಂಡ್ ಹೋಗ್ತೀನಿ ಅಂದ್ರು.

ಕಾಲ ಒಂದು ಕ್ಷಣ ಸ್ಥಬ್ಧವಾದ ಹಾಗಾಯ್ತು.

ಇವತ್ತು ವಿಧಾನಸೌಧ ಅನ್ನೋದು ಕೇವಲ ರಾಜಕಾರಣಿಗಳ ಲಾಬಿ ಕೇಂದ್ರ ಅಂದ್ರೆ ಅದು ಅರ್ಧ ಸತ್ಯ ಮಾತ್ರ. ಅದು ಜರ್ನಲಿಸ್ಟ್ ಗಳ ಲಾಬಿ ಕೇಂದ್ರಾನೂ ಹೌದು.

ಸಚಿವರಾಗಿದ್ದ ಬಸವರಾಜ ಹೊರಟ್ಟಿ ಒಂದು ದಿನ ಫೋನ್ ಮಾಡಿದ್ರು ‘ನಿಮ್ಮ ರಿಪೋರ್ಟರ್ ಗೆ ಅವರ ಊರಲ್ಲಿ ಒಂದು ಕಾಂಪೌಂಡ್ ಕಟ್ಟಿಸಬೇಕಂತೆ ಕಟ್ಟಿಸಲಾ ಅಂತ. ನಾನು ಹ್ಞೂ ಅನ್ನೋ ಅಷ್ಟರಲ್ಲಿ ಅವರ ಚಿಕ್ಕಮ್ಮನಿಗೆ ವರ್ಗಾ ಆಗಬೇಕಂತೆ ಮಾಡಿಸಿಕೊಡ್ಲಾ ಅಂದ್ರು. ಈಟಿವಿಯಲ್ಲಿ ಒಂದು ವಿಕೆಟ್ ಬಿತ್ತು.

ಇದಾದ ಕೆಲವೇ ತಿಂಗಳಲ್ಲಿ ಈಟಿವಿಯ ಹನ್ನೆರಡೂ ಚಾಲನ್ ಗಳ ಮುಖ್ಯಸ್ಥರು ರಾಮೋಜಿರಾಯರ ಮುಂದೆ ಕುಳಿತಿದ್ದೆವು.

‘ಈ ಆಸೆಗೆ ಕಡಿವಾಣ ಹಾಕುವ ಸವಾಲ್ ಯಾರು ಸ್ವೀಕರಿಸ್ತೀರಾ?’ ಅಂತ ಕೇಳಿದ್ರು. ನಾನು ಕೈ ಎತ್ತಿದೆ. ಹೀಗೆ ಎತ್ತುವಾಗ ನನ್ನ ಕೈಗಳನ್ನೂ ಒಮ್ಮೆ ನೋಡಿಕೊಂಡೆ. ಕಣ್ಣಿಲ್ಲದವನ ರಾಜ್ಯದಲ್ಲಿ ಮೆಳ್ಳಗಣ್ಣಿನವನೇ ವಾಸಿ ಎನ್ನುವಂತಿತ್ತು ನನ್ನ ಸ್ಥಿತಿ.

ರಾಮೋಜಿರಾಯರು ನೇರಾನೇರ ಕೇಳಿದರು. ನೀವೇನು ಪರಿಶುದ್ಧರೇ ಅಂತ. ನಾನೂ ಆಸೆಯೆಂಬ ಬಿಸಿಲು ಕುದುರೆ ಏರಿದವನೇ. ಆದರೆ ಆ ಕುದುರೆಯಿಂದ ಕೆಳಗಿಳಿಯಲೂ ನನಗೆ ಸಾಧ್ಯವಾಗಿದೆ. ನನ್ನ ತಪ್ಪುಗಳು ನನ್ನನ್ನು ಎಚ್ಚರಿಸಿವೆ ಎಂದೆ. ತಪ್ಪು ಮಾಡಿದವರಿಗೆ ಆ ಪಂಜಾಬಿನ ಗುರುದ್ವಾರದಲ್ಲೂ ಚಪ್ಪಲಿ ಒರೆಸಿ ಪಶ್ಚಾತ್ತಾಪ ಮಾಡಿಕೊಳ್ಳುವ ಅವಕಾಶವಿದೆಯಲ್ಲ ಎಂದು ಕೇಳಿದೆ.

ಹಾಗೆ ಕೇಳಿದ ಮೇಲೆ ನಿಜವಾದ ಸವಾಲು ಎದುರಾದದ್ದು. ನಮ್ಮ ರಕ್ತದೊಳಗೇ ಸೇರಿ ಹೋಗಿದ್ದ ಗಿಫ್ಟ್ ಕೊಳಕನ್ನು ಹೊರತೆಗೆಯುವ ಕೆಲಸ ಆರಂಭವಾಯಿತು.

ಕಚೇರಿಯ ಒಳಗೂ, ಕಚೇರಿಯ ಹೊರಗೂ ನಡೆಯ ಬಹುದಾದ ಅವ್ಯವಹಾರ ಪಟ್ಟಿ ಮಾಡಿದೆ. ಕಣ್ಣಿಗೆ ರಾಚುವಂತೆ, ಅಂತೆಯೇ ಕದ್ದೂ ಮುಚ್ಚಿ ನಡೆಯುವ ಅವ್ಯವಹಾರಗಳ ಸರಮಾಲೆ ತಯಾರಾಯಿತು.

ಸುದ್ದಿ ಬರೆಯುವುದಕ್ಕೆ ಹಾಗೆ ಸುದ್ದಿ ಬರೆಯದಿರುವುದಕ್ಕೂ ಕೈ ಸೇರುವ ಹಣ, ಆಮಿಷಗಳ ಲಿಸ್ಟ್ ನನ್ನ ಕೈಯಲ್ಲಿತ್ತು. ರಾಮೋಜಿರಾಯರು ಇದಕ್ಕೆ ತಮ್ಮ ಒಪ್ಪಿಗೆಯ ಸೀಲ್ ಒತ್ತಿದರು. ದೇಶದ ಮೂಲೆಮೂಲೆಗೆ ನಮ್ಮ ಪಟ್ಟಿ ಹೋಗುತ್ತಿದ್ದಂತೆ ಒಂದು ಬಿರುಗಾಳಿಯೇ ಎದ್ದಿತು.

ಬಸ್ ಪಾಸ್, ರೈಲು ರಿಯಾಯಿತಿ, ಟೆಲಿಫೋನ್ ಕನೆಕ್ಷನ್, ಪೊಲೀಸರಿಂದ ಎಸ್ಕೇಪ್ ಆಗಲು, ಹೋದ ಪ್ರೆಸ್ ಕಾನ್ಫರೆನ್ಸ್ ಗಳಲ್ಲಿ ಮಧ್ಯಾಹ್ನವೇ ಬಾಟಲಿಯ ಬಿರಡೆ ಬಿಚ್ಚಲು ಸಿದ್ಧವಾಗುತ್ತಿದ್ದವರು ಕುಡಿಯದೆಯೂ ಕಣ್ಣು ಕೆಂಪಗೆ ಮಾಡಿಕೊಂಡರು.

ಅಲೆಯ ವಿರುದ್ಧ ಈಜುವುದೇನು ಸುಲಭದ ಕೆಲಸವಲ್ಲವಲ್ಲ.

Comment here