Thursday, April 25, 2024
Google search engine
Homeಸಾಹಿತ್ಯ ಸಂವಾದಅಂತರಾಳಓ ಅಲ್ಲಿ ನೋಡಿ, ಅದೇ 'ಮುಂಗಾರು'

ಓ ಅಲ್ಲಿ ನೋಡಿ, ಅದೇ ‘ಮುಂಗಾರು’

ಜಿ.ಎನ್.ಮೋಹನ್


‘ಬಾಳೆಗಿಡ ಗೊನೆ ಹಾಕಿತು’ ಬರೆದು ಸಾಹಿತ್ಯಲೋಕಕ್ಕೆ ಅಧಿಕೃತ ಎಂಟ್ರಿ ಪಡೆದ ಬಿ.ಎಂ. ಬಶೀರ್ ಮುಂದೆ ಕುಳಿತಿದ್ದೆ.

ಮಂಗಳೂರಿನ ಬೈಕಂಪಾಡಿ ಕೈಗಾರಿಕಾ ಪ್ರದೇಶದ ಅವರ ಆಫೀಸಿನಲ್ಲಿ . ‘ವಾರ್ತಾ ಭಾರತಿ’ಯ ಸುದ್ದಿ ಸಂಪಾದಕ ಬಶೀರ್ ತನ್ನ ಹಿಂದೆ ಇದ್ದ ಕಿಟಕಿಯತ್ತ ನನ್ನನ್ನು ಕರೆದೊಯ್ದರು.

ಕಿಟಕಿಯಿಂದ ಇಡೀ ಕೈಗಾರಿಕಾ ಜಗತ್ತೇ ಕಾಣುತ್ತಿತ್ತು. ಜಾಗತೀಕರಣದ ಒಂದೇ ಏಟಿಗೆ ತತ್ತರಿಸಿ ಮುಚ್ಚಿಹೋಗಿದ್ದ ಕೈಗಾರಿಕೆಗಳು, ಅದರ ವಿರುದ್ಧ ಈಜುತ್ತಾ ಇನ್ನೂ ಏದುಸಿರು ಬಿಡುತ್ತಿರುವ ಕೆಲವು.

ಒಂದು ಕಾಲಕ್ಕೆ ಮಂಗಳೂರನ್ನು ಅತಿ ಜೀವಂತ ಕೇಂದ್ರ ಎನಿಸಿದ್ದ ಈ ಪ್ರದೇಶ ಆ ಕಲರವವನ್ನು ಕಳೆದುಕೊಳ್ಳುತ್ತಾ ಸಾಗಿತ್ತು.

‘ಹೇಗೆಲ್ಲಾ ಆಗಿ ಹೋಯ್ತಲ್ಲಾ ಬಶೀರ್’ ಎಂದೆ.

ಬಶೀರ್ ಒಂದು ವಿಷಾದದ ನಗೆ ನಕ್ಕು ‘ಅದಲ್ಲ ಸಾರ್ ನಾನು ಹೇಳಲು ಹೊರಟಿದ್ದು. ಓ ಅಲ್ಲಿ ನೋಡಿ, ಆ ರಸ್ತೆಯಲ್ಲಿದ್ದದ್ದು ‘ಮುಂಗಾರು’ ಈ ಕಡೆ ನೋಡಿ ಆ ರಸ್ತೆಯಲ್ಲಿದ್ದದ್ದು ‘ಜನವಾಹಿನಿ” ಎಂದರು.

ನಾನು ಒಂದು ಕ್ಷಣ ಬೆಚ್ಚಿದೆ. ಬಶೀರ್ ಒಂದು ಪುಟ್ಟ ಕಿಟಕಿಯಿಂದ ನನಗೆ ಕನ್ನಡ ಪತ್ರಿಕೋದ್ಯಮದ ನಿನ್ನೆ- ಇಂದು- ನಾಳೆಯನ್ನು ಪರಿಚಯಿಸುತ್ತಿದ್ದರು.

ಈಗಲೂ ಚೆನ್ನಾಗಿ ನೆನಪಿದೆ. ಕನ್ನಡ ಪತ್ರಿಕೋದ್ಯಮ ಒಮ್ಮೆ ಬೆಚ್ಚಿಕುಳಿತಿತ್ತು. ಕನ್ನಡ ಪತ್ರಿಕೋದ್ಯಮ ಕಂಡರಿಯದ ಒಂದು ಮಹಾನ್ ವಲಸೆಗೆ ವಡ್ಡರ್ಸೆ ರಘುರಾಮ ಶೆಟ್ಟರು ನಾಂದಿ ಹಾಡಿದ್ದರು.

ಇಟ್ ವಾಸ್ ಎ ಗ್ರೇಟ್ ಮೈಗ್ರೇಶನ್..

ಎಲ್ಲರಿಗೂ ಗೊತ್ತಿತ್ತು. ಕನ್ನಡ ಪತ್ರಿಕೋದ್ಯಮದಲ್ಲಿ ಪ್ರಜಾವಾಣಿಯೇ ಕೊನೆಯ ನಿಲ್ದಾಣ. ಆನಂತರ ಇನ್ನೊಂದು ಹೆಸರೇ ಇರಲಿಲ್ಲ.

ಯಾವುದೇ ಪತ್ರಕರ್ತನಿಗೂ ಇದ್ದ ಒಂದೇ ಕನಸೆಂದರೆ ಆ ಕೊನೆಯ ತಾಣ ತಲುಪಿಕೊಳ್ಳುವುದು.

ಆದರೆ ವಡ್ಡರ್ಸೆ ಒಂದೇ ಏಟಿಗೆ ಈ ನಂಬಿಕೆಯನ್ನು ಬುಡಮೇಲು ಮಾಡಿಬಿಟ್ಟಿದ್ದರು.

ಸತತವಾಗಿ 20 ವರ್ಷಗಳ ಕಾಲ ಪ್ರಜಾವಾಣಿ – ಡೆಕ್ಕನ್ ಹೆರಾಲ್ಡ್ ವರದಿಗಾರಿಕೆಯನ್ನು ನಿಭಾಯಿಸಿದ ‘ವರಶೆ’, ‘ದಿ ಪ್ರಿಂಟರ್ಸ್ (ಮೈಸೂರು) ಲಿಮಿಟೆಡ್’ಗೆ ಗುಡ್ ಬೈ ಹೇಳಿದ್ದರು.

ಹಾಗೆ ಹೇಳಿದ್ದು ಅವರೊಬ್ಬರೇ ಅಲ್ಲ. ಒಳ್ಳೆ ಕಿಂದರಿಜೋಗಿಯ ಹಿಂದೆ ನಡೆದುಹೋಗುವಂತೆ ಇಂದೂಧರ ಹೊನ್ನಾಪುರ, ಎನ್.ಎಸ್. ಶಂಕರ್, ಕೆ.ಪುಟ್ಟಸ್ವಾಮಿ, ಮಹಾಬಲೇಶ್ವರ ಕಾಟ್ರಹಳ್ಳಿ, ಎಂ.ಬಿ. ಕೋಟಿ, ಶಂಕರ್ ಲಾಳಾಪುರ ಎಲ್ಲರೂ ‘ಪ್ರಜಾವಾಣಿ’ಯ ನಂತರವೂ ಜಗತ್ತಿದೆ ಎನ್ನುವುದನ್ನು ನಿಜ ಮಾಡಲು ಹೊರಟಿದ್ದರು.

ಇದಕ್ಕೆ ಇನ್ನೊಂದು ದಿಕ್ಕಿನಿಂದ ಈಗಿನ ‘ಆದಿಮ’ದ ಕೆ. ರಾಮಯ್ಯ, ಸಿನಿಮಾ ಸಂಗೀತ ನಿರ್ದೇಶಕ ವಿ. ಮನೋಹರ್, ಕೆ.ಎಸ್. ಕೇಶವಪ್ರಸಾದ್, ಕೃಪಾಕರ್ ಸೇನಾನಿ ಜೋಡಿಯ ಕೃಪಾಕರ್, ಕೆ.ಕೆ.ಮಕಾಳಿ ಸೇರಿಕೊಂಡರು.

ದಕ್ಷಿಣ ಕನ್ನಡದಿಂದಲೇ ದಿನೇಶ್ ಅಮಿನ್ ಮಟ್ಟು, ಬಿ.ಎಂ.ಹನೀಫ್, ಮಂಜುನಾಥ ಭಟ್, ಚಿದಂಬರ ಬೈಕಂಪಾಡಿ, ಯಶವಂತ ಬೋಳೂರು, ಸುಧಾಕರ ಬನ್ನಂಜೆ ಸಾಥ್ ನೀಡಿದರು.

ಜೆಸುನ, ರಾಮಣ್ಣ ಕೋಡಿಹೊಸಳ್ಳಿ, ಗಂಗಾಧರ ಹಿರೇಗುತ್ತಿ, ಗಣಪತಿ ಭಂಡಾರಿ, ಮಂಜುನಾಥ್ ಚಾಂದ್, ವಿಜು ಪೂಣಚ್ಚ. ಥೇಟ್ ಸಿದ್ಧಲಿಂಗಯ್ಯನವರ ಕವಿತೆಯ ಸಾಲುಗಳಂತೆ ಕಪ್ಪುಮುಖ, ಬೆಳ್ಳಿಗಡ್ಡ ಉರಿಯುತ್ತಿರುವ ಕಣ್ಣುಗಳನ್ನು ಹೊತ್ತವರ ಸಾಲು ‘ಮುಂಗಾರು’ವಿನತ್ತ ನಡೆದು ಹೋಯಿತು.

ಮತ್ತೆ ನೆನಪಾಗುತ್ತಿದೆ,

ಇನ್ನೂ ಪಿಯುಸಿ ಓದುವಾಗಲೇ ನನಗೆ ಜರ್ನಲಿಸ್ಟ್ ಆಗಬೇಕೆಂಬ ಆಸೆಯೊಂದು ಕುಡಿಯೊಡೆದಿತ್ತು. ಜರ್ನಲಿಸ್ಟ್ ಆಗುವುದು ಎಂದರೆ ಇನ್ನಾವ ಅರ್ಥವೂ ಇಲ್ಲ. ‘ಪ್ರಜಾವಾಣಿ’ಯಲ್ಲಿ ಕೆಲಸ ಮಾಡುವುದು.

ಹಾಗಾಗಿ ಸ್ನಾತಕೋತ್ತರ ಅಧ್ಯಯನಕ್ಕೆ ಸಂವಹನವನ್ನೇ ಆಯ್ಕೆ ಮಾಡಿಕೊಂಡಿದ್ದ ನಾನು ಅಲ್ಲಿನ ಲೈಬ್ರರಿಯಲ್ಲಿದ್ದೆ.

ಲಲಿತಮ್ಮ ಮೇಡಂ ನನ್ನ ಮುಂದೆ ಪತ್ರಿಕೆಯ ಕಟ್ಟೊಂದನ್ನು ಇಟ್ಟರು. ಅದು ‘ಮುಂಗಾರು’.

ಪತ್ರಿಕೆಯ ಪುಟ ತಿರುವುತ್ತಾ ಹೋದಂತೆ ನಾನು ‘ಮುಂಗಾರು’ ಮ್ಯಾಜಿಕ್ ಗೆ ಸಿಕ್ಕುಬಿದ್ದಿದ್ದೆ. ‘ಲಂಕೇಶ್ ಪತ್ರಿಕೆ’ ತಂದಾಗಲೂ ಹೀಗೆ ಆಗಿತ್ತು. ಆ ಎಂಟು ಪುಟದ ಪತ್ರಿಕೆಗಾಗಿ ಒಂದು ಕ್ಲಾಸ್ ಗೆ ಚಕ್ಕರ್ ಹಾಕಿ ಪೇಪರ್ ಮಾರುವ ಅಂಗಡಿಗಳನ್ನು ಸುತ್ತುತ್ತಿದ್ದೆವು.

‘ಗುಂ’ ‘ಬಂ’ ಗಳ ಸುತ್ತಾ ಇದ್ದ ಪ್ರಭಾವಳಿಯನ್ನು ಕಿತ್ತುಹಾಕಿ ಪತ್ರಿಕೆ ಅವರನ್ನು ಜನರ ಕಟಕಟೆಯಲ್ಲಿ ನಿಲ್ಲಿಸಿತ್ತು.

ಈಗ ನನ್ನ ಮುಂದೆ ‘ಮುಂಗಾರು’ ಹಿಡಿದಾಗ ಅದೇ ಮುಂಗಾರಿ ಮಿಂಚು ಮೈಯೊಳಗೆ ಹಾದು ಹೋಯಿತು.

ನನ್ನ ನಿರ್ಧಾರ ಬದಲಾಗಿ ಹೋಗಿತ್ತು. ನನ್ನ ನಿಲ್ದಾಣ ‘ಪ್ರಜಾವಾಣಿ’ಯಲ್ಲ, ಮುಂಗಾರು.

ಗೆಳೆಯ ಆರ್.ಜಿ.ಹಳ್ಳಿ ನಾಗರಾಜ್, ಜಿ.ಕೆ.ಮೈರುಗರನ್ನು ಕಟ್ಟಿಕೊಂಡು ಮಂಗಳೂರಿಗೂ ಕಾಲಿಟ್ಟದ್ದಾಯ್ತು. ಕಂಕನಾಡಿ, ವೆಲೆನ್ಸ್ಹಿಯಾದ ಮುಂಗಾರು ಕಚೇರಿಯನ್ನು ಎಡತಾಕಿದ್ದೂ ಆಯಿತು. ಬೀಡಿ ಸೇದುತ್ತಾ, ಹೊಗೆ ಬಿಡುತ್ತಾ ರಘುರಾಮಶೆಟ್ಟರು ‘ನೊ ವೇಕೆನ್ಸಿ’ ಅಂತ ಕೈ ಆಡಿಸಿದ್ದೂ ಆಯಿತು.

ಒಂಬತ್ತನೇ ಕ್ಲಾಸ್ ಓದಿದ್ದ ಹುಡುಗ ಮುಂಬೈ ಬಸ್ ಹತ್ತಿ ಬದುಕಲು ‘ಫ್ರೀ ಪ್ರೆಸ್ ಜರ್ನಲ್’ ಕಚೇರಿಗೆ ತಿಂಡಿ ಕಾಫಿ ಸಪ್ಲೈ ಮಾಡಲು ಹೊರಟಾಗ ಕನ್ನಡ ಪತ್ರಿಕೋದ್ಯಮದ ವ್ಯಾಕರಣವನ್ನೇ ಬದಲಿಸಿಬಿಡಬಿಲ್ಲ ತಾಕತ್ತು ಅವನೊಳಗಿದೆ ಎಂದು ಯಾರಿಗೂ ಗೊತ್ತಿರಲಿಲ್ಲ,

ಫ್ರೀ ಪ್ರೆಸ್ ಜರ್ನಲ್, ಅದಕ್ಕೂ ಮುಂಚೆ ಕಲ್ಯಾಣಪುರದಲ್ಲಿ ಕಲಿತ ಇಂಗ್ಲಿಷ್, ಮುಂಬೈನ ಲೈಬ್ರರಿಗಳ ಅಗಾಧ ಓದು, ಜೊತೆಗೆ ಇದೇ ರೀತಿ ಹೋಟೆಲ್ ಗಳಲ್ಲಿ ದುಡಿಯುತ್ತಿರುವವರ ಸಂಕಷ್ಟ ಎಲ್ಲಾ ಸೇರಿ ಒಬ್ಬ ರಘುರಾಮಶೆಟ್ಟಿ ಎದ್ದು ನಿಂತರು.

ಎನ್.ಎಸ್. ಕಿಲ್ಲೆ ಅವರ ‘ಸರ್ವೋದಯ’ ಪತ್ರಿಕೆಗೆ ಶೆಟ್ಟರು ಬರೆದ ಮೊದಲ ಲೇಖನ ಮುಂಬೈ ಹೋಟೆಲ್ ಉದ್ಯಮವನ್ನೇ ತಲ್ಲಣಿಸಿ ಹಾಕಿತ್ತು.

ತಿಂಗಳುಗಳು ಕಳೆದರೂ ಈ ಲೇಖನದ ಕಾವು ನಿಲ್ಲಲಿಲ್ಲ. ವಡ್ಡರ್ಸೆಯಿಂದ ಬಂದ ಹುಡುಗ ಪೆನ್ ಕೈಗೆತ್ತಿಕೊಂಡದ್ದು ಹೋಟೆಲ್ ಕಾರ್ಮಿಕರ ಕಥೆ ಹೇಳಲು.

ಇದರಿಂದಾಗಿ ನೇರಾನೇರ ರಾಮಮನೋಹರ ಲೋಹಿಯಾ ಸಂಪರ್ಕ. ಒಡಲೊಳಗಿನ ಕೆಚ್ಚಿಗೆ ಬಿರುಗಾಳಿ ಜೊತೆಯಾಯ್ತು. ವಡ್ಡರ್ಸೆಯ ಈ ಹುಡುಗನಿಗೆ ಬರಹಕ್ಕೆ ಎಂತಾ ಬೆಂಕಿಯನ್ನೂ ಹುಟ್ಟು ಹಾಕುವ ಶಕ್ತಿ ಇದೆ ಎಂದು ಗೊತ್ತಾಗಿಹೋಯಿತು.

ಹಾಗಾಗಿಯೇ ನವಭಾರತ- ತಾಯಿನಾಡು- ವಿಶ್ವವಾಣಿ ಮೂಲಕ ಹೊರಟ ಬೆಂಕಿಯುಂಡೆಯೊಂದು ‘ಪ್ರಜಾವಾಣಿ’ ತಲುಪಿಕೊಂಡಿತು.

‘ಚಿಂತನೆಯ ಮಳೆ ಸುರಿಸಿ, ಜನಶಕ್ತಿಯ ಬೆಳೆ ತೆಗೆವ ಮುಂಗಾರು’ ಎನ್ನುವ ಘೋಷಣೆ ನಿಜಕ್ಕೂ ಮಿಂಚಿನಂತೆಯೇ ಸಂಚರಿಸಿತು.

ಜನಶಕ್ತಿ ಎನ್ನುವುದು ವಡ್ಡರ್ಸೆ ಅವರಿಗೆ ಸದಾ ಕಾಡುತ್ತಿದ್ದ ಕನಸು.

ಮುಂಗಾರು ಏಕೆ ಆರಂಭಿಸಿದ್ದು ಎನ್ನುವ ಪ್ರಶ್ನೆ ಹಲವರಲ್ಲಿದೆ. ಮುಂಗಾರು ಎಂಬುದು ರಘುರಾಮ ಶೆಟ್ಟರು ಅದುವರೆಗೆ ಕಟ್ಟಿಕೊಂಡ ಅಸಮಾಧಾನದ ಕ್ಷಣಿಕ ಸ್ಫೋಟವಲ್ಲ. 1951ರಿಂದಲೇ ಜನರದ್ದೇ ಆದ ಒಂದು ಪತ್ರಿಕೆ ಹೆರಬೇಕು ಎನ್ನುವ ಕನಸು ಅವರಲ್ಲಿತ್ತು.

ಅದಕ್ಕೆ ಕಾರಣವಾದದ್ದು ಪತ್ರಿಕಾ ಮಂಡಳಿಯ ಒಂದು ವರದಿ. ಸಿ.ಪಿ.ಆರ್.ಅಯ್ಯರ್ ರೂಪಿಸಿದ ಆ ವರದಿ ಯಾವುದೇ ಉದ್ಯಮಿ ನಡೆಸುವ ಪತ್ರಿಕೆ ಅವರ ಹಿತಾಸಕ್ತಿಯ ರಕ್ಷಣೆಗೆ ಮಾತ್ರ ಇರುತ್ತದೆ. ಇದರಿಂದ ಪೆಟ್ಟು ಬೀಳುವುದು ಪ್ರಜಾಸತ್ತೆಗೆ. ನಿಜಕ್ಕೂ ಪತ್ರಿಕೆ ಪ್ರಜಾಸತ್ತೆಗೆ ಬೆಂಬಲವಾಗಿರಬೇಕಾದರೆ ಅದರ ಒಡೆತನ ಜನರ ಕೈಯಲ್ಲಿರಬೇಕು ಎಂದಿತ್ತು.

ಆ ಜನ ನಾನೇ ಏಕಾಗಬಾರದೆಂದು ಶೆಟ್ಟರಿಗೆ ಅನಿಸಿತೇನೋ. ಒಂದು ಕನಸು, ಮುಂಗಾರನ್ನು ಹೆರುವ ಕನಸು ಆರಂಭವಾಗಿ ಹೋಯಿತು.

ಸಂಪಾದಕೀಯ ಇಲ್ಲದ ಪತ್ರಿಕೋದ್ಯಮಕ್ಕೆ ನೆಲೆ ಒದಗಿಸಿದ್ದ ಕರಾವಳಿಯ ಪರಿಸ್ಥಿತಿಯೂ ಒಂದು ಮುಂಗಾರು ಎದ್ದು ನಿಲ್ಲಲು ಕಾರಣವಾಯಿತು.

ಕಂದಾಚಾರದ ಆಲದ ಮರಕ್ಕೆ ಜೋತುಬಿದ್ದ, ಪತ್ರಿಕೋದ್ಯಮದಿಂದ ವಿಮುಖರಾಗಿದ್ದವರಿಗೆ ಮುಂಗಾರು ಒಂದು ದೊಡ್ಡ ಭರವಸೆಯಾಗಿತ್ತು.

ಒಂದು ಜಾತಿ, ಒಂದು ಧರ್ಮ, ಒಂದು ಪ್ರದೇಶ, ಒಂದು ಉದ್ಯಮದ ಸೂತ್ರಕ್ಕೆ ಸಿಕ್ಕಿಹಾಕಿಕೊಂಡಿದ್ದ ಕರಾವಳಿಯಲ್ಲಿ ಜನರ ಭಾಷೆ ಮಾತನಾಡುವ, ಜನರ ಗೋಳು ಮಾತನಾಡುವ ಪತ್ರಿಕೆ ಬರುತ್ತದೆ ಎನ್ನುವುದೇ ‘ಭರವಸೆಯ ವ್ಯವಸಾಯ’ವಾಗಿತ್ತು.

ಮುಂಗಾರು ಭರವಸೆಯನ್ನು ಬಿತ್ತಿದ್ದು, ಕೈ ಬದಲಾದದ್ದು, ಕುಸಿದದ್ದು, ಮುಚ್ಚಿಹೋದದ್ದು ಎಲ್ಲವೂ ಓದುಗರ ಕಣ್ಣೆದುರು ನಡೆದು ಹೋಗಿದೆ. ಆದರೆ ಮುಂಗಾರು ಏರು ಹಾಗೂ ಬೀಳು ಎರಡೂ ಸಹಾ ಕನ್ನಡ ಪತ್ರಿಕೋದ್ಯಮಕ್ಕೆ ಒಂದು ಪಾಠ.

ಗೆಳೆಯ, ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಮೊನ್ನೆ ಒಂದು ದೊಡ್ಡ ಕಟ್ಟು ಹೊತ್ತು ಹಾಕಿದ್ದ. ಬಿಡಿಸಿ ನೋಡಿದರೆ ಅದೇ ಮುಂಗಾರು ಕಥೆ.

ಓದುತ್ತಾ, ಓದುತ್ತಾ ಮುಂಗಾರು ಹಾಗೂ ವಡ್ಡರ್ಸೆ ರಘುರಾಮಶೆಟ್ಟರು ಸಂಪೂರ್ಣ ಅರ್ಥವಾಗಲಿಲ್ಲ ಎನಿಸಿತು.

ಗೆಳೆಯ ಬಿ.ಎಂ.ಹನೀಫನಿಗೆ ಫೋನಾಯಿಸಿದೆ. ಮುಂಗಾರು ಬಗ್ಗೆ ಸಾಕಷ್ಟು ಮಾತನಾಡಿದೆವು. ಮುಂಗಾರು ಬೀಳಲು ಒಂದಿಷ್ಟು ಜನ ಅಲ್ಲ, ಒಂದು ವ್ಯವಸ್ಥೆಯೇ ಕಾರಣವಾಗಿತ್ತು ಅಂದ.

ಮುಂಗಾರು ಇದ್ದದ್ದೇ ಹಾಗೇ, ಕುರುಡರು ಆನೆಯನ್ನು ಅರ್ಥ ಮಾಡಿಕೊಂಡಂತೆ. ಒಬ್ಬೊಬ್ಬರಿಗೆ ಒಂದೊಂದು ನೋಟ. ವಡ್ಡರ್ಸೆ ಹುಟ್ಟು ಬಂಡಾಯಗಾರ. ಮನೆಯಲ್ಲಿ ಬಂಡೆದ್ದರು, ಹೋಟೆಲ್ ಕಾರ್ಮಿಕರಿಗಾಗಿ ಬಂಡೆದ್ದರು…

…ಮೊದಲು ಕೆಲಸ ಕೊಟ್ಟ ಕುಡ್ಪಿ ಅವರ ವಿರುದ್ಧ ಬಂಡೆದ್ದರು, ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ವಿರುದ್ಧ ಬಂಡೆದ್ದರು, ಗುಂಡೂರಾವ್ ವಿರುದ್ಧ, ರಾಮಕೃಷ್ಣ ಹೆಗಡೆ ವಿರುದ್ಧ ಬಂಡೆದ್ದರು. ದೇವರಾಜ ಅರಸು ಅಧ್ಯಯನ ಕೇಂದ್ರಕ್ಕೆ ಸರ್ಕಾರದ ಗಮನ ಸಿಗಲಿಲ್ಲ ಎನ್ನುವುದಕ್ಕೂ ಬಂಡೆದ್ದರು. ತಮ್ಮೊಳಗಿನ ತಮ್ಮ ಬಗ್ಗೆಯೂ ಬಂಡೆದ್ದರು.

ಹೆಂಡತಿಯ ಬಳೆ ಅಡ್ಡವಿಟ್ಟು, ತಮ್ಮ ಕೋಪ ಅದುಮಿಟ್ಟು, ಜನರ ಸಂಕಟವನ್ನು ಒರೆಗಿಟ್ಟು, ತುಂಟ ಹುಡುಗರ ತಂಡ ಕಟ್ಟಿಕೊಂಡು ಮುಂಗಾರು ಕಟ್ಟಿದ್ದರು.

ಮಂಗಳೂರಿನಲ್ಲಿದ್ದಾಗ ಭಾರತ ಬೀಡಿ ಕಚೇರಿಗೆ ಹಾದು ಹೋಗುವಾಗ ಮುಂಗಾರು ಬೋರ್ಡ್ ಹೊತ್ತ ಕಚೇರಿ ಇತ್ತು. ಆ ವೇಳೆಗೆ ಮುಂಗಾರು ಆರಿಹೋಗಲು ಸಜ್ಜಾಗಿದ್ದ ಮಿಣಿಮಿಣಿ ದೀಪ.

ಇದಕ್ಕೂ ಸ್ವಲ್ಪ ವರ್ಷ ಮುನ್ನ ಪ್ರಜಾವಾಣಿ ಕಚೇರಿಯ ಡೆಸ್ಕ್ ನಲ್ಲಿ ಕೆಲಸ ಮಾಡುತ್ತಿದ್ದೆ. ಹೊಸ ಹುಡುಗರ ದಂಡೇ ಬಂತು. ತಿರುಗಿ ನೋಡಿದರೆ ದಿನೇಶ್ ಅಮಿನ್ ಮಟ್ಟು, ಬಿ.ಎಂ.ಹನೀಫ್, ವಿಜು ಪೂಣಚ್ಚ, ಜೆ.ಎ. ಪ್ರಸನ್ನ ಕುಮಾರ್, ನೆತ್ರಕೆರೆ ಉದಯ ಶಂಕರ್ ಭಟ್, ಆ ಮುನ್ನ ಜಿ.ಕೆ. ಮಧ್ಯಸ್ಥ ಎಲ್ಲರೂ ಮುಂಗಾರುವಿನಿಂದ ಪ್ರಜಾವಾಣಿಗೆ ಬಂದಿದ್ದರು.

ಕೆ.ಎನ್. ಹರಿಕುಮಾರ್ ಅವರ ಲೆಕ್ಕ ಚುಕ್ತಾ ಆಗಿಹೋಗಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?