ಕವನ

ಕವಿತೆ ಓದಿ: ಬಿಸಿಲು

ಚಳಿ ಕೊನೆಗಾಣುವಾಗ

ಬಿಸಿಲಿಗೆ ಮಹತ್ವ . ಬಿಸಿಲಲ್ಲಿ ಬಗೆ ಬಗೆ .
ಬಿಸಿಲು ಕೊನೆಯಾಗುವಾಗ ಮಳೆಯ
ಹಂಬಲದ ಆಶಯ ಕವನದಲ್ಲಿ ಕಾಣಿಸಿದ್ದಾರೆ ಡಾ. ರಜನಿ


.ಬಿಸಿಲು


*****

ಮರಗಳ ಮಧ್ಯೆ
ಹೊಂಗಿರಣದಿಂದ
ಶುರು…
ಬಿಸಿಲ ದಾರಿ

ಮಂಜನ್ನು ಸೀಳಿ
ಇಬ್ಬನಿಗೆ
ಕಾವು ಕೊಟ್ಟಿ…

ಬೆಳಗಿನ ಎಳೆ
ಬಿಸಿಲಿಗೆ ಮುಖವೊಡ್ಡಿ
ಬೆನ್ನು ಕಾಯಿಸಿ
ಕಾಫಿ ಹೀರಿ
ಪೇಪರ್ ಓದಿ…

ಉರಿ ಬಿಸಿಲು
ಬಿರು ಬಿಸಿಲಿನಲ್ಲಿ
ಮಧ್ಯಾಹ್ನದ
ಹೊಟ್ಟೆ ಪಾಡು…

ಚುರುಗುಡುವ
ಹೊಟ್ಟೆಗಾಗಿ
ಚುರುಗುಡುವ
ಬಿಸಿಲಲ್ಲಿ ದುಡಿಮೆ…

ಚಳಿಗೆ ಹೊಡೆದ
ಚರ್ಮ ಚುರು
ಚುರು

ನಡುಮನೆಯಲ್ಲಿ
ಬಿಸಿಲು ಮಚ್ಚಿನಿಂದ
ಬಿದ್ದ ಬಿಸಿಲ ಕೋಲು

ಗೇದು ಸಂಜೆ
ಬರುವಾಗ
ಸಾಯಂಕಾಲದ
ಕೆಂಬಿಸಿಲು…

ಬಿಸಿಲಿಗೆ
ಬೆವೆತ
ದುಡಿಯುವ ಕೈಗೆ

ತಂಪು
ನೀರು.


ಡಾ.ರಜನಿ


Comment here