ಅಂತರಾಳ

ಚಳಿಗಾಲ ಬಂದಾಗ ‘ಎಷ್ಟು ಚಳಿ?’ ಎಂದರು

ಜಿ ಎನ್ ಮೋಹನ್


ಪಪ್ಪಾ, I landed..
ಅಂತ ಒಳಗಿನಿಂದಲೇ ಮಗಳು ಕಾಲ್ ಮಾಡಿದಳು. ವಿಮಾನ ಆಗಷ್ಟೇ ನೆಲ ತಾಕಿತ್ತು.

ಇನ್ನು 15 ನಿಮಿಷದಲ್ಲಿ ಆಕೆ ಹೊರಗೆ ಬರುತ್ತಾಳೆ ಅಂತ ಹುರುಪಿನಿಂದ ನಿಂತಿದ್ದೆ.
ಆ ಹುರುಪು ಎರಡು ನಿಮಿಷ ಕೂಡಾ ಉಳಿಯಲಿಲ್ಲ.
ವಿಮಾನ ನಿಲ್ದಾಣದ ಹೊರಗೆ ಬೀಸುತ್ತಿದ್ದ ಗಾಳಿ ಮೊದಲು ‘ಆಹಾ..’ ಎನ್ನುವಂತೆ ಮಾಡಿತ್ತು.

ನಾನು ಆ ಗಾಳಿಗೆ ಮೈಯರಳಿಸಿ ನಿಂತಿದ್ದೆ.
ಆದರೆ ಅದೇ ಗಾಳಿ ಈಗ ನನ್ನ ಮೈ ಒಳಗೆ ಇಳಿಯಲು ಆರಂಭಿಸಿತು. ಒಳಗೆ ಚಂಡಮಾರುತ.
ಮೈ ಗಡ ಗಡ ನಡುಗಲು ಶುರುವಾಯಿತು
ಇದ್ದ ಸ್ವೆಟರ್ ಅನ್ನೂ ಮುಲಾಜಿಲ್ಲದೆ ಮಣಿಸಿ ಹಾಕಿದ ಥಂಡಿ ನನ್ನ ಹಲ್ಲಿಗೆ ನಾಟ್ಯ ಮಾಡುವುದನ್ನು ಕಲಿಸುತ್ತಿತ್ತು

15 ನಿಮಿಷ ಕಳೆಯುವುದರೊಳಗೆ ನಾನು ನಾನಾಗಿಯೇ ಇರಲಿಲ್ಲ.

ಆಗ ಗೊತ್ತಾಯಿತು ಚಳಿ ಎಂದರೆ ಏನು ಅಂತ..

ಚಳಿಗಾಲ ಬಂದಾಗ ‘ಎಷ್ಟು ಚಳಿ?’ ಎಂದರು
ಬಂತಲ್ಲ ಬೇಸಿಗೆ, ‘ಕೆಟ್ಟಬಿಸಿಲ್ ‘ ಎಂದರು
ಮಳೆ ಬಿತ್ತೊ, ‘ಬಿಡದಲ್ಲ ಶನಿ!’ ಎಂಬ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!

ಎನ್ನುವ ಕವಿತೆಯ ಮೇಲೆ ಕೈ ಆಡಿಸುತ್ತಿದ್ದೆ

ತಕ್ಷಣ ನನ್ನ ಮೈ ಮನಸ್ಸು ಎರಡಕ್ಕೂ ಇನ್ನಿಲ್ಲದ ಚಳಿ ಆವರಿಸಿಕೊಂಡುಬಿಟ್ಟಿತ್ತು.

ನಾನು ವಾಷಿಂಗ್ಟನ್ ನಲ್ಲಿದ್ದ ದಿನಗಳು
ಸಿ ಎನ್ ಎನ್ ಚಾನಲ್- ‘ಇಲ್ಲಿ ಸುಂದರವಾದ ಹವಾಮಾನವಿದೆ.
ಸೂರ್ಯ ಕಾಣಿಸಿಕೊಂಡಿದ್ದಾನೆ’ ಎಂದು ಪತ್ರ ಕಳಿಸಿತ್ತು
ನಾನು ವಾಹ್! ಎಂದುಕೊಂಡೆ

ಆ ವೇಳೆಗಾಗಲೇ ಪೆಟ್ಟಿಗೆಯಲ್ಲಿ ತುರುಕಿಕೊಂಡಿದ್ದ ಹತ್ತಾರು ಬೆಚ್ಚನೆಯ ಬಟ್ಟೆಗಳನ್ನು
ನಿಮ್ಮ ಸಹವಾಸ ನನಗೇಕೆ ಎನ್ನುವಂತೆ ಗೇಟ್ ಪಾಸ್ ನೀಡಿದೆ

ಯಾಕೆಂದರೆ ಆ ವೇಳೆಗೆ ಕ್ಯೂಬಾ ಗೆ ಹೋಗಿ ಬಂದಿದ್ದೆ
ಹವಾಮಾನದ ಬಗ್ಗೆ ಗೂಗಲಿಸಿ ನೋಡುವ ಕಾಲವಲ್ಲ ಅದು
ಫೋನ್ ಮಾಡಿ ಕೇಳಲು ಕ್ಯೂಬಾದಲ್ಲಿ ಯಾರೊಬ್ಬರೂ, ಯಾರಿಗೂ ಗೊತ್ತಿರಲಿಲ್ಲ.
ಹೋಗಲಿ ಹೋಗಿ ಬಂದವರನ್ನು ಕೇಳೋಣ ಎಂದರೆ ಹೋಗಿ ಬಂದವರಾದರೂ ಯಾರು?

ಹಾಗಾಗಿ ನಾನು ಚಳಿಗೂ ಇರಲಿ, ಬಿಸಿಲಿಗೂ ಇರಲಿ, ಮಳೆ ಬಿದ್ದರೆ ಅದಕ್ಕೂ ತಯಾರ್ ಎನ್ನುವಂತೆ ಬಟ್ಟೆಗಳನ್ನೆಲ್ಲ ಗುಡ್ಡೆ ಹಾಕಿಕೊಂಡೇ ಹೋಗಿದ್ದೆ

ಅಲ್ಲಿ ಹೋಗಿ ನೋಡಿದರೆ ಅದು ಬಿಸಿಲಲ್ಲ, ರಣ ಬಿಸಿಲು

ಎಲ್ಲಿ ನೋಡಿದರೂ ತುಂಡು ಚಡ್ಡಿ ಬಿಟ್ಟರೆ ಎಲ್ಲರೂ ಮೈ ಬಿಟ್ಟುಕೊಂಡು ಓಡಾಡುವರೇ..
ನನ್ನನ್ನು ನೋಡಿ ನನ್ನ ಸೂಟ್ಕೇಸ್ ಇನ್ನಿಲ್ಲದಂತೆ ನಗುತ್ತಿತ್ತು

ಹಾಗೆ ಈ ಬಾರಿ ಪಿಗ್ಗಿ ಬೀಳಬಾರದು ಎಂದು,
ಅಲ್ಲದೆ ಸಿ ಎನ್ ಎನ್ ಸುಂದರ ಹವಾಮಾನ ಇದೆ ಎಂದು ಹೇಳಿದ ಎರಡೂ ಕಾರಣಕ್ಕೆ
ಬೆಚ್ಚನಾ ಮನೆಗೆ ಇಷ್ಟೊಂದು ಬಟ್ಟೆ ಏಕೆ ಎನ್ನುವಂತೆ ಹೋಗಿಬಿಟ್ಟೆ

ಹೋದ ಮೇಲೆ ಗೊತ್ತಾಯಿತು. ಅಮೆರಿಕನ್ನರ ಪ್ರಕಾರ ಸುಂದರ ಹವಾಮಾನ ಎಂದರೆ ಏನು ಅಂತ
ಅಲ್ಲಿ ಇರುವುದು ಮೂರು ಕಾಲ ಚಳಿ, ಚಳಿ ಮತ್ತು ಭಯಂಕರ ಚಳಿ

ಹಾಗಾಗಿ ಅಲ್ಲಿ ಸೂರ್ಯ ಕಂಡ ಎಂದರೆ ಸಾಕು ಸುಂದರ ಹವಾಮಾನ
ನಾನೋ ಥರ್ಮಲ್ಸ್ ಏರಿಸಿಕೊಂಡಿದ್ದರೂ, ಬೆಚ್ಚನೆಯ ಕೋಟು, ಮಫ್ಲರ್ ಸುತ್ತಿಕೊಂಡಿದ್ದರೂ ಇನ್ನಿಲ್ಲದಂತೆ ನಡುಗಿ ಹೋದೆ

ಮೈ ಮೇಲೆ ಏನೇನೋ ಇಲ್ಲವೇನೋ ಎನ್ನುವಂತೆ ಚಳಿ ಕತ್ತಿ ಅಲುಗಿನಂತೆ ನನ್ನೊಳಗೆ ನುಗ್ಗಿ ಇರಿದಿರಿದು ಹಾಕುತ್ತಿತ್ತು

ಇದ್ದಲ್ಲೇ ಮರಗಟ್ಟುತ್ತಾ ಹೋದೆ. ಶ್ರವಣಬೆಳಗೊಳದ ಮೇಲಿನ ಶಿಲೆಯಾಗಿ ಹೋಗಿದ್ದೆ.
ಇನ್ನು ಹಾಗೇ ಇದ್ದರೆ ಸತ್ತೇ ಹೋಗುತ್ತೇನೆ ಎನಿಸಿ ನಾನು ಟ್ಯೂಬ್ ಸ್ಟೇಷನ್ ಗೆ ಜಾರಿಕೊಂಡೆ

ಯಾರಾದರೂ ನೀವು ವಾಷಿಂಗ್ಟನ್ ನಲ್ಲಿ ಏನು ನೋಡಿದಿರಿ ಎಂದು ಕೇಳಿದರೆ
ನಾನು ‘ಟ್ಯೂಬ್ ಸ್ಟೇಷನ್’ ಅಂತ ಮಾತ್ರ ಉತ್ತರ ಕೊಡಲು ಸಾಧ್ಯ ಎನ್ನುವಷ್ಟು ಅಲ್ಲಿ ಸೇರಿಹೋಗುತ್ತಿದ್ದೆ.

ಏಕೆಂದರೆ ನೆಲದೊಳಗಿನ ಈ ಸ್ಟೇಷನ್ನುಗಳಲ್ಲಿ ಬಿಸಿ ಗಾಳಿ ಬಿಡುತ್ತಿದ್ದರು
ಅದಿಲ್ಲದಿದ್ದರೆ ನಾನು ಏನಾಗಿ ಹೋಗುತ್ತಿದ್ದೆನೋ

ಚಳಿ ಎನ್ನುವುದು ಈಗಲೂ ನನಗೆ ಒಂದು ದುಃಸ್ವಪ್ನ.
ನನಗೆ ಚಳಿ ಹಿಡಿದು ಒದ್ದಾಡುವುದಕ್ಕಿಂತ ಹೆಚ್ಚಾಗಿ
ನಾನು ಅಲ್ಲಿ ಚಳಿ ಅನುಭವಿಸಿದ ನೆನಪಿಗೇ ಮರಗಟ್ಟಿ ಹೋಗುತ್ತೇನೆ

ಕ್ಯೂಬಾದಲ್ಲಿ ಅಧಿವೇಶನಕ್ಕೆ ನೂರಾರು ದೇಶಗಳಿಂದ ಬಂದವರು ಅಧಿವೇಶನ ಎನ್ನುವುದನ್ನು ಬದಿಗೆ ಸರಿಸಿ ದೆವ್ವ ಹಿಡಿದವರಂತೆ ಆ ಸುಡುವ ಸೂರ್ಯನ ಅಡಿ ಬೆತ್ತಲಾಗಿ ಬಿದ್ದುಕೊಳ್ಳುತ್ತಿದ್ದರು ಅವರು ಇನ್ನೇನು ಸತ್ತೇ ಹೋಗುತ್ತಾರೆ ಎಂದು ನನಗೆ ಭಯವಾಗುವಷ್ಟು

ಏಕೆಂದರೆ ಅವರು ಸೂರ್ಯನನ್ನೇ ನೋಡದ ದೇಶದವರು ಹಿಮ, ಚಳಿ ಮಧ್ಯೆ ಬದುಕು ಸಾಗಿಸುವವರು
ಸೂರ್ಯನಿಲ್ಲದ ದೇಶವನ್ನು ಕಲ್ಪಿಸಿಕೊಳ್ಳಲೂ ಆಗದೆ ನಾನು ಕಂಪಿಸುತ್ತಿದ್ದೆ

ಆಗಲೇ, ಆಗಲೇ ಈ ಚಿತ್ರ ನನ್ನ ಕಣ್ಣಿ ಬಿದ್ದು ಹೋಯಿತು.

ಅದು ಕೆನಡಾದ ಒಂದು ಪುಟ್ಟ ಊರು- ಹ್ಯಾಲಿಫ್ಯಾಕ್ಸ್

ಅಲ್ಲೊಬ್ಬ ಪುಟಾಣಿ ಹುಡುಗಿ ತನ್ನ ಗೆಳತಿಯರನ್ನೆಲ್ಲಾ ಗುಡ್ಡೆ ಹಾಕಿಕೊಂಡು ಚಳಿಯಲ್ಲಿ ಗಡ ಗಡ ನಡುಗುತ್ತ ಊರಿನ ಪ್ರತೀ ಲೈಟು ಕಂಬಕ್ಕೂ ಒಂದು ಕೋಟು ತೊಡಿಸುತ್ತಿದ್ದಳು

ಅದೂ ಹೊಚ್ಚ ಹೊಸ ಕೋಟು

ಅದರಲ್ಲೊಂದು ಪುಟ್ಟ ಚೀಟಿ- ನೀವು ಚಳಿಯಲ್ಲಿ ಗಡ ಗಡ ನಡುಗುತ್ತಿದ್ದರೆ ನಾವು ಮನೆಯಲ್ಲಿ ಬೆಚ್ಚನೆ ಮಲಗುವುದು ಹೇಗೆ? ಅಂತ

ಆಕೆ ಎಂಟು ವರ್ಷದ ಪುಟಾಣಿ. ಹುಟ್ಟುಹಬ್ಬ ಹತ್ತಿರ ಬಂದಾಗ ಅಮ್ಮ ತಾರಾ ಸ್ಮಿತ್ ಅತ್ಕಿನ್ ಕೇಳಿದಳು- ಈ ಸಲಾ ಏನಾದರೂ ಹೊಸ ಥರಾ ಮಾಡೋಣ ಅಂತ

ಮಗಳ ಬರ್ತ್ ಡೇ ಕೇಕ್ ಗೆ, ಗಿಫ್ಟ್ ಗೆ, ಅದಕ್ಕೆ ಇದಕ್ಕೆ ಅಂತ ಇಟ್ಟಿದ್ದ ದುಡ್ಡೆಲ್ಲವನ್ನೂ ಬೆಚ್ಚಗಿನ ಜಾಕೆಟ್ ಖರೀದಿಸಲು ಬಳಸಿದರು

ಆ ಪುಟ್ಟ ಹುಡುಗಿ ತನ್ನ ಗೆಳತಿಯರನ್ನ ಗುಡ್ಡೆ ಹಾಕಿಕೊಂಡವಳೇ ಹೊರಟೇಬಿಟ್ಟಳು
ಕೊಂಡು ತಂದಿದ್ದ ಹತ್ತಾರು ಜಾಕೆಟ್ ಗಳನ್ನು ಕಂಬಕ್ಕೆ ಸುತ್ತಿದರು

ಆಮೇಲೆ ಅವರಿಗೆ ಪೇಚಾಟವಾಯಿತು ಇದು ಯಾಕೆ ಅಂತ ಗೊತ್ತಾಗುತ್ತೋ ಇಲ್ಲವೋ ಅಂತ
ಆಗ ಮುದ್ದಾಗಿ ಬರೆದರು-
‘ನಾನು ಇಲ್ಲಿ ಕಳೆದು ಹೋಗಿ ಬಂದಿಲ್ಲ, ನಿಮ್ಮನ್ನು ಹುಡುಕುತ್ತ ಬಂದಿದ್ದೇನೆ’
‘ನೀವು ನನ್ನನ್ನು ತೊಟ್ಟರೆ ನನಗದೇ ಖುಷಿ. ಬಿ ಹ್ಯಾಪಿ ಅಲ್ವೇಸ್’ ಅಂತ ಜಾಕೆಟ್ ತನ್ನದೇ ಕಥೆ ಹೇಳಿತು

ಹಾಗೆ ಜಾಕೆಟ್ ಹೊತ್ತ ಕಂಬಗಳ ಫೋಟೋ ಇಡೀ ಊರನ್ನೇ ಬೆರಗು ಮಾಡಿ ಹಾಕಿತು.

ಎಲ್ಲೆಲ್ಲಿಂದಲೋ ಊರ ಜಾತ್ರೆ ಬರುವಂತೆ ಜನ ಬಂದರು ಮಕ್ಕಳ ಪ್ರೀತಿಗೆ ಖುಷಿಯಾಗಿ ಹೋದರು.
ಫೋಟೋಗಳನ್ನು ಕ್ಲಿಕ್ಕಿಸಿದರು

ಇದು ಯಾವಾಗ್ ಫೇಸ್ ಬುಕ್ ನಲ್ಲಿ ಕಂಡಿತೋ ಅಲ್ಲಿಗೆ ಜಗತ್ತೂ ಬೆರಗಾಯಿತು.
ಹೌದಲ್ಲಾ ನನ್ನದೊಂದು ಪುಟ್ಟ ಹೆಜ್ಜೆ ಏನೆಲ್ಲಾ ಮಾಡಿಬಿಡಬಹುದು ಅಂತ

ಮುಂದಿನ ವರ್ಷ ಪುಟಾಣಿ ಮತ್ತೆ ಹುಟ್ಟುಹಬ್ಬಕ್ಕೆ ಸಜ್ಜಾಗುತ್ತಿದ್ದಳು.
ಒಂದು ದಿನ ಹೊರಗೆ ಬಂದು ನೋಡುತ್ತಾಳೆ. ಅವಳ ಬೆರಗಿಗೆ ಮಿತಿ ಇರಲಿಲ್ಲ

ಮನೆಯ ಹೊರಗೆ ನೂರಾರು ಬಾಕ್ಸ್ ಗಳು.
ಏನಿದು ಎಂದು ನೋಡಿದರೆ ಎಲ್ಲದರಲ್ಲಿಯೂ ಬಣ್ಣ ಬಣ್ಣದ ಹೊಚ್ಚ ಹೊಸ ಜಾಕೆಟ್ ಗಳು
ಅಮ್ಮ, ಮಗಳು ದಂಗಾಗಿ ಹೋದರು

ಯಾವಾಗ ಬೀದಿಯಲ್ಲಿ ನರಳುವ, ಸೂರಿಲ್ಲದೆ ಚಳಿಯನ್ನೇ ಹೊದ್ದು ಸಾಯುವವರ ಕಡೆ ಇವರು ಹೋಗುತ್ತಿದ್ದಾರೆ ಎಂದು ಗೊತ್ತಾಯಿತೋ
ಊರಿಗೆ ಊರೇ ಇವರ ಜೊತೆ ನಿಂತು ಬಿಟ್ಟಿತು
ನಮ್ಮದೂ ಒಂದಿಷ್ಟು ಎಂದು ಜಾಕೆಟ್ ಖರೀದಿಸಿ ಕಳಿಸಿದರು

ಮೊದಲು ಒಂದತ್ತು ಕಂಬ ಮಾತ್ರ ಜಾಕೆಟ್ ತೊಟ್ಟಿದ್ದರೆ ಈಗ ಊರಿನ ಕಂಬಗಳೆಲ್ಲಕ್ಕೂ ಮಕ್ಕಳು ತೊಡಿಸಿದ ಜಾಕೆಟ್ ಹೊತ್ತು ನಿಂತಿದ್ದವು
ಹಾಗೆ ಪುಟ್ಟ ಪುಟ್ಟ ಕೈಗಳು ದೊಡ್ಡ ದೊಡ್ಡ ಕೆಲಸ ಮಾಡಿಬಿಟ್ಟವು.

ಅಲ್ಲಿಯವರೆಗೂ ರಟ್ಟಿನ ಡಬ್ಬಿಗಳಲ್ಲಿ ಮುದುರಿ ಹೋಗುತ್ತಿದ್ದ, ಕಣ್ಣಲ್ಲಿ ಸಾವಿನ ಬಿಂಬವನ್ನಷ್ಟೇ ಕಾಣುತ್ತಿದ್ದ ಎಷ್ಟೋ ಜೀವಗಳು ಒಂದಿಷ್ಟು ಬೆಚ್ಚಗಾದವು.

ಮೊನ್ನೆ ಗುಲ್ಬರ್ಗದ ಸೇಡಂ ನಿಂದ ಮಹಿಪಾಲರೆಡ್ಡಿ ಮುನ್ನೂರು ಫೋನ್ ಮಾಡಿದ್ದರು

‘ಅಮ್ಮ ಪ್ರಶಸ್ತಿ’ ನೀಡುವಾಗ ಹಾರ ತುರಾಯಿ ಶಾಲಿನ ಬದಲು ಈ ಬಾರಿ ಕೌದಿ ಕೊಡೋಣ ಎಂದುಕೊಂಡಿದ್ದೇನೆ ಎಂದರು

ಹೌದಲ್ಲಾ!, ಚಳಿಗೆ ಬೆಚ್ಚಗಿರಲು, ಅಷ್ಟೇ ಅಲ್ಲ ಅಮ್ಮನ ನೆನಪನ್ನು ಸದಾ ನಮ್ಮೊಡನಿಡಲು ಇದಕ್ಕಿಂತ ಇನ್ನೇನು ಬೇಕು ಅನಿಸಿತು

ಆ ಬೆಚ್ಚನೆಯ ಭಾವ ಇಷ್ಟೆಲ್ಲಾ ಚಳಿಯನ್ನು ನೆನಪಿಸಿತು.1

Comment here