ಅಂತರಾಳ

ನಾಗೇಶ್ ಹೆಗಡೆ ಸಾಧನೆಯಲ್ಲಾ ‘ಮಣ್ಣು’

ಜಿ ಎನ್ ಮೋಹನ್


‘ಪಾ’ ಸಿನೆಮಾ ನೋಡಲು ಅಮಿತಾಬ್ ಬಚ್ಚನ್ ಫೋರಂ ಮಾಲ್ ಗೆ ಬಂದಿಳಿದದ್ದೇ ತಡ ‘ಬಿಗ್ ಬಿ’ಯ ಆಟೋಗ್ರಾಫ್ ಗಾಗಿ ಮುಗಿಬಿದ್ದದ್ದು ಅವರ ಫ್ಯಾನ್ ಗಳು ಮಾತ್ರವಲ್ಲ. ಪತ್ರಕರ್ತರ ದೊಡ್ಡ ದಂಡೂ ಇತ್ತು.

ಅಮಿತಾಬ್ ಸುತ್ತ ಮುತ್ತಲಿನ ಸೀಟು ಗಿಟ್ಟಿಸಿಕೊಳ್ಳಲು ಇನ್ನಿಲ್ಲದ ಪೈಪೋಟಿ. ಮುಂದಿನ ಸಾಲಿನಲ್ಲಿ ಕುಳಿತಿದ್ದ ಪತ್ರಕರ್ತರಿಗೆ ಕ್ಯಾಮೆರಾ ಫ್ರೇಮ್ ನಲ್ಲಿ ಅಮಿತಾಬರನ್ನೂ ಜೋಡಿಸಿಕೊಂಡು ಫೋಟೋ ಹಿಡಿಸಿಕೊಳ್ಳುವ ಹಂಬಲ.

ಫೋರಂ ಮಾಲ್ ನಲ್ಲಿ ಇವೆಲ್ಲಾ ನಡೆಯುತ್ತಿದ್ದ ಕೆಲ ದಿನಗಳ ಮುಂಚೆಯಷ್ಟೇ ಇನ್ನೊಬ್ಬ ಪತ್ರಕರ್ತರು ವಿಧಾನಸೌಧದ ಮೂರನೇ ಮಹಡಿಯಲ್ಲಿದ್ದರು.

ಅವರ ಬಳಿ ವರ್ಗಾವಣೆ ಶಿಫಾರಸ್ಸು ಕೋರಿದ ಕಾಗದ ಇರಲಿಲ್ಲ. ಮುಖ್ಯಮಂತ್ರಿ ಖೋಟಾದಡಿ ಸೈಟು ಕೇಳುತ್ತಿರಲಿಲ್ಲ, ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಹಿಡಿದು ನಿಂತಿರಲಿಲ್ಲ ಅಥವಾ ಪತ್ರಿಕಾ ಸಲಹೆಗಾರರನ್ನಾಗಿ ನೇಮಿಸಿಕೊಳ್ಳಿ ಎಂದು ಒತ್ತಡವನ್ನೂ ಹೇರುತ್ತಿರಲಿಲ್ಲ.

ಬದಲಿಗೆ ಒಂದು ದಂಡು ಕಟ್ಟಿಕೊಂಡು ಯಾಕೆ ಬಿ ಟಿ ಬದನೆ ರಾಜ್ಯದೊಳಗೆ ಕಾಲಿಡಕೂಡದು ಎಂದು ವಿವರಿಸುತ್ತಿದ್ದರು. ಒಂದು ಬದನೆಯ ಕುಲ ತಿದ್ದಲು ಹೋಗಿ ಜಗತ್ತಿನ ಹೊಟ್ಟೆಯನ್ನು ಇನ್ನಷ್ಟು ಹಸಿವೆಗೆ ಕೆಡವುತ್ತಿದ್ದೇವೆ ಎಂದು ವಿವರಿಸುತ್ತಿದ್ದರು.

ಹೆಸರು ಹೇಳಬೇಕಾದ ಅಗತ್ಯವೇ ಇಲ್ಲ- ಅವರು ನಾಗೇಶ ಹೆಗಡೆ.

ಇವತ್ತು ಒಳ್ಳೆಯ ಜರ್ನಲಿಸಂ ಎನ್ನುವುದಕ್ಕೆ ಕೊಡಲು ಉದಾಹರಣೆ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಒಳ್ಳೆಯ ಜರ್ನಲಿಸ್ಟ್ ಎನ್ನುವುದಕ್ಕಂತೂ ಉದಾಹರಣೆಗಳಿವೆ. ನಾಗೇಶ್ ಹೆಗಡೆ ಅಂತಹವರಲ್ಲಿ ಒಬ್ಬರು.

ಪತ್ರಿಕೋದ್ಯಮ ಮತ್ತು ಸರ್ಕಾರ ಎರಡೂ ಎಣ್ಣೆ ಸೀಗೆಕಾಯಿ ಹಾಗಿದ್ದರೆ ಮಾತ್ರ ಒಂದು ಪ್ರಜಾಪ್ರಭುತ್ವ ಜೀವಂತವಾಗಿರಲು ಸಾಧ್ಯ. ತನ್ನ ಒಂದೊಂದು ಹೆಜ್ಜೆಯ ಹಿಂದೆಯೂ ಪತ್ರಿಕೋದ್ಯಮದ ‘ಡಿಟಿಕ್ಟಿವ್ ಐ’ ಇರುತ್ತದೆ ಎಂಬ ಭಯ ಇದ್ದಾಗ ಮಾತ್ರ ಸರ್ಕಾರ ಜನರಿಗೆ ಬದ್ಧವಾಗಿರಲು ಸಾಧ್ಯ.

ವಿರೋಧ ಪಕ್ಷಗಳನ್ನಾದರೂ ಬುಟ್ಟಿಗೆ ಹಾಕಿಕೊಳ್ಳಬಹುದು ಆದರೆ ಪತ್ರಿಕೋದ್ಯಮವನ್ನಲ್ಲ ಎನ್ನುವ ಕಾಲ ಒಂದಿತ್ತು. ಯಾವುದೇ ಸರ್ಕಾರಕ್ಕೆ ಪತ್ರಿಕೆಯೇ ಖಾಯಂ ವಿರೋಧ ಪಕ್ಷ. ಹುಳುಕನ್ನು ಹುಡುಕುವ, ಜನರ ಮುಂದಿಡುವ, ಸರ್ಕಾರ ಬೆಚ್ಚಿ ಬೀಳುವಂತೆ ಮಾಡುವ, ಆ ಮೂಲಕ ಮುಂದಿನ ಹೆಜ್ಜೆಯನ್ನಾದರೂ ಹತ್ತು ಸಲ ಯೋಚಿಸಿ ಇಡುವಂತೆ ಮಾಡುವ ಶಕ್ತಿ ಪತ್ರಿಕೋದ್ಯಮಕ್ಕಿದೆ.

‘ಮಿಲೇ ಸುರ್ ಮೇರಾ ತುಮ್ಹಾರ’ ಎನ್ನುವುದನ್ನು ರಾಜಕಾರಣಿಗಳೂ, ಪತ್ರಕರ್ತರೂ ತಮಗೆ ಬೇಕಾದಂತೆ ಅರ್ಥ ಮಾಡಿಕೊಂಡಿರುವ ಈ ದಿನಗಳಲ್ಲಿ ಭಿನ್ನವಾಗಿ ನಿಂತವರು ನಾಗೇಶ್ ಹೆಗಡೆ.

ಪತ್ರಿಕೋದ್ಯಮದ ಸಾಕ್ಷಿ ಪ್ರಜ್ಞೆಯೂ ಕಳೆದುಹೋಗಿಬಿಟ್ಟಿದೆ ಎನ್ನುವ ನಿರಾಸೆಯ ನಡುವೆ ನಾಗೇಶ್ ಹೆಗಡೆ ಅಂತಹವರೂ ಇದ್ದಾರೆ ಎನ್ನುವುದು ಕತ್ತಲಲ್ಲ ಬೆಳಕು ಮಿಂಚಿದಂತೆ.

ಪತ್ರಿಕೋದ್ಯಮ ಕೋಣೆಯಿಂದ ಎದ್ದು ಬಂದ ವಿದ್ಯಾರ್ಥಿ, ಅಡಿಕೆ ಫಸಲಿನತ್ತ ಕಣ್ಣು ನೆಟ್ಟ ರೈತ, ಆಕಾಶವಾಣಿಯ ಟೀಪುಗಳ ನಡುವೆ ಒಂದು ಒಳ್ಳೆಯ ಸುದ್ದಿಗಾಗಿ ತಡಕಾಡುವ ಜರ್ನಲಿಸ್ಟ್, ಇದ್ದ ಡಿಗ್ರಿಗಳನ್ನೂ ಬದಿಗಿಟ್ಟು ಕೆರೆ ಉಳಿಸಲೋ, ದೇಸಿ ಬೀಜಗಳನ್ನು ರಕ್ಷಿಸಲೋ, ಭತ್ತ ಉತ್ಸವ ನಡೆಸಲೋ ನಡೆದು ಬಂದವರು. ಬಿಸಿಲು ನಾಡಿನಲ್ಲಿದ್ದು ನೆಲದ ಬಿರುಕು ಕಂಡವರು, ಮಲೆನಾಡಿನಲ್ಲಿದ್ದೂ ನೊಂದವರು- ಹೀಗೆ ನಾಗೇಶ್ ಹೆಗಡೆ ಎಲ್ಲರೊಳಗೊಂದಾದವರು.

ಹೀಗೆ ಹೇಳುವಾಗ ನನಗೆ ಕುವೆಂಪು ಅವರ ‘ಕಿಂದರಿ ಜೋಗಿ’ ನೆನಪಿಗೆ ಬರುತ್ತದೆ. ನಾಗೇಶ್ ಹೆಗಡೆ ಎಂಬ ಗುಬ್ಬಿ ದೇಹದ ಜೀವದ ಹಿಂದೆ ಅದೆಷ್ಟು ದೊಡ್ಡ ದಂಡು! ಪುಟ್ಟಿಲಿ, ಮೂಗಿಲಿ, ಅಮ್ಮಿಲಿ, ಅಪ್ಪಿಲಿ, ಸೊಂಡಿಲಿ!

ಪತ್ರಿಕೋದ್ಯಮದ ಒಳ್ಳೆಯದು ಎನ್ನುವ ಮಾತು ಬಂದಾಗಲೆಲ್ಲಾ ನಾವು ದೂರದಲ್ಲಿರುವ ಸಾಯಿನಾಥರತ್ತ ಬೊಟ್ಟು ಮಾಡಿಬಿಡುತ್ತೇವೆ. ವಿಜ್ಞಾನ, ಪರಿಸರ. ಅಭಿವೃದ್ಧಿ, ಹೋರಾಟದ ವಿಷಯ ಬಂದಾಗ ನಾಗೇಶ್ ಹೆಗಡೆ ಸಾಯಿನಾಥರಷ್ಟೇ ಗಟ್ಟಿಯಾಗಿ ಕೇಳಿ ಬರುವ ಹೆಸರು.

ನಾಗೇಶ್ ಹೆಗಡೆ ಒಂದು ಎರೆ ಹುಳು ಇದ್ದಂತೆ. ನೆಲದೊಳಗಿದ್ದೇ, ತನ್ನ ಪಾಡಿಗೆ ತಾನಿದ್ದೇ, ಸದ್ದಿಲ್ಲದೇ ನೆಲವನ್ನು ಫಲವತ್ತಾಗಿಸುತ್ತಾ ಹೋಗುವ ಗುಣ ಖಂಡಿತಾ ಅವರಿಗಿದೆ.

ನಾನು ಟಿ ಎಸ್ ಆರ್, ವೈಎನ್ ಕೆ, ಎಂ ಬಿ ಸಿಂಗ್, ಜಿ ಎಸ್ ಸದಾಶಿವ ಗರಡಿಯಲ್ಲಿ ಪಳಗಿದವನು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಕಾಲ ಒಂದಿತ್ತು. ಈಗಿನ ಪತ್ರಿಕೋದ್ಯಮಕ್ಕೆ ಗುರುವೂ ಇಲ್ಲ, ಗುರಿಯೂ ಇಲ್ಲ ಎನ್ನುವಂತಾಗಿದೆ.

ಅಂತಹ ಸಮಯದಲ್ಲಿ ಸದ್ದಿಲ್ಲದೇ ಒಂದು ವಿಶ್ವವಿದ್ಯಾಲಯವಾಗಿ ಹರಡಿ ನಿಂತವರು ನಾಗೇಶ್ ಹೆಗಡೆ.

ಶಿವರಾಮ ಕಾರಂತರು ತಮ್ಮನ್ನು ಒಬ್ಬ ಪೋಸ್ಟ್ ಮನ್ ಅಂತ ಬಣ್ಣಿಸಿಕೊಂಡಿದ್ದರು. ನಾಗೇಶ್ ಹೆಗಡೆ ಅವರದ್ದು ‘ಪ್ರಜಾವಾಣಿ’ಯ ಮೂರನೇಯ ಸಂಪಾದಕೀಯ ಬರೆದ ತುಂಟ ಮನಸ್ಸು. ಹಾಗಾಗಿಯೇ ಅವರು ‘ನಾನು ಒಬ್ಬ ಅಧಿಕಪ್ರಸಂಗಿ ಪೋಸ್ಟ್ ಮನ್’ ಅಂತ ಬಣ್ಣಿಸಿಕೊಂಡರು.

ಓದುಗರಿಗೆ ಬೇಕಾಗಿದ್ದನ್ನು ದಾಟಿಸುವಾಗ ಒಂದಷ್ಟು ಅಧಿಕ ಪ್ರಸಂಗವನ್ನೂ ಸೇರಿಸುತ್ತೇನೆ ಎಂದಿದ್ದರು.

ಚಿಲ್ಕಾದ ಪ್ರಯೋಗ ಶಾಲೆಯಲ್ಲಿ ಸಂಶೋಧನೆ ಮಾಡುತ್ತಿದ್ದ ನಾಗೇಶ್ ಹೆಗಡೆ ಸೀದಾ ಎದ್ದು ಪತ್ರಿಕೋದ್ಯಮದ ಅಂಗಳಕ್ಕೆ ನಡೆದುಕೊಂಡು ಬಂದುಬಿಟ್ಟರು. ಐಐಟಿ, ಜೆಎನ್ ಯು ಎಂಬ ಹೆಮ್ಮೆಯ ಪದಕಗಳನ್ನೇ ಹೊಂದಿದ್ದ ಅವರು ವಿಜ್ಞಾನ ಸಂಶೋಧನೆಯಲ್ಲೇ ಮುಂದುವರಿದಿದ್ದರೆ ಸಾಕಷ್ಟು ಎತ್ತರಕ್ಕೇರುತ್ತಿದ್ದರೇನೋ?

ಆದರೆ ಅಚಾನಕ್ಕಾಗಿ ಪ್ರಜಾವಾಣಿ ಬಳಗಕ್ಕೆ ವಿಜ್ಞಾನ ಮತ್ತು ಅಭಿವೃದ್ಧಿ ಬರಹಗಾರರಾಗಿ ಸೇರಿಕೊಂಡರು.

ವಿಜ್ಞಾನ ಕ್ಷೇತ್ರಕ್ಕೆ ನಷ್ಟವಾಯಿತೇನೋ ಗೊತ್ತಿಲ್ಲ. ಆದರೆ ಪತ್ರಿಕೋದ್ಯಮಕ್ಕಂತೂ ಲಾಭವಾಯಿತು.

ನಾಗೇಶ್ ಹೆಗಡೆ ಪ್ರಯೋಗಾಲಯದಿಂದ ಎದ್ದು ಬರುವಾಗ ತಾವೊಬ್ಬರೇ ಅಲ್ಲಿಂದ ಬಿಡಿಸಿಕೊಂಡು ಬರಲಿಲ್ಲ, ನಾಲ್ಕು ಗೋಡೆಯೊಳಗೆ ಅಡಗಿ ಹೋಗಿದ್ದ ವಿಜ್ಞಾನವನ್ನೂ ಬಿಡಿಸಿಕೊಂಡು ಬಂದರು.

ಭೂ ವಿಜ್ಞಾನ, ಪರಿಸರ ವಿಜ್ಞಾನ ಓದಿದ ನಾಗೇಶ್ ಹೆಗಡೆ ‘ಇರುವುದೊಂದೇ ಭೂಮಿ’ ಪುಸ್ತಕದೊಂದಿಗೆ ಓದುಗರ ಎದುರು ನಿಂತರು. ‘ಈ ಭೂಮಿ ನಮ್ಮ ತಾತ ಮುತ್ತಾತರಿಂದ ಬಂದ ಬಳುವಳಿಯಲ್ಲ. ಮಕ್ಕಳು- ಮೊಮ್ಮಕ್ಕಳಿಂದ ಎರವಲಾಗಿ ಪಡೆದಿದ್ದು’ ಎನ್ನುವ ಬುಡಕಟ್ಟು ಜನಾಂಗದ ಮಾತನ್ನು ಕತ್ತಿಯಂತೆ ಜಳಪಿಸಿದರು.

‘ಕಾಡಿನ ನಡುವೆ ಉದುರಿ ಬೀಳುವ ಎಲೆಯ ಸದ್ದನ್ನು ಯಾರಾದರೂ ಕೇಳಿದ್ದೀರಾ?’ ಎನ್ನುವ ಓಶೋ ಮಾತಿದೆ. ನಾಗೇಶ್ ಹೆಗಡೆ ಕೇಳಿಸಿಕೊಳ್ಳಬಲ್ಲರು.

ವಿಜ್ಞಾನವನ್ನು ಸರಳವಾಗಿ ಅರ್ಥ ಮಾಡಿಸಬಲ್ಲರು. ವಿಜ್ಞಾನದ ಪಾತಕಗಳ ಹಿಂದೆ ನಮ್ಮ ನಿಮ್ಮೆಲ್ಲರ ಕೈಯ್ಯೂ ಇದೆ ಎಂದು ಮೆಲುದನಿಯಲ್ಲಿ ಎಚ್ಚರಿಸಬಲ್ಲರು.

ಪತ್ರಿಕೋದ್ಯಮಕ್ಕೆ ಆಕ್ಟಿವಿಸ್ಟ್ ಗುಣ ಇರಬಾರದು ಎಂದು ಮಡಿ ಮೈಲಿಗೆ ಮಾಡುವವರ ನಡುವೆ ಒಬ್ಬ ಸಾಯಿನಾಥ್, ಒಬ್ಬ ನಾಗೇಶ್ ಹೆಗಡೆ ಪತ್ರಿಕೋದ್ಯಮದ ತಿಳುವಳಿಕೆಯನ್ನೇ ತಿದ್ದಿದರು.

ಕೈಗಾ ಅಣು ಸ್ಥಾವರ ಸ್ಥಾಪನೆಗೆ ಸರ್ಕಾರ ಅನುವಾದಾಗ, ಕಾಳಿ ನದಿಗೆ ಅಡ್ಡವಾಗಿ ಅಣೆಕಟ್ಟು ತಲೆ ಎತ್ತುತ್ತದೆ ಎನ್ನುವಾಗ, ದಾಬಸ್ ಪೇಟೆಯಲ್ಲಿ ರಾಸಾಯನಿಕ ತಿಪ್ಪೆ ಗುಂಡಿ ನಿರ್ಮಾಣವಾಗುವಾಗ, ಚಾಮಲಾಪುರ, ನಂದಿಕೂರು ಅಡಿಯಿಡುವಾಗ ನಾಗೇಶ್ ಹೆಗಡೆ ಮಾಧ್ಯಮಗಳನ್ನು ಅದರ ವಿರುದ್ಧ ಅಣಿ ನೆರೆಸಿದರು.

ನಾಗೇಶ್ ಹೆಗಡೆ ಕಬ್ಬಿಣ ಅದಿರಿನ ರಫ್ತಿನ ಬಗ್ಗೆ ಆ ಕಾಲಕ್ಕೆ ಬರೆದ ಲೇಖನ ಸಂಸತ್ತಿನಲ್ಲೂ ಕಾವುಂಟು ಮಾಡಿತ್ತು.

ನಾಗೇಶ್ ಹೆಗಡೆ ಜಗತ್ತನ್ನು ನೋಡುವ ಕಣ್ಣೇ ಬೇರೆ. ನ್ಯೂಯಾರ್ಕ್ ನ ಗಗನಚುಂಬಿಗಳು, ಬ್ರಿಟನ್ನಿನ ಟ್ಯೂಬ್ ಟ್ರೇನ್ ಗಳು ಕಾಣುವವರ ಮಧ್ಯೆ ನಾಗೇಶ್ ಹೆಗಡೆ ಭಿನ್ನ ತಳಿ.

ಬೊರ್ಡೋ ಔಷಧಿಗೂ ನಾಪತ್ತೆಯಾಗುತ್ತಿರುವ ಬ್ರಿಟನ್ನಿನ ಚಿಟ್ಟೆಗೂ, ಕೊಳ್ಳೇಗಾಲದ ಗ್ರಾನೈಟಿಗೂ ಇಂಗ್ಲೆಂಡಿನ ಸಮಾಧಿಗೂ ನಂಟು ಕಾಣಬಲ್ಲರು.

ಪತ್ರಿಕೆಗೆ ಫೋಟೋ ಹಿಡಿದು ಬಂದ ಒಬ್ಬ ಪೇಪರ್ ವೆಂಡರ್ ಶಿವೂ, ನಾಗೇಶ್ ಹೆಗಡೆ ಕಾರಣದಿಂದಾಗಿ ಈ ದಿನ ಒಬ್ಬ ಬೆಸ್ಟ್ ಬರಹಗಾರ. ಪೂರ್ಣಪ್ರಜ್ಞ ಬೇಳೂರು ಕ್ಲಿಕ್ಕಿಸುವ ಫೋಟೋಗಳ ಹಿಂದೆ ನಾಗೇಶ್ ಹೆಗಡೆ ಅವರ ಕಿವಿ ಮಾತಿದೆ.

ಮಲ್ಲಿಕಾರ್ಜುನ ಹೊಸಪಾಳ್ಯ ರಕ್ಷಿಸಲು ಹೊರಟಿರುವ ಕೆರೆಗಳ ಹಿಂದೆ, ಕೃಷ್ಣಪ್ರಸಾದ್ ನಡೆಸುತ್ತಿರುವ ಭತ್ತ ಉತ್ಸವದ ಹಿಂದೆ ನಾಗೇಶ್ ಹೆಗಡೆ ಅವರ ಶ್ರಮವೂ ಇದೆ.

ಅಲ್ಲೊಬ್ಬ ಸುಬ್ರಮಣಿ, ಇಲ್ಲೊಬ್ಬ ರಾಘವೇಂದ್ರ ಗೌಡ, ದೂರದಲ್ಲಿರುವ ನಿರಂಜನ ವಾನಳ್ಳಿ, ಕ್ಯಾಮ್ ನ ಅನಿತಾ, ‘ಕರಿಸಿರಿಯಾನ’ದ ಕೆ ಎನ್ ಗಣೇಶಯ್ಯ, ಎಲ್ಲರ ಹಿಂದೆ ಒಬ್ಬ ನಾಗೇಶ್ ಹೆಗಡೆ ಇದ್ದಾರೆ.

‘ನಾಗೇಶ್ ಹೆಗಡೆ ಸಾಧನೆ ಬರೀ ಮಣ್ಣು’ ಅಂತ ಚಟಾಕಿ ಹಾರಿಸುವ ಮನಸ್ಸಾಗುತ್ತಿದೆ.

ಏಕೆಂದರೆ ಅವರು ಸಂಶೋಧನೆ ಮಾಡಿದ್ದು ಮಣ್ಣಿನ ಬಗ್ಗೆ, ಓದಿದ್ದು ಮಣ್ಣಿನ ಬಗ್ಗೆ, ‘ಮೈತ್ರಿ ಫಾರಂ’ ನ ಮೂಲಕ ಮಣ್ಣಿನ ಜೊತೆಗೆ ನಂಟು ಬೆಳೆಸಿದ್ದಾರೆ.

ನಾಗೇಶ್ ಹೆಗಡೆ ಮನೆಯಲ್ಲಿ ಕೋಳಿಯೊಂದಿದೆ. ಅದಕ್ಕೆ ಮೊಟ್ಟೆ ಇಡಲು ಸೋಫಾನೇ ಆಗಬೇಕು. ‘ಟು ಲೆಟ್’ ಬೋರ್ಡ್ ಹೊತ್ತ ಆ ಕೋಳಿ ಬುಟ್ಟಿಯಲ್ಲಿ ನಾಗೇಶ್ ಹೆಗಡೆ ಕಾವು ಕೊಡಲು ಕೂತರೆ ಆ ರೆಕ್ಕೆಯಡಿ ಸೇರಲು ಬಯಸುವ ಪಿಳ್ಳೆಗಳು ನಾವು.

Comment here