ಅಂತರಾಳ

ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ?

ಜಿ ಎನ್ ಮೋಹನ್

ಮೊನ್ನೆ ಮೊಬೈಲ್ ನಲ್ಲಿ ಹರಟೆ ಕೊಚ್ಚುತ್ತಾ ದಾರಿ ಸವೆಸುತ್ತಿದ್ದ ನಾನು ಒಂದು ಕ್ಷಣ ಗಕ್ಕನೆ ನಿಂತೆ.

ಮಾತನಾಡುವುದು ಮರತೇ ಹೋಯಿತು. ಬಿಟ್ಟ ಕಣ್ಣು ಬಿಟ್ಟ ಹಾಗೇ ನೋಡುತ್ತಿದ್ದೆ.

ಮಾಧ್ಯಮದ ಇತಿಹಾಸದಲ್ಲಿಯೇ ಕಂಡರಿಯದ ಸಂಗತಿಯೊಂದು ನನ್ನನ್ನು ಹಿಡಿದು ನಿಲ್ಲಿಸಿತ್ತು.

ಸಿನೆಮಾ ರಂಗದ ‘ಚಮಕ್, ಚಮಕ್’ ಜಾಹಿರಾತುಗಳನ್ನೂ ಮೀರಿಸುವಂತೆ ಆ ಹೋರ್ಡಿಂಗ್ ತಲೆ ಎತ್ತಿ ನಿಂತಿತ್ತು.

‘ದಿ ವೀಕ್’ ತನ್ನ ಇಬ್ಬರು ವರದಿಗಾರರಿಗೆ ಥ್ಯಾಂಕ್ಸ್ ಹೇಳಿದ ಪರಿ ಇದು.

ಬಿದಷಾ ಘೋಶಾಲ್ ಹಾಗೂ ಕವಿತಾ ಮುರಳೀಧರನ್ ಬರೆದ ಲೇಖನಗಳು ಮೂರು ಪ್ರತಿಷ್ಠಿತ ಪ್ರಶಸ್ತಿಯನ್ನು ಬಾಚಿಕೊಂಡಿದ್ದವು.

ಹೀಗೆ ಪ್ರಶಸ್ತಿ ತಂದು ಕೊಟ್ಟವರನ್ನು ‘ವೀಕ್’ ಮರೆಯಲಿಲ್ಲ. ದೇಶದ ಬೀದಿ ಬೀದಿಗಳಲ್ಲಿ ಸಿನೆಮಾ ಹೋರ್ಡಿಂಗ್ ಗಳನ್ನೂ ನಾಚಿಸುವ ರೀತಿಯಲ್ಲಿ ಪ್ರಚಾರ ಫಲಕ ನಿಲ್ಲಿಸಿ ಥ್ಯಾಂಕ್ಸ್ ಹೇಳಿತು.

ಫೋನಿನ ಇನ್ನೊಂದು ತುದಿಯಲ್ಲಿದ್ದ ಗೆಳೆಯನಿಗೆ ಗಾಬರಿಯಾಗಿರಬೇಕು ‘ಯಾಕೋ ಸೈಲೆಂಟ್ ಆದೆ’ ಅಂದ.

ಮಾಧ್ಯಮ ಲೋಕದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿರುವುದು ಸ್ಪಷ್ಟವಾಗಿ ಹೋಗಿತ್ತು. ಎಷ್ಟೋ ಮಾಧ್ಯಮ ಕಚೇರಿಗಳಲ್ಲಿ, ಇಷ್ಟು ವರ್ಷಗಳ ಕಾಲ, ಎಣಿಸಲಾರದಷ್ಟು ಜನರನ್ನು ‘ಸೈಲೆಂಟ್’ ಆಗಿಸಿಬಿಟ್ಟಿದ್ದರು.

ಪತ್ರಿಕೋದ್ಯಮ ಮೈಕೊಡವಿ ನಿಂತಿದೆ ಎಂಬುದಕ್ಕೆ ಬೆಂಗಳೂರಿನ ಬೀದಿಗಳೂ, ಬೀದಿಯಲ್ಲಿನ ಈ ಹೋರ್ಡಿಂಗ್ ಗಳೂ ಸಾಕ್ಷಿ ಹೇಳುತ್ತಿದ್ದವು. ಮೊನ್ನೆ ರೇಡಿಯೋ ಕಿವಿ ಹಿಂಡಿದೆ. ಕವಿತೆಯೊಂದು ಜಿಗಿದು ಬಂತು.

‘ಇದು ಹಸಿರಿಲ್ಲದ, ಹೆಸರಿಲ್ಲದ, ಉಸಿರಿಲ್ಲದ ನರಕ..’ ಅಂತ.

ಯಾಕೋ ಬೇಡಬೇಡವೆಂದರೂ ಇದು ಬರೆದಿರುವುದು ನಮ್ಮ ಮಾಧ್ಯಮಗಳ ಬಗ್ಗೆಯೇ ಅನಿಸೋದಿಕ್ಕೆ ಶುರುವಾಯ್ತು.

ಮಹಾರಾಷ್ಟ್ರದಲ್ಲಿ ಬರ ಬಿತ್ತು. ರೈತರು ಸಾಲು ಸಾಲಾಗಿ ಸಾವಿಗೆ ಶರಣಾದರು. ಆ ಮನೆಗಳ ಕಥೆ ಏನಾಗಿದೆ ನೋಡೋಣ ಅಂತ ಬಿದಿಷಾ ಹೋದಾಗ ಆಕೆಗೆ ಶಾಕ್ ಕಾದಿತ್ತು. ವಿಧವೆ ಹೆಂಗಸರು ಲೈಂಗಿಕ ಶೋಷಣೆಗೆ ಗುರಿಯಾಗಿದ್ದರು.

ಕವಿತಾ ಕೈಹಾಕಿದ್ದು ಶ್ರೀಲಂಕಾ ಸೈನ್ಯಕ್ಕೆ. ಸೈನ್ಯದ ಕೈಗೆ ಸಿಕ್ಕು ಕಾಣೆಯಾಗಿ ಹೋದವರ ಬಗ್ಗೆ ವರದಿ ರೆಡಿ ಮಾಡಿದಳು.

ಇಂಟರ್ ನ್ಯಾಷನಲ್ ಪ್ರೆಸ್ ಇನ್ಸ್ಟಿಟ್ಯೂಟ್, ದಿ ಸ್ಟೇಟ್ಸ್ ಮನ್ ಅವಾರ್ಡ್ ಗಳು ಇಬ್ಬರನ್ನೂ ಹುಡುಕಿಕೊಂಡು ಬಂತು.

ಇಬ್ಬರು ವರದಿಗಾರರೂ ತಮಗೆ ಮಾತ್ರ ಅಲ್ಲ ತಮ್ಮ ಪತ್ರಿಕೆಗೂ, ತಮ್ಮ ಪತ್ರಿಕೆಗೆ ಅಷ್ಟೇ ಅಲ್ಲ, ದೇಶದ ಪತ್ರಿಕೋದ್ಯಮಕ್ಕೂ ಗೌರವ ತಂದುಕೊಟ್ಟರು.

ಇದು ಹೇಗೆ ಸಾಧ್ಯ ಆಯ್ತು? ಅಂತ ಯೋಚಿಸ್ತಾ ಇದ್ದೆ.

ಬೆನ್ನು ತಟ್ಟುವ ಒಂದು ಕೈ ದೊಡ್ಡ ಚಮತ್ಕಾರವನ್ನೇ ಮಾಡಿಬಿಡಬಹುದು. ‘ವೆರಿ ಗುಡ್’ ಅನ್ನುವ ಎರಡು ಪದ ಬದಕಿನ ಕೊನೆಯವರೆಗೂ ನಡೆದುಕೊಂಡು ಬರಬಹುದು.

ಹೊತ್ತು ತಂದ ವರದಿಯೊಂದು ಸರಿಯಾಗಿ ಪೇಪರ್ ನ ಪುಟದಲ್ಲೋ, ಚಾನಲ್ ನ ಸುದ್ದಿಯಲ್ಲೋ ಜಾಗ ಗಿಟ್ಟಿಸಿಕೊಂಡರೆ ಇನ್ನೂ ಇಂತಹ ಹತ್ತು ಮ್ಯಾಜಿಕ್ ಗಳು ಸಾಧ್ಯವಾಗಬಹುದು.

ಐಶ್ವರ್ಯ ರೈ ಸಲ್ಮಾನ್ ಖಾನ್ ಜೊತೆ ಮದುವೆ ಆಗ್ತಾಳೆ ಅಂತಾನೇ ಜಗತ್ತು ಅಂದುಕೊಂಡಿದ್ದಾಗ ನವೀನ್ ಅಮ್ಮೆಂಬಳ ಅಭಿಷೇಕ್ ಬಚ್ಚನ್ ಜೊತೆ ಮದುವೆ ನಿಕ್ಕಿ ಅನ್ನೋ ಸುದ್ದಿ ಸ್ಫೋಟಿಸಿದ. ಇಡೀ ಜಗತ್ತು ಅದನ್ನ ರಸಕವಳದಂತೆ ಜಗೀತು. ಆಮೇಲೆ ಮರೀತು.

ಆದರೆ ಅವರೊಬ್ಬರಿದ್ದರು- ರಾಮೋಜಿರಾವ್.

ಅವರು ಮರೀಲಿಲ್ಲ. ‘ಕಂಗ್ರಾಟ್ಸ್, ನೀವು ನಮ್ಮ ಹೆಮ್ಮೆ’ ಅಂತ ಪತ್ರ ಬರೆದರು.

ನವೀನ್ ಅಮ್ಮೆಂಬಳನನ್ನು ಕೇಳಿ, ಅವನು ಮಾಡಿದ ಡಿಗ್ರಿ, ಅವನಿಗೆ ಸಿಕ್ಕ ಮೊದಲ ಸಂಬಳ ಇವೆಲ್ಲವನ್ನೂ ಮೀರಿ ಆ ಪತ್ರ ನಿಂತಿದೆ.

ಡಾ ರಾಜಕುಮಾರ್ ಕಾಣೆಯಾಗಿದ್ದಾರೆ ಅಂತ ಬೆಂಗಳೂರಿಗೆ ಬೆಂಗಳೂರೇ ಹೊತ್ತಿ ನಿಂತಿತ್ತು. ಕಲ್ಲುಗಳು ಬಸ್ಸುಗಳನ್ನೂ ಟಾಕೀಸ್ ಗಳನ್ನೂ ನುಜ್ಜು ಗುಜ್ಜು ಮಾಡೋದಿಕ್ಕೆ ಶುರು ಮಾಡಿತ್ತು.

‘ಅಣ್ಣಾವ್ರಿಗೆ ಬೇಸರವಾಗಿದೆಯಂತೆ, ಮನೆಯಲ್ಲಿ ಜಗಳವಂತೆ, ಗಾಜನೂರಿಗೆ ಹೋಗಿದಾರಂತೆ.. ಅಂತೆ ಕಂತೆ..’ ಸುದ್ದಿ ಬೆಂಗಳೂರನ್ನ ದಾಟಿ ರಾಜ್ಯವಿಡೀ ಹರಡೋದಕ್ಕೆ ಶುರು ಆಗಿತ್ತು.

ಅದೇ ದಿನ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರೂ ನಿಧನ ಹೊಂದಿದರು. ನಾನು ವರದಿ ಮಾಡೋದಿಕ್ಕೆ ಅವರ ಮನೆಗೆ ಕಾಲಿಟ್ಟೆ.

ಯಾಕೋ ನನ್ನ ‘ಸುದ್ದಿ ನಾಸಿಕ’ ಇವತ್ತು ಇನ್ನೂ ಒಂದು ಮಹತ್ವದ ಸುದ್ದಿ ನನ್ನ ಕೈಗೆಟುಕುತ್ತೆ ಅಂತ ವಾಸನೆ ಹಿಡೀತು.

ಮೊದಲ ಎಡಿಶನ್ ಟೈಂ ಮುಗೀತು. ಆದರೂ ನಾನು ಕಾಯ್ತಾ ಇದ್ದೆ. ಆಗ ಭರ್ರನೆ ಬಂದ ಕಾರಿನಿಂದ ಇಳಿದದ್ದು ಅದೇ ಡಾ ರಾಜ್ ಕುಮಾರ್.

ಗೊರೂರರ ಪಾರ್ಥಿವ ಶರೀರಕ್ಕೆ ಕೈ ಮುಗಿದರು. ನಾನು ಡಾ ರಾಜ್ ಅವರನ್ನ ಪಕ್ಕದ ಕೋಣೆಗೆ ಕರೆದುಕೊಂಡು ಹೋದೆ. ‘ಯಾಕೆ ಹೋದ್ರಿ, ಎಲ್ಲಿಗೆ ಹೋದ್ರಿ’ ಅಂದೆ.

ಮನೆಗೆ ತಲುಪಿಕೊಂಡಿದ್ದ ಸುದ್ದಿ ಸಂಪಾದಕ ನಾಗಭೂಷಣಂ ಥ್ರಿಲ್ ಆದರು. ‘ಕಬ್ ರಿಪೋರ್ಟರ್’ ಅನ್ನೋದನ್ನೂ ಲೆಕ್ಕಿಸದೆ ಎಡಿಶನ್ ಗಳನ್ನ ನಿಲ್ಲಿಸಿ ಬೈಲೈನ್ ಸಮೇತ ಸುದ್ದಿ ರಾರಾಜಿಸಿದರು.

ಮಾರನೆಯ ದಿನ ಕೈನಲ್ಲಿ ಪೇಪರ್ ಹಿಡಿದುಕೊಂಡಾಗ ‘ಧನ್ಯೋಸ್ಮಿ’ ಅನಿಸಿತು.

ಡಿ ವಿ ರಾಜಶೇಖರ್ ನನ್ನ ಶಿಫ್ಟ್ ಮುಖ್ಯಸ್ಥರು. 25 ವರ್ಷಗಳ ಕಾಲ ಸರಳುಗಳ ಹಿಂದೆ ಬದುಕಿದ ನೆಲ್ಸನ್ ಮಂಡೇಲಾ ಹೊರಗೆ ಬರುವ ಹೊತ್ತು. ಇಡೀ ಜಗತ್ತು ಆ ಸುದ್ದಿ ಬರೆಯಲು ಕಾಯುತ್ತಾ ಕುಳಿತಿತ್ತು.

ಒಬ್ಬ ಮುಖ್ಯ ಉಪ ಸಂಪಾದಕ ಮಾಡಬೇಕಾಗಿದ್ದ ಕೆಲಸ ಅದು. ನಾನು ಪ್ರಜಾವಾಣಿ ಸೇರಿ ಅಷ್ಟೇನೂ ಕಾಲವಾಗಿರಲಿಲ್ಲ. ಆದರೆ ರಾಜಶೇಖರ್ ನನ್ನ ಹೆಗಲ ಮೇಲೆ ಕೈಯಿಟ್ಟು ‘ನಿಮ್ಮ ಆಸಕ್ತಿ ಗೊತ್ತು. ನೀವೇ ಬರೆಯಿರಿ’ ಎಂದರು.

ಕನ್ನಡದ ಮಟ್ಟಿಗಂತೂ ನೆಲ್ಸನ್ ಮಂಡೇಲಾ ಬಿಡುಗಡೆ ಆದದ್ದು ನಾನು ಬರೆದ ನಂತರವೇ ಎಂಬ ಖುಷಿ ಇಂದಿಗೂ ಹಸಿರು.

ಎಡಿಶನ್ ನಿಲ್ಲಿಸಿದ ಆ ಮನಸ್ಸು, ಬರೆಯಿರಿ ಎಂದು ಬೆನ್ನು ತಟ್ಟಿದ ಆ ಕೈ ಎಂದೆಂದಿಗೂ ನನ್ನವೇ.. .

‘ಸ್ಟಾಫ್ ಹೆಸರು ಹಾಕಬೇಡಿ, ಸತ್ರೂ ಹಾಕಬೇಡಿ, ಸ್ಟಾಫ್ ಕವನ, ಕಥೆಗೆ ನೋ ಎಂಟ್ರಿ, ಅವರು ಇದ್ದ ಪ್ರೋಗ್ರಾಂ ವರದಿ ಬೇಡವೇ ಬೇಡ, ಫೋಟೋದಲ್ಲಿ ಅವರನ್ನ ಕ್ರಾಪ್ ಮಾಡ್ಬಿಡಿ’ ಅನ್ನೋದನ್ನೇ ವರ್ಷಾನುಗಟ್ಟಲೆ ಕೇಳಿದ್ದ ಕಿವಿಗೆ ಇದು ಎಂಟನೆಯ ಅದ್ಭುತ!!

ಎಂಡೋಸಲ್ಫಾನ್ ಎಂಬ ಸಾವಿನ ಆಟದ ಕುರಿತ ನನ್ನ ಸುದ್ದಿ ಪ್ರಸಾರವಾದಾಗ ನೋಡುಗರೂ, ಮಾಧ್ಯಮ ಕಚೇರಿಗಳೂ ಬೆಚ್ಚಿ ಕೂತಿದ್ದವು.

ಆದರೆ ಕಾಸರಗೋಡಿನ ಪಾತಾಳದಲ್ಲಿದ್ದ ಹಳ್ಳಿಗೆ ನುಗ್ಗಿ ದೇಶದ ನೀತಿಯನ್ನೇ ಪ್ರಶ್ನಿಸುವ ವರದಿಯೊಂದಕ್ಕೆ ಬೇಕಾಗಿದ್ದ ಬೈಲೈನೇ ನಾಪತ್ತೆಯಾಗಿತ್ತು.

ಅಷ್ಟು ಹೊತ್ತೂ ಕಾಡು, ಕಣಿವೆಗಳಲ್ಲಿ ಗಂಟೆಗಟ್ಟಲೆ ಸುತ್ತಿದರೂ ಆಗಿರದಿದ್ದ ಆಯಾಸ ಏಕಾಏಕಿ ಆವರಿಸಿಕೊಂಡಿತು.

ಬೆಂಗಳೂರಿನಲ್ಲಿದ್ದ ಮುಖ್ಯಸ್ಥರಿಗೆ ಫೋನ್ ತಿರುಗಿಸಿದೆ.

ವರದಿಗೆ ವಾಯ್ಸ್ ಕೊಟ್ಟದ್ದು ಫಿಮೇಲ್ ಆರ್ಟಿಸ್ಟ್ ಅಲ್ವಾ ಅಂದ್ರು. ಗಂಡಸರ ವರದಿಗೆ ಗಂಡಸರೂ, ಹೆಂಗಸರ ವರದಿಗೆ ಹೆಂಗಸರೂ ದನಿ ನೀಡಬೇಕು ಎನ್ನುವ ಓಬೀರಾಯನ ಕಾಲಕ್ಕೆ ಅವರು ನಮ್ಮನ್ನೆಲ್ಲಾ ತುಂಬು ಶ್ರದ್ಧೆಯಿಂದ ಕೈ ಹಿಡಿದು ನಡೆಸುತ್ತಿದ್ದರು.

ಆದರೆ ಅದೇ ಟಿ ವಿಯಲ್ಲಿ ಪವಾಡಗಳಾಗಿದ್ದವು.

12 ವರ್ಷ ಕಾಲ ಬರೆಯುವುದು ಅಪರಾಧ ಎನ್ನುವಂತೆ ಕಂಡಿದ್ದ, ಬರೆಯುವವರನ್ನ ‘ಕ್ರಿಮಿನಲ್ ಟ್ರೈಬ್’ ಎಂಬಂತೆ ನೋಡುತ್ತಿದ್ದ ಮನಸ್ಥಿತಿಯ ಸಂಸ್ಥೆಯಿಂದ ಹೊಸದಕ್ಕೆ ಹೆಜ್ಜೆ ಹಾಕಿದ್ದೆ.

ನನ್ನ ಪ್ರವಾಸ ಕಥನಕ್ಕೆ ಸಾಹಿತ್ಯ ಅಕಾಡೆಮಿ ಬಹುಮಾನ ಬಂತು. ಮಂಗಳೂರಿನಲ್ಲಿದ್ದ ನನಗೆ ದೂರವಾಣಿ ಕರೆಗಳ ಸುರಿಮಳೆ. ಹೇಗೆ ಗೊತ್ತಾಯ್ತು ಅಂತ ಕೇಳಿದರೆ ನಿಮ್ಮ ಟಿವಿಯಲ್ಲೇ ಬಂತು ಅಂದರು.

ಹಾರ್ಟ್ ಅಟ್ಯಾಕ್ ಆಗುವುದೊಂದೇ ಬಾಕಿ. ನಾನು ಎಂಟು ವರ್ಷ ದೃಶ್ಯ ಮಾಧ್ಯಮದ ನಿಜ ಭಂಟನಂತೆ ದುಡಿಯುವುದಕ್ಕೆ ಆ ದಿನ ನನ್ನ ಬೆನ್ನು ನೇವರಿಸಿದ ಆ ಕೈಗಳೂ ಕಾರಣ.

ಸದ್ದಿಲ್ಲದ ಕ್ರಾಂತಿ, ಸೈಲೆಂಟ್ ರೆವಲ್ಯೂಶನ್ ಅನ್ನುತ್ತೇವಲ್ಲ ಅದು ಇದೇ ಇರಬೇಕು.

ಒಂದು ದಿನ ಬುಲೆಟಿನ್ ಪ್ರಸಾರಕ್ಕೆ ಕೊನೆ ನಿಮಿಷದ ಚೆಕ್ ಆಪ್ ನಡೆಸುತ್ತಿದ್ದೆ.

ಸುದ್ದಿಯಲ್ಲಿ ಕಾಣುತ್ತಿದ್ದ ಒಂದು ಮುಖ ತೀರಾ ತೀರಾ ಪರಿಚಿತ ಅನಿಸಿತು. ಟೇಪ್ ಹಿಂದಕ್ಕೆ ತಿರುಗಿಸಿ ನೋಡಿದರೆ ಅದು ನಮ್ಮ ಕಚೇರಿಯ ಹುಡುಗಿ ಆಶಾ.

ಕುವೆಂಪು ವಿವಿವ ಪತ್ರಿಕೋದ್ಯಮದಲ್ಲಿ ಚಿನ್ನದ ಪದಕಗಳನ್ನು ಪಡೆದಾಕೆ. ಸಂಕೋಚದ ಆಕೆ ಅದನ್ನು ಯಾರಿಗೂ ಹೇಳದೆ ಘಟಿಕೋತ್ಸವದಲ್ಲಿ ಪದಕ ಸ್ವೀಕರಿಸಿದ್ದಾಳೆ.

ತಕ್ಷಣ ನಮ್ಮ ಸುದ್ದಿಯ ಹೆಡ್ ಲೈನ್ ಬದಲಾಯಿತು. ‘ಈಟಿವಿಯ ಆಶಾ ಸೇರಿ 54 ಮಂದಿಗೆ ಪದಕ ಪ್ರದಾನ’ ಅಂತ.

ನರೇಂದ್ರ ಮಡಿಕೇರಿ ಮೈಸೂರು ವಿವಿಯಲ್ಲಿ ಬಂಗಾರ ಬಾಚಿದಾಗ, ಮಂಡ್ಯದ ವರದಿಗಾರ, ಹಿರಿಯ ಇಳೆಕಾನ್ ಶ್ರೀಕಂಠ ಅವರು ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಪಾತ್ರರಾದಾಗ ಹೆಡ್ ಲೈನ್ ಗಳು ಬದಲಾಗುತ್ತಲೇ ಹೋಯಿತು.

ಅದಾದ ಎಷ್ಟೋ ಕಾಲದ ನಂತರ ಮೈಸೂರಿಗೆ ಹೋಗುವ ದಾರಿಯಲ್ಲಿ ಒಂದು ಕಾಫಿ ಕುಡಿಯೋಣ ಅಂತ ಮಂಡ್ಯದ ಹೋಟೆಲ್ ಗೆ ದಾಳಿ ಇಟ್ಟೆವು.

55 ದಾಟಿದ ಇಳೆಕಾನ್ ಶ್ರೀಕಂಠ ಅವರ ಮುಖದಲ್ಲಿನ ಸಂಭ್ರಮ ಇನ್ನೂ ಬಾಡಿರಲಿಲ್ಲ. ‘ಟಿವಿಯಲ್ಲಿ ನನ್ನನ್ನು ನಾನೇ ನೋಡ್ತೀನಿ’ ಅಂದುಕೊಂಡಿರಲಿಲ್ಲ ಎಂದು ಮುಜುಗರದಿಂದ ಹೇಳಿದರು.

ಹೌದಲ್ಲಾ, ‘ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ?’ ಅಂದುಕೊಂಡೆ.

Comment here