ಅಂತರಾಳ

ಬನ್ನಿ, ಒಳ್ಳೆಯ ಸುದ್ದಿಗಳನ್ನು ಕೇಳೋಣ…

ಜಿ ಎನ್ ಮೋಹನ್


‘Yes, I am Back’ ಎಂದರು ಡಿ ವಿ ಶ್ರೀಧರನ್.

ಕಾಸರಗೋಡು ಹಾಗೂ ಪಯ್ಯನೂರಿನ ನಡುವೆ ದಟ್ಟವಾಗಿ ಹರಡಿಕೊಂಡಿದ್ದ ಕಾಡಿನಲ್ಲಿ ಬೆಳಕು ಹೊತ್ತಿದಂತಾಯಿತು.

‘Yes, I am Back’ ಎಂದರು ಡಿ ವಿ ಶ್ರೀಧರನ್.

ಸುಳ್ಯದ ಪಯಸ್ವಿನಿ ನದಿಗೆ ಅಡ್ಡವಾಗಿ ಕಟ್ಟಿದ ತೂಗುಸೇತುವೆಯ ಎರಡೂ ಬದಿಯಲ್ಲಿ ಹರಡಿ ಹೋಗಿದ್ದ ನೂರಾರು ಮನೆಗಳಲ್ಲಿ ಬೆಳಕು ಹೊತ್ತಿದಂತಾಯಿತು.

ಶ್ರೀಧರನ್ ಮತ್ತೆ ನಾನು ಬರುತ್ತಿದ್ದೇನೆ ಎಂದಾಗ ಜೈಪುರದ ಆಸ್ಪತ್ರೆಯಲ್ಲಿ ಆಗ ತಾನೇ ಕೃತಕ ಕಾಲು ತೊಟ್ಟುಕೊಳ್ಳಲು ಸಜ್ಜಾಗಿದ್ದ ನೂರಾರು ಅಂಗವಿಕಲರ ಕಣ್ಣುಗಳಲ್ಲಿ ಬೆಳಕು ಮಿಂಚಿತು.

ಶ್ರೀಧರನ್ ಬರುತ್ತಿದ್ದಾರೆ ಎಂದು ಗೊತ್ತಾದದ್ದೇ ತಡ ದೆಹಲಿಯ ರಸ್ತೆಗಳಲ್ಲಿ ಚಳಿ ತಡೆಯಲಾಗದೆ ಗಡ ಗಡ ನಡುಗುತ್ತಿದ್ದವರಿಗೆ ಒಂದಿಷ್ಟು ಬೆಚ್ಚನೆಯ ಬೆಳಕು ಕಂಡಂತಾಯಿತು.

ಸುನಾಮಿಯಲ್ಲಿ ನಾಶವಾಗಿ ಹೋಗಿ ನಿಟ್ಟುಸಿರಿಡುತ್ತಿದ್ದವರ ಮುಖದಲ್ಲೂ ಒಂದು ಮಿಣ ಮಿಣ ಬೆಳಕು.

ಇಡೀ ಜಗತ್ತು ಭಾರತವನ್ನು ಬರ, ಕ್ಷಾಮ, ಆಕ್ರಂದನ, ಸಾವಿನ ಕಗ್ಗತ್ತಲ ಲೋಕ ಎನ್ನುವಂತೆ ಚಿತ್ರಿಸಿದ್ದಾಗ ಒಬ್ಬ ಶ್ರೀಧರನ್, ಒಬ್ಬೇ ಒಬ್ಬ ಶ್ರೀಧರನ್ ವರ್ಷಗಟ್ಟಲೆ ಸುತ್ತಿ ಭಾರತದ ಎದೆಯಾಳದಲ್ಲಿರುವ ಬೆಳಕಿನ ಕಿಡಿಗಳನ್ನು ಜಗತ್ತಿಗೆ ತೋರಿಸುತ್ತಾ ಬಂದರು.

ಖಾಸಗಿ ನೌಕೆಯಲ್ಲಿ ಕೆಲಸ ಮಾಡುತ್ತಿದ್ದ ಶ್ರೀಧರನ್ ತಮ್ಮ ಕೆಲಸದ ನಿಮಿತ್ತ ಇನ್ನಿಲ್ಲದಷ್ಟು ದೇಶಗಳಿಗೆ ಭೇಟಿ ಕೊಟ್ಟರು.

ಎಲ್ಲೆಡೆಯೂ ಭಾರತ ಎಂದರೆ ‘ಅಯ್ಯೋ ಪಾಪ’ ಎನ್ನುವ ಕನಿಕರ ವ್ಯಕ್ತವಾಗುತ್ತಿದ್ದುದು ಶ್ರೀಧರನ್ ಅವರನ್ನು ಕಾಡಿತು.

ಆಗ ಭಾರತದಲ್ಲಿ ಭೀಕರ ಕ್ಷಾಮ. ಶ್ರೀಧರನ್ ಇದ್ದ ಹಡಗಿಗೆ ವಿದೇಶಿಯರು ಅಕ್ಕಿ ಬೇಳೆ ದಾನ ನೀಡಿ ‘ನಿಮ್ಮ ದೇಶದಲ್ಲಿ ಹಸಿವಿನಿಂದ ನರಳುತ್ತಿರುವವರಿಗೆ ನೀಡಿ’ ಎನ್ನುತ್ತಿದ್ದರು.

ಎಲ್ಲಾ ಮಾಧ್ಯಮಗಳಲ್ಲೂ ಒಂದೇ ರೀತಿಯ ಚಿತ್ರಣ. ಭಾರತ ಬಡ ದೇಶ, ಹಸಿವಿನಿಂದ ನರಳುತ್ತಿರುವವರ ದೇಶ. ಬೆಳಕು ಕಾಣದ ಲೋಕ.

ಇದನ್ನೇ ಕಿವಿಯಲ್ಲಿ ತುಂಬಿಕೊಂಡಿದ್ದ ಶ್ರೀಧರನ್ ಚೆನ್ನೈ ನಲ್ಲಿ ನೆಲೆ ನಿಂತರು. ನಿಜ ಭಾರತ ಅರಿಯಲು ಮನಸ್ಸು ಮಾಡಿ ನರ್ಮದಾ ಕಣಿವೆಗೆ ಹೋಗಲು ರೈಲು ಹತ್ತಿದರು.

ರೈಲಿನಲ್ಲಿ ಇವರ ಮಾತಿಗೆ ಸಿಕ್ಕಿದ್ದು ಇಬ್ಬರು ತರುಣರು. ಒಬ್ಬ ನಾನು ದೇಶ ಕಟ್ಟುವ ಯೋಧನಾಗಬೇಕು ಎಂದು ತನ್ನ ಕನಸು ಬಿಚ್ಚಿಟ್ಟ. ಜೊತೆಗಿದ್ದ ತರುಣಿ ನಾನು ನನ್ನ ಪುಟ್ಟ ಗ್ರಾಮದಲ್ಲಿಯೇ ಉಳಿಯುತ್ತೇನೆ ಎಂದಳು.

ಆ ವೇಳೆಗಾಗಲೇ ಒಂದಿಷ್ಟು ಶಿಕ್ಷಣ ಸಿಕ್ಕರೆ ಸಾಕು ವೀಸಾ ಹೊಂದಿಸಿಕೊಂಡು ಅಮೇರಿಕಾ ಸೇರಿ ಬೆಚ್ಚಗಿದ್ದು ಬಿಡುತ್ತಿದ್ದವರನ್ನು ಮಾತ್ರ ಕಂಡಿದ್ದ ಶ್ರೀಧರನ್ ಗೆ ಅವರ ಮಾತಲ್ಲಿ ಪಕ್ಕನೆ ಒಂದು ಬೆಳಕು ಕಂಡಿತು.

ಆಗಲೇ ಅವರಿಗೆ ಮನವರಿಕೆಯಾಗಿ ಹೋಯಿತು ದೇಶದ ಆಳದಲ್ಲಿ ಇಂತಹ ಎಷ್ಟೋ ದನಿಗಳಿವೆ ಈ ಭರವಸೆಯ, ಆಶಾದಾಯಕ ದನಿಗಳನ್ನು ಇಡೀ ದೇಶಕ್ಕೆ ಕೇಳಿಸಬೇಕು. ಅಷ್ಟೇ ಅಲ್ಲ, ಇಡೀ ಜಗತ್ತಿಗೆ ಮುಟ್ಟಿಸಬೇಕು. ಭಾರತ ಭರವಸೆಯ ಕಿರಣ ಎನ್ನುವುದು ಎಲ್ಲರಿಗೂ ಅರಿವಾಗಬೇಕು ಎಂದು ನಿರ್ಧರಿಸಿಬಿಟ್ಟರು.

ಆಗ ಶುರುವಾಯಿತು ಅವರ ನಿಲ್ಲದ, ನಿಲ್ಲದ ಪಯಣ.

ತಮ್ಮ ವಾಹನದ ಸ್ಟೀರಿಂಗ್ ಹಿಡಿದರು. ಒಂದು ವರ್ಷ, ಎರಡು ವರ್ಷ, ಐದು ವರ್ಷ..

60 ದಾಟಿದ ಶ್ರೀಧರನ್ ದಣಿವಿಲ್ಲದಂತೆ ಊರೂರು ಸುತ್ತುತ್ತಿದರು. ಕಾಡು, ಕಣಿವೆ, ಬೆಟ್ಟ, ಗುಡ್ಡ,ಕಡಲು ಭಾರತದ ಯಾವೊಬ್ಬ ವರದಿಗಾರನೂ ಹೋಗದ ಕುಗ್ರಾಮಗಳಿಗೆ ಹೋಗಿ ಬಂದರು.

ಎಲ್ಲೋ ಯಾರೋ ಉಸುರಿದ ಒಂದು ಎಳೆ ಹಿಡಿದು ಸಾವಿರಾರು ಕಿ.ಮಿ ವಾಹನ ಚಲಾಯಿಸಿಕೊಂಡು ತಮಗೆ ಬೇಕಿರುವವರ ಕೈಕುಲುಕಿದರು.

ಅವರೊಡನೆ ಓಡಾಡಿ, ಅವರೊಡನೆ ದಿನಗಟ್ಟಲೆ ಮಾತಾಡಿ ಅವರ ಕಥೆಗಳನ್ನು ಕೇಳಿದರು. ಕುಳಿತ ಕಡೆಯೇ ತಮ್ಮ ಲ್ಯಾಪ್ ಟಾಪ್ ತೆರೆದು ಅವರ ಕಥೆಗೆ ಅಕ್ಷರ ರೂಪ ನೀಡಿದರು.

ಇಲ್ಲಿದೆ ಇನ್ನೊಂದು ಗುಡ್ ನ್ಯೂಸ್ ಎನ್ನುತ್ತಾ ತಾವೇ ರೂಪಿಸಿದ ಅಂತರ್ಜಾಲ ಪತ್ರಿಕೆಗೆ (www.goodnewsindia.com) ಏರಿಸಿದರು.

‘ಆರು ವರ್ಷದಲ್ಲಿ ನಾನು ಏನಿಲ್ಲೆಂದರೂ ನಾಲ್ಕು ನೂರು ಸುದ್ದಿಗಳನ್ನು ಪ್ರಕಟಿಸಿದ್ದೀನಿ’ ಎಂದು ಶ್ರೀಧರನ್ ನನ್ನೊಂದಿಗೆ ಮಾತಿಗಿಳಿದರು. ಅವರ ಎದುರು ಲ್ಯಾಪ್ ಟಾಪ್ ಇತ್ತು.

ಕಾಸರಗೋಡಿನ ಮೂಲೆಯ ಹಳ್ಳಿಯಲ್ಲಿ ಅಬ್ದುಲ್ ಕರೀಂ ಎನ್ನುವ ಜೀವ ಕಲ್ಲಿನ ಎದೆಯಲ್ಲೂ ಒಂದು ಕಾಡು ಉಕ್ಕಿಸಿದ್ದರು. ಶ್ರೀಧರನ್ ಕ್ವಾಲಿಸ್ ಏರಿ ಹೊರಟೇಬಿಟ್ಟರು.

ಈಗ ನನ್ನೆದುರು ಅವನ ಬಾಯಿಂದ ಅವನ ಕಥೆ ಹೊರಡಿಸುತ್ತಾ ಕುಳಿತಿದ್ದರು. ಆ ವೇಳೆಗಾಗಲೇ ಅವರು ಚೇರ್ಕಾಡಿ ರಾಮಚಂದ್ರರಾಯರನ್ನು, ಮೂಡಬಿದ್ರೆಯ ಸೋನ್ಸ್ ಅವರನ್ನೂ ಮಾತಾಡಿಸಿಕೊಂಡು ಬಂದಿದ್ದರು.

‘ಇದೇನು ಹುಚ್ಚು? ಈ ವಯಸ್ಸಿನಲ್ಲಿ?’ ಅಂದೆ.

ಒಂದು ಕ್ಷಣ ನನ್ನ ಮುಖ ನೋಡಿದವರೇ ‘ನೀವು ಎಂದಾದರೂ ಈ ಅಬ್ದುಲ್ ಕರೀಂನನ್ನು ಮಾತಾಡಿಸಿದ್ದಿರಾ? ಇಲ್ಲಿ ಬಂದಿದ್ದಿರಾ?’ ಎಂದರು.

‘ಉಹೂಂ’ ಎಂದೆ.

‘ಹಾಗಾಗಿ ನನಗೆ ತುಂಬಾ ಕೆಲಸ ಬಿತ್ತು’ ಎಂದರು.

ನಂತರ ನಸುನಗುತ್ತಾ ‘ನೋಡಿ, ಇಂದಿನ ಮಾಧ್ಯಮಗಳಲ್ಲಿ ಬರೀ ವ್ಯಗ್ರ ಸುದ್ದಿಗಳಿಗೇ ಜಾಗ. ನಿರಾಶೆ ಮೂಡಿಸುವ, ದೇಶ ಹಾಳಾಗಿ ಹೋಗಿದೆ ಎನ್ನುವ ಭಾವ ಮೂಡಿಸುವ ಸುದ್ದಿಗಳು’.

‘ಈ ಪೈಪೋಟಿಯಲ್ಲಿ ನಿಜಕ್ಕೂ ಭಾರತದಲ್ಲಿ ಒಂದು ಬೆಳಕಿದೆ ಎನ್ನುವ ಅಂಶವೇ ಮರೆಯಾಗಿ ಹೋಗುತ್ತಿದೆ. ಭಾರತಕ್ಕೆ ಒಂದು ಧೀಶಕ್ತಿಯಿದೆ ಎನ್ನುವುದೇ ಮರೆಯಾಗಿ ಹೋಗುತ್ತಿದೆ. ಅದನ್ನು ಜನರ ಮುಂದಿರಿಸುವ ಕೆಲಸವನ್ನು ಮಾಡುತಿದ್ದೇನೆ. ಒಳ್ಳೆಯ ಸುದ್ದಿಗಳು ಕೊಡುವ ಚೈತನ್ಯವನ್ನು ಕೆಟ್ಟ ಸುದ್ದಿಗಳು ಎಂದಿಗೂ ಕೊಡಲು ಸಾಧ್ಯವಿಲ್ಲ’ ಎಂದರು.

ಹಾಗಂದವರೇ ಅವರು ಮತ್ತೆ ಸ್ಟೀರಿಂಗ್ ಹಿಡಿದರು.

ಆ ವೇಳೆಗಾಗಲೇ ಅವರ ಬಳಿ ಇನ್ನೊಂದು ಸುದ್ದಿಯಿತ್ತು. ಒಳ್ಳೆಯ ಸುದ್ದಿ. ಅದರ ಬೆನ್ನು ಹತ್ತಲು ಸಜ್ಜಾಗಿದ್ದರು.

ಬೀಳ್ಕೊಡಲು ನಿಂತಿದ್ದ ನಮ್ಮ ಬಳಿ ‘ದೇಶದಲ್ಲಿ ದಾರಿದ್ರ್ಯ ಇದೆ ಎನ್ನುತ್ತಾರಲ್ಲ, ಖಂಡಿತವಾಗಿಯೂ ಇದೆ. ಆದರೆ ಅದು ಆದರ್ಶದ ದಾರಿದ್ರ್ಯ. ಯಾರನ್ನು ಅನುಸರಿಸಬೇಕು ಎನ್ನುವುದೇ ಗೊತ್ತಾಗದೆ ಹೋದರೆ ದೇಶ ಹೋಗಿ ಮುಟ್ಟುವುದಾದರೂ ಎಲ್ಲಿಗೆ? ಹಾಗಾಗಿಯೇ ನಾನು ಯಾರಿಗೂ ಇದುವರೆಗೂ ಗೊತ್ತಿರದ, ಆದರೆ ದೇಶಕ್ಕೇ ಬೆಳಕಾಗಬಲ್ಲ ಆದರ್ಶ ವ್ಯಕ್ತಿಗಳನ್ನು ಹುಡುಕುತ್ತಾ ಹೊರಟ್ಟಿದ್ದೇನೆ’ ಎಂದರು.

ಅಲ್ಲೊಂದು ಊರಿತ್ತು ಸ್ಯಾನಿಟರಿ ನ್ಯಾಪ್ಕಿನ್ ಗೊತ್ತಿಲ್ಲದ, ಬೇಕೆಂದರೂ ಶುಚಿ ವ್ಯವಸ್ಥೆ ಮಾಡಿಕೊಳ್ಳಲಾಗದ ಲೋಕ. ಹಾಗಾಗಿ ಋತುಮತಿಯಾದರೆ ಶಾಪ ಧರಿಸಿದಂತೆ ಒದ್ದಾಡುತ್ತಿದ್ದ ಲೋಕ.

ಇದನ್ನು ಅರಿತ ದಂಪತಿಯೊಬ್ಬರು ಇದ್ದುದ್ದರಲ್ಲಿಯೇ ಸ್ವಚ್ಚ ಬಟ್ಟೆ ಹುಡುಕಿ ಅದನ್ನು ಅವರಿಗೆ ಬೇಕಾದಂತೆ ಪರಿವರ್ತಿಸಿದರು. ದಶಕಗಳ ಕಾಲ ರೋಗದಲ್ಲಿ ಬಳಲುತ್ತಿದ್ದ ಹೆಣ್ಣುಮಕ್ಕಳ ಮುಖದಲ್ಲಿ ಸಂತಸ ಚಿಮ್ಮಿತು.

ಆ ದಂಪತಿಗಳನ್ನು ಶ್ರೀಧರನ್ ಬೆನ್ನತ್ತಿದರು. ಈ ಕಥೆ ದೇಶದ ಮುಂದಿಟ್ಟರು. ಪುಟ್ಟ ಕೆಲಸ ದೊಡ್ಡ ಪರಿಹಾರ.

ಸುನಾಮಿ ಚೆನ್ನೈ ಯನ್ನು ಅಪ್ಪಳಿಸಿ ಹಾಕಿತ್ತು. ಸಾವಿರಾರು ಜನ ರಾತ್ರೋ ರಾತ್ರಿ ನಿರಾಶ್ರಿತರಾದರು. ಇವರ ಮೈಗೆ ಒಂದಿಷ್ಟಾದರೂ ಬೆಚ್ಚಗಿಡಲು ‘ಗೂಂಜ್’ ಎನ್ನುವ ಸಂಸ್ಥೆ ತಯಾರಾಗಿ ನಿಂತಿತು. ತಲೆಯ ಮೇಲೆ ಸೂರಿಲ್ಲದ ಜನಕ್ಕೆ ಮೈ ತುಂಬಾ ಇದ್ದ ನಡುಕವಾದರೂ ಕುಗ್ಗಿತು.

ಶ್ರೀಧರನ್ ವಾಹನ ಅಲ್ಲಿಯೂ ಹೋಗಿ ನಿಂತಿತು.

ಇನ್ನೊಂದು ಸಂಸ್ಥೆ ಇತ್ತು ಅವರು ಶಾಲೆಯಿಂದ ಶಾಲೆಗೆ ಎನ್ನುವ ಯೋಜನೆಯನ್ನು ಕೈಗೆತ್ತಿಕೊಂಡಿದ್ದರು. ನೀವು ಬಳಸಿದ ನೀರಿನ ಬಾಟಲಿ, ಬಿಸಾಡಲು ಹೊರಟಿರುವ ಬ್ಯಾಗ್ ನೀಡಿ ಎಂದು ಕೇಳಿ ಸಂಗ್ರಹಿಸಿದರು ಕುಗ್ರಾಮಗಳಿಗೆ ಹೋಗಿ ಅಲ್ಲಿನ ಮಕ್ಕಳಿಗೆ ಕೊಟ್ಟು ಬಂದರು.

ಅಲ್ಲಿಯೂ ಶ್ರೀಧರನ್ ಬಂದು ನಿಂತರು.

ಇನ್ನೂ ಒಂದು ಸಂಸ್ಥೆಯಿತ್ತು ಕೊಡುಗೆ ಎನ್ನುವುದು ಬಿಟ್ಟಿಯಾಗಿ ಬರುವುದಿಲ್ಲ ಎಂದು ಕಲಿಸಿದ ಸಂಸ್ಥೆ. ನೀವು ನಮ್ಮಿಂದ ಏನಾದರೂ ಕೊಡುಗೆ ಪಡೆದರೆ ಪ್ರತಿಯಾಗಿ ಜನರಿಗೆ ನೆರವಾಗುವ ಕೆಲಸಕ್ಕೆ ಶ್ರಮದಾನ ಮಾಡಬೇಕು ಎಂದು ತಾಕೀತು ಮಾಡಿದರು. ಹಾಗಾಗಿ ಆ ಊರ ಶಾಲೆಗೆ ಕಾಂಪೌಂಡ್ ಬಂತು. ಕೆರೆಯಲ್ಲಿದ್ದ ಹೂಳು ಖಾಲಿಯಾಯಿತು.

ಶ್ರೀಧರನ್ ಅಲ್ಲೂ ಕಣ್ಣಿಟ್ಟರು.

ಹೀಗೆ ಗಿರೀಶ್ ಭಾರದ್ವಾಜ್ ಕಟ್ಟಿದ ತೂಗು ಸೇತುವೆ, ನಂದನಾ ರೆಡ್ಡಿ ದಾಮೋದರ ಆಚಾರ್ಯ ಅವರ ‘ನಮ್ಮ ಭೂಮಿ’, ಕೃತಕ ಕಾಲುಗಳ ಮೂಲಕ ಹೊಸ ಬೆಳಕಾದ ಜೈಪುರ ಫುಟ್ಸ್ ಹೀಗೆ ಕಥೆ ಹೇಳುತ್ತಾ ಹೋದರು.

ಶ್ರೀಧರನ್ ಬರೀ ಕಥೆ ಹೇಳಲಿಲ್ಲ ಇವೆಲ್ಲವನ್ನೂ ಬೇರೆಯವರು ಮಾತ್ರ ಮಾಡಲು ಸಾಧ್ಯ ನಮ್ಮ ಕೈನಿಂದಲ್ಲ ಎಂದು ಜನರಿಗೆ ಅನಿಸಬಾರದು ಎನ್ನುವ ಕಾರಣಕ್ಕೆ ತಮ್ಮ ಲ್ಯಾಪ್ ಟಾಪ್ ಮಡಿಚಿಟ್ಟರು. ವಾಹನವನ್ನು ಗ್ಯಾರೇಜ್ ನಲ್ಲಿ ನಿಲ್ಲಿಸಿದರು. ಸತತ ೫ ವರ್ಷ ಚೆನ್ನೈ ನ ಒಂದು ಬಂಜರು ನೆಲದಲ್ಲಿ ನಿಂತರು. ನೀರುಣಿಸಿ ಆರೈಕೆ ಮಾಡಿ ಹಸಿರು ಕಾಡಾಗಿಸಿದರು. ಹಣ್ಣು, ತರಕಾರಿಗಳ ನೆಲೆಯಾಗಿಸಿದರು

ಯಾರು ಬೇಕಾದರೂ ಬದಲಾವಣೆಯ ಹರಿಕಾರರಾಗಬಹುದು. ಯಾರು ಬೇಕಾದರೂ ಆತ್ಮ ವಿಶ್ವಾಸ ಬಿತ್ತಬಹುದು ಎನ್ನುವುದನ್ನು ಶ್ರೀಧರನ್ ಮನವರಿಕೆ ಮಾಡಿಕೊಟ್ಟ ನಂತರ, ಸತತ ಐದು ವರ್ಷಗಳ ನಂತರ ಮತ್ತೆ ಲ್ಯಾಪ್ ಟಾಪ್ ಕೈಗೆತ್ತಿಕೊಂಡಿದ್ದಾರೆ. ಅವರ ವಾಹನವೂ ಸಜ್ಜಾಗಿದೆ.

ಬನ್ನಿ ಒಳ್ಳೆಯ ಸುದ್ದಿಗಳನ್ನು ಕೇಳೋಣ…

Comment here