Friday, March 29, 2024
Google search engine
Homeಸಾಹಿತ್ಯ ಸಂವಾದಅಂತರಾಳಬೆಳಕಿಲ್ಲದ ದಾರಿಯಲ್ಲಿ ಬೆಳಕು ಹೆಕ್ಕಿದ ಅರುಂಧತಿ ನಾಗ್

ಬೆಳಕಿಲ್ಲದ ದಾರಿಯಲ್ಲಿ ಬೆಳಕು ಹೆಕ್ಕಿದ ಅರುಂಧತಿ ನಾಗ್

ಜಿ ಎನ್ ಮೋಹನ್


‘ಅಮ್ಮನ ಕೈನಲ್ಲಿ ಇದ್ದದ್ದು ಒಂದು ಲೋಟ ಅಷ್ಟೇ..’ಎಂದು ಅರುಂಧತಿ ನಾಗ್ ನನ್ನೆಡೆಗೆ ತಿರುಗಿದರು

ಅವರ ಕಣ್ಣಲ್ಲಿ ನೀರಿನ ಪಸೆ ಇರಬಹುದು ಎಂದುಕೊಂಡೆ
ಖಂಡಿತಾ ಇಲ್ಲ.

ಮನಸ್ಸು ಕಲಕಿರಬಹುದು, ಆದರೆ ಆಕೆ ಅಲುಗಿರಲಿಲ್ಲ

ನಾನು ಬೆಕ್ಕಸಬೆರಗಾಗಿ ಅವರ ಭಾವವನ್ನು ತನಿಖೆಗೆ ಒಳಪಡಿಸುತ್ತಾ ಇದ್ದದ್ದು ಅವರಿಗೆ ಗೊತ್ತಾಯಿತೇನೋ

ಇದು ಅಮ್ಮ ನನಗೆ ಕೊಟ್ಟ ಉಡುಗೊರೆ. ಅಮ್ಮ ಎನ್ನುವುದು ಆತ್ಮವಿಶ್ವಾಸ ಎಂದರು

ಅಮ್ಮ ಹಿಡಿದು ಹೊರಟ ಒಂದು ಲೋಟ ಹಾಗೂ ತಳ್ಳಿ ಬಂದ ಚಹಾ ಕಪ್ ಎರಡರ ನಡುವೆ ನಮ್ಮ ಮಾತು ತೂಗುತ್ತಿತ್ತು

”ಒಂದು ಲೋಟ, ಎರಡು ಸೀರೆ, ಐದು ರೂಪಾಯಿ ಹಿಡಿದುಕೊಂಡು ರಾಧಾಮೂರ್ತಿ ರಾವ್ ನಾಸಿಕ್ ನಿಂದ ಹೊರಟರು. ನಿಮ್ಮ ಬದುಕಿನ ಹಾದಿ ಬದಲಾಯಿತು ಅಲ್ಲವೇ..?” ಅನ್ನೋ ಪ್ರಶ್ನೆ ಮುಂದಿಟ್ಟಿದ್ದೆ

”ಆಕೆಯ ಹೆಸರು ಪ್ರೇಮಲತಾ ಸಾಠೆ. ಮದುವೆ ಆದಮೇಲೆ ರಾಧಾಮೂರ್ತಿ ರಾವ್” ಎಂದು ಅರುಂಧತಿ ತಿದ್ದಿದರು

ಈ ಎರಡು ಹೆಸರುಗಳ ನಡುವೆ ಒಂದು ದೊಡ್ಡ ಲೋಕವೇ ತೂಗುತ್ತಿತ್ತು
ನಾನು ಅರುಂಧತಿಯನ್ನು ಮಾತನಾಡಲು ಬಿಟ್ಟು ಬರೀ ಕಿವಿಯಾಗಿ ನಿಂತೆ

ಅರುಂಧತಿಯ ನೆನಪುಗಳ ಲೋಕಕ್ಕೆ ಕೈ ಇಟ್ಟಿದ್ದೆನೇನೋ
ಜೇನು ಗೂಡಿನಿಂದ ಎದ್ದ ನೊಣಗಳ ಹಿಂಡಿನಂತೆ ನೆನಪು ಹರಡಲಾರಂಭಿಸಿತು

”ಎಸ್ ಎಲ್ ಸಿ ಪಾಸಾದ ಮಾರ್ಕ್ಸ್ ಕಾರ್ಡ್, ಐದು ರೂಪಾಯಿ, ಎರಡು ಸೀರೆ, ಒಂದು ಲೋಟ ಹಿಡಿದು ಆಕೆ ಮನೆ ಬಿಟ್ಟು ಹೊರಡುವಾಗ ಅವಳ ಮದುವೆ ನಿಶ್ಚಯವಾಗಿತ್ತು

ಆದರೆ ಅಪ್ಪ ಶುರು ಮಾಡಿದ ಬೆಲ್ಲದ ಬ್ಯುಸಿನೆಸ್ ಪಾತಾಳ ಕಂಡಿತ್ತು
ರಾತ್ರೋರಾತ್ರಿ ಕಾರ್ಖಾನೆಗೆ ನುಗ್ಗಿದ ಯಾರೋ ಬೆಲ್ಲಕ್ಕೆ ನೀರು ಬೆರಸಿ ಹೋದರು ರಾತ್ರಿ ಕಳೆದು ಬೆಳಗಾಗುವುದರೊಳಗೆ ಅಪ್ಪ ಪಾಪರ್ ಆಗಿದ್ದರು”

”ಮದುವೆಗೆ ವರದಕ್ಷಿಣೆ ತೆರಬೇಕಾಗಿತ್ತು. ಇಬ್ಬರು ತಮ್ಮಂದಿರು, ಇಬ್ಬರು ತಂಗಿಯರಿದ್ದರು
ರೈಲ್ವೆಯಲ್ಲಿ ಎಂಜಿನಿಯರ್ ಆಗಿದ್ದ ಅಪ್ಪ ಕೂಡಿಟ್ಟ ದುಡ್ಡೆಲ್ಲವೂ ಹೀಗೆ ಹೋಗಿಬಿಟ್ಟಿತ್ತು

ಅಮ್ಮ ಮದುವೆ ಬೇಡ ಎಂದಳು. ಅಜ್ಜಿಗೆ ಗುಮಾನಿ. ಇವಳು ಯಾರನ್ನೋ ಪ್ರೀತಿಸಿದ್ದಾಳೆ ಅಂತ. ಬಚ್ಚಲು ಮನೆಗೆ ಹೋಗಿ ಬರಲೂ ಕಾವಲು ಇಟ್ಟುಬಿಟ್ಟರು

ಆಗಲೇ ಅಮ್ಮ ಹೊರಟು ನಿಂತದ್ದು.

ಅಪ್ಪನ ಬಳಿ ಹೋದಳು.
ನಾನು ಕೆಲಸ ಹುಡುಕಿಕೊಂಡು ಹೊರಟಿದ್ದೇನೆ. ಯಾರಾದರೂ ನನ್ನನ್ನು ತಡೆದರೆ ಇನ್ನೆಂದೂ ವಾಪಸ್ ಬರುವುದಿಲ್ಲ, ತಡೆಯದಿದ್ದರೆ ಖಂಡಿತಾ ಬರುತ್ತೇನೆ ಎಂದವಳೇ ಹೊರಟೇ ಬಿಟ್ಟಳು”

”ಮುಂಬೈಗೆ ಹೋದವಳೇ ತನ್ನ ನೆಂಟರ ಮನೆ ಬಾಗಿಲು ತಟ್ಟಿದಳು
ಕಪ್ ನಲ್ಲಿ ಚಹಾ ಬಂತು. ಅಮ್ಮ ಇದ್ದ ಕಥೆಯೆಲ್ಲಾ ಹೇಳಿ ಕೆಲಸ ಹುಡುಕಲು ಬಂದಿದ್ದೇನೆ ಎಂದರು

ಆಗ ಆ ಮನೆಯವರು ನಿಂಗೆ ಇಲ್ಲಿ ಉಳಿಯಲು ಜಾಗ ಇಲ್ಲ ಎಂದರು

ಅಮ್ಮ ಚಹಾ ಕಪ್ ತಳ್ಳಿದವರೇ ಚಹಾ ಕುಡಿಯೋದಿಕ್ಕೆ ಅಂತ ಇನ್ನೊಂದು ಸಲ ಬರುತ್ತೇನೆ ಎಂದು ಹೊರಟುಬಿಟ್ಟರು”

ನಾನು ನಿಂತಿದ್ದದ್ದು ಶಂಕರ್ ನಾಗ್ ಹಾಗೂ ಅರುಂಧತಿ ಪ್ರೀತಿಯಿಂದ ಸೃಷ್ಟಿಸಿದ ಫಾರ್ಮ್ ಹೌಸ್ ನಲ್ಲಿ.

ಈ ಎಲ್ಲಾ ಮಾತನ್ನು ಆಡುತ್ತಾ ಆಡುತ್ತಲೇ ನಾನು ಅಲ್ಲಿದ್ದ ಕಟ್ಟೆಯ ಮೇಲೆ ಕೂರಲು ಹೋದೆ.

ಅರೆ! ಅದು ನಾಗರಕಟ್ಟೆ!

ಶಂಕರ್ ನಾಗ್ ರ ಊರು ನಾಗರಕಟ್ಟೆ. ಆ ಊರೇ ಎಲ್ಲಿ ಬಂದು ನೆಲೆಸಿದೆಯೇನೋ ಎನ್ನುವಂತೆ ಫಾರ್ಮ್ ಹೌಸ್ ನಾಗರಕಟ್ಟೆಯನ್ನು ಹೊತ್ತು ನಿಂತಿತ್ತು.

ತಕ್ಷಣ ನನ್ನ ಮಾತು ಶಂಕರ್ ಮತ್ತು ಅರುಂಧತಿ ಮದುವೆಯ ಕಡೆ ಹೊರಳಿತು.

‘ನಿಮ್ಮಿಬ್ಬರ ಮದುವೆಗೆ ಬಂದದ್ದು ಬೆರಳೆಣಿಕೆಯಷ್ಟು ಜನ’ ಎಂದೆ.

ಅರುಂಧತಿ ತಕ್ಷಣ ತಮ್ಮ ನೆನಪುಗಳ ಲೋಕಕ್ಕೆ ಜಾರಿಕೊಂಡರು.

ನಾವಿಬ್ಬರೂ ಒಟ್ಟಿಗೆ ಓಡಾಡಲು ಶುರು ಮಾಡಿದಾಗ ನನಗೆ ೧೭ ಅವನಿಗೆ ೧೯ ವರ್ಷ. ಆರು ವರ್ಷ ಓಡಾಡಿದ ನಂತರ ಒಂದು ದಿನ ಹೀಗೆಯೇ ಮಾತಾಡುತ್ತ ಕುಳಿತಿದ್ದಾಗ ಎಷ್ಟೊಂದು ವರ್ಷದಿಂದ ನಿನ್ನ ಜೊತೆ ಓಡಾಡಿದ್ದೇನೆ. ನಾವಿಬ್ಬರೂ ಯಾಕೆ ಮಾಡುವೆ ಮಾಡ್ಕೊಬಾರದು ಅಂದ.

ಇನ್ನೆರಡು ದಿನಕ್ಕೆ ಅವನ ಹುಟ್ಟಿದ ಹಬ್ಬ ಇತ್ತು. ಸರಿ ನಾಳಿದ್ದು ಮಾಡಿಕೊಳ್ಳೋಣ ಎಂದೆ. ಅವನು ಬೆಕ್ಕಸಬೆರಗಾದ ಟೈಮ್ ಇಲ್ವಲ್ಲ ಅಂತ.

ಹಾಗಾದ್ರೆ ಜುಲೈನಲ್ಲಿ ನನ್ನ ಬರ್ತ್ ಡೇ ಬರುತ್ತಲ್ಲಾ ಆಗ ಆಗೋಣ ಅಂತ ಬದಲಿ ದಿನಾಂಕ ಹೇಳಿದೆ. ಶಂಕರ್ ಒಂದು ನಿಮಿಷ ಯೋಚನೆ ಮಾಡಿದ. ಇವಳು ಮನಸ್ಸು ಬದಲಾಯಿಸಿಬಿಟ್ರೆ ಅಂತ ಬೇಡ ನಾಲಿದ್ದೆ ಆಗಿಬಿಡೋಣ ಅಂದ. ಮದುವೆ ಆಗಿ ಹೋಯಿತು.

ತಮಾಷೆ ಏನು ಗೊತ್ತಾ. ನಮ್ಮ ಅಪ್ಪ ಅಮ್ಮನಿಗೆ ಫೋನ್ ಮಾಡಿ ನಾಳಿದ್ದು ನಮ್ಮ ಮದುವೆ ಬಂದುಬಿಡಿ ಅಂತ ಕರೆದ್ವಿ ಅಂತ ಜೋರಾಗಿ ನಕ್ಕರು.

ಅನಂತ್ ನಾಗ್ ಅಂತೂ ಕೊನೆವರೆಗೂ ನಂಬಲಿಲ್ಲ.

ಶಂಕರ್ ನಾಗ್ ಕಥೆ ಇನ್ನೂ ವಿಚಿತ್ರ ಇತ್ತು. ಮದುವೆ ದಿನ ಪತ್ರಿಕೆಗೆ ಸಂದರ್ಶನ ಕೊಡ್ತಾ ಇದ್ದರು. ಇಂಟರ್ವ್ಯೂ ಮಧ್ಯೆ ಒಂದು ಬ್ರೇಕ್ ತಗೋಳ್ಳೋಣ. ಇಲ್ಲೇ ಆರ್ಯ ಸಮಾಜದಲ್ಲಿ ನನ್ನ ಮದುವೆ ಇದೆ. ಹೋಗಿ ಬಂದುಬಿಡ್ತೀನಿ. ಆಮೇಲೆ ಕಂಟಿನ್ಯೂ ಮಾಡೋಣ ಎಂದಿದ್ದ. ಸಂದರ್ಶನ ಮಾಡ್ತಿದ್ದವರು ಮೂರ್ಛೆ ಹೋಗೊದೊಂದು ಬಾಕಿ ಎಂದರು.

ನಾನು ಆರು- ಅರುಂಧತಿ ರಾವ್ ಹಾಗೂ ಅರುಂಧತಿ ನಾಗ್ ಈ ಮೂವರ ಜೊತೆಯೂ ಏಕ ಕಾಲದಲ್ಲಿ ಮಾತನಾಡುತ್ತಿದ್ದೆ.

ಹಾಗಾಗಿ ಅರುಂಧತಿ ಒಮ್ಮೆ ತಮ್ಮ ಬಾಲದಲ್ಲಿ ಕಳೆದು ಹೋಗುತ್ತಾ, ಇನ್ನೊಮ್ಮೆ ಮುಂಬೈ ನ ರಂಗಭೂಮಿಯಲ್ಲಿ ತಾನು, ಶಂಕರ್ ನಾಗ್ ಹೇಗೆ ಸ್ಪರ್ಧೆ ನಡೆಸುತ್ತಿದ್ದರು ಎಂದು ಹೇಳುತ್ತಾ ಮಗದೊಮ್ಮೆ ಶಂಕರ್ ಇಲ್ಲದೆ ಹೋದದ್ದರ ಬಗ್ಗೆ ನಿಟ್ಟುಸಿರಾಗುತ್ತಾ ಇದ್ದರು.

ನಮ್ಮ ಆರು ವರ್ಷಗಳ ಓಡಾಟ, ಒಡನಾಟ ನಮ್ಮಿಬ್ಬರನ್ನೂ ಅದ್ಭುತ ಗೆಳೆಯರನ್ನಾಗಿ ಮಾಡಿಬಿಟ್ಟಿತ್ತು. ಅವನಿಗೆ ಗಿರೀಶ್ ಕಾರ್ನಾಡರ ಸಿನೆಮಾಗೆ ಸಹಾಯಕ ನಿರ್ದೇಶಕ ಆಗಬೇಕು ಎನ್ನುವ ಆಸೆ ಇತ್ತು. ಹಾಗಾಗಿ ಅವರನ್ನು ಕೇಳಿದ. ಆದರೆ ಅವರು ನನ್ನ ಸಿನೆಮಾಗೆ ಹೀರೊ ಆಗು ಎಂದರು. ಇವನಿಗೆ ಶಾಕ್ ಆಗಿ ಹೋಯಿತು. ಮುಂಬೈನಲ್ಲಿದ್ದ ನನ್ನನ್ನ ಕರೆಸಿ ಅರು, ನೋಡು ಹೀಗೆ ಅಂದ ನಾನು ಆಗ ನೀನು ಆಕ್ಟಿಂಗ್ ಮಾಡ್ತಾನೇ ನಿರ್ದೇಶನ ಕಲೀಬಹುದಲ್ಲಾ ಅಂದೆ. ಒಪ್ಪಿಕೊಂಡ.

ಅವನು ‘ಒಂದಾನೊಂದು ಕಾಲದಲ್ಲಿ’ ಸಿನೆಮಾಗೆ ಹೆಜ್ಜೆ ಇಟ್ಟದ್ದು ಹೀಗೆ. ಅಮೇಲಿನದ್ದು ಎಲ್ಲರಿಗೂ ಗೊತ್ತಿರುವ ಕಥೆ.

ಆದರೆ ಎಲ್ಲರಿಗೂ ಗೊತ್ತಿಲ್ಲದಿರುವ ಕಥೆಯೂ ಅರುಂಧತಿಯವರ ಬಳಿ ಸಾಕಷ್ಟಿದೆ. ಅದು ಅವರು ಶಂಕರ್ ಇಲ್ಲವಾದ ನಂತರ ಬದುಕನ್ನು ಕಟ್ಟಿಕೊಂಡ ಬಗೆ.

ದಾವಣಗೆರೆ ಎಂದು ಏನೋ ಹೇಳಲು ಬಾಯಿ ತೆರೆದೆ.

I don’t wish to talk about it… All of a sudden I lost so much. It was a turning point in my life. I lost a very good friend, I lost a companion….

ಹೀಗೇನಾದರೂ ಆದಾಗ ಒಂದು ಕುಟುಂಬ
ದಿಕ್ಕಾಪಾಲಾಗಿ ಹೋಗುತ್ತದೆ. ಬಹುಶಃ ಇಷ್ಟೇ ನಾನುಪಡೆದುಕೊಂಡು ಬಂದದ್ದು ಅನ್ನಿಸುತ್ತೆ… ಆದರೆ ಅವನು ನನಗೆ ಮಾತ್ರ ಎಲ್ಲಾ ಆಗಿರಲಿಲ್ಲ ಅಂತ ಆಗ
ಗೊತ್ತಾಯ್ತು.

ಇವತ್ತಿಗೂ ಸಹ ಅವನ ನೆನಪನ್ನು ಎಷ್ಟು ಹಸಿರಾಗಿ ಉಳಿಸಿಕೊಂಡಿದ್ದಾರೆ ಜನ, ಅವನಿಗೆ ಕೊಡುತ್ತಿದ್ದ ಪ್ರೀತಿ ಗೌರವಗಳನ್ನು ನನಗೂ ಕೊಟ್ಟಿದ್ದಾರೆ… I would not get this in any othe rstate.

ನಾನು ಇಷ್ಟು ಧೈರ್ಯವಾಗಿಇಲ್ಲಿ ಒಬ್ಬಳೇ ಬದುಕು ಸಾಗಿಸಿದ್ದೆನೆ ಎಂದರೆ, It is the love from the people of the state that has made it possible ಎಂದು ಭಾವುಕರಾದರು.

ಪರಿಸ್ಥಿತಿ ತಿಳಿಯಾಗಿಸಲು ‘ನೀವು ಕನ್ನಡವನ್ನು ಎರಡು ಬಾರಿ ಕಲಿತಿರಿ’ ಎಂದೆ.

ಅದರ ಹಿಂದೆ ಕಥೆಯೊಂದಿತ್ತು. ಶಂಕರ್ ಬೆಂಗಳೂರಿಗೆ ಬಂದು ನೆಲಸಿದಾಗ ಅರುಂಧತಿ ಭಾಷೆ ಗೊತ್ತಿಲ್ಲದೇ ಬೀದಿ ಬೀದಿ ಸುತ್ತಿ, ಅಂಗಡಿಗಳಲ್ಲಿ, ಜನಸಂದಣಿಯಲ್ಲಿ ನಿಂತು ಕನ್ನಡದ ಪದಗಳನ್ನು ಹೆಕ್ಕಿದ್ದರು.

ಆ ನಂತರ ಅವರು ಮತ್ತೆ ಕನ್ನಡ ಕಲಿಯಬೇಕಾಗಿ ಬಂತು. ಅದು ಆ ಅಪಘಾತದ ನಂತರ. ಅವರ ಹಲ್ಲು ಮುರಿಯಿತು. ದವಡೆ ಕೂಡಲಿಲ್ಲ. ಆಗ ಕನ್ನಡವನ್ನು ಉಚ್ಚರಿಸಲು ಮತ್ತೆ ಕಲಿಯಬೇಕಾಯಿತು.

‘ಬರೀ ಕನ್ನಡವನ್ನು ಎರಡನೆಯ ಬಾರಿ ಕಲಿಯಲಿಲ್ಲ ನಾನು ಬದುಕುವುದನ್ನೂ ಎರಡನೆಯ ಬಾರಿಗೆ ಕಲಿತೆ’ ಎಂದು ಅರುಂಧತಿ ನನ್ನನ್ನು ತಿದ್ದಿದರು.

‘ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು. ಆದರೆ ಕನಸುಗಳಿಲ್ಲದ ದಾರಿಯಲ್ಲಿ ನಡೆಯುವುದು ಹೇಗೆ ಎನ್ನುವುದು ‘ಯಯಾತಿ’ ನಾಟಕದ ಕಾಡುವ ಸಾಲುಗಳು.

ಅರುಂಧತಿಗೆ ಇನ್ನಿಲ್ಲದಷ್ಟು ಕನಸುಗಳಿದ್ದವು. ತಮಗಾಗಿಯೂ. ಶಂಕರ್ ಗಾಗಿಯೂ ಅದನ್ನು ಗಟ್ಟಿ ಮನಸ್ಸಿನಿಂದ ನನಸಾಗಿಸುತ್ತಾ ಬಂದರು.

‘ರಂಗ ಶಂಕರ’ ಅದರಲ್ಲೊಂದು.

ನಾನು ಅರುಂಧತಿಯತ್ತ ತಿರುಗಿದೆ. ನೂರೆಂಟು ರೀತಿಯ ಗಿಡ ಮರಗಳು, ಬಾತುಕೋಳಿಗಳು, ನಾಟಕದಲ್ಲಿ ಬಳಸಿದ ಕುದುರೆ ಗಾಡಿಗಳು, ಸಿನೆಮಾದ ಪ್ರಾಪ್ಸ್ ಗಳು ಎಲ್ಲವನ್ನೂ ಹೊತ್ತಿದ್ದ ಆ ಫಾರ್ಮ್ ಹೌಸ್ ನ ಅಂಗಳ ಹಸಿರನ್ನು ಮುಕ್ಕಳಿಸುತ್ತಿತ್ತು.

ಅರುಂಧತಿಯೂ ಥೇಟ್ ಹಾಗೆಯೇ ಕನಸುಗಳ ದಾರಿಯಲ್ಲಿಯೂ ನಡೆದಿದ್ದರು… ಬೆಳಕಿಲ್ಲದ ದಾರಿಯಲ್ಲಿ ನಡೆದೂ ಬೆಳಕನ್ನು ತಮ್ಮದಾಗಿಸಿಕೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?