ಜಸ್ಟ್ ನ್ಯೂಸ್

ಮಗುವಿನ ರಕ್ತ ಹೀರಿ ಕೊಂದ ಚಿರತೆ: ಹೆಬ್ಬೂರಿನಲ್ಲಿ ಬಿಗು ವಾತಾವರಣ

ಹೆಬ್ಬೂರು: ಚಿರತೆ ಮನುಷ್ಯರನ್ನು ಬಲಿತೆಗೆದುಕೊಳ್ಳುತ್ತಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಅರಣ್ಯ ಇಲಾಖೆಯ ವಿರುದ್ಧ ತುಮಕೂರು ತಾಲೂಕು ಹೆಬ್ಬೂರು ಹೋಬಳಿ ಕೇಂದ್ರದಲ್ಲಿ ನೂರಾರು ಮಂದಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ಹಿನ್ನೆಲೆಯಲ್ಲಿ ತುಮಕೂರು ಮತ್ತು ಕುಣಿಗಲ್ ಭಾಗದ ಎರಡೂ ಕಡೆಯೂ ವಾಹನಗಳು ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡುಬಂತು.

ಇನ್ನೊಂದು ಕಡೆಯಲ್ಲಿ ಮಗನನ್ನು ಕಳೆದುಕೊಂಡಿರುವ ಪೋಷಕರ ದುಃಖ ಮಡುಗಟ್ಟಿದೆ. ಗ್ರಾಮಸ್ಥರು ಕೂಡ ಮೃತದೇಹವನ್ನು ಮುಂದಿಟ್ಟುಕೊಂಡು ರೋಧಿಸುತ್ತಿದ್ದಾರೆ.

ಹೆಬ್ಬೂರಿನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಬೆಳಗ್ಗೆ ಜಿಲ್ಲಾಧಿಕಾರಿಗಳು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಹೆಬ್ಬೂರಿಗೆ ಬರಬೇಕು. ಇಲ್ಲದಿದ್ದರೆ ಜನರನ್ನು ತುಮಕೂರಿಗೆ ಕರೆತರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಗುರುವಾರ ರಾತ್ರಿ 7 ಗಂಟೆಯಿಂದ 9 ಗಂಟೆಯವರೆಗೂ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ಚಿರತೆಗೆ ಇನ್ನು ಎಷ್ಟು ಜೀವಗಳು ಬಲಿಯಾಗಬೇಕು. ಅರಣ್ಯ ಇಲಾಖೆ ಮತ್ತು ಜಿಲ್ಲಾಡಳಿತ ಸತ್ತು ಹೋಗಿದೆಯೇ ಎಂದು ಕಿಡಿಕಾರಿದರು.

ಜನರ ಆಕ್ರೋಶವನ್ನು ತಣಿಸಲು ಪೊಲೀಸರು ಮಾಡಿದ ಯತ್ನ ವಿಫಲವಾಯಿತು. ರಸ್ತೆಯಲ್ಲೇ ನಿಂತ ಪ್ರತಿಭಟನಾಕಾರರು ಅರಣ್ಯ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದರು. ಕುಣಿಗಲ್ ಮತ್ತು ಗುಬ್ಬಿಯಲ್ಲಿ ಮೂರು ಮಂದಿ ಅಮಾಯಕರು ಚಿರತೆಗೆ ಬಲಿಯಾಗಿದ್ದಾರೆ. ಆದರೂ ಯಾರೂ ಬಂದು ನೋಡುತ್ತಿಲ್ಲ ಎಂದು ಸಿಟ್ಟು ಹೊರಹಾಕಿದರು.

ಗ್ರಾಮದ ಗಂಗಣ್ಣ ಮಾತನಾಡಿ ಇದುವರೆಗೂ ಚಿರತೆಗಳು ಸಾವಿರಾರು ಜಾನುವಾರುಗಳನ್ನು ಬಲಿತೆಗೆದುಕೊಂಡಿವೆ. ಲಕ್ಷಾಂತರ ರೂಪಾಯಿ ರೈತರಿಗೆ ನಷ್ಟವಾಗಿದೆ. ಇದಕ್ಕಾಗಿ ಪುಡಿಗಾಸು ಪರಿಹಾರ ನೀಡುವುದರಿಂದ ರೈತರಿಗೆ ಯಾವುದೇ ಪ್ರಯೋಜ ಆಗುವುದಿಲ್ಲ. ಕುರಿ, ಮೇಕೆ, ದನಕರು, ನಾಯಿ, ಕೋತಿ ಹೀಗೆ ಎಲ್ಲಾ ಪ್ರಾಣಿಗಳನ್ನು ತಿಂದುಹಾಕುತ್ತಿವೆ. ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು, ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬಂದು ಜನರ ಗೋಳನ್ನು ಕೇಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನರಭಕ್ಷಕ ಚಿರತೆಗಳ ಮನುಷ್ಯರ ರಕ್ತದ ರುಚಿಕಂಡಿವೆ. ಹೊಲಗಳಲ್ಲಿ, ತೋಟಗಳಲ್ಲಿ ಒಬ್ಬಂಟಿಯಾಗಿರುವವರ ಮೇಲೆ ದಾಳಿ ನಡೆಸುತ್ತಿವೆ. ಗುಬ್ಬಿ ಮಣಿಕುಪ್ಪೆಯಲ್ಲಿ ಐದು ವರ್ಷದ ಬಾಲಕನ ರಕ್ತ ಹೀರಿ ಸಾಯಿಸಿದೆ. ಇನ್ನೆಷ್ಟು ಜನ ಬಲಿಯಾಗಬೇಕು ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.

Comment here