ಜಸ್ಟ್ ನ್ಯೂಸ್

ಸಿಪಿಐ ಹಿರಿಯ ಮುಖಂಡ ಎನ್. ಶಿವಣ್ಣ ಇನ್ನಿಲ್ಲ

Publicstory


ಅಂಗನವಾಡಿ ನೌಕರರ ಸಂಘದ ರಾಜ್ಯಾಧ್ಯಕ್ಷ ಹಾಗೂ ಕಾರ್ಮಿಕ ಮುಖಂಡ ಎನ್.ಶಿವಣ್ಣ ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು.

ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಅಮ್ಮಸಂದ್ರ ಸೀಮೆಂಟ್ ಫ್ಯಾಕ್ಟರಿಯ ಕಾರ್ಮಿಕರಾಗಿ, ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಶಿವಣ್ಣ ಕೆಲಸ ಮಾಡಿದರು. 1962ರಲ್ಲಿ ಹೋರಾಟಕ್ಕೆ ಧುಮುಕಿದ ಎನ್.ಶಿವಣ್ಣ ಕಾರ್ಮಿಕರ ಹಕ್ಕುಗಳ ಪರವಾಗಿ ಹೋರಾಟ ಮಾಡಿದರು.

ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿಯಾಗಿ ದುಡಿದರು. ಜೊತೆಗೆ ಭಾರತ ಕಮ್ಯೂನಿಸ್ಟ್ ಪಕ್ಷ ಜಿಲ್ಲಾ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿ ಕಾರ್ಮಿಕರು, ರೈತರು, ಅಂಗನವಾಡಿ, ಆಶಾ ಕಾರ್ಯಕರ್ತರಿಗೆ ಸೌಲಭ್ಯಗಳನ್ನು ಒದಗಿಸಿಕೊಡಲು ಅಹರ್ನಿಶಿ ಹೋರಾಟ ಮಾಡಿದರು.

2002ರಲ್ಲಿ ಸಿಪಿಐ ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ಎನ್.ಶಿವಣ್ಣ ಪಕ್ಷವನ್ನು ಕಟ್ಟುವಲ್ಲಿ ಶ್ರಮಿಸಿದರು. ಎಡ ಚಳವಳಿಯಲ್ಲಿ ಶಿವಣ್ಣ ಅವರ ಹೆಸರು ಪ್ರಮುಖವಾದುದು.

ಅಂಗನವಾಡಿ, ಆಶಾ, ಬಿಸಿಯೂಟ ನೌಕರರ ಸಂಘಟನೆಯ ಕಾರ್ಯದರ್ಶಿಯಾಗಿ ಮತ್ತು ಬೆಂಗಳೂರಿನ ಆರೋಗ್ಯ ಕಾರ್ಯಕರ್ತೆಯರ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾಗಿ ಉತ್ತಮ ಕೆಲಸ ಮಾಡಿದರು.

ಅಷ್ಟೇ ಅಲ್ಲ ಎಐಟಿಯುಸಿಯ ತುಮಕೂರು ಜಿಲ್ಲಾ ಕಾರ್ಯದರ್ಶಿಯಾಗಿ, ರಾಜ್ಯ ಕಾರ್ಯದರ್ಶಿಯಾಗಿ ಮತ್ತು ಬೆಂಗಳೂರು ಮತ್ತು ತುಮಕೂರು ಜಿಲ್ಲೆಯಲ್ಲಿ ಹಲವು ಕಾರ್ಖಾನೆಯ ಕಾರ್ಮಿಕರ ಸಂಘದ ಅಧ್ಯಕ್ಷರಾಗಿಯೂ ಕೆಲಸ ನಿರ್ವಹಿಸಿದ್ದಾರೆ.

ಕಾರ್ಮಿಕ, ರೈತ, ಅಂಗನವಾಡಿ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ ಎನ್. ಶಿವಣ್ಣ ಜೀವಿತದ ಕೊನೆಯವರೆಗೂ ಹೋರಾಟದಲ್ಲೇ ಇದ್ದರು. ಎನ್.ಶಿವಣ್ಣ ನಿಧನಕ್ಕೆ ಸಿಪಿಐ ಜಿಲ್ಲಾ ಕಾರ್ಯದರ್ಶಿ ಗಿರೀಶ್, ಎಐಟಿಯುಸಿ ಮುಖಂಡ ಕಂಬೇಗೌಡ ಸಂತಾಪ ವ್ಯಕ್ತಪಡಿಸಿದ್ದಾರೆ.

Comment here