ಜಸ್ಟ್ ನ್ಯೂಸ್

ಕನ್ನಡ ಕಥಾ ಲೋಕದಲ್ಲಿ ಹೊಸ ದನಿಗಳಿವೆ: ಜಯಶ್ರೀ ಕಾಸರವಳ್ಳಿ

ಕನ್ನಡ ಕಥಾ ಲೋಕದಲ್ಲಿ ಹೊಸ ಭರವಸೆಯ ದನಿಗಳು ಕೇಳಿ ಬರುತ್ತಿವೆ. ಅದರಲ್ಲಿ ಮಧುಸೂದನ ವೈ ಎನ್ ಅವರ ‘ಫೀ ಫೋ’ ಸಹಾ ಒಂದು ಎಂದು ಸಾಹಿತಿ ಜಯಶ್ರೀ ಕಾಸರವಳ್ಳಿ ಅವರು ಅಭಿಪ್ರಾಯಪಟ್ಟರು.

‘ಅವಧಿ’ ಅಂತರ್ಜಾಲ ತಾಣ ಹಮ್ಮಿಕೊಂಡಿದ್ದ ಆನ್ ಲೈನ್ ಕಾರ್ಯಕ್ರಮದಲ್ಲಿ ಅವರು ‘ಬಹುರೂಪಿ’ ಪ್ರಕಾಶನದ ಮಧುಸೂದನ ವೈ ಎನ್ ಅವರ ‘ಫೀ ಫೋ’ ಕಥಾ ಸಂಕಲನ ಕುರಿತು ಮಾತನಾಡಿದರು. ಸತ್ಯ ಮತ್ತು ಮಿಥ್ಯೆಯ ನಡುವಿನ ಸಂಘರ್ಷದ ಚರ್ಚೆಯನ್ನು ಈ ಕಥಾ ಸಂಕಲನ ಕೈಗೆತ್ತಿಕೊಂಡಿದೆ. ಈ ಎರಡರ ನಡುವಣ ಭ್ರಾಂತಿಯಲ್ಲಿ ನಮ್ಮ ಬದುಕು ಸಾಗುತ್ತಿದೆ ಎಂದು ವಿವರಿಸಿದರು.

ಕೃತಿಯನ್ನು ಬಿಡುಗಡೆ ಮಾಡಿದ ಹಿರಿಯ ಪತ್ರಕರ್ತ, ಸಾಹಿತಿ ಜೋಗಿ ಅವರು ಮಧುಸೂದನ ಅವರ ಕಥೆಗಳು ಕಂಗೆಡಿಸುವ ಕಥೆಗಳು ಎಂದು ಬಣ್ಣಿಸಿದರು. ಇವತ್ತಿನ ಸೋಶಿಯಲ್ ಮೀಡಿಯಾ ಜಗತ್ತು ನಮ್ಮನ್ನು ಅಭಿಪ್ರಾಯ ರೂಪಿಸಿಕೊಳ್ಳಬೇಕಾದ ಪ್ರೋಗ್ರಾಮ್ ಗೆ ಒಳಪಡಿಸುತ್ತಿದೆ. ಇಂತಹ ಒತ್ತಡವನ್ನು ಹಿಡಿದಿಟ್ಟ ಹೊಸ ರೀತಿಯ ಕಥೆಗಳು ಇವು. ಹೊಸ ಅನುಭವ ಕಟ್ಟಿಕೊಡುತ್ತವೆ. ನಮ್ಮಲ್ಲಿ ಬಿತ್ತಿ ಮೊಳಕೆಯೊಡೆಯುವ ಕಥೆಗಳು ಎಂದು ಬಣ್ಣಿಸಿದರು.

ಕಥೆಗಾರ ಮಧುಸೂದನ ವೈ ಎನ್ , ಮಾತನಾಡಿ ಫೀ ಫೋ ಎನ್ನುವುದು ಕಂಪ್ಯೂಟರ್ ಲೋಕದ ಪದ. ಸರತಿಯಲ್ಲಿ ಮೊದಲು ನಿಂತದ್ದು ಮೊದಲು ಹೊರಗೆ ಬರುತ್ತದೆ ಎನ್ನುವ ಅರ್ಥ. ಮಾನವನ ನೆನಪುಗಳು, ಅನುಭವಗಳು ಗಣಿಯಲ್ಲಿನ ಖನಿಜದಂತೆ. ಈ ಖನಿಜವನ್ನು ಹೊರತೆಗೆಯುವ ಬಗೆ ಹೇಗೆ ಎಂದು ಯೋಚಿಸಿದಾಗ ಹುಟ್ಟಿಕೊಂಡ ಕಥೆಗಳು ಇವು ಎಂದರು. ‘ಅವಧಿ’ಯ ಪ್ರಧಾನ ಸಂಪಾದಕ ಜಿ ಎನ್ ಮೋಹನ್ ಮಾತನಾಡಿದರು.

Comment here