ಅಂತರಾಳ

ಮಾನವೀಯತೆ ಎನ್ನುವುದು ರಕ್ತದಲ್ಲೇ ಬರಬೇಕೇನೋ…

ಮಹೇಂದ್ರ ಕೃಷ್ಣಮೂರ್ತಿ


ತುಮಕೂರು: ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೇ 24 ಕೋವಿಡ್ ಸೋಂಕಿತರ ಸಾವಿನ ಹಿನ್ನೆಲೆಯಲ್ಲಿ ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾಧಿಕಾರಿಗಳ ಜಂಗ್ಲಿ ಕುಸ್ತಿಯ ನಡುವೆ ಈ ಘಟನೆ ನೆನಪಿಗೆ ಬಂದಿತು.

ಆವೊತ್ತು, ಮಧ್ಯ ರಾತ್ರಿ ಮೀರಿತ್ತು. ಸಮಯ ರಾತ್ರಿ 1.30. ಆಗಷ್ಟೇ ಪ್ರಜಾವಾಣಿಯ ತುಮಕೂರು ಮುದ್ರಣವನ್ನು ಪ್ರಿಂಟ್ ಗೆ ಕಳುಹಿಸಿ ನಾನು, ಡಿ.ಎಂ. ಘನಶ್ಯಾಮ, ಡಿ.ಬಿ.ನಾಗರಾಜ ನಡೆದುಕೊಂಡು ಬಟವಾಡಿಯ ಮನೆಗೆ ಹೋಗುತ್ತಿದ್ದವು. ಪ್ರತಿ ದಿನದ ರಾತ್ರಿಯಂತೆ!

ಘನಶ್ಯಾಮ

ತುಮಕೂರಿನ ಬಿ.ಎಚ್. ರಸ್ತೆಯ ಒಂದು ಬದಿಯಲ್ಲಿ ನಡೆದು ಹೋಗುತ್ತಿದ್ದಾಗ ಆಂಜನೇಯ ದೇವಸ್ಥಾನದ ಸಮೀಪ ಕುದುರೆಯೊಂದು ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿತ್ತು.

ಮೂರು ಜನ ಅತ್ತ ದೌಡಾಯಿಸಿದೆವು. ಯಾವುದೋ ವಾಹನ ಗುದ್ದಿ ಅದರ ಹಿಂದಿನ ಕಾಲು, ತೊಡೆ ಮುರಿದು ಹೋಗಿತ್ತು. ನಾವೆಲ್ಲ ಸೇರಿ ಹರ ಸಾಹಸ ಪಟ್ಟರೂ ಅದನ್ನು ಎತ್ತಿ ನಿಲ್ಲಿಸಲಾಗಲಿಲ್ಲ.

ಒಂದಿಬ್ಬರು ಆಟೊ ಚಾಲಕರು ನಮ್ಮ ನೆರವಿಗೆ ಬಂದರು. ಆದರೂ ಏನೇನೂ ಪ್ರಯೋಜನವಾಗಲಿಲ್ಲ.

ಅಷ್ಟರಲ್ಲಿ ರಾತ್ರಿ 2.30 ಮೀರಿತ್ತು. ಮನೆಗೆ ಹೋಗುವ ಮನಸ್ಸು, ಕುದುರೆಯನ್ನು ಹಾಗೇ ಬಿಟ್ಟುಹೋಗುವ ಬಿಡುವ ಮನಸ್ಸು ಇಲ್ಲ. ಅದಕ್ಕೆ ಚಿಕಿತ್ಸೆ ಆಗದಿದ್ದರೆ ಅದು ಸತ್ತು ಹೋಗಲಿದೆ ಎಂಬ ನೋವು.

ಅಗ, ಡಿ.ಸಿಗೆ ಫೋನ್ ಮಾಡೋ ಮಹೇಂದ್ರ ಎಂದವ ಶ್ಯಾಮ. ಅದಕ್ಕೆ ನಾಗರಾಜ್ ಕೂಡ ದನಿ ಸೇರಿಸಿದ.

ಡಿ.ಬಿ.ನಾಗರಾಜ

ನನಗೂ ಡಿಸಿ ಪರಿಚಯವೂ ಇರಲಿಲ್ಲ. ವರದಿಗಾರಿಕೆ ಕಾರಣದಿಂದ ಒಮ್ಮೆ ಮಾತ್ರ ಮಾತನಾಡಿದ್ದು ಬಿಟ್ಟರೆ ಉಳಿದಂತೆ ನನಗೂ ಅವರಿಗೂ ದೂರ, ದೂರ!

ಈ ನಡು ರಾತ್ರಿಯಲ್ಲಿ, ಅದು ಇಂಥ ವಿಚಾರಕ್ಕೆ ಜಿಲ್ಲಾಧಿಕಾರಿ ಅವರಿಗೆ ಫೋನ್ ಮಾಡುವುದೆಂದರೆ, ನಾನು, ಹಿಂದೆ-ಮುಂದೆ ನೋಡಿದೆ. ಶ್ಯಾಮನ ವರಾತೆ ಶುರುವಾಯಿತು. ನಿನಗ್ಯಾದಲ ಇದು ದೊಡ್ಡ ವಿಷಯ. ಏನ್ನೆಲ್ಲ ಮಾಡಿರುವನಿಗೆ ಒಂದು ಫೋನ್ ಮಾಡೋದ್ ಕಷ್ಟನಾ ಎಂಬ ಬೈಗುಳ ಬೇರೆ. ಇನ್ನೊಂದು ಕಡೆ ಕುದುರೆ ನೋವಿನ ನರಳಾಟ.

ಮೊಬೈಲ್ ತೆಗೆದುಕೊಂಡವನು ಜಿಲ್ಲಾಧಿಕಾರಿಗೆ ಫೋನಾಯಿಸಿದೆ. ಮೂರು- ನಾಲ್ಕು ರಿಂಗಾಗುತ್ತಿದ್ದಂತೆ ಫೋನ್ ತೆಗೆದರು. ವಿಷಯವನ್ನು ಕ್ಲುಪ್ತವಾಗಿ ಹೇಳಿದೆ. ಅರ್ಧ ಗಂಟೆಯಲ್ಲಿ ವ್ಯವಸ್ಥೆ ಮಾಡುತ್ತೇನೆ ಎಂದು ಕಾಳಜಿ ತೋರಿದರು.

ಹಾಗೇ ಕಾಳಜಿ ತೋರಿದವರು ಆಗ ಜಿಲ್ಲಾಧಿಕಾರಿಯಾಗಿದ್ದ ಡಾ. ಸೋಮಶೇಖರ್ ಅವರು. ಈಗ ಗಡಿನಾಡ ಅಭಿವೃದ್ಧಿ ಅಧ್ಯಕ್ಷರು.

ಅರ್ಧ ಗಂಟೆಯಲ್ಲಿ ಒಂದು ಗೂಡ್ಸ್ ಗಾಡಿ ಬಂತು. ಮಹಾನಗರ ಪಾಲಿಕೆಯದು ಇರಬೇಕು. ಕುದುರೆಯನ್ನು ಎತ್ತಿ ತುಮಕೂರಿನ ಪಶುವೈದ್ಯಕೀಯ ಇಲಾಖೆಯ ಹಿರಿಯ ಉಪ ನಿರ್ದೇಶಕರ ಕಚೇರಿ ಆವರಣಕ್ಕೆ ಸ್ಥಳಾಂತರಿಸಲಾಯಿತು. ಆ ಕೂಡಲೇ ಅದಕ್ಕೆ ಚಿಕಿತ್ಸೆ ಆರಂಭಿಸಲಾಯಿತು.

ತುಂಬಾ ಮುತುವರ್ಜಿಯಿಂದ ನೋಡಿಕೊಂಡರೂ ಅದು ಬದುಕಿ ಉಳಿಯಲಿಲ್ಲ. ವಾರದ ಬಳಿಕ ಸಾವಿಗೀಡಾಯಿತು.

ಮಾನವೀಯತೆ ಎಂಬುದು ರಕ್ತದಲ್ಲೇ ಬರಬೇಕೇನೋ. ಒಂದು ಆಸ್ಪತ್ರೆಯಲ್ಲಿ ಆಕ್ಸಿಜನ್ ಯಾವಾಗ ಖಾಲಿಯಾಗಲಿದೆ ಎಂದು ಅಳೆಯಲು ವಿಜ್ಞಾನಿಗಳ ತಂಡವೇ ಬರಬೇಕೇನು. ಮಾನವೀಯತೆಯ ಸಣ್ಣ ಕಾಳಜಿ, ಬದ್ಧತೆ ಇದ್ದರೆ ಸಾಕಿತ್ತೇನೋ.

ನನ್ನಿಂದಾಗಿ ನಾಲ್ಕು ಜೀವ ಉಳಿದವು ಎಂಬ ಬಿರುದಿಗಿಂತ ರಾಜಕಾರಣಿಗಳನ್ನು ಮೆಚ್ಚಿಸಿ ಯಾವ ಬಿರುದು ಪಡೆಯಲು ಸಾಧ್ಯವಾಯಿತು ಎಂಬುದನ್ನು ಅರ್ಥ ಮಾಡಿಕೊಂಡರೆ ಸಾಕು.

ಮೂರು ಜನರು ಆಕ್ಸಿಜನ್ ಇಲ್ಲದೇ ಸತ್ತರು ಎಂಬ ವರದಿಯೇ ಸಾಕು ಅಲ್ಲವೇ ಮಾನವೀಯತೆ ಅಳೆಯಲು!

Comment here