ಜನಮನತುಮಕೂರು ಲೈವ್

ಸ್ವಾತಂತ್ರ್ಯ ಮಹೋತ್ಸವ ಕುರಿತು ಚಿಂತಕರು ಏನು ಹೇಳುತ್ತಾರೆ?

Publicstory/prajayoga

ಕೆ. ದೊರೆರಾಜು
ಹಿರಿಯ ಹೋರಾಟಗಾರ, ಸಂಸ್ಕೃತಿ ಚಿಂತಕರು

ತ್ಯಾಗ ಬಲಿದಾನಗಳ ಸಂಗ್ರಾಮದಿಂದ ಸ್ವಾತಂತ್ರ್ಯ ದೊರಕಿದೆ. ಜಾತಿ ಧರ್ಮದ ಎಲ್ಲೆಗಳನ್ನು ಮೀರಿ ಜನರು ಭಾಗವಹಿಸಿದ್ದಾರೆ. ಈ ನೆಲದ ಮೂಲ ಆಶಯ, ಆದರ್ಶಗಳಾದ ಶಾಂತಿ, ಸಹಬಾಳ್ವೆಯ ಮತ್ತು ಸೌಹಾರ್ಧಯುತ ಹೋರಾಟ ಮಾದರಿಯಾಗಿತ್ತು. ಈಗ ಅಮೃತಮಹೋತ್ಸವದ ಸಂಭ್ರಮ ಒಂದೆಡೆಯಾದರೆ, ಸ್ವಾತಂತ್ಯದ ಆದರ್ಶಗಳನ್ನು ಪಾಲನೆ ಮಾಡದಿರುವ ಸಂಕಟ ಮತ್ತೊಂದೆಡೆಯಿದೆ. ನಾವು ಬುದ್ಧ, ಸೂಫಿ ಸಂತರ ಆಧ್ಯಾತ್ಮಿಕ ನೆಲೆಯಲ್ಲಿ ಸಾಗಬೇಕು.
 
__________________________________________

ಸಿ.ಯತಿರಾಜು
ಚಿಂತಕರು ಹಾಗೂ ಪರಿಸರವಾದಿ

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ್ದ ಟಿ.ಆರ್ ರೇವಣ್ಣ, ಕೆ.ಟಿ. ಗೋವಿಂದರಾಜು, ಭಗೀರಥಮ್ಮ ಅವರಂಥ ಮಹಾನೀಯರು ತುಮಕೂರಿನವರು. ಅರಣ್ಯ ಸತ್ಯಾಗ್ರಹದಲ್ಲಿ ಮುಂಚೂಣಿಯಲ್ಲಿದ್ದು, ಸೆರೆವಾಸ ಅನುಭವಸಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿನ ಆಶಯಗಳು ಇನ್ನೂ ನನಸಾಗಿಲ್ಲ. ಇಂದಿನ ರಾಜಕಾರಣದಲ್ಲಿ ಆದರ್ಶ, ಸ್ವಚ್ಛ ಪ್ರಾಮಾಣಿಕತೆಯ ಅನಿವಾರ್ಯವಿದೆ. ದೇಶದ ಕಟ್ಟ ಕಡೆಯ ಪ್ರಜೆಗೂ ಭೂಮಿ, ಆರೋಗ್ಯ, ಶಿಕ್ಷಣ, ಆಹಾರ ದೊರೆಯುವಂತಾಗಬೇಕು ಆಗ ನಿಜಕ್ಕೂ ಈ ದೇಶಕ್ಕೆ ಸ್ವಾತಂತ್ರ್ಯ ದೊರೆಯುತ್ತದೆ.

___________________________________________

ಕೆ.ಎಸ್.ಸಿದ್ದಲಿಂಗಪ್ಪ
ಕಸಾಪ ಜಿಲ್ಲಾಧ್ಯಕ್ಷ, ತುಮಕೂರು

ಎಲ್ಲರ ತ್ಯಾಗ ಬಲಿದಾನದಿಂದ ಸ್ವಾತಂತ್ರ್ಯ ಬಂದಿದೆ. ಜನಸಾಮಾನ್ಯರೂ ಕೂಡ ಹೋರಾಟಗಳನ್ನು ಮಾಡಿದ್ದು, ಬ್ರಿಟೀಷರನ್ನು ತೊಲಗಿಸುವಲ್ಲಿ ಅವರ ಪಾತ್ರವೂ ಮಹತ್ವ ಪಡೆದಿದೆ.  ಭಾರತ ಅನೇಕ ಆರ್ಥಿಕ ಯೋಜನೆಗಳೊಂದಿಗೆ ಬಲಿಷ್ಠವಾಗಿ ರೂಪುಗೊಂಡಿದೆ. ಆದರೆ, ಸ್ವರಾಜ್ಯವಾಗಿ ರೂಪುಗೊಂಡಿಲ್ಲ. ಯುವಜನರು ದೇಶ ಪ್ರೇಮ ಬೆಳಸಿಕೊಳ್ಳಬೇಕು ಹಾಗೂ ಸಂವಿಧಾನ, ಕಾನೂನಿನ ಮೇಲೆ ಗೌರವ ಬೆಳಸಿಕೊಂಡಾಗ ಸ್ವಾತಂತ್ರ್ಯ ಹೋರಾಟಗಾರರ ಕನಸು ನನಸಾಗುತ್ತದೆ.

___________________________________________

ಶಿವಾನಂದ್ ಎ.ಆರ್
ಪ್ರಾಂಶುಪಾಲರು
ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು, ಚಿ.ನಾ.ಹಳ್ಳಿ

ಭಾರತ ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದರೂ ಅಭಿವೃದ್ಧಿಯ ವಿಚಾರದಲ್ಲಿ ಹಿಂದುಳಿದಿದ್ದು ಮತ್ತಷ್ಟು ಪ್ರಗತಿ ಕಾಣಬೇಕಿದೆ. ಶಿಕ್ಷಣ ಕ್ರೀಡೆ ಕೈಗಾರಿಕೆ ಮುಂತಾದ ಕ್ಷೇತ್ರಗಳಲ್ಲಿ ರಚನಾತ್ಮಕ ಸುಧಾರಣೆಯ ಜೊತೆ ರಾಷ್ಟ್ರಾಭಿಮಾನ ಎಲ್ಲರಲ್ಲೂ ಗಟ್ಟಿಯಾಗಲಿ.
___________________________________________

ಎನ್.ಎಸ್.ಪಂಡಿತ್ ಜವಾಹರ್
ಜನ ಸಂಗ್ರಾಮ ಪರಿಷತ್

ಸ್ವಾತಂತ್ರ್ಯದ ಫಲವನ್ನು ದೇಶದ ಕಟ್ಟಕಡೆಯ ವ್ಯಕ್ತಿಯೂ ಅನುಭವಿಸುವಂತಾಗಬೇಕು ಹಾಗೂ ಜನತೆ ಸಮಾಜಿಕ, ಆರ್ಥಿಕತೆಯೊಂದಿಗೆ ದೇಶದ ದೃಢತೆ ಹೊಂದಿದಾಗ ಸ್ವಾತಂತ್ರ್ಯಕ್ಕೆ ಅರ್ಥ ಬರುತ್ತದೆ.

__________________________________________

ಕಾವ್ಯಶ್ರೀ ಬೆಟ್ಟದ ಬಯಲು
ಯುವ ಚಿಂತಕಿ

ಖಾದಿ ಭಾರತದ ನೇಕಾರ ಜೀವಿಗಳ ಜೀವಾಳ. ರಾಷ್ಟ್ರ ಧ್ವಜವೂ ಸ್ವದೇಶಿ ಬಟ್ಟೆಯಿಂದಲೇ ನೇಯಲ್ಪಟ್ಟರೆ ಅದಕ್ಕೆ ಗೌರವವೂ ಹೆಚ್ಚು. ಖಾದಿ ಧ್ವಜ ಸ್ವದೇಶಿಯನ್ನು ಎತ್ತಿಹಿಡಿಯುತ್ತದೆ. ನಾವು ಸ್ವದೇಶಿ ವಸ್ತುಗಳನ್ನು ಬಳಸುವ ಮೂಲಕ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸೋಣ.

__________________________________________

Comment here