Thursday, March 28, 2024
Google search engine
Homeಲೇಖನಗಣಪನ ಚತುರ್ಥಿ ; ಪರಿಸರದೊಂದಿಗೆ ಆಚರಿಸುವ ಸಂಕಲ್ಪ‌ ಮಾಡೋಣ

ಗಣಪನ ಚತುರ್ಥಿ ; ಪರಿಸರದೊಂದಿಗೆ ಆಚರಿಸುವ ಸಂಕಲ್ಪ‌ ಮಾಡೋಣ

Publicstory/prajayoga

ಲೇಖನ : ಮಂಜುನಾಥ್ ಅಮಲಗೊಂದಿ

ಭಾರತದ ಕೆಲವು ಆಚರಣೆಗಳಲ್ಲಿ ಗಣಪತಿ ಚತುರ್ಥಿಯು ಅತೀ ಮುಖ್ಯವಾದ ಆಚರಣೆಯಾಗಿದೆ. ಪರಿಸರ ಸ್ನೇಹಿ ಗಣೇಶ ಹಬ್ಬವನ್ನು ಸಂಭ್ರಮದಿಂದ, ಸಂತೋಷದಿಂದ ಆಚರಿಸುವುದಕ್ಕೆ ಯಾವುದೇ ಅಡ್ಡಿ ಆತಂಕಗಳಿಲ್ಲ. ಗಣೇಶ ಚತುರ್ಥಿಯ ಆರಂಭವು ಮರಾಠರು ತಮ್ಮ ಆಳ್ವಿಕೆಯ ಉತ್ತುಂಗದಲ್ಲಿದ್ದಾಗ ಪ್ರಚಾರಕ್ಕೆ ತಂದರು.

ಅದರಲ್ಲೂ ಮರಾಠರ ರಾಜ ಛತ್ರಪತಿ ಶಿವಾಜಿಯು ಈ ಹಬ್ಬವನ್ನು ಆಚರಿಸಲು ಪ್ರಾರಂಭಿಸಿದನೆಂದು ಇತಿಹಾಸ ಸಾರುತ್ತದೆ. ಗಣೇಶನ ಹಬ್ಬ ಆರಂಭಗೊಳ್ಳಲು ಹಲವಾರು ಕಥೆಗಳ ಹಿನ್ನೆಲೆಯಿದೆ. ಗಣೇಶನ ಹುಟ್ಟಿನ ಬಗ್ಗೆ ಅನೇಕ ಭಿನ್ನಾಭಿಪ್ರಾಯಗಳಿದ್ದರೂ ಈ ಗಣಪತಿ ಹಬ್ಬವು ಸ್ವಾತಂತ್ರ್ಯ ಸಂಗ್ರಾಮದಲ್ಲಿ ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದುಕೊಂಡಿತ್ತು.

         ಸ್ವಾತಂತ್ರ್ಯ ಪೂರ್ವದಲ್ಲಿ ಗಣೇಶನ ಹಬ್ಬವು ಕೇವಲ ಮನೆ ಮನೆಗಳಲ್ಲಿ ಕುಟುಂಬದ ಆಚರಣೆಯಾಗಿತ್ತು. ಭಕ್ತಿ ಮತ್ತು ಭಾವೈಕ್ಯತೆಯ ಹಿನ್ನೆಲೆಯಲ್ಲಿ 1892 ರಲ್ಲಿ ಮಹಾರಾಷ್ಟ್ರದ ಬಾವ್ ಸಾಹೇಬ್ ಲಕ್ಷ್ಮಣ್ ಜವೇಲ್ ರವರು ಪ್ರಥಮವಾಗಿ ಸಾರ್ವಜನಿಕ ಗಣೇಶೋತ್ಸವವನ್ನು ಆಚರಣೆ ಮಾಡಿದರು. ಆದರೆ  1893ರಲ್ಲಿ ಬಾಲಗಂಗಾಧರ ತಿಲಕರ ಮುಂದಾಳತ್ವದಲ್ಲಿ ಬ್ರಾಹ್ಮಣರು ಮತ್ತು ಬ್ರಾಹ್ಮಣೇತರರ ನಡುವಿನ ಅಂತರವನ್ನು ತುಂಬಲು, ಅವರ ನಡುವೆ ಕೆಳಹಂತದಲ್ಲಿ ಐಕ್ಯತೆಯನ್ನು ಮೂಡಿಸುವುದಕ್ಕೆ, ಸ್ವಾತಂತ್ರ ಸಂಗ್ರಾಮಕ್ಕಾಗಿ ಸಂಘಟನೆ ಮಾಡುವುದಕ್ಕೆ ಅದರ ಸ್ವರೂಪವನ್ನು ಬದಲಾಯಿಸಲಾಯಿತು.

          ಹೀಗೆ ನಡೆದು ಬಂದ ಗಣಪತಿ ಹಬ್ಬವು ಇಂದು ಅನೇಕ ಪರಿಸರಾತ್ಮಕ, ಆರ್ಥಿಕ, ಸಾಮಾಜಿಕ, ರಾಜಕೀಯ, ಸವಾಲುಗಳ ನಡುವೆ ಆಚರಣೆ ಮಾಡಲಾಗುತ್ತಿದೆ. ಮೊದಮೊದಲು ಗಣಪತಿ ಮೂರ್ತಿಯನ್ನು ಪರಿಸರಕ್ಕೆ ಪೂರಕವಾಗಿ ಯಾವುದೇ ರಾಸಾಯನಿಕಗಳಿಲ್ಲದ, ಮಾಲಿನ್ಯಕಾರಕವಲ್ಲದ ಮಾದರಿಯಲ್ಲಿ ತಯಾರಿಸಿ ಪೂಜಿಸುತ್ತಿದ್ದರು. ಇಂದು ಸಂಶೋಧನೆಗಳ, ರಾಸಾಯನಿಕ ಸೃಜನಶೀಲತೆಯ ಪರಿಣಾಮಗಳಿಂದಾಗಿ ವೈವಿಧ್ಯಮಯ ಬಣ್ಣಗಳಿಂದ, ಕಣ್ಣಿಗೆರಾಚುವ ಸೌಂದರ್ಯಗಳಿಂದ ನಿರ್ಮಿಸಿದ ಗಣಪತಿಯನ್ನು ಕೂರಿಸುವ ಮೂಲಕ ಹಬ್ಬದ ಸಂಭ್ರಮದಲ್ಲಿ ಬೀಗುತ್ತಿದ್ದೇವೆ. ಗ್ರಾಮೀಣ ಪ್ರದೇಶಗಳಿಗಿಂತ ನಗರ ಪ್ರದೇಶಗಳಲ್ಲಿ ಇದರ ತೀವ್ರತೆಯನ್ನು ಹೆಚ್ಚಾಗಿ ನಾವು ಕಾಣಬಹುದಾಗಿದೆ. ನಗರಗಳಲ್ಲಿ ಬೀದಿ ಬೀದಿಗೆ ಒಂದೊಂದು, ಪಕ್ಷ ಪಕ್ಷಗದುದೊಂದು, ಜಾತಿ ಜಾತಿಗೆ ಒಂದೊಂದು ಗಣಪತಿಯನ್ನು ಇಟ್ಟು ಸಂಭ್ರಮಿಸುತ್ತಿದ್ದೇವೆ. ಇದರ ಜೊತೆಗೆ ಕಿವಿ ನಿಂತುಹೋಗುವಂತೆ ಭಾಸವಾಗುವ  ಧ್ವನಿವರ್ಧಕಗಳ ಮತ್ತು ಪಟಾಕಿಗಳ ಅಬ್ಬರ, ವಿಸರ್ಜನಾ ಮಹೋತ್ಸವವನ್ನು ಮಾಡಲು ನೀರಿನ ನೆಲೆಗಳಿಗಾಗಿ ಪರದಾಟಗಳೇ ಗಣೇಶೋತ್ಸವದ ಪ್ರಕ್ರಿಯೆಗಳಾಗಿವೆ.

         ಗಣಪತಿ ಹಬ್ಬದ ಸಂದರ್ಭದಲ್ಲಿ ಭಕ್ತಾದಿಗಳು ತಮ್ಮ ಸಂತೋಷವನ್ನು ವ್ಯಕ್ತಪಡಿಸಲು ಹೇರಳವಾಗಿ ಬಾಣಬಿರುಸುಗಳನ್ನು ಮತ್ತು ಪಟಾಕಿಗಳನ್ನು ಉಪಯೋಗಿಸುತ್ತಾರೆ. ಇದು ವಾಯು ಮಾಲಿನ್ಯಕ್ಕೆ ನೇರ ಕಾರಣವಾಗಿದ್ದು, ವಾತಾವರಣಕ್ಕೆ ಬೇರಿಯಂ, ಕ್ಯಾಡ್ಮಿಯಂ, ಸೋಡಿಯಂ, ಪಾದರಸ ನೈಟ್ರೇಟ್ ಮತ್ತು ವಿಷಾನಿಲಗಳು ಸೇರುತ್ತವೆ.  ಈ ಸಮಯದಲ್ಲಿ  ಬಾಣಬಿರುಸುಗಳನ್ನು ಉಪಯೋಗಿಸುವುದರಿಂದ ವಾತಾವರಣಕ್ಕೆ ಸೇರಲ್ಪಡುವ ಚಿಕ್ಕ ಕಣಗಳ ಸಂಖ್ಯೆ ಹೆಚ್ಚಿ, ಉಸಿರಾಟಕ್ಕೆ ತೊಂದರೆಯಾಗುವ ವಿಷಾಂಶಗಳನ್ನೊಳಗೊಂಡ ಕಣಗಳ ಮಟ್ಟವು ಅಧಿಕಗೊಳ್ಳುತ್ತದೆ. ಪರಿಸರ ಸ್ನೇಹಿ ಅಲ್ಲದ ಗಣೇಶ ಹಬ್ಬದಿಂದ ವಾತಾವರಣದಲ್ಲಿ ಹಾನಿಕಾರಕ ಅನಿಲಗಳಾದ ಗಂಧಕದ ಡೈಆಕ್ಸೈಡ್, ಕಾರ್ಬನ್ ಮೋನೋಆಕ್ಸಡ್, ಇತ್ಯಾದಿಗಳ ಮಟ್ಟವನ್ನು ಹೆಚ್ಚಿಸುತ್ತದೆ.

        ಗಣೇಶ ಮೂರ್ತಿ ಮಾಡಲು ಪ್ಲಾಸ್ಟರ್ ಆಫ್ ಪ್ಯಾರಿಸ್ ಹಾಗೂ ವಿಷಕಾರಿ ರಾಸಾಯನಿಕ ಬಣ್ಣಗಳನ್ನು ಬಳಸುವಂತಿಲ್ಲ. ಆದರೂ ಇದಕ್ಕೆ ವಿರುದ್ಧವಾಗಿ  ಮೂರ್ತಿಗಳನ್ನು ಪ್ಲಾಸ್ಟರ್ ಆಫ್ ಪ್ಯಾರಿಸ್ನಲ್ಲಿ ತಯಾರಿಸಿ, ಹೊಳೆಯುವ ಬಟ್ಟೆ, ಕೃತಕ ಆಭರಣ ಮತ್ತು ಹಾನಿಕಾರಕ ರಾಸಾಯನಿಕ ಬಣ್ಣ ಬಳಿದು ಸಿಂಗರಿಸಲಾಗುತ್ತಿದೆ. ಕ್ಯಾಲ್ಸಿಯಂ ಸಲ್ಫೇಟ್ ಹೆಮಿಹೈಡ್ರೇಟ್ನಿಂದ ಮಾಡಲ್ಪಟ್ಟ ಪ್ಲಾಸ್ಟರ್ ಆಫ್ ಪ್ಯಾರಿಸ್  ಗಣೇಶ ಮೂರ್ತಿಗಳನ್ನು  ಕೆರೆಗಳಲ್ಲಿ, ನದಿಗಳಲ್ಲಿ ಮತ್ತು ಸಮುದ್ರದಲ್ಲಿ ವಿಸರ್ಜಿಸುವುದರಿಂದ ಜಲಚರಗಳಾದ ಮೀನುಗಳ ಸಂತತಿಗೆ ಮಾರಕವಾಗುತ್ತಿದೆ ಹಾಗೂ ಇದರಿಂದ ಉಂಟಾಗುತ್ತಿರುವ ಜಲಮಾಲಿನ್ಯವು ಹೆಚ್ಚಿನ ಆತಂಕಕಾರಿಯಾಗಿದೆ. ಏಕೆಂದರೆ ಪಿಒಪಿ (ಪ್ಲಾಸ್ಟರ್ ಆಫ್ ಪ್ಯಾರಿಸ್) ಯಿಂದ ಮಾಡಲ್ಪಟ್ಟ ಗಣೇಶ ಮೂರ್ತಿಗಳು ನೀರಿನಲ್ಲಿ ಸಂಪೂರ್ಣವಾಗಿ ಕರಗಲು ಅನೇಕ ತಿಂಗಳುಗಳನ್ನೆ ತೆಗೆದುಕೊಳ್ಳುತ್ತದೆ. ಇದು ನೀರಿನಲ್ಲಿರುವ ಆಮ್ಲಜನಕದ ಪ್ರಮಾಣವನ್ನು ತಗ್ಗಿಸಿ ಜಲಚರಗಳ ಸಾವಿಗೆ ಕಾರಣವಾಗುತ್ತದೆ. ಇದಲ್ಲದೆ ಗಣಪತಿ ಮೂರ್ತಿಯ ಅಲಂಕಾರಕ್ಕಾಗಿ ಉಪಯೋಗಿಸಿದ ಬಣ್ಣಗಳು ಹಾನಿಕಾರಕ ರಾಸಾಯನಿಕಗಳಾದ ಪಾದರಸ, ಲೆಡ್ಗಳನ್ನು ನೀರಿಗೆ ಸೇರಿಸುತ್ತವೆ. ಇದು ನೀರಿನಲ್ಲಿನ ಆಮ್ಲಿಯತೆ, ಕರಗಬಹುದಾದ ಘನ ವಸ್ತುಗಳು ಮತ್ತು ಭಾರವಾದ ಲೋಹಗಳನ್ನು ಹೆಚ್ಚಿಸುತ್ತದೆ. ಇದು ಜಲಚರ ಸಸ್ಯಗಳು ಮತ್ತು ಸಾಗರದ ಜೀವರಾಶಿಯನ್ನು ಕೊಂದು ನೀರಿನಲ್ಲಿನ ಜೈವಿಕ ವ್ಯವಸ್ಥೆಯನ್ನ ಹಾಳು ಮಾಡುತ್ತದೆ. ಗಣೇಶ ಮೂರ್ತಿಗಳ ಜೊತೆ ಜನರು ಥರ್ಮಕೊಲ್, ಪ್ಲಾಸ್ಟಿಕ್ ಇನ್ನಿತರ ವಸ್ತುಗಳನ್ನು ಎಸೆಯುವುದು ಜಲಮಾಲಿನ್ಯದ ಮಟ್ಟವನ್ನು ಹೆಚ್ಚಿಸುತ್ತದೆ. ಈ ಬಣ್ಣಗಳಲ್ಲಿರುವ ವಿಷಾಂಶಗಳು ನೀರಿನ ಅಡಿಯಲ್ಲಿ ಸೇರಿಕೊಂಡು, ಭೂಮಿಯ ಅಂತರ್ಜಲ ದೊಂದಿಗೆ ಬೆರೆಯುತ್ತದೆ. ಇದರಿಂದ ಕೆರೆಯ ಸುತ್ತಮುತ್ತಲಿನ ಅಂತರ್ಜಲವು  ವಿಷಯುಕ್ತವಾಗಿ, ಸಾರ್ವಜನಿಕ ಆರೋಗ್ಯಕ್ಕೆ ಧಕ್ಕೆ ಉಂಟು ಮಾಡುತ್ತದೆ.

          ಗಣೇಶ ಹಬ್ಬದ ಸಂದರ್ಭದಲ್ಲಿ ಭಕ್ತಾದಿಗಳು ದೊಡ್ಡ ಧ್ವನಿವರ್ಧಕಗಳ ಮೂಲಕ ಭಜನೆಗಳು, ಕೀರ್ತನೆಗಳು ಮತ್ತು ಹಾಡುಗಳು ಕೇಳುವುದನ್ನು ಹಾಗೂ ಆಕ್ರೇಸ್ಟ್ರಾಗಳನ್ನು ಮಾಡಿಸುವುದು ಪ್ರತಿಷ್ಠೆಯಾಗಿ ಪರಿಗಣಿಸಿದ್ದಾರೆ. ಮುಖ್ಯವಾಗಿ ಗಣೇಶ ಹಬ್ಬದ ಕೊನೆಯ ದಿನವಾದ ಅನಂತ ಚತುರ್ಧಶಿಯಂದು ನಾವು ರಸ್ತೆಗಳ ಮೇಲೆ ಸಾಲುಗಟ್ಟಿದ ವಾಹನ ದಟ್ಟಣೆಯನ್ನು ಕಾಣಬಹುದು ಮತ್ತು ಇದು ವಾಯು ಮಾಲಿನ್ಯ ಹಾಗೂ ಶಬ್ದ ಮಾಲಿನ್ಯವನ್ನು ಹೆಚ್ಚಿಸುತ್ತದೆ. ಈ ಎಲ್ಲವೂ ಮಾಲಿನ್ಯ ನಿಯಂತ್ರಣ ಮಂಡಳಿಯು ಹೇಳಿರುವಂತೆ, ಜೀವಿಗಳ ಆರೋಗ್ಯಕರ ಶಬ್ದ ಪರಿಮಾಣ ಮಟ್ಟದ ಪ್ರಮಾಣ ಬೆಳಗಿನ ಸಮಯದಲ್ಲಿ 55 ಡಿಸೀಬಲ್ ಮತ್ತು ರಾತ್ರಿ ಸಮಯದಲ್ಲಿ 45 ಡಿಸೀಬಲ್ ಇರಬೇಕಾಗಿರುತ್ತದೆ. ಆದರೆ ಹಬ್ಬದ ಸಂದರ್ಭದಲ್ಲಿ ಸರಾಸರಿ ಮಟ್ಟಕ್ಕಿಂತ ಅನೇಕ ಪಟ್ಟು ಕೆಲವು ಬಾರಿ 110  ಡಿಸೀಬಲ್ ಗಳವರೆಗೆ ಹೆಚ್ಚಿಸಿ ವಯೋವೃದ್ದರು ಹಾಗೂ ಮಕ್ಕಳ ಮೇಲೆ ನೇರ ಪರಿಣಾಮವನ್ನು ಉಂಟುಮಾಡುತ್ತಿದೆ.

           ಪ್ಲಾಸ್ಟರ್ ಆಫ್ ಪ್ಯಾರಿಸ್ ಮೂರ್ತಿಗಳ ಬದಲು ನೀರಿನಲ್ಲಿ ನೈಸರ್ಗಿಕವಾಗಿ ಕರಗುವ ಜೇಡಿಮಣ್ಣು ಮತ್ತು ಬಣ್ಣಗಳನ್ನು ಮಾತ್ರ ಉಪಯೋಗಿಸಿ ತಯಾರಿಸಬೇಕೆಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ(ಸಿಪಿಸಿಬಿ) ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಿದೆ. ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ, ವಿಷಕಾರಿ ರಾಸಾಯನಿಕ ಬಣ್ಣಗಳನ್ನು ಬಳಸುವಂತಿಲ್ಲ, ಹುಲ್ಲು ಮತ್ತು ಬಿದಿರುಕಡ್ಡಿಗಳಲ್ಲಿ ಗಣೇಶ ಮೂರ್ತಿಗಳನ್ನು ಮಾಡುವಂತಿಲ್ಲ. ಆದರೆ ವಾಸ್ತವದಲ್ಲಿ ಈ ಷರತ್ತುಗಳು ಸಂಪೂರ್ಣ ಪಾಲನೆಯಾಗದಿರುವುದು ತಮಗೆಲ್ಲರಿಗೂ ತಿಳಿದಿರುವ ವಿಷಯ. ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶಗಳ ನಿಷೇಧವಿದ್ದರೂ ಹಲವಾರು ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶಗಳನ್ನು ಬೇರೆ ಊರುಗಳಿಂದ ತಂದು ಇಲ್ಲಿ ಕೂರಿಸಿ ಕೆರೆ-ಕುಂಟೆ, ಹಳ್ಳ-ಕೊಳ್ಳಗಳಲ್ಲಿ ವಿಸರ್ಜಿಸಿ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿವೆ. ಹುಲ್ಲು ಮತ್ತು ಬಿದಿರುಕಡ್ಡಿಗಳಲ್ಲಿ ಗಣೇಶ ಮೂರ್ತಿಗಳನ್ನು ಮಾಡುವಂತಿಲ್ಲ ಎಂದು ಸರ್ಕಾರ ಸೂಚಿಸಿದ್ದರೂ ಪ್ರತಿವರ್ಷ ವಿಸರ್ಜಿಸುವ ಗಣೇಶ ಮೂರ್ತಿಗಳಲ್ಲಿ ಅವುಗಳದೇ ಸಿಂಹಪಾಲು ಇರುತ್ತವೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಸೂಚನೆ:-

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜಲ ಮಾಲಿನ್ಯ (ತಡೆ ಮತ್ತು ನಿಯಂತ್ರಣ) ಕಾಯ್ದೆ 1974ರ ಪ್ರಕಾರ ಕಲಂ 33(ಅ)ನಲ್ಲಿ ತಿಳಿಸಿರುವ ಪ್ರದತ್ತ ಅಧಿಕಾರವನ್ನು ಚಲಾಯಿಸಿ ರಾಜ್ಯದ ಕೆರೆಗಳಲ್ಲಿ ಹಾಗೂ ಇತರೆ ಯಾವುದೇ ಜಲ ಮೂಲಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ನಿಂದ/ಬಣ್ಣ ಲೇಪಿತವಾದಂತಹ ವಿಗ್ರಹಗಳನ್ನು ಇನ್ನು ಮುಂದೆ ರಾಜ್ಯದ ಯಾವುದೇ ಜಲಗಳಲ್ಲಿ, ನದಿ, ಕಾಲುವೆ/ ಬಾವಿಗಳಲ್ಲಿ ವಿಸರ್ಜಿಸುವುದನ್ನು ನಿಷೇಧಿಸಲಾಗಿದೆ. ಈ ಆದೇಶವನ್ನು ಉಲ್ಲಂಘಿಸಿದ್ದಲ್ಲಿ ಜಲ ಮಾಲಿನ್ಯ ತಡೆ ಮತ್ತು ನಿಯಂತ್ರಣ ಕಾಯ್ದೆ1974ರ ಕಲಂ 45-1ಅನ್ವಯ ದಂಡವನ್ನು (ರೂ. 10,000/- ವರೆಗೆ) ಮತ್ತು ಜೈಲುವಾಸವನ್ನು ವಿಧಿಸುವ ಅವಕಾಶವಿರುತ್ತದೆ. ಅಲ್ಲದೆ ಪ್ರಸ್ತುತ ವರ್ಷಗಳಲ್ಲಿ ಕಡ್ಡಾಯವಾಗಿ ಗಣೇಶ ಮೂರ್ತಿಗಳು 5 ಅಡಿ ಎತ್ತರವನ್ನು ಮೀರಬಾರದೆಂದು ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ಬಂಧ ವಿಧಿಸಿದೆ.

         ಮಾಲಿನ್ಯ ನಿಯಂತ್ರಣ ಕಠಿಣ ಕಾನೂನು ಜಾರಿಯಲ್ಲಿದ್ದರೂ, ಅವುಗಳ ಉಲ್ಲಂಘನೆ ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಲ್ಲಿ ವೈಫಲ್ಯತೆ ಆಗಾಗ ಕಾಣುತ್ತದೆ. ಎಲ್ಲೆಂದರಲ್ಲಿ ದೊಡ್ಡದೊಡ್ಡ ಗಣೇಶಗಳನ್ನು ಕೂಡಿಸುವುದು, ಪ್ಲಾಸ್ಟಿಕ್ ಬ್ಯಾನರ್ಗಳನ್ನು ವಿಪರೀತವಾಗಿ ಬಳಸುವುದು, ಕಿವಿಗಡಚಿಕ್ಕುವ ಧ್ವನಿವರ್ಧಕಗಳ ಬಳಕೆ, ಪಟಾಕಿಗಳ ಬಳಕೆ, ವಿಷಕಾರಿ ಬಣ್ಣಗಳನ್ನು ಬಳಸಿ ಮಾಡಿದ ಗಣೇಶ, ಬಿದಿರು ಹುಲ್ಲಿನ ಗಣೇಶ ಹಾಗೂ ಪಿಒಪಿ ಗಣೇಶಗಳ ಮಾರಾಟ ನಡೆಯುತ್ತಲೇ ಇರುತ್ತದೆ. ಆದರೂ ಗಣೇಶ ಹಬ್ಬವನ್ನು ಆಚರಿಸುವಾಗ, ಪ್ರಕೃತಿ ಮತ್ತು ಪರಿಸರದ ಸೌಹಾರ್ಧತೆಯನ್ನು ಕಾಪಾಡಲು ಪ್ರತಿಯೊಬ್ಬರು ನೈತಿಕವಾಗಿ, ಪರಿಸರ ಸಂರಕ್ಷಣೆಯ ವೈಯಕ್ತಿಕ-ಸಾಮುದಾಯಿಕ ಜವಬ್ದಾರಿಯಿಂದ ಕೆಳಗಿನ ಕೆಲವು ಜವಬ್ದಾರಿಗಳನ್ನು ಪಾಲಿಸಬೇಕಾಗಿದೆ. 

         ಗಣೇಶ ಮೂರ್ತಿಗಳನ್ನು ನೀರಿನಲ್ಲಿ ಕರಗುವ ಜೇಡಿಮಣ್ಣು ಮತ್ತು ನೈಸರ್ಗಿಕವಾಗಿ ನೀರಿನಲ್ಲಿ ಕರಗುವ ಬಣ್ಣಗಳನ್ನು ಮಾತ್ರ ಉಪಯೋಗಿಸಿ ತಯಾರಿಸಬೇಕಾಗಿದೆ. ರಾಸಾಯನಿಕ ಬಣ್ಣ ಬಳಿದ ಗಣೇಶ ವಿಗ್ರಹವನ್ನು ಬಳಸದಿರುವುದು, ಬೇರೆಯವರು ಬಳಸದಂತೆ ಅವರ ಮನಸ್ಸುಗಳನ್ನು ಬದಲಾಯಿಸಬಹುದಾಗಿದೆ. ಪ್ರತಿಯೊಬ್ಬರೂ ಗಣೇಶ ವಿಗ್ರಹವನ್ನು ತಮ್ಮ ಮನೆಯಲ್ಲೇ ಇಡುವುದಾದರೆ ಇತ್ತೀಚೆಗೆ ಪರಿಚಿತವಾದ ಬೀಜದುಂಡೆಯನ್ನೊಳಗೊಂಡ ಗಣೇಶನನ್ನು ಇಟ್ಟು ಬಕೇಟ್ನಂತಹ ವಸ್ತುಗಳಲ್ಲಿ ನೀರನ್ನು ತುಂಬಿ ಅದರಲ್ಲಿ ವಿಸರ್ಜಿಸಬಹುದಾಗಿದೆ.  ಬಣ್ಣ ಬಳಿದ ದೊಡ್ಡ ಗಣೇಶ ವಿಗ್ರಹವನ್ನು ಕೆರೆಗಳಲ್ಲಿ ವಿಸರ್ಜಿಸುವುದನ್ನು ನಿಯಂತ್ರಿಸಬೇಕು. ಕೆರೆಯಲ್ಲೇ ವಿಗ್ರಹವನ್ನು ವಿಸರ್ಜಿಸುವುದು  ಅನಿವಾರ್ಯವಾದಾಗ, ವಿಗ್ರಹದ ಅಲಂಕಾರಿಕ ವಸ್ತುಗಳು ಮತ್ತು ಹೂವು ಇತ್ಯಾದಿಗಳನ್ನು ತೆಗೆದು, ಕೆರೆಯ ದಡಗಳಲ್ಲಿ ಹಾಕಿಬೇಕಾಗಿದೆ. ಇಲ್ಲದಿದ್ದರೆ ಈ ವಸ್ತುಗಳು ಕೆರೆಯನ್ನು ಮಾಲಿನ್ಯಗೊಳಿಸುವುದಲ್ಲದೇ, ನೀರಿನಲ್ಲಿ ತೇಲುವ ಮೂಲಕ ಕೆರೆಯ ಸೌಂದರ್ಯವನ್ನು ಹಾಳು ಮಾಡುತ್ತವೆ  ಹಾಗೂ ಜಲಚರಗಳ ಪ್ರಾಣಕ್ಕೆ ಸಂಚಕಾರವನ್ನುಂಟು ಮಾಡಿದಂತಾಗುತ್ತದೆ. ಗಣೇಶೋತ್ಸವದಲ್ಲಿ ಧ್ವನಿ ವರ್ಧಕಗಳ ಬಳಕೆಯನ್ನು ಕಡಿಮೆ ಮಾಡಬಹುದು ಅಥವಾ ಬೇರಿಯವರಿಗೆ ತೊಂದರೆಯಾಗದಂತೆ ನಿಯಮಿತವಾಗಿ ನಿರ್ವಹಣೆ ಮಾಡಬಹುದು. ದೊಡ್ಡ ಗಣೇಶ ವಿಗ್ರಹವನ್ನು ಹಾಗೇ ಉಳಿಸಿಕೊಂಡು ಸಣ್ಣ ವಿಗ್ರಹವನ್ನು ಅದರ ಪ್ರತಿನಿಧಿಯಾಗಿ ವಿಸರ್ಜಿಸಬಹುದು. ಇದರಿಂದ ದೊಡ್ಡ ವಿಗ್ರಹವನ್ನು ಹಲವು ವರ್ಷಗಳ ಕಾಲ ಬಳಸಬಹುದು. ಪರಿಸರಕ್ಕೆ ಪೂರಕವಾಗಿರುವಂತೆ ಗಣೇಶ ಹಬ್ಬವನ್ನು ಸಂಭ್ರಮದಿಂದ ಮಾಡಲು ಮೇಲಿನ ಸಲಹೆಗಳನ್ನು ಪಾಲಿಸಬಹುದು ಮತ್ತು ನಮ್ಮ ಪ್ರಾಕೃತಿಕ ಸಂಪನ್ಮೂಲಗಳನ್ನು ರಕ್ಷಿಸಲು ನಿಮ್ಮ ಕೊಡುಗೆಯನ್ನು ನೀಡಬಹುದಾಗಿದೆ. ನೈಸರ್ಗಿಕ ಸಂಪನ್ಮೂಲಗಳು ದೇವರು ನಮಗೆ ನೀಡಿರುವ ಕೊಡುಗೆ. ಅದನ್ನು ಮುಂದಿನ ಜನಾಂಗಕ್ಕೆ ಉಳಿಸುವುದು ನಮ್ಮ ನಿಮ್ಮೆಲ್ಲರ ಜವಬ್ದಾರಿಯಾಗಿದೆ. ಆದ್ದರಿಂದ ಪರಿಸರ ಸ್ನೇಹಿ ಗಣಪತಿ ಹಬ್ಬವನ್ನು ಮಾಡೋಣ, ಸಂಭ್ರಮಿಸೋಣ, ಒಮ್ಮೆ ನೀವೇ ಆಲೋಚಿಸಿ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?