ತುಮಕೂರ್ ಲೈವ್

ಅಕ್ರಮ‌ ಮದ್ಯ ಮಾರಾಟ: ವಿದ್ಯಾರ್ಥಿಗಳ ರೋಷಾಗ್ನಿಗೆ ಬೆದರಿದ ಗ್ರಾಮ ಪಂಚಾಯ್ತಿ

ಲಕ್ಷ್ಮೀಕಾಂತರಾಜು ಎಂ.ಜಿ.


ಗುಬ್ಬಿ ತಾಲ್ಲೂಕು ಮಂಚಲದೊರೆ ಗ್ರಾಮ ಗ್ರಪಂಚಾಯತಿಯ ಕೇಂದ್ರ ಸ್ಥಾನ. ಊರು‌ ಹಾಗೂ ವ್ಯಾಪ್ತಿ‌ ದೊಡ್ಡದಿದ್ದರೂ ಇಲ್ಲಿ ಅಧಿಕೃತ ವೈನ್ ಶಾಪ್ ಇಲ್ಲ. ಹಾಗಂತ,ಇಲ್ಲಿ ಎಣ್ಣೆಗೆ ಬರವಿಲ್ಲ. ಅನಧಿಕೃತವಾಗಿ ಮಂಚಲದೊರೆ ಗ್ರಾಮವೊಂದರಲ್ಲೇ ಎಳೆಂಟು ಮಂದಿ ಮದ್ಯ ಮಾರಾಟಗಾರರು ಇದ್ದು ಸಮಯದ ಮಿತಿ ಇಲ್ಲದೇ ಮದ್ಯ ಜನರ ಕೈಗೆ ಸಿಗುತ್ತದೆ.

ಹೌದು. ಮಂಚಲದೊರೆ ಗ್ರಾಪಂ ವ್ಯಾಪ್ತಿಯ ಮಂಚಲದೊರೆ,ಜೋಗಿಹಳ್ಳಿ,ಕುಂಟರಾಮನಹಳ್ಳಿಗಳಲ್ಲಿ ಅಕ್ರಮ‌ ಮದ್ಯ ಮಾರಾಟಗಾರರು ಇರುವ ಕಾರಣ ಇಲ್ಲಿ ಎಗ್ಗಿಲ್ಲದೇ ಈ ದಂದೆ ನಡೆಯುತ್ತಿದೆ.

ಪ್ರತಿಭಟನೆ ನಡೆಸುತ್ತಿರುವ ಗ್ರಾಮಸ್ಥರು

ಪಟ್ಟಣ ಹಾಗೂ ನಗರಗಳಲ್ಲಿ ಇರುವ ಅಧಿಕೃತ ಮದ್ಯದ ಅಂಗಡಿಗಳಲ್ಲಿ ಮದ್ಯ ಖರೀದಿಸಲು ನಿರ್ದಿಷ್ಟ ಸಮಯವಿದೆ. ಆದರೆ, ಈ ಗ್ರಾಮಾಂತರ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟಗಾರರು ದಿನದ ಇಪ್ಪತ್ನಾಲ್ಕು ಗಂಟೆಗಳಲ್ಲಿಯೂ ಕುಡಿಯುವ ಮಂದಿಗೆ ಎಣ್ಣೆ ಸಿಗುವಂತೆ ಮಾಡುವದರಿಂದ ಕುಡುಕರಿಗೆ ವರದಾನವಾಗಿ ಎಲ್ಲ‌ ಸಮಯದಲ್ಲೂ ಪಾನ ಮತ್ತರಾಗಿರುವುದು ಈ ಭಾಗದಲ್ಲಿ ಕಂಡುಬರುತ್ತಿದೆ ಎಂದು ಮಂಚಲದೊರೆ ಗ್ರಾಮಸ್ಥರು ಆರೋಪಿಸುತ್ತಾರೆ.

ಈ ಅಕ್ರಮ ಮದ್ಯ ಮಾರಾಟದ ಮಿತಿ ಮೀರಿದ ಪರಿಣಾಮ‌ ಇಂದು ಮಂಚಲದೊರೆ ಗ್ರಾಮ‌ಪಂಚಾಯತಿ ಕಚೇರಿಗೆ ಮುತ್ತಿಗೆ ಹಾಕಿದ ಶಾಲಾ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರುಗಳು ಇನ್ನು ಮುಂದೆ ಅಕ್ರಮ ಮದ್ಯ ಮಾರಾಟ ಮಾಡುವಂತಿಲ್ಲ. ಆ ರೀತಿ ಕಟ್ಟುನಿಟ್ಟಿನ‌ ಕ್ರಮ ವಹಿಸಬೇಕು ಎಂದು ಪ್ರತಿಭಟನಾ‌ ಸ್ಥಳಕ್ಕೆ ಬೇಟಿ ನೀಡಿದ ಆರಕ್ಷಕ‌ ಹಾಗೂ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಒತ್ತಡ ಹೇರಿದರು.

ಅಕ್ರಮ ಮದ್ಯ ಮಾರಾಟದ ಬಗ್ಗೆ ಗ್ರಾ.ಪಂ ಬರೆದ ಪತ್ರ

ಮನವಿ ಸ್ವೀಕರಿಸಿದ ಅಧಿಕಾರಿಗಳು ಇನ್ನು ಮುಂದೆ ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮವಹಿಸಲಾಗುವದೆಂಬ ಭರವಸೆಯ ಮೇರೆ ಪ್ರತಿಭಟನಾ ನಿರತರು ಧರಣಿಯನ್ನ ಹಿಂತೆಗೆದರು.

ಮಂಚಲದೊರೆ ಹಾಗೂ ಈ ವ್ಯಾಪ್ತಿಯ ಗ್ರಾಮಗಳಲ್ಲಿ ಅಕ್ರಮ‌ ಮದ್ಯ ಮಾರಾಟದಿಂದ ಜನರು ಕುಡಿತವನ್ನ ಹೆಚ್ಚಿಸಿ ತಮ್ಮ‌ ಸಂಪಾದನೆಯನ್ನೆಲ್ಲಾ ಕುಡಿತಕ್ಕೆ ಸುರಿಯತ್ತಿದ್ದಾರೆಂದು ಇಲ್ಲಿನ ಗ್ರಾಮಸ್ಥರುಗಳು ಆರೋಪಿಸುತ್ತಿದ್ದಾರೆ.

ಈ ಪ್ರತಿಭಟನೆ ಹಾಗೂ ಇಲ್ಲಿನ ಅಕ್ರಮ ಮದ್ಯದ ವಿಚಾರವನ್ನ ಅರಿತು ಸಂಬಂಧಿಸಿದ ಅಧಿಕಾರಿಗಳು ಕ್ರಮಕೈಗೊಳ್ಖುತ್ತಾರಾ ಕಾದು ನೋಡಬೇಕು.


ಪ್ರತಿಭಟನೆಯ ಸುದ್ದಿ ತಿಳಿದು ಸ್ಥಳಕ್ಕೆ‌ ಬೇಟಿ ನೀಡಿ ಮನವಿ ಆಲಿಸಿದ್ದು, ವಿಷಯವನ್ನ ಮೇಲಧಿಕಾರಿಗಳಿಗೆ ಮುಟ್ಟಿಸಿದ್ದು ನಮ್ಮ ಅಧಿಕಾರಿಗಳ ಮಾರ್ಗದರ್ಶನದಂತೆ ಕ್ರಮ ವಹಿಸಲಾಗುವುದು

ಶಂಕರೇಶ್,ಎಎಸ್ ಐ, ಚೇಳೂರು ಠಾಣೆ


ಪ್ರತಿಭಟನಾ ಸ್ಥಳಕ್ಕೆ ಬೇಟಿ ನೀಡಿದ್ದು ಪ್ರತಿಭಟನಾ‌ನಿರತರಿಂದ ಮಾಹಿತಿ ಪಡೆದಿದ್ದು ಅಕ್ರಮ‌‌ ಮದ್ಯ ಮಾರಾಟಗಾರರು ಕಂಡುಬಂದರೆ ಕಠಿಣ ಕ್ರಮ ವಹಿಸಲಾಗುವುದು

ಲೋಕೇಶ್. ಅಬಕಾರಿ ನಿರೀಕ್ಷಕರು,ಗುಬ್ಬಿ


ಮಂಚಲದೊರೆ ಗ್ರಾಮ ಮತ್ತು ವ್ಯಾಪ್ತಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವರನ್ನ ಗ್ರಾಮಸ್ಥರು ಆರೋಪಿಸಿರವರಿಗೆ ಇಂದು ನೋಟೀಸ್ ನೀಡಿ ಸಂಬಂಧಿತ ಅಧಿಕಾರಿಗಳಿಗೂ ಸದರಿ ಪ್ರತಿಯನ್ನ ಕಳುಹಿಸಿದ್ದೇನೆ

ರಾಜೇಂದ್ರಪ್ರಸಾದ್ ಪಿಡಿಓ
ಮಂಚಲದೊರೆ ಗ್ರಾಪಂ

Comment here