Sunday, November 10, 2024
Google search engine

ಅದು ‘ಬರಗೂರು’

ಜಿ ಎನ್ ಮೋಹನ್‌


ನಾನು, ಬರಗೂರು ಅವರ ಜೊತೆ ಸಾಕಷ್ಟು ಮಾತನಾಡಿದ್ದೇನೆ, ಮತ್ತೆ ಮತ್ತೆ ಮಾತನಾಡಿದ್ದೇನೆ.

ಆದರೆ ಯಾಕೋ ಗೊತ್ತಿಲ್ಲ ಅವರು ನನ್ನೊಂದಿಗೆ ಹಂಚಿಕೊಂಡ ಈ ಒಂದು ಸಂಗತಿ ನನ್ನ ಮನದಲ್ಲಿ ಒಂದು ಅಚ್ಚರಿಯಾಗಿ ಉಳಿದುಬಿಟ್ಟಿದೆ.

ಒಮ್ಮೆ ಬರಗೂರು ರಾಮಚಂದ್ರಪ್ಪನವರು ತಮ್ಮ ಮಗನನ್ನು ಕರೆದುಕೊಂಡು ಊರಿಗೆ ಹೋದರು. ಮಗ ಊರಿಗೆ ಭೇಟಿ ಕೊಡುತ್ತಿದ್ದುದು ಅದೇ ಮೊದಲ ಬಾರಿ. ಬಸ್ಸಿನಿಂದ ಇಳಿದ ತಕ್ಷಣವೇ ಅವನಿಗೆ ದೊಡ್ಡದಾಗಿ ಊರಿನ ಫಲಕ ಕಾಣಿಸಿತು. ಬೆಕ್ಕಸ ಬೆರಗಾದವನೇ ‘ಅಪ್ಪಾ ನೋಡು ನಿನ್ನ ಹೆಸರನ್ನೇ ಊರಿಗೆ ಇಟ್ಟಿದ್ದಾರೆ’ ಎಂದು ಉದ್ಘರಿಸಿದ.

ಎಷ್ಟು ಚಂದ! ಒಂದು ಮಗುವಿಗೆ ಅಪ್ಪ ಊರಿನ ಹೆಸರನ್ನು ತಮ್ಮ ಹೆಸರಿನ ಜೊತೆಗೆ ಜೋಡಿಸಿಕೊಂಡಿದ್ದಾರೆ ಎನ್ನುವುದು ಗೊತ್ತಿಲ್ಲದೇ ಬೆಕ್ಕಸಬೆರಗಾಗಿದೆ. ಅಪ್ಪನ ಹೆಸರನ್ನೇ ಊರಿಗೆ ಇಟ್ಟಿದ್ದಾರೆ ಎಂದುಕೊಳ್ಳುವ ಮಗು ಮನಸ್ಸು ನನ್ನನ್ನು ಅಂದಿಗೂ ಇಂದಿಗೂ ಕಾಡುತ್ತಲೇ ಇದೆ.

ಯಾರಿಗಾದರೂ ‘ರಾಮಚಂದ್ರಪ್ಪ’ ಎಂದು ಹೇಳಿ ನೋಡಿ ಬಿಲ್ ಕುಲ್ ಗೊತ್ತಾಗುವುದಿಲ್ಲ. ಆದರೆ ರಾಮಚಂದ್ರಪ್ಪ ಎನ್ನುವ ಹೆಸರನ್ನೇ ಬಳಸದೆ ‘ಬರಗೂರು’ ಎಂದು ನೋಡಿ ಖಂಡಿತಾ ಬರಗೂರು ರಾಮಚಂದ್ರಪ್ಪನವರು ಕಣ್ಣೆದುರು ಬಂದೇ ಬರುತ್ತಾರೆ.

ವ್ಯಕ್ತಿಯಿಂದಾಗಿ ಊರಿಗೂ ರೆಕ್ಕೆ ಸಿಕ್ಕ ಉದಾಹರಣೆಗಳು ತುಂಬಾ ಕಡಿಮೆ. ಅಂತಹದ್ದರಲ್ಲಿ ಬರಗೂರೂ ಒಂದು. ಅದನ್ನೇ ಬಹುಷಃ ಆ ಮಗು ಮಾತಾಡಿ ತೋರಿಸಿತ್ತು.

ಬರಗೂರು ನಾನೂ ಅನೇಕ ಬಾರಿ ಅನೇಕ ಕಾರಣಗಳಿಗೆ ಅನೇಕ ಸಂಗತಿಗಳನ್ನು ಹಂಚಿಕೊಂಡಿದ್ದೇವೆ.

ಅವರ ಊರಲ್ಲಿ ‘ಬರಗೂರು’ ಎಂದು ಕರೆದರೂ ಯಾರಿಗೂ ಗೊತ್ತಾಗುವುದಿಲ್ಲ, ‘ರಾಮಚಂದ್ರಪ್ಪ’ ಎಂದು ಕರೆದರೂ ಯಾರಿಗೂ ಗೊತ್ತಾಗುವುದಿಲ್ಲ

ಯಾಕೆಂದರೆ ಇವರು ಇಡೀ ಊರಿಗೆ ‘ಚಂದ್ರಣ್ಣ’ ಮಾತ್ರ.

‘ನಮ್ಮ ಈ ನಾಡಿನಲ್ಲಿ, ಭವ್ಯ ನಾಮ ಬೀಡಿನಲ್ಲಿ, ಬೇಗೆಯೇ ಬೆಟ್ಟವಾಗಿ ಉತ್ತರಕ್ಕೆ ಕಾವಲು’ ಎನ್ನುವ, ಜನರ ನಾಲಿಗೆಯಲ್ಲಿ ಸದಾ ಇರುವ ಹಾಡನ್ನು ಬರೆದವರು ಬರಗೂರು.

ಇಂತಹ ನಾಡು ಬಣ್ಣಿಸಿದ ಬರಗೂರರಿಗೆ ಸದಾ ಕಾಡುತ್ತಿದ್ದ ಸಂಗತಿ ಎಂದರೆ ಶಾಲೆಯಲ್ಲಿ ಮೇಷ್ಟ್ರು ಬಣ್ಣಿಸುತ್ತಿದ್ದ ಶ್ರೀಗಂಧದ ನಾಡು ಎಂದರೆ ಏನು ಎನ್ನುವುದು. ‘ಹಾಗೆ ಹೇಳುತ್ತಿದ್ದ ಮೇಷ್ಟರಾಗಲೀ, ಕೇಳುತ್ತಿದ್ದ ನಾವಾಗಲಿ ಶ್ರೀಗಂಧವನ್ನು ನೋಡಿಯೇ ಇರಲಿಲ್ಲ. ಇನ್ನು ಕುವೆಂಪು ಅವರ ಮಲೆನಾಡು, ಕಾರಂತರ ಕಡಲು, ಬೇಂದ್ರೆಯವರ ಸಾಧನಕೇರಿ, ಕೆ ಎಸ್ ನ ಅವರ ಮೈಸೂರು ಮಲ್ಲಿಗೆ ಮಾತು ಬಿಡಿ..’

ಬರಗೂರು ಟೈಲರ್ ಆಗಿದ್ದರು ಎನ್ನುವ ವಿಷಯ ಸುಮಾರು ಜನರಿಗೆ ಗೊತ್ತಿಲ್ಲ. ಬದುಕಿನ ನೇಯ್ಗೆಯ ಬಗ್ಗೆ ಅತ್ಯಂತ ಸ್ಪಷ್ಟವಾಗಿ ಮಾತನಾಡುವ ಬರಗೂರರಿಗೆ ಸಮಾಜದ ಒಳಗಿನ ಈ ಸೂಕ್ಷ್ಮ ನೇಯ್ಗೆಗಳು ಚೆನ್ನಾಗಿ ಗೊತ್ತು.

ಕೋಮುಗಳ ನಡುವಿನ ಸೌಹಾರ್ದದ ಬಗ್ಗೆ ಬರಗೂರು ಅವರದ್ದು ಖಡಕ್ ನಿಲುವು. ಈ ಬಗ್ಗೆ ಅವರ ಮಾತುಗಳನ್ನು ಅಂದಿನಿಂದ ಇಂದಿನವರೆಗೂ ಕೇಳಿದ್ದೇನೆ

ಸಮಾಜದ ನೇಯ್ಗೆಯೊಳಗೆ ಎಲ್ಲ ಧರ್ಮಗಳೂ ಇರಬೇಕು ಎನ್ನುವ ಅವರ ಖಡಕ್ ನಿಲುವಿಗೆ ಕಾರಣವಾಗಿರಬಹುದಾದ ಒಂದು ಅಂಶ ನನಗೆ ಇತ್ತೀಚೆಗೆ ಗೊತ್ತಾಯಿತು.

ಬರಗೂರು ಸೈಕಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಪಂಚರ್ ಹಾಕುವ ಕೆಲಸ. ಈ ಮಧ್ಯೆ ಹಜರತ್ ಸಾಹೇಬರ ಒಡನಾಟ. ಅಲ್ಲಿಯೇ ಅವರ ಮನದೊಳಗೆ ಸಾಮರಸ್ಯದ ಮೊದಲ ಬೀಜ ಬಿತ್ತಿಹೋಗಿದ್ದು.

ಬರಗೂರರಿಗೆ ಯುಗಾದಿ ಹಬ್ಬದ ಜೊತೆಗೆ ರಂಜಾನ್ ಸಹಾ ಬದುಕಿನ ಭಾಗವಾಗಿದ್ದು ಅಲ್ಲಿಯೇ.

ಎ ಆರ್ ಕೃಷ್ಣಶಾಸ್ತ್ರಿಗಳ ‘ವಚನ ಭಾರತ’ವನ್ನು ಇಡೀ ಬೀದಿಗೆ ಕೇಳುವಂತೆ ಓದುತ್ತಿದ್ದ, ಬನಿಯನ್ ಮೇಲೆ ಅಕಸ್ಮಾತ್ ಆಗಿ ಇಂಕ್ ಚೆಲ್ಲಿದಾಗ ತಾನು ಚೋಟುದ್ದ ಇರುವಾಗಲೇ ಪೆನ್ ಗೆ ಭಡ್ತಿ ಹೊಂದಿದ್ದೇನೆ ಎಂದು ಗೊತ್ತಾಗಲಿ ಎಂದು ಅದನ್ನು ವಾರವಾದರೂ ಒಗೆಯದೇ ಹಾಕಿಕೊಂಡು ಊರ ತುಂಬಾ ತಿರುಗಿದ ಬರಗೂರರ ಕಣ್ಣ ಮುಂದೆ ಒಂದು ದೊಡ್ಡ ಆಸೆ ಇತ್ತು.

‘ಏನು ಸಾರ್ ಅದು’ ಎಂದು ಕೇಳಿದೆ.
‘ನನಗೆ ಬಸ್ ಚಾಲಕನಾಗಬೇಕು ಎನ್ನುವ ದೊಡ್ಡ ಆಸೆ ಇತ್ತು’ ಎಂದರು.

‘ನಿಮ್ಮ ಆಸೆ ಪೂರೈಸಿದೆಯಲ್ಲಾ ಸಾರ್’ ಎಂದೆ.
ಅವರು ಅಚ್ಚರಿಯಿಂದ ನನ್ನ ಮುಖ ನೋಡಿದರು.
‘ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿಯ ಚಾಲಕ ಶಕ್ತಿ ನೀವು’ ಎಂದೆ.

ಬರಗೂರರ ಮುಖದಲ್ಲಿ ಸದಾ ಇರುವ ಮುಗುಳ್ನಗು ಸ್ವಲ್ಪ ಹೆಚ್ಚಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?