ಚಿಕ್ಕನಾಯಕನಹಳ್ಳಿ: ಕ್ಷೇತ್ರದ ಶಾಸಕರು ಆಗಿರುವ ಜಿಲ್ಲಾ ಉಸ್ತುವಾರಿ ಸಚಿವರಾದ ಮಾಧುಸ್ವಾಮಿ, ಕೊರೊನಾದಿಂದ ಹೆದರಿ ಎಲ್ಲರೂ ಮನೆಯಲ್ಲಿರುವಾಗಲೂ ಜಿಲ್ಲೆಯ ಎಲ್ಲೆಡೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿ ಸೋಂಕು ತಡೆಯಲು ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ ಅವರದೇ ಕ್ಷೇತ್ರದ ಅಧಿಕಾರಿಗಳಿಗೆ ಜಾಗೃತಿ ಆದಂತೆ ಕಾಣುತ್ತಿಲ್ಲ.
ಪಟ್ಟಣದ ತಾಲ್ಲೂಕು ಆಫೀಸಿನ ಪಹಣಿ ಕೇಂದ್ರದ ದೃಶ್ಯವನ್ನು ಚಿತ್ರದಲ್ಲಿ ಕಾಣಬಹುದು.
ಕೋವಿಡ್ – 19 ರೋಗ ಹಬ್ಬುತ್ತಿರುವ ಸಮಯದಲ್ಲಿ ಎಲ್ಲವನ್ನೂ ಹೇಳಬೇಕಾದ ತಹಸೀಲ್ದಾರ್ ಅವರು ಇರುವ ಆಫೀಸಿನಲ್ಲಿ ಸಾಮಾಜಿಕ ಅಂತರವನ್ನು ಪಾಲಿಸುತ್ತಿಲ್ಲ.
ಪಹಣಿ ಪಡೆಯಲು ಜನರು ಗುಂಪು ಗುಂಪು ಗೂಡುತ್ತಿದ್ದಾರೆ. ಇಡೀ ತಾಲ್ಲೂಕಿಗೆ ಮಾದರಿಯಾಗಬೇಕಾದ ಜಾಗ ಇದು. ಆದರೆ ಹೇಳುವವರು, ಕೇಳುವವರು ಯಾರು ಇಲ್ಲದಾಗಿದೆ.
ತಾಲ್ಲೂಕಿಗೆ ಈಗಾಗಲೇ ಸೋಂಕು ಹರಡಿದೆ. ಎಲ್ಲಡೆ ಸಾಮಾಜಿಕ ಅಂತರ ಕಾಪಾಡಲು ಅಧಿಕಾರಿಗಳು ಮುಂದಾಗಬೇಕು ಎಂಬ ಒತ್ತಾಯ ಜನರಿಂದಲೂ ಕೇಳಿ ಬರುತ್ತಿದೆ.
ನನಗೆ ಸಾಮಾಜಿಕ ಅಂತರ ಕಾಪಾಡಲು ಇಷ್ಟ. ಆದರೆ ಹಾಗೆ ನಿಂತರೆ ಬೇರೆಯವರು ನನ್ನ ಮುಂದೆ ಬರುತ್ತಾರೆ. ಅನಿವಾರ್ಯವಾಗಿ ನಾನು ಅವರೊಂದಿಗೆ ಗುಂಪುಗೂಡಿದ್ದೇನೆ ಎಂದು ರೈತರೊಬ್ಬರು ಹೇಳಿದರು.
ಅಧಿಕಾರಿಗಳು, ಕೆಲವೇ ಜನರ ಕೆಲಸಗಳಿಂದ ಶಾಸಕರಿಗೆ ಕೆಟ್ಟ ಬರುತ್ತದೆ. ನಮ್ಮ ತಾಲ್ಲೂಕಿನಲ್ಲಿ ಕೋವಿಡ್ ಹರಡದಂತೆ ತಡೆಯುವ ಜವಾಬ್ದಾರಿ ಜನರ ಮೇಲೂ ಇದೆ. ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ಅಧಿಕಾರಿಗಳನ್ನಷ್ಟೇ ಟೀಕಿಸುವುದರಿಂದ ಏನು ಪ್ರಯೋಜನ ಇಲ್ಲ. ಎಂದು ಅಭಿಪ್ರಾಯಪಟ್ಟರು.