Tumkuru: ಸ್ಮಾರ್ಟ್, ಗೀಟು ಎಂದೆಲ್ಲ ಬಹುಪರಾಕಿನ ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವ ತುಮಕೂರು ನಗರದಲ್ಲಿ ಕುಡಿಯುವ ನೀರಿಗೆ ಬೆಲೆ ಇಲ್ಲವೇ ಎಂಬ ಪ್ರಶ್ನೆ ಕಾಡುತ್ತಿದೆ.
ಹನಿ ನೀರು ಉಳಿಸುತ್ತೇವೆಂದು ರಾಜ್ಯ ಸರ್ಕಾರ ಬಜೆಟ್ ನಲ್ಲಿ ಕೋಟ್ಯಂತರ ರೂಪಾಯಿ ಹಣ ಮೀಸಲಿಡುತ್ತಿದ್ದರೆ, ತುಮಕೂರು ಮಹಾನಗರ ಪಾಲಿಕೆ ಮಾತ್ರ ನೀರನ್ನೂ ರಸ್ತೆಯ ಚರಂಡಿಗಳಿಗೆ ಬಿಡುತ್ತಿದೆ.
ಸ್ಮಾರ್ಟ್ ಸಿಟಿ ಕಾಮಗಾರಿಗಳಿಂದ ಧೂಳೆದ್ದು ಹೋಗಿರುವ ನಗರದಲ್ಲಿ ಕುಡಿಯುವ ನೀರು ಎಲ್ಲೆಂದರಲ್ಲಿ ಪೋಲಾಗಿ ಹೋಗುತ್ತಿದೆ. ಇನ್ನೊಂದು ಕಡೆ, ಬೇಸಿಗೆಗೆ ಮುನ್ನವೇ ನಗರದ ಬಹುತೇಕ ಬಡಾವಣೆಗಳಲ್ಲಿ ನೀರಿನ ಸಮಸ್ಯೆ ತೋರತೊಡಗಿದೆ.
ನಗರದ ಬಟವಾಡಿ 80 ಅಡಿ ರಸ್ತೆಯಲ್ಲಿ ಮೂರು-ನಾಲ್ಕು ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ನೀರು ಸಾಲದ ಕಾರಣ ಜನರೇ ಸ್ವಯಂ ಆಗಿ ನೀರಿನ ರೇಷನ್ ಪದ್ಧತಿ ಅನುಸರಿಸತೊಡಗಿದ್ದಾರೆ.
ಕೊರೋನಾ ವೈರಸ್ ಕಾರಣ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಅಲ್ಲದೇ ಪ್ರತಿ ದಿನ ಎರಡು ಸಲ ಸ್ನಾನ, ಪ್ರತಿದಿನ ಬಟ್ಟೆಯನ್ನು ಒಗೆಯಬೇಕಾಗಿದೆ. ಆದರೆ, ನೀರಿನ ಕೊರತೆ ಕಾರಣ ಜನರು ಇದನ್ನೆಲ್ಲ ಮುಂದೂಡಬೇಕಾಗಿದೆ. ಇನ್ನೊಂದು, ಕಡೆ ನಗರದ ಕೆಲವು ಬಡಾವಣೆಗಳಲ್ಲಿ ನೀರನ್ನು ಚರಂಡಿಗೆ ಹರಿದು ಬಿಡಲಾಗುತ್ತಿದೆ. ಇದೇನು ಪಾಲಿಕೆ. ಇದೇನು ಹುಚ್ಚಾಟ ಎನ್ನುತ್ತಿದ್ದಾರೆ ಜನರು.
ತುಮಕೂರು ನಗರದಲ್ಲಿ 24X7 ಕುಡಿಯುವ ನೀರು ಪೂರೈಕೆ ಮಾಡುತ್ತಿರುವ ನಲ್ಲಿಗಳಿಂದ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದ್ದರೂ ಯಾರೂ ಕೇಳುವವರೇ ಇಲ್ಲದಂತಾಗಿದೆ. ನೀರು ಫೋಲಾಗುತ್ತಿದ್ದರೂ ಅದನ್ನು ನಿಲ್ಲಿಸುವ ಕೆಲಸಕ್ಕೆ ನೀರು ಪೂರೈಕೆ ಗುತ್ತಿಗೆ ಪಡೆದಿರುವವರು ಮುಂದಾಗುತ್ತಿಲ್ಲ.
ಸೋಮೇಶ್ವರಪುರಂ ನ ಎಂಟನೇ ಮುಖ್ಯರಸ್ತೆಯಲ್ಲಿ ಪೈಪ್ ಲೈನ್ ನಿಂದ ನಲ್ಲಿಗೆ ಸಂಪರ್ಕ ಕಲ್ಪಿಸಲಾಗಿದೆ. ಆದರೆ ಕೆಲವು ನಲ್ಲಿಗಳಿಗೆ ಮೀಟರ್ ಅಳವಡಿಸಿಲ್ಲ. ನೀರು ಬಿಟ್ಟಾಗ ವ್ಯರ್ಥವಾಗಿ ರಸ್ತೆಗೆ ಹರಿಯುವುದು ಕಳೆದ ಎರಡು ವಾರಗಳಿಂದಲೂ ಮುಂದುವರಿದಿದೆ.
ಎಂಟನೆ ಕ್ರಾಸ್ ನಲ್ಲಿ ಪೈಪ್ ಲೈನ್ ಗೆ ಸಂಪರ್ಕ ಕಲ್ಪಿಸಲಾಗಿದೆ. ಆದರೆ ಅದಕ್ಕೆ ಮೀಟರ್ ಅಳವಡಿಸಿಲ್ಲ. ಪೈಪ್ ನ್ನು ರಸ್ತೆಯ ಬದಿಯಲ್ಲಿ ಬಿಟ್ಟಿದ್ದು ಪ್ರತಿ ಬಾರಿ ನೀರು ಬಿಟ್ಟಾಗಲೂ ಅದು ರಸ್ತೆಗೆ ಹರಿದು ವ್ಯರ್ಥವಾಗುತ್ತಿದೆ. ಇಂತಹ ಪ್ರಕರಣಗಳು ನಗರದಲ್ಲಿ ಸಾಕಷ್ಟು ಇವೆ.
ವ್ಯರ್ಥವಾಗಿ ಹರಿದು ಹೋಗುತ್ತಿದ್ದರೂ ಮಹಾನಗರ ಪಾಲಿಕೆಯ ಸಿಬ್ಬಂದಿಯಾಗಲೀ ಅಥವಾ ಗುತ್ತಿಗೆ ಪಡೆದವರಾಗಲಿ ಅದನ್ನು ರಿಪೇರಿ ಮಾಡುವ ಗೋಜಿಗೆ ಹೋಗಿಲ್ಲ. ಲೀಕೇಜ್ ಪರೀಕ್ಷಿಸುವುದು ಮುಕ್ತಾಯವಾಗಿ ವಾರ ಕಳೆಯಿತು. ಈಗ ನೀರು ಬಿಡುತ್ತಿದ್ದು ಕೆಲವು ನಲ್ಲಿಗಳಿಗೆ ಮೀಟರ್ ಅಳವಡಿಸಿಲ್ಲ.
ಇಂತಹ ನಲ್ಲಿಗಳಿಂದ ನೀರು ವ್ಯರ್ಥವಾಗುತ್ತಿದೆ. ಮನೆಯ ಮಾಲಿಕರೂ ಕೂಡ ಇಲ್ಲದೆ ಇರುವುದು ಮತ್ತು ಬಾಡಿಗೆದಾರರು ಅದರ ಗೋಜಿಗೆ ಹೋಗದೇ ಇರುವುದು ಈ ಸಮಸ್ಯೆಗೆ ಕಾರಣವಾಗಿದೆ. ಇದರಿಂದ ನೀರಿನ ಕರ ವಸೂಲಿಗೆ ಸಮಸ್ಯೆಯಾಗಲಿದೆ.