ತುಮಕೂರು ಲೈವ್

ಉರಿಬಿಸಿಲಿನ ತಾಪಕ್ಕೆ ಉದುರುತ್ತಿರುವ ಮಾವು: ಜಿಲ್ಲೆಯ ರೈತರಲ್ಲಿ ಆತಂಕ

ಜಗದೀಶ್ ಕೋಡಿಹಳ್ಳಿ


ತುಮಕೂರು: ಹಣ್ಣುಗಳ ರಾಜ ಮಾವಿನ ಹಣ್ಣು. ಪ್ರತಿವರ್ಷ ಜನವರಿ ತಿಂಗಳಲ್ಲೇ ಮಾವಿನ ಗಿಡದಲ್ಲಿ ತುಂಬಾ ಹೂವು ಕಾಯಿಗಳು ಇರ್ತಿತ್ತು. ಈ ಸಲ ಮಾವಿನ ಹಂಗಾಮು ಎರಡು ತಿಂಗಳ ತಡವಾಗುತ್ತಿದೆ.

ಮಾವಿನಕಾಯಿ ಎಳ್ಳು ಅಮಾವಾಸ್ಯೆಗೆ ಎಳ್ಳು ಕಾಳಿನಷ್ಟು, ಹುಣ್ಣಿಮೆಗೆ ಬಾರಿ ಕಾಯಿಯಷ್ಟು, ಹೋಳಿ ಹುಣ್ಣಿಮೆಗೆ ಹೋಳಾಗುವಷ್ಟು ಇರುತ್ತಿತ್ತು,
ಆದರೆ ಈ ವರ್ಷ ಮಾವಿನ ಫಸಲು ಈ ಮಾತಿಗೆ ವಿರುದ್ಧವಾಗಿದೆ.

ಇವತ್ತಿಗಾಗಲೇ ಹೋಳಾಗುವಷ್ಟು ಕಾಯಿಯ ಗಾತ್ರ ಇರಬೇಕಿತ್ತು. ಆದ್ರೆ ಈ ಬಾರಿ ಹೆಚ್ಚು ಬಿಸಿಲಿನ ಕಾರಣ ಸಣ್ಣಗಾತ್ರದ ಪೀಚು ನೆಲಕಚ್ಚುತ್ತಿದೆ ಎಂದು ಮಾವು ಬೆಳೆಗಾರಾದ ಹಂಚಿಹಳ್ಳಿ ರಾಜಣ್ಣ ಹೇಳುತ್ತಾರೆ.

ತಡವಾಗಿ ಬಿಟ್ಟಿರುವ ಮಾವಿನ ಹೂವು ಉದುರಲು ಪ್ರಾರಂಭವಾಗಿತ್ತು. ಹಿಂದೆ ಬಂದಂತಹ ಕಾಯಿ ಕಟ್ಟುವುದು ಅನುಮಾನವಾಗಿತ್ತು. ಹವಾಮಾನ ವೈಪರೀತ್ಯದಿಂದ ಪ್ರತಿವರ್ಷದಂತೆ ಮೇ ತಿಂಗಳ ಮೊದಲ ವಾರದಲ್ಲಿ ಬಾದಾಮಿ ರಸ್ಪುರಿ, ಬ್ಯಾನಿಶಷಾನ್ ಗಳಂತಹ ಮಾವು ಮಾರುಕಟ್ಟೆಗೆ ಬರುವುದು ಅನುಮಾನವಾಗಿದೆ ಎನ್ನುತ್ತಾರೆ ಅವರು.

ಕೂರೊನಾ ವೈರಸ್ ರೋಗದಿಂದ ವ್ಯಾಪಾರಸ್ಥರು, ಕೂಲಿ ಕಾರ್ಮಿಕರು ತೋಟಕ್ಕೆ ಬರುತ್ತಿಲ್ಲ. ಮಾವಿನ ತೋಟಗಳು ವ್ಯಾಪಾರವಾಗುತ್ತಿಲ್ಲ ಎಂದು ಮಾವು ಬೆಳೆಗಾರಾದ ಬ್ರಹ್ಮಸಂದ್ರ ಪುಟ್ಟರಾಜು ಹೇಳುತ್ತಾರೆ

ಈ ಬಾರಿ ಇಳುವರಿ ಅತಿ ಕಡಿಮೆ ಇದೆ. ಮಾರುಕಟ್ಟೆಗೆ ಮಾವಿನ ಕೊರತೆ ಎದುರಾಗುತ್ತದೆ. ಈಗಿರುವ ಪರಿಸ್ಥಿತಿಯಲ್ಲಿ ಮಾರುಕಟ್ಟೆಯಲ್ಲಿ ಮಾವಿನ ಬೆಳೆಗೆ ಬೆಲೆ ಸಿಗುವ ಯಾವ ಲಕ್ಷಣವೂ ಕಾಣುತ್ತಿಲ್ಲ. ನಮ್ಮ ಜಿಲ್ಲೆಯ ರೈತರ ಜೀವನಾಡಿಯಾಗಿರುವ ಮಾವು ಕೈಕೊಟ್ಟರೆ ನಮ್ಮ ಜಿಲ್ಲೆಯ ರೈತರ ಪರಿಸ್ಥಿತಿ ಹೇಳತಿರದು ಎಂದು ಮಧುಗಿರಿಯ ವಿಶ್ವಮೂರ್ತಿ, ದೇವರಾಜ್ ಆತಂಕ ವ್ಯಕ್ತಪಡಿಸಿದರು.

ಮೇ ತಿಂಗಳಿಂದ ಜುಲೈ ತಿಂಗಳು ಮಾವಿನ ಸುಗ್ಗಿ ಇರುವುದರಿಂದ ಮಕ್ಕಳು ಮಾವು ಬೆಳೆಗಾರರು ಸೇರಿದಂತೆ ಕೂಲಿ ಕಾರ್ಮಿಕರಿಗೂ ಕೈತುಂಬಾ ಕೆಲಸ ಮತ್ತು ಹಣ ಸಿಗುತ್ತಿತ್ತು. ಈ ವರ್ಷ ನಮ್ಮ ರೈತರ ಕಷ್ಟ ಕೇಳೋರಿಲ್ಲ ಅನ್ನುವ ಹಾಗಿದೆ ಎಂದು ಮಾವು ಬೆಳೆಗಾರಾದ ಚನ್ನಕೇಶವ್ ಅವರು ಹೇಳುತ್ತಾರೆ

ಭಾರತೀಯ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷರಾದ ಕೋಡಿಹಳ್ಳಿ ಜಗದೀಶ್ ರವರು ” ಹವಾಮಾನ ವೈಪರಿತ್ಯದಿಂದ ಬೆಳೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಆದ್ದರಿಂದ ಜಿಲ್ಲೆಯಲ್ಲಿ ಶೇಕಡ 25ರಷ್ಟು ಮಾತ್ರ ಫಸಲು ಕಾಣಬಹುದು.ಈಗ ಬಂದಿರುವ ಫಸಲನ್ನು ಅಲ್ಲೊಂದು ಇಲ್ಲೊಂದು ಮಾವು ಕಾಣುತ್ತಿದೆ. ಹೀಗಾಗಿ ಈ ಬಾರಿ ಮಾವಿನ ಫಸಲು ಕುಂಠಿತಗೊಂಡು ಮಾವು ಬೆಳೆಗಾರರನ್ನು ಚಿಂತೆಗೀಡುಮಾಡಿದೆ’ ಹೇಳಿದರು.

ಫುಡ್ ಪಾರ್ಕ್ ಬಳಸಿ


ರೈತರಲ್ಲಿ ಒಂದು ಆತಂಕ ವಾದರೆ, ಇರುವ ಫಸಲನ್ನು ರಕ್ಷಿಸಿಕೊಳ್ಳಲು ಜಿಲ್ಲೆಯ ರೈತರು ಸಂಸ್ಕರಿಸಲು ಶೀತಲೀಕರಣ ಅವಶ್ಯಕವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ವ್ಯವಸ್ಥೆ ಇಲ್ಲ. ಆದ್ದರಿಂದ, ಫುಡ್ ಪಾರ್ಕ್ ನಲ್ಲಿ ಈ ವ್ಯವಸ್ಥೆ ಮಾಡಲು ಜಿಲ್ಲಾಡಳಿತ ಮುಂದಾಗಬೇಕು ಎನ್ನುತ್ತಾರೆ DYFI ಜಿಲ್ಲಾ ಘಟಕದ ಅಧ್ಯಕ್ಷ ಎಸ್.ರಾಘವೇಂದ್ರ.

ಇಂಡಿಯಾ ಫುಡ್ ಪಾರ್ಕ್ ಪಿಪಿಪಿ ಮಾದರಿಯಲ್ಲಿ ಸ್ಥಾಪಿತವಾಗಿದ್ದು ಇದಕ್ಕೆ ಸರ್ಕಾರದ ಬಂಡವಾಳವು ಸೇರಿದೆ ಎಂಬುದನ್ನು ಜಿಲ್ಲಾಡಳಿತ ಮರೆಯಬಾರದು ಎಂದರು.


ವರದಿಗಾರರು ಭಾರತೀಯ ಕೃಷಿಕ್ ಸಮಾಜದ ಜಿಲ್ಲಾಧ್ಯಕ್ಷರು. ಪವರ್ ಗ್ರಿಡ್ ಸೇರಿದಂತೆ ಹಲವು ರೈತರ ಸಮಸ್ಯೆಗಳ ಪರ ದೊಡ್ಡಮಟ್ಟದಲ್ಲಿ ದನಿ ಎತ್ತಿದವರು.

ರೈತರ ಭೂಮಿ ಸ್ವಾಧೀನದ ವಿಷಯದಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ‌ ಹೋರಾಟ ರೂಪಿಸಿದ್ದಾರೆ. ಜಿಲ್ಲೆಗೆ ಹೇಮಾವತಿ, ಎತ್ತಿನಹೊಳೆ, ಭದ್ರಾ ಮೇಲ್ದಂಡೆಯಲ್ಲಿ ಹೆಚ್ಚಿನ ನೀರು ಹಂಚಿಕೆ ಸಂಬಂಧ ಸರ್ಕಾರದ ಮಟ್ಟದಲ್ಲಿ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದಾರೆ.

ಸಮಾಜಸೇವೆ, ಪರಿಸರ ರಕ್ಷಣೆ, ಕಾಡು ಬೆಳೆಸುವುದು, ನೈಸರ್ಗಿಕ ಕೃಷಿ ಬೆಂಬಲಿಸುವ ಕೆಲಸದಲ್ಲೂ ತೊಡಗಿದ್ದಾರೆ.


Comment here