ತುಮಕೂರ್ ಲೈವ್

ಉರ್ದುಶಾಲೆಯ ಮಕ್ಕಳ ಕನ್ನಡ ಪ್ರೇಮ ಹೀಗಿತ್ತು…

ತುಮಕೂರರು; ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಪ್ರಯುಕ್ತ ಉರ್ದು ಶಾಲೆಗಳ ಮಕ್ಕಳಿಗೆ ಏರ್ಪಡಿಸಿದ್ದ ಕನ್ನಡ ಪ್ರಬಂಧ ಸ್ಪರ್ಧೆ ಮತ್ತು ಪದ್ಯ ಹೇಳುವ ಸ್ಪರ್ಧೆಯಲ್ಲಿ ವಿಜೇತರಾದ ಸುಮಾರು 85 ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಪ್ರಶಸ್ತಿ ಪತ್ರ ಮತ್ತು ಬಹುಮಾನ ಪಡೆದ ವಿದ್ಯಾರ್ಥಿಗಳ ಮುಖದಲ್ಲಿ ಹರ್ಷದ ಹೊನಲು ತುಂಬಿ ತುಳುಕುತ್ತಿತ್ತು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತುಮಕೂರು ನಗರ ಘಟಕ ಮತ್ತು ಜಿಲ್ಲಾ ಲೇಖಕಿಯರ ಸಂಘದ ಆಶ್ರಯದಲ್ಲಿ ಉರ್ದು ಶಾಲೆಯ ಮುಸ್ಲೀಂ ಮಕ್ಕಳಿಗೆ ಕನ್ನಡ ಕಲಿಸುವ ಬೆಳೆಸುವ ಮತ್ತು ಕನ್ನಡ ಪ್ರೀತಿ ಹೆಚ್ಚಿಸುವ ಉದ್ದೇಶದಿಂದ ಈ ಸ್ಪರ್ಧೆ ಆಯೋಜಿಸಿತ್ತು. ಪರಿಷತ್ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ಅನ್ನಪೂರ್ಣ ವೆಂಕಟನಂಜಪ್ಪ ಮತ್ತು ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಜಿ.ಮಲ್ಲಿಕಾ ಬಸವರಾಜು ಅವರ ಪರಿಶ್ರಮದಿಂದ ಇಂಥದ್ದೊಂದು ಉತ್ತಮ ಕಾರ್ಯಕ್ರಮ ನಡೆಯಿತು.

ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳು ಪ್ರಶಸ್ತಿ ಪತ್ರ ಮತ್ತು ಬಹುಮಾನಗಳನ್ನು ಪ್ರದಾನ ಮಾಡುತ್ತಿದ್ದರೆ ಉಳಿದ ನೂರಾರು ಮಕ್ಲಳು ಚಪ್ಪಾಳೆ ತಟ್ಟಿ ಖುಷಿಪಟ್ಟರು. ತುಮಕೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸಿ. ರಂಗಧಾಮಪ್ಪ ಮಕ್ಕಳಿಗೆ ಬಹುಮಾನ ವಿತರಿಸಿದರು.

ಕನ್ನಡ ಬಾವುಟದಂಥ ಟೋಪಿಗಳನ್ನು ಧರಿಸಿದ್ದ ಮಕ್ಕಳು ಬಹುಮಾನ ಪಡೆದು ಸಂತಸಗೊಂಡರು.
ತಮ್ಮ ಶಾಲೆಯ ಮಕ್ಕಳು ಬಹುಮಾನ ಪಡೆಯುತ್ತಿದ್ದರೆ ಶಿಕ್ಷಕರು ಸಂತೋಷಗೊಂಡು ಮಕ್ಕಳ ಭಾವಚಿತ್ರಗಳನ್ನು ಮೊಬೈಲ್ ನಲ್ಲಿ ಸೆರೆ ಹಿಡಿಯುತ್ತಿದ್ದ ದೃಶ್ಯ ಸಾಮಾನ್ಯವಾಗಿ ಕಂಡು ಬಂತು.

ಉರ್ದು ಶಾಲೆಯ ಸಿಆರ್ ಪಿ ಗಳಾದ ನಜರತ್ ಫಾತಿಮಾ, ಶಮಾಬಾನು, ಬೀಬಿ ಸಾರ ನೂರಾನಿ, ಫಿರ್ದೋಸ್ ಖಾನಂ ಮತ್ತು ಉರ್ದು ಶಾಲೆಯ ಶಿಕ್ಷಕ ವೃಂದ ಮಕ್ಕಳಲ್ಲಿ ಕನ್ನಡ ಪ್ರೇಮವನ್ನು ಬೆಳೆಸಲು ಪ್ರಯತ್ನಿಸಿದರು.

ಇದೇ ವೇಳೆ 9ನೇ ತರಗತಿ ವಿದ್ಯಾರ್ಥಿನಿ ಮುದ್ದ ತೀರ್ಥಹಳ್ಳಿ ವಿರಚಿತ ಹಾಗೂ ಸಾಹಿತಿ ಎಲ್. ಮುಕುಂದರಾಜ್ ನಿರ್ದೇಶಿಸಿರುವ ಕಾಡ ಹಾದಿಯ ಹೂಗಳು ಸಿನಿಮಾ ಪ್ರದರ್ಶಿಸಲಾಯಿತು. ಸರ್ಕಾರಿ ಶಾಲೆಗಳಲ್ಲಿ ಸಾಕಷ್ಟು ಮಂದಿ ಪ್ರತಿಭಾನ್ವಿತರು ಇದ್ದಾರೆ. ಅವರನ್ನು ಗುರುತಿಸುವ ಮತ್ತು ಸರ್ಕಾರಿ ಶಾಲೆಗಳನ್ನು ಬಲಪಡಿಸುವ ಕೆಲಸ ಆಗಬೇಕು ಎಂಬುದನ್ನು ಸಿನಿಮಾ ಸಾರಿ ಹೇಳಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತುಮಕೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ರಂಗಧಾಮಪ್ಪ ಉರ್ದು ಶಾಲೆಗಳ ಮಕ್ಕಳು ಕನ್ನಡ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆಯುತ್ತಿರುವುದು ಹೆಮ್ಮೆಯ ವಿಷಯ. ಇಂತಹ ಕೆಲಸ ಮಾಡಿರುವ ಆಯೋಜಕರಿಗೆ ಅಭಿನಂದನೆಗಳು ಸಲ್ಲಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ. ಬಾ.ಹ.ರಮಾಕುಮಾರಿ ಮಾತನಾಡಿರರು. ಕಾರ್ಯಕ್ರಮದಲ್ಲಿ ಪೂರ್ಣಿಮ ಜಯಣ್ಣ, ಮುಷ್ತಾಕ್ ಅಹಮದ್, ಸಿಆರ್ಪಿಗಳಾದ ನಜûಹತ್ ಫಾತಿಮಾ, ಶಮಾಬಾನು, ಬೀಬಿ ಸಾರ ನೂರಾನಿ, ಫಿರ್ದೋಸ್ ಖಾನಂ ಉಪಸ್ಥಿತರಿದ್ದರು. ಗೀತಾ ನಾಗೇಶ್ ಸ್ವಾಗತಿಸಿದರು. ಸುಭಾಷಿಣಿ ಆರ್. ಕುಮಾರ್ ಪ್ರಾರ್ಥಿಸಿದರು. ಲೇಖಕಿ ಸಿ.ಎಲ್.ಸುನಂದಮ್ಮ ಕಾರ್ಯಕ್ರಮ ನಿರೂಪಿಸಿದರು.

Comment here