Thursday, December 12, 2024
Google search engine
Homeನಮ್ಮೂರುಊರ ಹೆಸರೇ "ಮಠ"

ಊರ ಹೆಸರೇ “ಮಠ”

ಲೇಖಕರು :ಲಕ್ಷ್ಮೀಕಾಂತರಾಜು ಎಂಜಿ
ಮಠ

ಈ ಊರಿನ‌ ಗ್ರಾಮಸ್ಥರು ತಮ್ಮ ಊರಿನಿಂದ ಐದಾರು ಕಿಮೀಗೂ ಹೆಚ್ಚು ದೂರದ ಸ್ಥಳಗಳಿಗೆ ಹೋದಾಗ ಅಲ್ಲಿ ಯಾರಾದರು ನಿಮ್ಮೂರು ಯಾವೂರು ಎಂದು ಸಂದರ್ಭವೊಂದರಲ್ಲಿ ಪ್ರಶ್ನಿಸಿದರೆ ಗ್ರಾಮಸ್ಥರು ನಮ್ಮೂರು ಮಠ ಎಂದು ಉತ್ತರಿಸಿದ ತಕ್ಷಣ ಸಿದ್ಧಗಂಗಾ ಮಠವೇ? ಚುಂಚನಗಿರಿ ಮಠವೇ? ಎಂದು ಪ್ರತಿಕ್ರಿಯಿಸುವ ಮೂಲಕ ಪ್ರತ್ಯುತ್ತರ ನೀಡುತ್ತಾರೆ! ಅಲ್ಲ . ನಮ್ಮೂರ‌ ಹೆಸರೇ ಮಠ ಎಂದು ಹೇಳಿದರೆ ಎಲ್ಲಿದೆ? ಅದರ ಹೆಸರೇ ಮಠಾನ ? ಎಂಥಾ ಮಠ..?ಎಂದು ಹಾಸ್ಯಾಸ್ಪದವಾಗಿ ಕೇಳುತ್ತಾರೆ.ಈ ರೀತಿಯ ವಿಶಿಷ್ಠ ಹೆಸರಿನ ಊರು ಮಠ‌ ಇರುವುದು‌ ತುಮಕೂರು‌ ಜಿಲ್ಲೆಯ ಗುಬ್ಬಿ ತಾಲ್ಲೂಕು ಹಾಗಲವಾಡಿ ಹೋಬಳಿ ವ್ಯಾಪ್ತಿಯಲ್ಲಿನ ಈ ಊರು ತಾಲ್ಲೂಕು‌ ಕೇಂದ್ರದಿಂದ ಮೂವತ್ತೈದು ಕಿಮೀ ಹಾಗೂ ಜಿಲ್ಲಾ ಕೇಂದ್ರದಿಂದ ನಲವತ್ತು ಕಿಮೀ ದೂರದಲ್ಲಿದೆ.ಬಹಳ ವರ್ಷಗಳ ಹಿಂದೆ ಹಾಗಲವಾಡಿ ಪಾಳೇಗಾರರ ಆಡಳಿತಕ್ಕೆ ಒಳಪಟ್ಟಿದ್ದ ಈ ಊರಿನಲ್ಲಿ ಶಾಂತದೇವರಾಯನೆಂಬ ಋಷಿ ಮುನಿಯು ಇಲ್ಲಿ ವಾಸಿಸುತ್ತಿದ್ದು ತದನಂತರ ಗ್ರಾಮವು ಋಷಿಮುನಿಯ ಶಾಂತದೇವರರಾಯನ ಹೆಸರಿನೊಂದಿಗೆ ಶಾಂತದೇವರಾಯನಮಠ ವೆಂದು ಆಗಿತ್ತು. ಅದು ಕೊನೆಗೆ ದಾಖಲೆಗಳಲ್ಲಿ ಬಂದು ಉಳಿಯುವ ಹೊತ್ತಿಗೆ ಮಠ ಆಗಿ ಉಳಿದಿದೆ. ಬಹು ಹಿಂದೆಯೇ ಇಲ್ಲಿ ದೇವಸ್ಥಾನವಿದ್ದ ಕುರುಹು ಗ್ರಾಮದ ಸರ್ವೇ ನಕಾಶೇಯಲ್ಲಿಯೇ ಇದೆ. ಅದೇ ಜಾಗದಲ್ಲಿಯೇ ಇಂದೂ ಕೂಡ ದೇವಸ್ಥಾನ ಇರುವ ಕಾರಣ ಗ್ರಾಮಕ್ಕಿರುವ ಇತಿಹಾಸಕ್ಕೊಂದು ಅದೊಂದು ದಾಖಲೆಯಾಗಿದೆ.”ಮಠ” ಹೆಸರಿನಲ್ಲಿ ಅನೇಕ ಮಠಮಾನ್ಯಗಳು ಇರುವ ಕಾರಣ ಜನರ ಮನಸ್ಸಿನಲ್ಲಿ ಮಠವೆಂದ ಕೂಡಲೇ ಅದೊಂದು ನಿತ್ಯ ಅಕ್ಷರ ಹಾಗೂ ಅನ್ನ ದಾಸೋಹ ಸ್ಥಳವೆಂಬುದು ಉಳಿದುಹೋಗಿದ್ದು ಮಠ ಎಂದಕೂಡಲೇ ಆ ಕಲ್ಪನೆ ಜನರ ಮನಸ್ಪಟಲದಲ್ಲಿ ಮೂಡಿಬರುವುದು ಸಹಜವೇ ಸರಿ.

ಮಠವೂ ಮುಖ್ಯರಸ್ತೆಯಲ್ಲಿರದೆ ಮುಖ್ಯ ರಸ್ತೆಯಿಂದ ಐದಾರು ಕಿಮಿಗಳ ಅಂತರದಲ್ಲಿದ್ದು ಇಂದಿಗೂ ಈ ಗ್ರಾಮಕ್ಕೆ ಬಸ್ ಸಂಪರ್ಕವಿರದ ಕಾರಣ ಗ್ರಾಮ ಇತರರಿಗೆ ಪರಿಚಯವಾಗದೇ ದೂರ ಉಳಿದಿರುವುದಕ್ಕೂ ಒಂದು ಕಾರಣವಾಗಿದೆ ಎನ್ನಬಹುದು.

ಈ ಗ್ರಾಮದಲ್ಲಿನ‌ ಗ್ರಾಮದೇವತೆಯಾಗಿ ಬಸವಣ್ಣನಿದ್ದು ಇಲ್ಲಿಯ ಪೂರ್ವಜರೇ ರಚಿಸಿರುವ ಇಂದಿಗೂ ಹಾಡಿಕೊಂಡು ಬರುತ್ತಿರುವ ದೇವರ ಭಜನೆ ಗೀತೆಯೊಂದರಲ್ಲಿ “ಶಾಂತದೇವರಾಯ ಮಠದಲ್ಲಿ ನೆಲಸಿದ ದೇವ….”

ಎಂದು ಚರಣವೊಂದರಲ್ಲಿ ಬಸವಣ್ಣನನ್ನ ಸ್ಮರಿಸಲಾಗುತ್ತಿದೆ. ಈ ಚರಣದ ಸಾಲುಗಳನ್ನ ಗಮನಿಸಿದಾಗ ಇಲ್ಲಿ ಶಾಂತದೇವರಾಯಮಠದ ಬಗ್ಗೆ ದಾಖಲೆ ಸಿಕ್ಕಂತಾಗುತ್ತದೆ.ಇದೇ ಬಸವಣ್ಣನ ದೇವಸ್ಥಾನದ ಒಡೆತನದಲ್ಲಿ ಸುಮಾರು ಇಪ್ಪತ್ತೈದು ಎಕರೆ ಜಮೀನು ಇರುವುದು ವಿಶೇಷ.

ಶ್ರೀ‌ಬಸವಣ್ಣ ದೇವರ ಧರ್ಮದರ್ಶಿ ಕಮಿಟಿ‌ ಹೆಸರನಲ್ಲಿರುವ ಈ ಜಮಿನನ್ನ‌‌ ಇಲ್ಲಿನ ಟ್ರಸ್ಟ್ ನಿರ್ವಹಣೆ ಮಾಡಿಕೊಂಡು ಅದರಲ್ಲಿ ಬರುವ ಕೃಷಿ ಆದಾಯವನ್ನು ದೇವಸ್ಥಾನದ ನಿರ್ವಹಣೆಗೆ ಬಳಸಲಾಗುತ್ತಿದೆ. ಈಗ ಪ್ರಸ್ತುತವಾಗಿ ಹಳೇ ದೇವಸ್ಥಾನವನ್ನು ಸುಮಾರು ನಲವತ್ತು ಲಕ್ಷಗಳ ವೆಚ್ಚದೊಂದಿಗೆ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಲಾಗುತ್ತಿದೆ.ಇಂಥಹ ಗ್ರಾಮವಾದ ಮಠವು ಸುಮಾರು ಅರವತ್ತು ಮನೆಗಳು ಉಳ್ಳ ಈ ಗ್ರಾಮದಲ್ಲಿ ಎಲ್ಲರೂ ಒಕ್ಕಲಿಗ ಸಮುದಾಯದವರೇ ಆಗಿರುವ ಕಾರಣ ಕುಲ ಕಸುಬು ಕೃಷಿಯೇ ಆಗಿದೆ ಮತ್ತು ಪ್ರಧಾನ ವೃತ್ತಿಯಾಗಿದೆ.

ಪ್ರಮುಖ ಬೆಳೆಯಾಗಿ ಇಂದು ಅಡಕೆ ತೆಂಗು ಇಲ್ಲಿನ ಜೀವನಾಧಾರವಾಗಿದೆ.ಸುಮಾರು ಹತ್ತು ವರ್ಷದ ಹಿಂದೆ ಈ ಊರಿನ ರೈತರು ಕೇವಲ ರಾಗಿ ಸೇರಿದಂತೆ ದವಸ ಧಾನ್ಯಗಳ ಬೆಳೆಗಳನ್ನ ಬೆಳೆಯುತ್ತಿದ್ದು ಇಂದು ವಾಣಿಜ್ಯ ಬೆಳೆಗಳತ್ತ ಗಮನಹರಿಸಿ ನೀರೊಂದಿದ್ದರೆ ಲಕ್ಷ ಲಕ್ಷ ಎಣಿಸುವ ಮಟ್ಟಕ್ಕೆ ರೈತ ಬೆಳೆದಿದ್ದಾನೆ. ಪ್ರಮುಖವಾಗಿ ಮಿಡಿ ಸೌತೆಯನ್ನೆ ಹೆಚ್ಚು ಬೆಳೆಯುತ್ತಿದ್ದು ಇದು ಅಲ್ಪಾವಧಿಯ ಬೆಳೆಯು ಆಗಿರುವ ಕಾರಣ ರೈತ ಹೆಚ್ಚು ಆಸಕ್ತಿ ಹೊಂದಿದ್ದಾನೆಇಲ್ಲಿ ವಾಡಿಕೆ ಪ್ರಮಾಣದ ಮಳೆಯಾಗದ ಕಾರಣ ಅಂತರ್ಜಲದ ಮಟ್ಟ ಇಂದು ಸಾವಿರ ಅಡಿಯ ಗಡಿ ದಾಟಿದೆ. ಪಾತಾಳದಿಂದ ನೀರೆತ್ತಿ ರೈತನಿಂದು ಬೆಳೆಸಿದ ತೆಂಗು ,ಅಡಕೆ ಬೆಳೆಗಳನ್ನ ಉಳಿಸುವ ಪ್ರಯತ್ನದಲ್ಲಿದ್ದು ರೈತ ತನ್ನ ಆದಾಯದ ಜೊತೆಗೆ ಸಾಲ ಮಾಡಿ ಬೋರ್ ವೆಲ್ ಗೆ ಸುರಿಯುತ್ತಿದ್ದಾನೆ.ಇಲ್ಲಿ ಕುಡಿಯುವ ನೀರಿಗೆ ಬಳಕೆಯಾಗುವ ನೀರು ಸಾವಿರ ದಾಟಿರುವ ಕಾರಣ ಫ್ಲೋರೈಡ್ ಅಂಶವಿದ್ದು ಪ್ಲೋರೈಡ್ ಬಾಧಿತರೂ ಇದ್ದಾರೆ. ಇದನ್ನ ನಿವಾರಿಸಲೆಂದೇ ಇಂದು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣವಾಗಿದೆ.

ಮುಖ್ಯ ರಸ್ತೆಯಿಂದ ಊರಿಗೆ ಸಂಪರ್ಕ ರಸ್ತೆಯು “ನಮ್ಮ ರಸ್ತೆ ನಮ್ಮ ಗ್ರಾಮ ” ಯೋಜನೆಯಲ್ಲಿ ರಸ್ತೆ ನಿರ್ಮಾಣವಾಗಿದ್ದು ಉತ್ತಮ‌ ರಸ್ತೆ ಇದೆ. ಅಂಗನವಾಡಿ ಹಾಗೂ ಪ್ರಾಥಮಿಕ‌ ಶಾಲೆ ಇದ್ದೂ ಹಾಜರಾತಿಯ ಕೊರತೆ ಎದುರಿಸುತ್ತಿದೆ.

ಒಟ್ಟಿನಲ್ಲಿ ಈ ಊರ ಹೆಸರೇ ಮಠ ಎಂಬುದಾಗಿದ್ದು ಇಲ್ಲಿ ಯಾವುದೇ ಸ್ವಾಮಿಗಳು ಇರುವ ಗದ್ದಿಗೆ ಮಠವಲ್ಲ. ಇದು ಊರ ಹೆಸರೇ ಮಠ ಎಂಬುದು ವಿಶೇಷವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?