ಟಿ. ಸತೀಶ್ ಜವರೇಗೌಡ ಮಂಡ್ಯ
ಅಕಾಲ ಮರಣದ ರಣಭೇರಿ
ಹುಟ್ಟಿಸಿದೆ ಭಯಾನಕ ಕಂಪನ
ವಿಷಮ ಪರಿಸ್ಥಿತಿಯ ತಂದಿಕ್ಕಿದೆ
ಕಂಡುದ್ದೆಲ್ಲವ ಭೋಗಿಸುವ ಜೀವನ
ಬರುಡಾಯಿತು ಹೊಳೆ ಗಿರಿ ಕಾನನ
ಜೀವ ಸರಪಳಿಯ ಅಸಮತೋಲನ
ಹೆಜ್ಜೆಹೆಜ್ಜೆಗೂ ದಹಿಸುವ ಬೆಂಕಿಯ ಬಿತ್ತಿದೆ
ಮಾರಕ ಮಹಾಮಾರಿ ಕೊರೋನ
ಅನುದಿನವೂ ಸಾಗಿದೆ ಸರಣಿ ಶವಯಾನ
ಊರೂರಿಗೂ ಬೀಗಮುದ್ರೆ
ದೂರಾಗಿಸಿದೆ ನಿದ್ರೆ
ದಿಗಿಲಾವರಿಸಿದ ಬದುಕು
ಸೂತಕ ಧರಿಸಿದ ಬೆಳಕು
ಮುಗಿಲು ಸೀಳುವ ಆಕ್ರಂದನ
ರಂಗೇರಿದ್ದ ಚುನಾವಣೆಗಳ ಕದನ
ಗಬ್ಬೆದ್ದ ನದಿತೀರದಲ್ಲಿ
ಧರ್ಮಾಂಧತೆಯ ನಶೆಯೇರಿದ
ಕುಂಭಾಮೇಳಿಗರ ವೀರೋನ್ಮತ್ತ ಸ್ಖಲನ
ಪ್ರಚಾರ ರ್ಯಾಲಿ ಬಾಡೂಟದ ಭೋಜನ
ಇದಕ್ಕಿಲ್ಲ ಬಿಗಿ ಕಾನೂನು ಕಟ್ಟಳೆಯ ಬಂಧನ
ಹೊರಳದ ಇರುಳು
ಕಾಡುವ ದೈತ್ಯ ನೆರಳು
ಕತ್ತರಿಸಲಾಗಿದೆ ಹೊಂಗನಸಿನ ಬೆರಳು
ತತ್ತರಿಸಿದೆ ಸಹಾಯಕ ಬೆಳದಿಂಗಳು
ಹಾಡುತ್ತಿಲ್ಲ ಯಾವ ಹಕ್ಕಿಯ ಕೊರಳು
ಹಸಿದೊಡಲ ಕೈ ಜಾರಿದೆ ತುತ್ತು ಕೂಳು
ಪ್ರಶ್ನಿಸಿದರೆ ದೇಶದ್ರೋಹದ ಪಟ್ಟದುರುಳು
ಕಸಿದಿದೆ ಜೀವದುಸಿರ
ಕಣ್ಣಿಗೆ ಕಾಣದ ವೈರಾಣುವಿನ ದಾಳಿ
ವಿಷವಾಗಿದೆ ಬೀಸುವ ಬಿಸಿಗಾಳಿ
ಬೆವರಿನ ಬಾಳಾಗಿದೆ ದಿವಾಳಿ
ಭೀತಿಯ ಬಲೆಗೆ ಸಿಲುಕಿ
ಕ್ಷಣಕ್ಷಣವೂ ಸಾಯಬೇಕಿದೆ ನರನರಳಿ
ಕತ್ತಲಲ್ಲಿ ದಿಕ್ಕು ತಪ್ಪಿದೆ ಮಹಾವಲಸೆ
ಬತ್ತಿಹೋಗಿದೆ ನಂಬಿಕೆಯ ಕಿರುಪಸೆ
ಆಸ್ಪತ್ರೆಗಳ ಅಲೆದಲೆದು ಸೋತಿವೆ
ಬಸವಳಿದ ಬಡವರ
ಒಡಕು ಪಾದದ ಕಾಲುಗಳು
ಮೃತ್ಯುವಿನ ಚೂಪು ಸರಳು ಇರಿದಿದೆ ಕರುಳು
ಸರತಿ ಸಾಲಿನಲ್ಲಿ ಮಲಗಿವೆ ಶವಗಳು
ಅಂತಿಮ ಯಾತ್ರೆಯಲ್ಲೂ
ಕಾಯಬೇಕಾದ ಗೋಳು
ರಾಜಕೀಯ ದಾಳಕ್ಕೆ ಎಲ್ಲರೂ ಒತ್ತೆಯಾಳು
ಅತ್ತ ಭ್ರಷ್ಟ ವ್ಯವಸ್ಥೆಯ ಚೆಲ್ಲಾಟ
ಇತ್ತ ಸಾವಿನೊಂದಿಗೆ ಮಂದಿಯ ಸೆಣಸಾಟ
ಉಲ್ಬಣಿಸಿದೆ ಕಡುಸಂಕಷ್ಟದ ಸ್ಫೋಟ
ಪ್ರಕ್ಷುಬ್ಧ ಭಾರವಾದ ಹೃದಯ
ಕಣ್ಣಲ್ಲಿ ಆರದ ಭೀಕರ ಗಾಯ
ತುಕ್ಕು ಹಿಡಿಯುತ್ತಿದೆ ನಿಂತಲ್ಲೇ ತೇರು
ಸ್ಮಶಾನದಲ್ಲೂ ವ್ಯಾಪಾರ ಜೋರು
ಸಮಯ ಸಾಧಕರು ದಂಧಾಕೋರರು
ಗದ್ದುಗೆಯಲ್ಲೇ ಠಿಕಾಣಿ ಹೂಡಿದವರು
ಆಮಿಷಗಳೊಡ್ಡಿ ಚುಕ್ಕಾಣಿ ಹಿಡಿದವರು
ಎಲ್ಲ ಮರೆತು ಪರಸ್ಪರ ಒಂದಾಗಿದ್ದಾರೆ
ಖಜಾನೆಯ ಲೂಟಿಗೆ ಮುಂದಾಗಿದ್ದಾರೆ
ಕಾರ್ಮೋಡ ದಟ್ಟೈಸಿ ದಿಗ್ಭ್ರಮೆಯ ಹುಟ್ಟಿಸಿ
ಹಗಲಿರುಳು ಮಗ್ಗಲಲ್ಲೇ ಉರಿಯುವ ಚಿತೆಗಳು
ಆರುತ್ತಿವೆ ದುಡಿಯುವ ಹಣತೆಗಳು
ಕಳೆಗುಂದಿವೆ ಮಿಡಿಯುವ ಕವಿತೆಗಳು
ಮೇರೆ ಮೀರಿದೆ
ಉಕ್ಕುವ ದುಃಖ ಮುಕ್ಕುವ ಶೋಕ
ಜೀವ ಹಿಂಡುವ ಅಕ್ಷರಸ್ಥರ ಪಾತಕ
ಅನಾಥವಾದ ಮನೆಗಳು
ಖದೀಮರ ಪಾಲಾದ ಗೊನೆಗಳು
ಹೊರಗೆ ರಾಜಕೀಯ ಗಲಭೆ
ಒಳಗೆ ಎದೆಯ ಮೇಲೆ ನೋವಿನ ಶಿಲುಬೆ