publicstory. in
Tumkuru: ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ರೈತರ ನೆರವಿಗೆ ಬರುವ ಬದಲು ಅವರ ಬೆನ್ನಿಗೆ ಇರಿಯುವ ಕೆಲಸದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ತೊಡಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ ತುಮಕೂರು ಜಿಲ್ಲಾ ಸಂಚಾಲಕರ ಸಿ.ಆಜ್ಜಪ್ಪ ಸಹ ಸಂಚಾಲಕ ಬಿ.ಉಮೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ:ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಸದ್ದಿಲ್ಲದೆಯೆ ಒಪ್ಪಿಗೆ ನೀಡಲಿದೆಯೇ ರಾಜ್ಯ ಸರ್ಕಾರ
( ಈ ಸುದ್ದಿಯನ್ನು ಮೊದಲು ಬ್ರೇಕಿಂಗ್ ಮಾಡಿದ್ದು https://publicstory.in/ )
ರಾಜ್ಯ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವುದು ರೈತರ ಮರಣಶಾಸನವಾಗಿದೆ. ಕಾರ್ಪೋರೇಟ್ ಕಂಪನಿಗಳ ಲೂಟಿಗೆ ಅವಕಾಶ ಮಾಡಿಕೊಟ್ಟಿದೆ. ಕಾಯ್ದೆಗೆ ತಿದ್ದುಪಡಿ ಮಾಡಿ ಏಪಿಎಂಸಿ ನಿಯಂತ್ರಣವನ್ನು ತೆಗೆದು ಹಾಕಿ ಅದರ ಮಾಹಿತಿಯನ್ನು ತನಗೆ ನೀಡುವಂತೆ ಕೇಂದ್ರ ಸರಕಾರ ಕೇಳಿದೆ.
ಅದರಂತೆ, ರಾಜ್ಯ ಸರಕಾರವು ಲೂಟಿಕೋರರ ಸೇವೆಗೆ ತುದಿಗಾಲ ಮೇಲೆ ನಿಂತಿದೆ ಎಂದು ಆರೋಪಿಸಿದ್ದಾರೆ.
ರಾಜ್ಯದ ಕೃಷಿ ಉತ್ಪನ್ನಗಳ ಮಾರುಕಟ್ಟೆಯ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆ – 1966 ಮತ್ರು ನಿಯಮಗಳು – 1968 ರ ಕಲಂ 8, 66,67 ಮತ್ತು 70 ರಂತೆ ಏಪಿಎಂಸಿಯ ಹೊರಗೆ ನಡೆಯುವ ಮಾರುಕಟ್ಟೆಯ ಮೇಲೆ ಏಪಿಎಂಸಿ ನಿಯಂತ್ರಣ ಹೇಳುತ್ತದೆ.
ಎಪಿಎಂಸಿ ಯಾಚೆ ಹೊರಗಡೆ, ರೈತರಿಂದ ಕೃಷಿ ಉತ್ಪನ್ನಗಳನ್ನು ಲೈಸೆನ್ಸ್ ಹೊಂದಿಲ್ಲದ ವರ್ತಕರು ಖರೀದಿಸುವಂತಿಲ್ಲ ಮತ್ತು ವರ್ತಕರು ಮನಬಂದಂತೆ ರೈತರ ಶೋಷಣೆಯನ್ನು ನಡೆಸಲು ಮತ್ತು ಏಪಿಎಂಸಿ ಆದಾಯದ ವಂಚನೆಯನ್ನು ಮಾಡಲು ಅವಕಾಶ ನೀಡುತ್ತಿಲ್ಲ. ನಿಯಮ ಮೀರಿದರೆ ಅಂತಹ ವರ್ತಕರ ಮೇಲೆ ಕಲಂ 114, 116, 117 ರಂತೆ ಕ್ರಿಮಿನಲ್ ದಾವೆ ಹೂಡಲು ಅವಕಾಶಗಳಿತ್ತು.
ಈಗ ಇವುಗಳನ್ನೇ ತಗೆದು ಹಾಕಿದಲ್ಲಿ ರೈತರ ಶೋಷಣೆ ವ್ಯಾಪಕವಾಗಿ ಹೆಚ್ಚಾಗಲಿದೆ. ಎಪಿ ಎಂಸಿ ಗಳಿಗೆ ಆದಾಯ ಮತ್ತು ವ್ಯಾಪಾರವಿಲ್ಲದೇ ಮತ್ತು ಅವುಗಳ ಅಗತ್ಯವಿಲ್ಲದೇ ರಾಜ್ಯದ ಎಲ್ಲಾ ಎಪಿಎಂಸಿ ಇಲ್ಲದಂತಾಗುತ್ತವೆ. ಇದು ಮುಖ್ಯವಾಗಿ, ರೈತರನ್ನು ಮತ್ತು ಕೃಷಿಕೂಲಿಕಾರರನ್ನು ವ್ಯವಸಾಯದಿಂದ ಹೊರದೂಡಲಿದೆ.
ರಾಜ್ಯ ಸರಕಾರ ಇಂತಹ ಗಂಭೀರವಾದ ಜನ ವಿರೋಧಿ ತಿದ್ದುಪಡಿಯ ಕುರಿತು ಕ್ರಮ ವಹಿಸಬಾರದು. ಬದಲಿಗೆ ಎಪಿಎಂಸಿಗಳನ್ನು ಬಲಪಡಿಸಲು ಮತ್ತು ಖಾಸಗೀ ಮಾರುಕಟ್ಟೆ ನಿಷೇಧಿಸಲು ಅಗತ್ಯ ಕ್ರಮ ವಹಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.