Friday, May 31, 2024
Google search engine
Homeಮರೀಚಿಕೆಎಲ್ಲರಿಗೂ ದಕ್ಕದ ಕೆಬಿಎಸ್

ಎಲ್ಲರಿಗೂ ದಕ್ಕದ ಕೆಬಿಎಸ್

ಲೇಖಕರು

ಕೆ.ಈ.ಸಿದ್ದಯ್ಯ

ಪತ್ರಕರ್ತರು ಹಾಗೂ ಸಾಹಿತಿ

ಅದು ಕವಿ ದ್ವಾರನಕುಂಟೆ ಎಚ್. ಗೋವಿಂದಯ್ಯ ಅವರ ‘ಉರಿದು ಬಿದ್ದು ಮರ’ ಕವನ ಸಂಕಲನ ಬಿಡುಗಡೆ ಸಮಾರಂಭ. ನಡೆದದ್ದು ತುಮಕೂರಿನ ಕನ್ನಡ ಭವನದಲ್ಲಿ. ಹಿರಿಯ ಸಾಹಿತಿ ಡಾ.ಅಗ್ರಹಾರ ಕೃಷ್ಣಮೂರ್ತಿ ಉದ್ಘಾಟನೆ,ಕವಿ ಕೆ.ಬಿ.ಸಿದ್ದಯ್ಯ ಅತಿಥಿಗಳು. ನಾನೂ ವೇದಿಕೆಯ ಮೇಲಿದ್ದೆ. ಕೆ.ಬಿ. ಪಕ್ಕದಲ್ಲೇ ಕೂತಿದ್ದ ನನ್ನ ಕಿವಿಯಲ್ಲಿ ಈ ‘ದಲಿತ’ ತೆಗೆಯುತ್ತಾರಲ್ಲ ಯಾಕೆ ಗೊತ್ತೇ ಅಂದರು. ನಾನು ‘ಅದು ರಾಜಕೀಯ, ಆ ಪದವನ್ನೇ ಇಲ್ಲವಾಗಿಸಿದರೆ ದಲಿತರೇ ಇಲ್ಲವಾಗುತ್ತಾರಲ್ಲ ಅಂದೆ ಯು ಆರ್ ಕರೆಕ್ಟ್ ಅಂದರು. ನಂತರ ಕೆ.ಬಿ ಸಭೆಯಲ್ಲಿ ಮಾತನಾಡಿದರು. ‘ದಲಿತ ಪದ ತೆಗೆಯುವುದರ ಹಿಂದೆ ಸಾಂಸ್ಕøತಿಕ ರಾಜಕಾರಣವಿದೆ. ದಲಿತರ ಐಡೆಂಟಿಟಿಯನ್ನು ಇಲ್ಲವಾಗಿಸುವ ಪ್ರಯತ್ನ ಅದು’ ಎಂದು ಮಾತು ಮುಗಿಸಿ ಬಂದು ಮತ್ತೆ ಕುಳಿತರು. ‘ಸಿದ್ದಯ್ಯ ಕರೆಕ್ಟ್ ಅಲ್ವೇನೋ’ ಅಂದರು. ‘ಹೌದು’ ಎಂದಿದ್ದೆ. ಪ್ರತಿ ಭಾಷಣವೂ ಭಿನ್ನತೆಯಿಂದ ಕೂಡಿರುತ್ತಿತ್ತು.

ಹಿರಿಯರು ಮತ್ತು ಕಿರಿಯರು ಎನ್ನದೆ ಎಲ್ಲರೊಂದಿಗೆ ಆಪ್ತವಾಗಿ ಬೆರೆಯುತ್ತಿದ್ದ, ಹೆಗಲ ಮೇಲೆ ಕೈಹಾಕಿ ಮಾತನಾಡಿಸುತ್ತಿದ್ದ ಅವರ ನಡವಳಿಕೆ ನನ್ನಂತಹವರು ಕುಗ್ಗುವಂತೆ ಮಾಡಿತ್ತಿತ್ತು. ಅಂಥ ಕೆಬಿ ಇಲ್ಲ, ಮುಂಜಾನೆಯೇ ತೀರಿಹೋದರೆಂಬ ಸುದ್ದಿ ನನ್ನನ್ನು ನಿದ್ರೆಯಿಂದ ಏಳುವಂತೆ ಮಾಡಿತ್ತು. ಅಪಘಾತದಲ್ಲಿ ತೀವ್ರ ಅಸ್ವಸ್ಥಗೊಂಡಿದ್ದ ಅವರು ಉಳಿಯುವ ಲಕ್ಷಣಗಳು ಇಲ್ಲದಿದ್ದರೂ ಒಂದು ಆಸೆಯಂತೂ ಚಿಗುರೊಡೆತ್ತು. ಆ ಚಿಗುರು ಮಳೆಗಾಲದ ರಭಸಕ್ಕೆ ಸಿಕ್ಕಿ ನಲುಗಿ ಹೋಯಿತು.
ಆಪ್ತ ವಲಯದಲ್ಲಿ ಬಕಾಲ ಮುನಿ ಮತ್ತು ಕೆಬಿ ಆಗಿದ್ದರು. ಇಂಗ್ಲೀಷ್ ಸಾಹಿತ್ಯದ ವ್ಯಾಪಕ ಓದು ಅವರೊಬ್ಬ ಪ್ರಬುದ್ಧ ಭಾಷಣಕಾರರನ್ನಾಗಿ ಮಾಡಿತ್ತು. ನನಗೆ ತಿಳಿದ ಮಟ್ಟಿಗೆ ಅವರ ಬರಹಕ್ಕಿಂತ ಭಾಷಣವೇ ತೀಕ್ಷ್ಣವಾಗಿರುತ್ತಿತ್ತು. ಭಾಷಣದಲ್ಲಿದ್ದ ಒಳನೋಟಗಳು ಬರಹದಲ್ಲಿ ಕಂಡುಬರಲಿಲ್ಲ. ಖಂಡಕಾವ್ಯ ಪರಂಪರೆ ಮುಂದುವರಿಕೆಗೆ ಪ್ರಯತ್ನಿಸಿದರು. ದಕ್ಲಕಥಾದೇವಿ, ಬಕಾಲ, ಅನಾತ್ಮ, ಗಲ್ಲೇಬಾನೆ ಎಂಬ ನಾಲ್ಕು ಖಂಡಕಾವ್ಯಗಳನ್ನು ಕೊಟ್ಟ ಕೆಬಿ ಸಮಾಜೋ-ಆಧ್ಯಾತ್ಮಿಕ ದೃಷ್ಟಿಕೋನದಿಂದ ಬರೆದರು. ಅವರ ಕಾವ್ಯ ಸಾಮಾನ್ಯರಿಗೆ ಅರ್ಥವಾಗುವುದಿಲ್ಲ ಎಂಬ ಆರೋಪಗಳು ಇವೆ. ಕತ್ತಲೊಡನೆ ಮಾತುಕತೆ, ಬುದ್ದನ ನಾಲ್ಕು ಸತ್ಯಗಳು ಎಂಬ ಗದ್ಯಕೃತಿಗಳು ಹೊರಬಂದಿವೆ.

ಬರೆದಿದ್ದು ಕಡಿಮೆಯಾದರೂ ಎಲ್ಲವೂ ಮೌಲ್ವಿಕ ಕೃತಿಗಳೇ. ಕಿರಿದರೋಳ್ ಪಿರಿದರ್ಥವನ್ನು ಕಟ್ಟಿಕೊಡುವಂತಹವು. ವಿಮರ್ಶಕ ಕಿ.ರಂ. ನಾಗರಾಜ್, ಅಗ್ರಹಾರ ಕೃಷ್ಣಮೂರ್ತಿ ಮೊದಲಾದವರು ಕೆಬಿ ಅವರ ಖಂಡಕಾವ್ಯಗಳನ್ನು ಬಿಡುಗಡೆ ಮಾಡಿ ಒಳ್ಳೆಯ ಮಾತುಗಳನ್ನು ಆಡಿದ್ದಾರೆ. ಮೇಲ್ನೋಟಕ್ಕೆ ಕೃತಿಗಳ ಶೀರ್ಷಿಕೆಗಳೆಲ್ಲವೂ ಕುಲಮೂಲದಿಂದ ಬಂದಥವುಗಳು ಎಂಬಂತೆ ಕಂಡುಬಂದರೂ ಕಾವ್ಯದ ಆಳದೊಳಗೆ ವಿಶ್ವವ್ಯಾಪಿ ವಿಷಯಗಳನ್ನು ಮುಖಾಮುಖಿಯಾಗಿಸುತ್ತವೆ. ಜಾಗತಿಕರಣದ ಹುನ್ನಾರಗಳಿಂದ ದೇಶೀ ಸಂಸ್ಕøತಿಗೆ ಪೆಟ್ಟು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಆದರೆ ಅವರ ಬರಹ ಸಾಮಾನ್ಯ ಓದುಗನಿಗೆ ನಿಲುಕುವುದು ಕಷ್ಟ.
ತುಮಕೂರು ಮತ್ತು ರಾಜ್ಯದ ಸಾಹಿತ್ಯದ ವಲಯದಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡಿದ್ದ ಕವಿ ಕೆ.ಬಿ.ಸಿದ್ದಯ್ಯ ಒಳಮೀಸಲಾತಿ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಕೆಲವೊಮ್ಮೆ ಸಾಹಿತಿಯಂತೆ, ರಾಜಕಾರಣಿಯಂತೆ ಅವರ ನಡಿಗೆ ಇತ್ತು. ಯಾಕೆಂದರೆ ಹೋರಾಟಗಾರರಾಗಿದ್ದ ಕಾರಣ ಹಾಗೆ ಕಂಡಿದ್ದು ಸಹಜವೂ ಹೌದು. ಭಾಷಣದಲ್ಲಿ ಕೆಲವರಿಗೆ ಚಾಟಿ ಬೀಸಿ ಬಿಸಿ ಮುಟ್ಟಿಸಿದ್ದರು. ಆದರೆ ಅವರ ಬರಹಗಳಲ್ಲಿ ರಾಜಕೀಯ ಪ್ರವೇಶವಾಗದಂತೆ ನೋಡಿಕೊಂಡರು.

ಕೆ.ಬಿ.ಸಿದ್ದಯ್ಯ ಮತ್ತು ಸ್ನೇಹ ಬಳಗ ಕುಡಿಯಲು ಕೂತರೆ ಗಂಟೆಗಳೇ ಕಳೆಯುತ್ತಿದ್ದವು. ಅಲ್ಲಿ ಚರ್ಚೆಯಾಗುತ್ತಿದ್ದ ವಿಷಯ ಹಲವು. ರಾಜಕೀಯ, ಸಾಮಾಜಿಕ, ಸಾಂಸ್ಕøತಿಕ, ಸಾಹಿತ್ಯಕ, ವ್ಯಕ್ತಿಗತ ಹೀಗೆ ಎಲ್ಲ ಕೋನಗಳಿಂದ ಚರ್ಚೆ ನಡೆಯುತ್ತಿತ್ತು. ಇಂಗ್ಲೀಷ್ ಸಾಹಿತ್ಯ ಷೇಕ್ಸ್‍ಪಿಯರ್ ನಾಟಕಗಳ ಸಾಲುಗಳನ್ನು ಉದ್ದರಿಸಿ ವಿವರಿಸುತ್ತಿದ್ದರು. ಉಳಿದವರು ಇವರ ಮಾತುಗಳನ್ನು ಕೇಳುತ್ತಾ ಮದ್ಯ ಹೀರುತ್ತಾ ಕೇಳಿಕೊಳ್ಳಬೇಕಾಗಿತ್ತು. ಹಾಗಿತ್ತು ಅವರ ವಾಗ್ಜರಿ. ಕೇಳಲು ಆನಂದ.

ದರೈಸ್ತ್ರಿ ಪ್ರಶಸ್ತಿ ಸ್ಥಾಪಿಸಿ ಅಹಿಂದ ನಾಯಕ ಸಿದ್ದರಾಮಯ್ಯ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಪ್ರತಿವರ್ಷವು ಪ್ರಶಸ್ತಿ ಕೊಡಲು ಹಣಕಾಸಿನ ತೊಂದರೆಯಾಗುತ್ತದೆ ಎಂದು ಹೇಳಿದಾಗ ಹಾಗಾದರೆ ಏನು ಮಾಡಬೇಕು ಎಂದು ನನ್ನನ್ನೇ ಕೇಳಿದ್ದರು. ಮೂರು ವರ್ಷಕ್ಕೊಮ್ಮೆ ಪ್ರಶಸ್ತಿ ನೀಡಿದರೆ ಒಳ್ಳೆಯದು. ಹಣ ಸಂಗ್ರಹಕ್ಕೂ ಕಷ್ಟವಾಗುವುದಿಲ್ಲ ಎಂದು ಹೇಳಿದಾಗ ಯೋಚನೆ ಮಾಡೋಣ ಎಂದಷ್ಟೇ ಹೇಳಿದ್ದರು. ಅಪಘಾತ ಆಗುವುದಕ್ಕೂ ಮೊದಲು ಸಿಕ್ಕಿದ್ದ ಕೆಬಿ ಪ್ರೀತಿಯಿಂದಲೇ ಮಾತಾಡಿ ಹೇಗಿದ್ದೀಯ ಎಂದು ಆರೋಗ್ಯ ವಿಚಾರಿಸಿ ಬೆನ್ನು ತಟ್ಟಿ ಹೋಗಿದ್ದರು. ಅದು ಇನ್ನೂ ನೆನಪಿದೆ ಆದರೆ ಅವರಿಲ್ಲ.

ಸುದೀರ್ಘ ಕಾಲ ಸಾಹಿತ್ಯ ಕ್ಷೇತ್ರದಲ್ಲಿದ್ದರೂ ಅವರು ಇನ್ನೂ ಬರೆಯಬೇಕಾಗಿತ್ತು. ಇಂಗ್ಲೀಷ್‍ನಿಂದ ಅನುವಾದ ಸಾಹಿತ್ಯ ಬರೇಕಿತ್ತು. ಆದರೆ ಅಂತಹ ಕೆಲಸಕ್ಕೆ ಕೈ ಹಾಕಲೇ ಇಲ್ಲವೆಂಬ ಬಗ್ಗೆ ಹಲವರಲ್ಲಿ ಸಿಟ್ಟು ಕೂಡ ಇದೆ. ಅದು ಪ್ರೀತಿ ಸಿಟ್ಟು. ದ್ವೇಷದ ಸಿಟ್ಟಲ್ಲ ಎಂಬುದನ್ನು ನಾವು ಮನಗಾಣಬೇಕಾಗಿದೆ.

RELATED ARTICLES

1 COMMENT

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?