Thursday, June 20, 2024
Google search engine
Homeಸಾಹಿತ್ಯ ಸಂವಾದಅಂತರಾಳಒಂದೇ ಒಂದು ‘ಸಾರಿ’

ಒಂದೇ ಒಂದು ‘ಸಾರಿ’

ಜಿ.ಎನ್.ಮೋಹನ್


‘ಮ್ಯಾಕ್ ಬೆತ್’ ನಾಟಕದಲ್ಲಿ ಒಂದು ಪ್ರಸಂಗ ಬರುತ್ತೆ.

ನಟ್ಟ ನಡುರಾತ್ರಿ ಎದ್ದು ಲೇಡಿ ಮ್ಯಾಕ್ ಬೆತ್ ದಿಕ್ಕಿಲ್ಲದವಳ ಹಾಗೆ ಅಲೆಯಲು ಪ್ರಾರಂಭಿಸುತ್ತಾಳೆ. ಕೈಯನ್ನು ತೊಳೆದೇ ತೊಳೆಯುತ್ತಾಳೆ. ಮತ್ತೆ ಮತ್ತೆ ಕಣ್ಣ ಮುಂದೆ ಕೈ ತಂದು ನೋಡಿಕೊಳ್ಳುತ್ತಾಳೆ. ಹತಾಶಳಾಗುತ್ತಾಳೆ.

ಕೈಯಲ್ಲಿರುವ ಕಲೆಗಳು ಒಂದಿನಿತೂ ಮಾಯವಾಗಿಲ್ಲ. ಜಗದ ನೀರನ್ನು ತಂದು ತೊಳೆದರೂ ಕರಗಿಲ್ಲ. ನಿಡುಸುಯ್ಯುತ್ತಾಳೆ. ಸುಗಂಧದ್ರವ್ಯ ಪೂಸಿ ಅಂಗೈಯ ಕಲೆಯ ಕಮಟು ವಾಸನೆಯನ್ನು ಇಲ್ಲವಾಗಿಸಿಬಿಡಲು ಒದ್ದಾಡುತ್ತಾಳೆ.

ಊಹೂಂ. ಆಗುತ್ತಿಲ್ಲ. ‘ಓಹ್! ಇಡೀ ಅರೇಬಿಯಾದ ಸುಗಂಧ ದ್ರವ್ಯಗಳೂ ನನ್ನ ಕೈಗಳ ಕಲೆಯನ್ನು ತೊಳೆಯಲಾರವೇ’ ಎಂದು ಉದ್ಗರಿಸುತ್ತಾಳೆ.

ಲೇಡಿ ಮ್ಯಾಕ್ ಬೆತ್ ನಿದ್ದೆಯಲ್ಲೂ ನಿದ್ದೆ ಕಳೆದುಕೊಂಡಿದ್ದಾಳೆ. ನಿದ್ದೆಯ ಆ ನಡಿಗೆಯೂ ಅವಳು ನಡೆದ ವಿಕಾರಗಳನ್ನೇ ಮತ್ತೆ ಮತ್ತೆ ನೆನಪಿಗೆ ತರುತ್ತದೆ.

ಒಂದು ಹತ್ಯೆ, ಅದಕ್ಕಾಗಿ ಮತ್ತೊಂದು, ಅದನ್ನು ಮುಚ್ಚಿಹಾಕಲು ಮತ್ತಷ್ಟು? ಎಲ್ಲೆಡೆ ರಕ್ತ. ಕೊಂದದ್ದು ಬೇರೆಯವರಾದರೂ ರಕ್ತದ ಕಲೆ ಇವಳ ಕೈಯಲ್ಲಿದೆ. ಸಾಮ್ರಾಜ್ಯ ಮುಳುಗಿ ಹೋಗುವಷ್ಟು ಕೊಲೆಗಳು ನಡೆದುಹೋಗಿವೆ. ಅದರ ಇಡೀ ಸೂತ್ರ ಅದೇ ಅದೇ ಲೇಡಿ ಮ್ಯಾಕ್ ಬೆತ್ ಳ ಕೈಯಲ್ಲಿ.

ನಾನು ಚಿಕ್ಕವನಾಗಿದ್ದಾಗ ಪೇಪರ್ ನಲ್ಲಿ ಒಂದು ಫೋಟೋ ನೋಡಿದ್ದೆ- ಪಂಜಾಬಿನ ಮುಖ್ಯಮಂತ್ರಿಯದ್ದು. ಆತ ಅಲ್ಲಿನ ಸ್ವರ್ಣಮಂದಿರದ ಮುಂದೆ ಚಪ್ಪಲಿ ಕಾಯುತ್ತಾ ಕೂತಿದ್ದಾನೆ. ಶೂಗಳನ್ನು ತಿಕ್ಕಿ ಹೊಳಪು ಮಾಡುತ್ತಿದ್ದಾನೆ.

ಇನ್ನೊಂದು ಚಿತ್ರ ನನ್ನ ತಲೆಯಲ್ಲಿ ಕೂತಿದೆ. ಮೋನಿಕಾ ಬೇಡಿಯದ್ದು. ಅದೇ ಸ್ವರ್ಣ ಮಂದಿರದಲ್ಲಿ ಪೊರಕೆ ಹಿಡಿದು ನೆಲ ಗುಡಿಸುತ್ತಿದ್ದಾಳೆ. ಪಾತ್ರೆ ಉಜ್ಜುತ್ತಿದ್ದಾಳೆ.

ಇವರೂ ಅಷ್ಟೆ. ಕೈಯಲ್ಲಿರುವ ಕಲೆ ತೊಳೆದುಕೊಳ್ಳಲು ಯತ್ನಿಸುತ್ತಿದ್ದಾರೆ. ಲೇಡಿ ಮ್ಯಾಕ್ ಬೆತ್ ಕೈಯೂ ಕಲೆಯಿಂದ ತುಂಬಿದೆ. ಆಕೆ ಸುಗಂಧದ್ರವ್ಯ ಪೂಸಿ ಅದನ್ನು ಮರೆಮಾಚಿಕೊಳ್ಳಲು ಯತ್ನಿಸುತ್ತಿದ್ದಾಳೆ.

ಇಲ್ಲಿ ಸ್ವರ್ಣಮಂದಿರದ ಅಂಗಳದಲ್ಲಿರುವವರ ಕೈಗಳಲ್ಲೂ ಕಲೆ ಇದೆ. ಅವರು ನೆಲ ಗುಡಿಸುತ್ತಿದ್ದಾರೆ, ಚಪ್ಪಲಿ ಕಾಯುತ್ತಿದ್ದಾರೆ, ಶೂ ಉಜ್ಜುತ್ತಿದ್ದಾರೆ.

ಆಟೋದಲ್ಲಿ ಹೋಗುತ್ತಿದ್ದೆ. ಜೊತೆಗೆ ಮಗಳಿದ್ದಳು. ಯಾವ ಮೂಡ್ ನಲ್ಲಿದ್ದೆನೋ. ಅವಳ ಯಾವುದೋ ತುಂಟಾಟಕ್ಕೆ ಗದರಿಬಿಟ್ಟಿದ್ದೆ. ಅವಳ ಕಣ್ಣಾಲಿಗಳು ತುಂಬಿ ಹೋಗಿದ್ದವು. ಒಂದಿಷ್ಟು ಕುರುಹು ಬಿಟ್ಟುಕೊಡದಂತೆ ಅಪಾರವಾಗಿ ದುಃಖಿಸುತ್ತಿದ್ದಳು. ಒದ್ದಾಡಿಹೋದೆ.

ಅವಳತ್ತ ತಿರುಗಿ ‘ಸಾರಿ’ ಎಂದೆ.

ಆಡಿದ್ದು ಒಂದೇ ಒಂದು ಪದ. ಆದರೆ ಅವಳು ನೀರಾಗಿ ಹೋದಳು. ಮಿಂಚಿನಂತೆ ಎಗರಿ ನನ್ನ ಭುಜ ತಬ್ಬಿಕೊಂಡಳು. ‘ಐ ಆಮ್ ವೆರಿ ಸಾರಿ ಪಪ್ಪ’ ಅಂದಳು.

ಒಂದು ‘ಸಾರಿ’ ಇನ್ನೊಂದು ‘ಸಾರಿ’ಯನ್ನು ಪಡೆದು ನಿಂತಿತ್ತು. ಎರಡು ‘ಸಾರಿ’ ಘಟನೆಗಳನ್ನು ಸೃಷ್ಟಿಸಿದ್ದ ಇಬ್ಬರು ತಮ್ಮ ತಪ್ಪು ಅರಿತುಕೊಂಡು ಮೆತ್ತಗಾಗಿದ್ದರು. ತಪ್ಪುಗಳನ್ನು ನಿವೇದಿಸಿಕೊಂಡು ಹಗುರಾಗಿದ್ದರು.

ಒಂದು ‘ಸಾರಿ’ ಇದನ್ನು ಮಾಡಿತ್ತು.

ಆಫೀಸ್ ನಲ್ಲಿದ್ದೆ. ಏನೋ ದಿಢೀರ್ ವಿಷಯ. ಸಹೋದ್ಯೋಗಿಗಳಿಗೆ ಫೋನ್ ಮಾಡಿದೆ. ಎತ್ತುವುದು ತಡವಾಯಿತು. ಆ ಕಡೆಯ ದನಿಯಲ್ಲಿ ಏನೋ ಬೇಕಾಬಿಟ್ಟಿ ಭಾವನೆ. ಗದರಿಬಿಟ್ಟೆ.

ಆಮೇಲೆ ನನಗೇ ನಾನು ಒದ್ದುಕೊಂಡೆ. ಆತ ನಾನೇ ಆಯ್ದುಕೊಂಡು ಬಂದ ಹುಡುಗ. ಆತ ಹೇಳುತ್ತಿದ್ದ ‘ಸರ್! ನನ್ನ ದನಿ ಇರುವುದೇ ಹಾಗೆ ಸಾರ್’. ಅದು ನನಗೂ ಗೊತ್ತಿತ್ತು. ಆದರೆ ಆ ಗದರುವಿಕೆಯ ಧಿಮಾಕಿನಲ್ಲಿ ಅದು ನನ್ನ ಕಣ್ಣಮುಂದೆ ಬರುತ್ತಲೇ ಇಲ್ಲ.

ಆತ ಹೇಳಿಕೇಳಿ ಮೆತ್ತನೆಯ ಹುಡುಗ. ಆ ಕಾರಣಕ್ಕಾಗೇ ಎಲ್ಲರಿಗೂ ಇಷ್ಟವಾದ ಹುಡುಗ. ಹೌದು, ನಾನು ತಪ್ಪು ಮಾಡಿಬಿಟ್ಟೆ ಎನಿಸಿತು. ರಾತ್ರಿ ನಿದ್ದೆ ಕಳೆದುಕೊಂಡೆ.

ಮಾರನೆಯ ದಿನ ಆಫೀಸಿನಲ್ಲಿ ಎಲ್ಲರ ಮೀಟಿಂಗ್ ಕರೆದವನೇ ‘ಸಾರಿ’ ಎಂದೆ. ಬೆದರಿ ಗುಬ್ಬಚ್ಚಿಯಾಗಿ ಹೋಗಿದ್ದ ಆತನ ಮುಖ ಒಂದಿಷ್ಟೇ ಅರಳುತ್ತಾ ಹೋಗಿದ್ದು ನನಗೆ ಗೊತ್ತಾಯಿತು. ಅದಕ್ಕಿಂತಲೂ ಹೆಚ್ಚಾಗಿ ನನ್ನೊಳಗಿನ ನಾನು ಶುದ್ಧವಾಗುತ್ತಾ ಹೋಗಿದ್ದೆ.

ಅದೂ ಒಂದು ‘ಸಾರಿ’ಯಿಂದಾಗಿ.

ಆಗಿನ್ನೂ ಮದುವೆಯಾಗಿದ್ದೆ. ಬೀದಿ ಬೀದಿ ತಿರುಗುತ್ತಿದ್ದ ಕಾಲ. ಇದನ್ನು ಸಾಧ್ಯ ಮಾಡಲು ಕೈನೆಟಿಕ್ ಜೊತೆ ಇತ್ತು. ಸಿಕ್ಕಿದ್ದನ್ನು ಮುಕ್ಕಲು ಸಿಕ್ಕಲ್ಲಿ ನುಗ್ಗುತ್ತಿದ್ದೆವು.

ಹೀಗೆ ಪಾನಿ ಪೂರಿ ಉಡಾಯಿಸಿ ಸ್ಕೂಟರ್ ಹತ್ತಲು ಬಂದಾಗ ಆತ ಎದುರಾದ. ಹರಿದ ಅಂಗಿ ಚಡ್ಡಿಗಿಂತ ಅವನ ಮುಖದಲ್ಲಿ ಇನ್ನಿಲ್ಲದಷ್ಟು ಹಸಿವು ಮುದುರಿಕೊಂಡು ಬಿದ್ದಿತ್ತು. ಆತ ಪಾರ್ಕಿಂಗ್ ಫೀಸ್ ಕೇಳಿದ.

ತಕ್ಷಣ ನನ್ನ ತರ್ಕ ಎಚ್ಚರವಾಗಿ ಕೂತಿತು. ಇದು ಪಾರ್ಕಿಂಗ್ ಜಾಗ ಅಲ್ಲ. ಎರಡನೆಯದಾಗಿ ಸ್ಕೂಟರ್ ಪಾರ್ಕ್ ಮಾಡುವಾಗ ನೀನು ಇರಲೇ ಇಲ್ಲ. ನಾಟಕ ಮಾಡ್ತೀಯಾ ಅಂತ ಬೈದೆ. ಆ ಎಲ್ಲದರ ಮಧ್ಯೆಯೂ ಚಿಲ್ಲರೆಗಾಗಿ ಪರ್ಸ್ ತಡಕುತ್ತಿದ್ದ ಅವಳನ್ನೂ ಗುರ್ ಅನ್ನುವ ಕಣ್ಣಿನಿಂದ ನೋಡಿದ್ದಾಯ್ತು. ದುಡ್ಡು ಕೊಡಲು ಬಿಡಲೇ ಇಲ್ಲ.

ಅವಳು ಹೇಳುತ್ತಿದ್ದಳು: ‘ಹಾಗಲ್ಲ’ ಆತ ಹಸಿದಿದ್ದಾನೆ. ನೋಡಿದರೆ ಸಾಕು, ಬಡವ ಅನ್ನೋದು ಗೊತ್ತಾಗುತ್ತೆ. ಪಾರ್ಕಿಂಗ್ ಫೀಸ್ ಕೇಳ್ತಾ ಇದಾನೆ ಅಂತ ಯಾಕ್ ಅನ್ಕೋತೀಯಾ? ದಾನ ಅಂತಾದ್ರೂ ಕೊಟ್ಬಿಡು’. ‘ಊಹೂಂ’ ಅಂದೆ.

ಆಗ ಗೊತ್ತಾಗಿದು ಅಷ್ಟೆ. ಆದ್ರೆ ಆಮೇಲೆ ಆಮೆಲೆ ಆ ಹುಡುಗನ ಮುಖ ಒದ್ಕೊಂಡು ಬರೋಕೆ ಶುರುವಾಯಿತು. ಅವನ ಮುಖಾನಾ ಸ್ಟಡಿ ಮಾಡ್ದೆ. ಹೌದು, ಅವತ್ತು ನೋಡಿದ ಮುಖದಲ್ಲಿ ನೋವಿತ್ತು, ಹಸಿವಿತ್ತು ಅಂತ ಅನ್ನಿಸ್ತು.

ಹಸಿದವನ ಮುಂದೆ ಲಾ ಪಾಯಿಂಟ್ ಗೆ ಏನಿದೆ ಅರ್ಥ? ಯಾಕೆ ಅವತ್ತು ಲಾ ಪಾಯಿಂಟ್ ಗಟ್ಟಿಯಾಗಿ ಹಿಡಕೊಂಡು ಬಿಟ್ಟೆ ಅನಿಸ್ತು. ಅದು ಅವನ ಮುಖಾನ ಹೇಗೆ ನನ್ನ ಮುಂದೆ ಬಿಚ್ಚಿಟ್ಟಿತ್ತೋ ಹಾಗೇ ನನ್ನ ಮುಖಾನಾ ಬಿಚ್ಚಿಟ್ಟುಬಿಡ್ತು.

ಏನು ಮಾಡೋದು ‘ಸಾರಿ’ ಕೇಳ್ಬೇಕು ಅನ್ಸುತ್ತೆ. ಆದ್ರೆ ಹೇಗೆ? ಎಲ್ಲಿ ಹುಡುಕ್ಕೊಂಡು ಹೋಗ್ಲಿ? ಎಲ್ಲಿದಾನೋ? ಒದ್ದಾಡ್ತಾ ಇದೀನಿ.

ಈಗ ಬಂದ ಬಂದ ಹುಡುಗರಿಗೆ ಕೈತುಂಬಾ ಕೊಡ್ತೀನಿ. ಅವರ ಮುಖಾ ಕೂಡ ನೋಡಲ್ಲ. ಹೆದರಿಕೆ ಆಗುತ್ತೆ. ಪಾಪ ಕಳಕೊಳ್ಳೋಕೆ ಅದು ಒಂದು ದಾರಿ ಇರಬಹುದು. ಆದ್ರೆ ಆ ಹುಡುಗನಿಗೆ ‘ಸಾರಿ’ ಕೇಳ್ದೆ ಹೇಗೆ ಬದುಕ್ಲಿ ಅನ್ಸುತ್ತೆ.

ಒಂದಿನಾ ನನ್ನ ಕೊಲೀಗ್ ನ ಡ್ರಾಪ್ ಮಾಡೋಕೆ ಹೋಗಿದ್ದೆ. ನೈಟ್ ಶಿಫ್ಟ್ ಮುಗಿಸಿ ಬಹುಶಃ ರಾತ್ರಿ 3 ಗಂಟೆ. ಹೋಗಿ ಬರ್ತಿರೋವಾಗ ಏನೋ ಅಡ್ಡ ಅನಿಸ್ತು. ಗೊತ್ತಾಗ್ಲಿಲ್ಲ. ಬೀದಿ ದೀಪಾನೂ ಇರ್ಲಿಲ್ಲ ಓಡಿಸ್ಬಿಟ್ಟೆ. ತಕ್ಷಣ ‘ಕುಂಯೋ’ ಅನ್ನೋ ಅರ್ತನಾದ ಕೇಳಿಸ್ತು.

ಏನಾಯ್ತು? ಪುಟಾಣಿ ನಾಯಿ ಮರಿಗಳ ದನಿ. ನಾನು ಅದನ್ನ ಸಾಯಿಸೇಬಿಟ್ನಾ?

ಕಾರ್ ತಗೊಂಡಾಗ ಡ್ರೈವಿಂಗ್ ಕಲಿಯೋ ಟೈಮಲ್ಲಿ ಬ್ರೇಕ್ ಯಾವ್ದು ಅಂತ ಗೊತ್ತಾಗ್ದೆ ಎದುರು ನಿಂತಿದ್ದ ಹಸೂಗೆ ಡಿಕ್ಕಿ ಹೊಡ್ದೆ. ಆ ಹಸೂ ನನ್ನನ್ನ ನೋಡ್ತಲ್ಲ. ಅದು ನೋಡಿದ ಬಗೆ ನನ್ನೊಳಗೆ ಇನ್ನೂ ಇದೆ. ಹೇಗೆ ತಪ್ಪಾಯ್ತು ಅಂತ ಕೇಳೋದು?

ಇದನ್ನು ಬರೀತಾ ಬರೀತಾನೇ ನನ್ನ ಅಂಗೈನೂ ನೋಡ್ಕೊಂಡೆ. ಓಹ್! ಡಿಟೋ ಲೇಡಿ ಮ್ಯಾಕ್ ಬೆತ್ ಅಂಗೈ ಥರಾ ಆಗೋಗಿದೆ. ತುಂಬಾ ಕಲೆ ಇದೆ. ತೊಳ್ಕೊಳ್ಳೋದು ಹೇಗೆ, ಕಳ್ಕೊಳ್ಳೋದು ಹೇಗೆ ಅನ್ಸುತ್ತೆ.

ಚಿಕ್ಕಪುಟ್ಟ ವಿಷಯ ಆದ್ರೆ ಬರೆದು ಬಿಸಾಡಬಹುದು. ಆದ್ರೆ ಜೀವನವೇ ಒದ್ದಾಡಿ ಹೋಗೋ ಸಂಗತಿಗಳನ್ನು ಬರೆದು ಹೇಳೋದಾದ್ರೂ ಹೇಗೆ?

ಬದುಕು ಅನ್ನೋದು ನಿರಂತರವಾಗಿ ‘ಸಾರಿ’ ಕೇಳುತ್ತೆ. ಕೇಳೋ ಹಾಗೂ ಮಾಡುತ್ತೆ. ಆದ್ರೆ ‘ಸಾರಿ’ ಅಂತ ಕೇಳಿದ್ರೂ ನೂರೆಂಟು ಬಾರಿ ಕೇಳಿದ್ರೂ ಮಾಯ ಆಗ್ದೇ ಇರೋ ಹೊಡೆತ ಇರುತ್ತಲ್ಲ, ಅದನ್ನ ಮಾಯಿಸೋದು ಹೇಗೆ?

ಒಂದು ಕಮೋಡ್ ನಲ್ಲಿ ಬಿದ್ದರೋ ಆ ಮೊಬೈಲು, ಕದ್ದು ನೋಡಿದ ಒಂದು ಈ-ಮೇಲೂ, ಬಾಗಿಲು ಹಾಕಿಕೊಂಡು ತಡಕಾಡಿದ ಎಸ್ ಎಂಎಸ್ ಗಳು, ಎದ್ದೆದ್ದು ಕುಣಿದ ರಾಕ್ಷಸಾಕಾರದ ಆಕೃತಿಗಳು, ಕೊಳ್ಳಿದೆವ್ವಗಳಂತೆ ಕುಣಿದಾಡಿದ ವಿಷಯಗಳು ಇವೆಲ್ಲ ನಿಂತುಬಿಟ್ಟಿದೆ, ಎದೆಯೊಳಗೆ, ಮನಸ್ಸೊಳಗೆ, ಕಾಡುತ್ತೆ.

ಅದ್ರಿಂದ ಬಿಡುಗಡೆ ಪಡ್ಕೊಂಡುಬಿಡ್ಬೇಕು, ನಿರಾಳ ಆಗಿಬಿಡಬೇಕು ಅಂತೇನೂ ಅನ್ಸಲ್ಲ. ಆದ್ರೆ ಆ ಗಾಯಗಳನ್ನು ತೊಳೀಬೇಕು ಅನ್ಸುತ್ತೆ. ಮುಲಾಮು ಹಚ್ಚಬೇಕು ಅನ್ಸುತ್ತೆ. ಆದ್ರೆ ಮುಲಾಮು ಹಚ್ಚೋ ಜಾಗಗಳು ಒಂದೆರಡಾ! ಇಡೀ ದೇಹಾನೇ ಕೊಚ್ಚಿ ಹಾಕಿದಾಗ ಇಷ್ಟಕ್ಕೇ ಅಂತ ಮುಲಾಮು ಹಚ್ಚೋ ಜಾಗ ಹುಡುಕೋದಾದ್ರೂ ಹೇಗೆ?

ಅವತ್ತು ಏನೂ ಅರ್ಥ ಆಗ್ದೆ ಪಿಳಿಪಿಳಿ ಅನ್ತಿದ್ದ ಕಣ್ಣುಗಳಲ್ಲಿ ಇತ್ತಲ್ಲ, ಆತಂಕ, ಸುರಿಸ್ತಾ ಇತ್ತಲ್ಲ ಕಣ್ಣೀರು, ಅದನ್ನ ತೊಳೆದು ಹಾಕೋದು ಹೇಗೆ?

ಗಾಂಧೀಜಿ ಏನೋ ತಪ್ಪು ಮಾಡಿದ್ದರ ಬಗ್ಗೆ ಬರೆದು ಅಪ್ಪನಿಗೆ ಕೊಟ್ಬಿಟ್ರು. ಮಹಾತ್ಮ ಆಗೋ ದಾರೀಲಿ ಒಂದು ಹೆಜ್ಜೇನೂ ಹಾಕ್ಬಿಟ್ರು. ಏನು ತಪ್ಪು ಅಂತ ಮಾಡಿದ್ರು ಅವರು? ಬೀಡಿ ಸೇದಿದ್ರು, ಕದ್ದು ಸೇದಿದ್ರು.

ಬೆಂಕಿ ಬೀಡೀನ ಮಾತ್ರ ಸುಡ್ಲಿಲ್ಲ. ಜೊತೆಗೆ ಅವರನ್ನೂ ಸುಟ್ಟು ಹಾಕಿತ್ತು. ಆದ್ರೆ ನನ್ನೊಳಗೆ ಇರೋ ನಾನು ಮಾಡಿರೋ ಗಾಯಗಳಿಗೆ ಯಾರಿಗೆ ಪತ್ರ ಬರೆಯೋದು? ಎಷ್ಟು ಜನರಿಗೆ ಅಂತಾ ಬರೆಯೋದು?

‘ನಿನ್ನಂತರಗದಲ್ಲೊಂದು ನೋವು ನಾನಾಗಿ ನಿಂತುಬಿಟ್ಟೆ
ನೀನೊಪ್ಪಿಕೊಂಡ ಬಾಳ ಚಂದಿರನ
ಕಲೆಯಾಗಿ ಕೂಡಿಕೊಂಡೆ’

ಅಂತ ಆ ಕವಿ ಬರೆದಾಗ ಆತನೂ ಯಾರಿಗೋ ‘ಸಾರಿ’ ಕೇಳ್ತಿದಾನೆ ಅನಿಸ್ತು. ನಾನೂ ಒಂದು ಕಲೆಯಾಗಿ ಕೂಡಿಕೊಂಡ ಘಟನೆಗಳು ಸುರುಳಿಸುರುಳಿಯಾಗಿ ಬಿಚ್ಚಿಕೊಳ್ತಾ ಇದೆ.

ಯಾಕೋ ಇದೆಲ್ಲಾ ನೆನಪಾಗಿದ್ದು, ಆಸ್ಟ್ರೇಲಿಯಾ ಪ್ರಧಾನಿ ಶತಮಾನದ ತಪ್ಪಿಗೆ ಜನರೆದುರು ನಿಂತು ‘ಸಾರಿ’ ಅಂತ ಕೇಳಿದ್ರಲ್ಲ ಅದಕ್ಕೆ.

ಅದಕ್ಕಿಂತ ಮುಖ್ಯವಾಗಿ ಕಲ್ಪನಾ ಶರ್ಮ ಹಿಂದೂ ಪತ್ರಿಕೇಲಿ ‘ಸಾರಿ’ ಅನ್ನೋದು ದೊಡ್ಡ ಶಬ್ದ ಅಂತ ಬರೆದ್ರಲ್ಲಾ ಅದಕ್ಕೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?