Wednesday, January 15, 2025
Google search engine
Homeಸಾಹಿತ್ಯ ಸಂವಾದಅಂತರಾಳಒಂದೊಂದು ಭತ್ತದ ಕಾಳು ಹಾಯುತ್ತಿದ್ದ ಅಣ್ಣ ಕೊನೆಗೆ ಮಾಡಿದ್ದೇನು....

ಒಂದೊಂದು ಭತ್ತದ ಕಾಳು ಹಾಯುತ್ತಿದ್ದ ಅಣ್ಣ ಕೊನೆಗೆ ಮಾಡಿದ್ದೇನು….

ಮಹೇಂದ್ರ ಕೃಷ್ಣಮೂರ್ತಿ


ಆಗ ನಾ‌ನಿನ್ನು ಆರನೇ ಕ್ಲಾಸ್ ನಲ್ಲಿದ್ದೆ. ಜುಲೈ- ಆಗಸ್ಟ್ ತಿಂಗಳಿರಬೇಕು. ಒಂದೇ ಸಮನೇ ಸೋನೆ ಮಳೆ. ಅಂದರೆ ಆಗ ಅದು ಗದ್ದೆ ಕೂಯ್ಲಿನ ಕಾಲ. ತುಂತುರು ಮಳೆಯಲ್ಲೇ ಭತ್ತ ಬಡಿಯುವ ಕೆಲಸ.

ನಮ್ಮೂರಿನಿಂದ ಮೂರು ನಾಲ್ಕು ಕಿಲೋ ಮೀಟರ್ ದೂರದ ಸಿ.ಎಸ್.ಪುರದ ಗದ್ದೆ ಬಯಲಿನಲ್ಲಿ ಕೆಲಸ.

ಅದನ್ನು ಪುಳಿಯೋಗರಯ್ಯ‌ನ ಗದ್ದೆ ಎಂದೇ ನಮ್ಮನೆಯಲ್ಲಿ ಕರೆಯುತ್ತಿದ್ದರು. ಅದು ಶನಿವಾರ,‌ ನಮಗೆಲ್ಲ ಬೆಳಿಗ್ಗೆ ಕ್ಲಾಸ್.

ಸ್ಕೂಲಿನಿಂದ ಬಂದವನಿಗೆ ಅಮ್ಮ ಗದ್ದೆ ಬಳಿ ನಿಮ್ಮಣ್ಣನಿಗೆ ಟೀ ತಗೊಂಡ್ ಹೋಗ್ತಿಯಾ, ಭಯ ಇಲ್ವ, ಗದ್ದೆ ಗುರುತು ಸಿಗುತ್ತಾ ಎಂದು ಕೇಳಿದರು. ನಾನೂ ಖುಷಿಯಲ್ಲಿ ರೆಡಿಯಾದೆ.

ತುಂತುರು ಮಳೆಯಲ್ಲಿ ತಲೆಗೆ ಒಂದು ಕವರ್ ಕಟ್ಟಿಕೊಂಡವನು ಆದಷ್ಟು ಬೆಚ್ಚಗಿರುವಾಗಲೇ ಟೀ ಕೊಡಬೇಕೆಂದು ಸೈಕಲ್ ಕತ್ತರಿ ಪೆಡಲ್ ತುಳಿದುಕೊಂಡು ಹೊರಟೆ.

ಅಲ್ಲಿನ ಹೋದಾಗ ಎಲ್ಲಿ ನೋಡಿದರೂ ಭತ್ತದ‌ ಮೆದೆಗಳೇ. ಅಲ್ಲೊಂದು ಹುಣುಸೆ ಮರ ಇತ್ತು. ಅದು ನಮ್ಮ‌ ಗದ್ದೆ ಗುರುತಿ‌ನ ಜಾಗ. ಅಲ್ಲಿಗೆ ಹೋದರೆ ಹಲವಾರು ಮೆದೆಗಳು, ಹಲವಾರು ಜಾಗಗಳು.

ಸರಿ, ಭಯ ಶುರುವಾಯಿತು. ಕೊ‌ನೆಗೂ ಅಣ್ಣ ಭತ್ತದ ರಾಶಿಯೊಂದರ ಕೈ ಅಳತೆ ದೂರದಲ್ಲಿ ಭತ್ತದ ಕಾಳುಗಳನ್ನು ಹಾಯುತ್ತಿದ್ದರು.

ಭತ್ತ ಬೆಳೆಯುವುದರಲ್ಲಿ ನಮ್ಮದು ಹೆಸರಾಂತ ಕುಟುಂಬ. ಭತ್ತದ ರಾಶಿಯಲ್ಲೇ ಮೇಯ್ದು ಕೋಳಿಗಳು ಭತ್ತದ ರಾಶಿಯಲ್ಲೇ ಮೊಟ್ಟೆ ಇಡುತ್ತಿದ್ದವು ಎಂದು ನನ್ನಜ್ಜಿ ಗತಕಾಲದ ವೈಭವ ಹೇಳುತ್ತಿತ್ತು. ಅದು ಇನ್ನೊಂದು ಕತೆ.

ಅದೆಲ್ಲ ಹೋಗಿ ಅಣ್ಣ ಒಂದೊಂದು ಭತ್ತದ ಕಾಳನ್ನು ಹಾಯ್ದು ರಾಶಿಗೆ ಹಾಕುವ ಕಾಲ ಬಂದಿತ್ತು. ಅಣ್ಣನಿಗೆ ಉಳುಮೆಯೇ ಗೊತ್ತಿರಲಿಲ್ಲ. ಅಲ್ಲಿದ್ದ ಅರ್ಧ ಎಕರೆ ಗದ್ದೆಯನ್ನು ವಾರಕ್ಕೆ ಕೊಟ್ಟಿದ್ದರು. ನಮ್ಮೂರಿನ ಹನುಮಂತಣ್ಣ ವಾರಕ್ಕೆ ಮಾಡಿದ್ದರು. ಬಂದಿದ್ದರಲ್ಲಿ ಅರ್ಧ ಅವರಿಗೆ, ಇನ್ನರ್ಧ ನಮಗೆ.

ನನ್ನನ್ನು ನೋಡುತ್ತಿದ್ದಂತೆ ಅಣ್ಣನಿಗೆ ಅಚ್ಚರಿ, ಖುಷಿ, ಮಳೆಯಲ್ಲಿ ಬಂದಿರುವ ಆತಂಕ. ಇದೇ ಮೊದಲ ಸಲ‌ ನಾನು ನಮ್ಮ ಗದ್ದೆ ಒಕ್ಕಣಿಗೆ ಒಳಿ ಹೋಗಿದ್ದು.

ಕೂಡಲೇ ನನ್ನನ್ನು ಕರೆದು ಅಲ್ಲಿಯೇ ಮೆದೆಯೊಂದರ ಪಕ್ಕದಲ್ಲಿ ಒಂದು ಕೊಡೆಯನ್ನು ಮರೆ ಮಾಡಿ ನನ್ನನ್ನು ಕೂರಿಸಿದರು.

ಸರಿ‌, ನಾನು ಕೂತೆ. ಆ ಬಳಿಕವೂ ಅಣ್ಣ ನಾಲ್ಕೈದು ಹಿಡಿಗಳಷ್ಟು ಭತ್ತದ ಕಾಳುಗಳನ್ನು ಹಾದು ತಂದು ರಾಶಿಗೆ ಹಾಕಿದರು.

ನಾನು ಅಣ್ಣನನ್ನು ಕೇಳಿಯೇ ಬಿಟ್ಟೆ. ಇದೇನಣ್ಣ ಹಿಂಗ್ ಹಾಯ್ತಿ, ಅವರೆಲ್ಲ ನೋಡಿ ನಗಲ್ವ ಅಂದೆನು.

ಭತ್ತದ ರಾಶಿಯ ಕಡೆ ಕೈ ತೋರಿಸಿದ ಅಣ್ಣ, ಒಂದೊಂದು ಭತ್ತದ ಕಾಳು ಸೇರಿಯೇ ಭತ್ತದ ರಾಶಿ ಆಗಿದೆ. ಒಂದೊಂದು ಅಕ್ಕಿ ಕಾಳು ಬೇಕೇ ಬೇಕು ಎಂದರು.

ಒಂದರ್ಧ ಗಂಟೆಯಲ್ಲಿ ಭತ್ತ ಬಡಿಯುವುದು ಮುಗಿದು ಒಕ್ಕಣೆ ಕೆಲಸವೂ ಮುಗಿಯಿತು. ಸರಿ, ನಮಗೆ ಹನ್ನೊಂದು ಚೀಲ, ವಾರಕ್ಕೆ ಮಾಡಿದವರಿಗೆ ಹನ್ನೊಂದು ಚೀಲ ಭತ್ತ ಬಂದವು.

ಅಷ್ಟರಲ್ಲಿ ಅಲ್ಲಿಗೆ ಆರೇಳು ಜನ ಬುಡಬುಡಕರು ಬಂದರು. ನಮ್ಮ ಚೀಲದಿಂದ ಪ್ರತಿಯೊಬ್ಬರಿಗೂ ಒಂದೊಂದು ಮೊರ ಭತ್ತವನ್ನು ಅವರಿಗೆ ಅಣ್ಣ ಕೊಡಿಸಿದರು. ಕೊನೆಯಲ್ಲಿ ತೀರಾ ಬಡಕಲಾದ ಅಜ್ಜಿಯೊಬ್ಬರು ಇದ್ದರು. ಅವರಿಗೆ ಒಂದೂವರೆ ಮೊರ ಭತ್ತ ಕೊಡಿಸಿದರು. ಅಜ್ಜಿಗೆ ಭತ್ತ ಹಾಕುವಾಗ ಅಣ್ಣ‌ನ ಮುಖದಲ್ಲಿ ಮಂದಹಾಸ. ನನ್ನ ಕಣ್ಣಲ್ಲಿ ಇಂದು ಮಾಸಿಲ್ಲ. ಒಂದೊಂದು ಕಾಳನ್ನು ಹುಡುಕಿ ಹುಡುಕಿ ಹೆಕ್ಕುತ್ತಿದ್ದ ಅಷ್ಟೊಂದು ಭತ್ತವನ್ನು ಕೊಡುವಾಗ ಅಣ್ಣ ಖುಷಿಯಾಗಿದ್ದರು.

ನನ್ನ ಮುಖನೋಡಿ ಹೇಳಿದರು, ಅವರಿಗೇನಿದೆ, ಇಂಥವರಿಗೇನೆ ಕೊಡಬೇಕಿರುವುದು ಎಂದರು.

ಭತ್ತ ತುಂಬಿದ ಮರದ ಎತ್ತಿನ ಗಾಡಿಯ ಮೇಲೆ ನನ್ನನ್ನು ಎತ್ತಿ ಕೂರಿಸಿದರು. ಅವರು ಗಾಡಿ ಹಿಂದೆ ನಡೆಯುತ್ತಾ ಬಂದರು. ಐ ಲವ್ ಯು ಪಪ್ಪಾ.

RELATED ARTICLES

1 COMMENT

  1. That Past situation will let us become a successful man and that Ethics let us become a Role model to ur Followers. So in life we shouldn’t forget the past life. Hence Present life doesn’t matters. Past is very important to become a great person.

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?