Thursday, March 28, 2024
Google search engine
Homeಸಾಹಿತ್ಯ ಸಂವಾದಒಳ್ಳೊಳ್ಳೆ ಹೂವು,ಎಲ್ಲೆಲ್ಲಿ ಅರಿಳೇವೋ!

ಒಳ್ಳೊಳ್ಳೆ ಹೂವು,ಎಲ್ಲೆಲ್ಲಿ ಅರಿಳೇವೋ!

ಉಜ್ಜಜ್ಜಿ ರಾಜಣ್ಣ , ಮೊ:9 4 4 8 7 4 7 3 6 0


ಬಡುಗುಲು ಮಳಿ ಬಂದು
ಬೆಳುವಾಡಿ ಕೆರಿ ತುಂಬಿ
ಏಸುಕ್ಕಿ ಕೋಶಿಕ್ಕಿ
ಕರು ಕುಡುದು ಮರಿ ಕುಡುದು
ಗುರುವಿನು ಪಾದುವು ತೊಳುದು………….

ಐಯ್ಯೋಜಿಹೊಸಮಾಲೆದುರ್ಗ್ದು ರಾಜ ಕಂಪುಲಿರಾಯ; ಹನ್ನೆರ್ಡಾಳುದ್ದುದು ಗಣಿ ಮ್ಯಾಗಡೆಯಾ, ಬಾಗಿ ಬಳುಕಿ ಎಗ್ಗಲಿಸಿ ಒನ್ದು ಕುಪ್ಪಳಿಸಿ ಒಯ್ಯಾರವುನ್ನೇ ಆಡಿ, ಮುಂಗೈಅಂಗೈಮಾಡಿ ಅಂಗೈಮುಂಗೈಮಾಡಿ ಒಳ್ಳೆಒಳ್ಳೆಯಾ ಒನುಪಾದ ನಾಟ್ಯೇವ್ಕು, ದೊಂಬುರು ರತ್ನಾಜಿಗೆ ಮನಸೋತ. ವೈನಾಗಿ ಆಟಕಟ್ಟಿ ಆಡ್ದು ಆ ವೈಯ್ಯಾರುದು ಒನುಪಾದ ತೊನ್ದಾಡುವ ಮೈಯ್ಯಾಟುಕ್ಕೆ ಮನ ಜೋತು ಅವ್ಳುಗುವೆ ಪಟ್ಟದು ರಾಣಿ ಪದುವಿ ಕೊಟ್ಟಾಗ, ಅವ್ನ ಪತ್ನಿ ಆಸ್ಥಾನ್ದು ಅರಸಿ ಪದುವಿ ತೊರಿಬೇಕಾದ ಸಂದರ್ಪು. ಆಗ ಗುಡ್ಡುದಂತ ಬಸುರಿ ದಿನುಮನುಸ್ಥಿ ಹಾಲೇಸ ಬಾಲೇಕಂದ ಕಾಯ್ದು ಕಂದು ಹೊಟ್ಟೇಲೇ ಬೆಳಿವಾಗ ಅರಸು ಅವುಳ್ನು ಪಟ್ನುದೊರುಗಿನು ಬೀಳುಬಿದ್ದ ಹಾಳು ಸಾವುಡಿಗೆ ಕಳುಸ್ದ. ಅತ್ತ ಆರುಗಾವ್ದು ಸುತ್ತುಲಿಂದ್ಲೂವೆ ಮೂರುಗಾವ್ದು ಕನ್ನಪ್ಪುನುಕಾಡು ಕೀಂಕಾರಣ್ಯ ಕಾಡಂಚಿನು ಮೆಣಿ ಹುಲ್ಲಿ ಗಂಟುಸಾಲೆಬೋಟಿನು ಬೀಳು; ಅಲ್ಲಿ ನೀನೇ ಅನ್ನೋ ದೆವ್ವುಲ್ದು ಜಾಗ್ವುವ, ಜೀವ್ಣುಕು ಜೀವ್ನಾಶಿಗೆ ಹರಿಯಾಲದೇವಿಗೆ ಪಾಲ್ವಂಚಿಗೆ ಭಾಗ್ವಾಗಿ ಬಹಳ ಬೆಲಿ ಬಾಳಾದು ಅತಂಥುವಾ ಕೊಟ್ಟ. ಹುಟ್ಟುತುಲೆ ಉರುಬಂಜೆ ಕಟ್ಟುತುಲೆ ಗೊಡ್ಡುಗಾಳಿ ಎರಡೆಮ್ಮೆನೂವೆ ಒಂಜೊತೆ ಎತ್ನಂತುವೆ ಗೇಯ್ಕಂದು ತಿಂಬೋಕೆ ಕೊಟ್ಟು ಅರುಗಾದ. ಪಡ್ದು ಮಗ ಕಾಟಯ್ಯ ಹೊತ್ತಿಗು ಬಂದೋನು ಜಾವ್ಕು ಬಂದ ಜಾವ್ಕು ಬಂದಾನು ಹೊತ್ತಿಗು ಬಂದು ದೊಡ್ಡನಾದ; ಫಲದ್ರನುನೂ ಆದ ಅಂತನ್ನಿ. ಅಂಗಾಡಿ ಮೇಣಿ ಹಿಡಿಕಾಯಿಡ್ದುವೆ ಬ್ಯಾಸಾಯ ತಿರುವಂಗಾದ. ಅವ್ವು ಕಾಡಂಚಿನು ಬೀಳು ಗಿಡಗೆಂಟೆ ತಗುದ್ರುರೆ, ಮಗ ಬ್ಯಸಾಯ ತಿರುವೋನು.

ಅಂಗೈ ಅಗುಲ; ವತ್ತೋಳುದ್ದ, ಗೇಣುಗೇಣಿಗೂ ಗೆಣ್ಣಿಕ್ಕಿ, ಸೀಳ್ದಿ ಗೆರಿಗೆರಿಯಾಗಿ ಗರಿಗರಿಯಾದ ಮಿಂಚುಟ್ಟಿ ಭೂಮಿ ತೂಕ್ದು ಗುಡುಗಾಗಿ ವನುದು ಜೀವುವೇ ಬೆದುರಿ ಬೆಂಡೆ ಬಿಸುಲಾತು. ಮದುಗುದು ಗುಡ್ಡುದು ಅಡ್ಡೇಣು ಒಳುಗುಲಿಂದವಾ ಎದ್ದಾಯ್ಕು ಗದಿಗದಿಯಾಗಿ ಒಳ್ಳೇದು ಒದಿಯಾಗಿ ಎದ್ದದ್ದೇ ಮಾಡ; ಮುಂಗಾರು ಗುಡ್ದು ಮೇಲೆ ಅಡ್ಡಾದು ಮಳಿ ಕಾಲೂರಿ ಬಿದ್ದ ಬಿರುವಿಗೆ, ಮದುಗುದು ಗುಡ್ದು ಅಡ್ಡೇಣು ಇಳ್ದು ಸೀಳಿ ಹರುದುವು ಹಳ್ಳಸರುದು ತೊರಿ ಹಳ್ಳಗುಳು. ಮಡುದೊಳುಗು ಹಣ್ಣೆಲಿ ಸುರುದಂಗು ಬಂತು ಮಳಿ. ಮಂಗಾರುಗುಡ್ದು ಒಬ್ಬಿಗುಂಟ ರಾಮ್ದೇವುರು ಕಾಡು ಬಗಾಲು ಮಾಡ್ಕಂದುವೆ, ತಾರೆಮರದು ಬಯಲು, ತ್ಯಾಗ್ದು ಮರುದ ತಗ್ಗು, ಮರಡಿ ಮರುದು ಹಾಳು, ಕ್ವಾಟೆ ಕಲ್ಯಾಣಿ ಬೀಳು ಹಾದ್ಕಂದುವೆ, ಪಹಣಿಕಲ್ಲಿನು ತಗ್ಗು ಮೂರೇಣಿನು ಕಲ್ಲು ದಾಟ್ಕಣುತ್ಲುವೆ ನುಗ್ದು ಮಂಗಾರು ಮಳೆ ಖಾನೆ ಅಡ್ಲುಗುಳಲ್ಲಿ ತೇಪಾಡಂಗುವೆ ಹರಿಯುತ್ತೆ ಹೊಸ ನೀರು.

ಹಿಂಗೆ , ಮಂಡೆವೊದರಿ ಮರಮಂಡಿ ಎಡುತಾಕಿ ಹೊರಟ ನಿಂತ ಹಳ್ಳಗುಳಿಗೆ ಕರೇ ಕೊಳ್ಳಾಳು ಪಾಳುನುಗುಡ್ಡ, ಗಂಡಿಗುಡ್ಡ, ಜೇನ್ಕಲ್ಲು ಗುಡ್ಡುಗುಳು ಒಳುಗುಲುಂದವಾ ದೇವುದಾರು ಹಳ್ಳ ತುಂಬೆರಿತುಲುವೆ, ಶಿವುರಾಂಪುರ ಬುಕ್ಕಾಪಟ್ನು ಮಾರ್ಗುವ ದಾಟ್ಕಂದು ಕರಿಯಾಲ್ದು ಕತುರುಗಲ್ಲು ಎತ್ತುರುದು ಕತ್ತು ಮುಳುಗುತುವಾ ಹೊಸ ನೀರು ನುಗ್ಗುತ್ತೆ. ಬಾರೀ ಉಂಟಾತು ಹೊಸು ಮಳೆ.

ಉಂಟಾದುದ್ದು ಅರುವಾಗಿಲ್ಲ. ಅಂಗೈ ಅಗಲ್ದು ಮಿಂಚು ಕಂಡಿಲ್ಲ. ಭೂಮಿ ತೂಕ್ದು ಗುಡುಗೂ ಕೇಳ್ಸಿಲ್ಲ. ಒಗುರಾದ ಕೋರುಡ್ಗ ಹೊಸ ಬ್ಯಾಸಾಯ. ಗಾವ್ದುದ್ದ ದೋಣು ಸಾಲು ಮುಂಬಿಡ್ದು ಸಣ್ಣುಗು ಸಾಲಿಡುದು ಒತ್ತಾರಿಗೆ ಭೂಮಿ ಉಳುವಾಗ, ಕರಿಯಾಲ್ದ ತೊರಿ ಬಂದು ಕಾಟಯ್ಯನ್ನ ಹೊತ್ಕಂದು ಹೋತು. ಕರಿಯಾಲ್ದ ತೊರಿ ಹರದು ರಬುಸ್ಕು ಬ್ಯಾಸಾಯ್ಕ ಹೂಡ್ಕಂದಿದ್ದ ಉರಿಬಂಜೆ ಗೊಡ್ಡಗಾಳಿ ಎಂಬ ಎರಡೆಮ್ಮಿಗುಳು ಕೊರಳುಗುಳು ಪಟುಗಣ್ಣಿ ಹರುಕಂದು ಅವು ಈಜಿಕಂದು ದಡಮುಂಟ ಸೇರಿ ಗುಡ್ಲು ಕುಂಟೆ ಕಾಡು ಪಹಣಿಕಲ್ಲಯ ಮೂರೇಣಿನ ಕಲ್ಲಾಸಿಗುಂಟವಾ ರಾಮೇದೇವ್ರು ಗುಡಿ ಸೇರಿಕಂದುವು. ಅಲ್ಲೇ ಮೇಯ್ಕಂದು ಕಾಲಹಾಕ್ದವು. ಅವು ಕಾಡಿನು ಮೇವ್ಗು ಬಂದು ಕ್ವಾಣ್ಗುಳು ಕೂಡಿ ಅವುಗುಳು ಎದಿ ಒಳುಗೂ ಬೆದಿಯಾಡಿ ಮಟ್ಟಾಡಿ ಮರುದೊಳುಗು ಮರುಹುಟ್ಟಿ ಒಂದೆರಡು ಆಗ್ಲಾಗಿ; ಉರಿಬಂಜೆ ಗೊಡ್ಡುಗಾಳಿ ಅಂಬೊ ಅವ್ಗುಳು ಬಂಗುವರಿಯುತ್ತೆ ರಾಮೇದೇವ್ರು ಗುಡ್ಲು ಕುಂಟೆ ಕಾಡು ಬಯ್ಲೊಳಿಗೆ.

ಒಂದಪ್ಪು ಅಡಿಕೆ; ಒಂದ್ಸಿಗುಳು ನಾಗ್ವಾಳ, ಒಂದುಗ್ರು ಕಣ್ಣಿನುಷ್ಟು ಸುಣ್ಣ ನೊರಕ್ಡು ಮುದ್ರಿ ಹಲ್ಲು ಸಂದಿಗೆ ಅವ್ಸಿಕಳುದ್ರು ಹೊತ್ತಿಗೆ ಮುಗಿಯುತ್ತಾ ಕತಿ. ಇದು, ನೆಲ ನಡೆದಷ್ಟೂ ಕತಿ ಅಡ್ಕಂದು ಕುಂತವೆ ಈರ್ಮಂಡಿ ವಯ್ಕಂದುವೆ. ಯಡಿಗೆಗುಳ ರಾಗಿ ಹಿಡಿವೊಳುಗಾದು ಕಲ್ಲಿನು ಕೊಣ್ದುದೊಳುಗುಲಿಂದುವಾ ಇಳ್ದು ಪಡಿಯಾಗು ತನುಕುವಾ ಹೇಳುದ್ರೂವೆ ಯಾವ್ದಾರ ಒಂದು ಸಂದೂ ಹೇಳಿ ಮುಗುಸಕ್ಕಾಗಲಾದಂತುವು. ಸುಣ್ಣುದು ಮಗಿ ಮುಂದೆ; ತಿರುವಿದು ಕವ್ಳುಗೆ ಇಳ್ಳೇದೆಲಿ ಪೆಂಡಿ ಒಳುಗುಲು ಎಲಿ ಕಟ್ಟು, ಸೇರಡಿಕೆ ಸುರುಕಂದ್ರೂವೆ ಸವಿಲಾರುವು ಕತಿಗುಳು ಅತಂಥವು ಹೇಳಾರು.

ಅಂಬಾಲುಪುರುದು ತುಂಬೊಳ್ಳೆ ಕಾಡಿಗೆ ದೇವ್ರು ಮಾಡಾಕೆ ಗೂಡೆ ಹೊತ್ತು ನಡಿವಾಗ ಹಿರೀಖುರ ಹಿಂದೆ ನಡಿತಿದ್ದ ದೂರುದು ಪಯಣ. ಹೆಂಗುಸ್ರುಮಕ್ಕಳು ದಾರಿ ಸವಿಲಿ ಅಂತಾವಾ ಕತಿ ಹೇಳಾರು. ನೆಡುದು ಕಾಲು ನೊಂದ್ರೂವೆ ಹಿಂದುಬಿದ್ರೆ ಕತಿ ಕೇಳಲುವಲ್ಲ ಅಂತವಾ ಕತಿ ಹೇಳಾರು ಸಮ್ಕೆಯಾ ಸಣ್ಣುಡ್ಗ್ರುವೆ ನಡಿಯೇವು.

ಕುರಿಯಾರು ದನಿನೋರು ದೇವ್ರಿನೋರು ಒಕ್ಕುಲು ಮೇಲು ಸತ್ತೋರಿಂದೆ ಆದಿನಗಳಲ್ಲಿ ಸುತ್ತೋಗುತಿದ್ದವನು ಐದಾರು ವರ್ಷುಗುಳಿಂದ ತತ್ವ ಪದುಕಾರರ ಹುಡುಕಿ ಸತ್ತೋದು ನಡ್ಕಂದು ಹೋಗುತೈತಿ.

ತತ್ವ ಪದಕಾರರು ನಾಥ ಶರಣ ಆರೂಢ ಅವಧೂತ ಆಜೀವಿಕ ಅಚಲ ಸೂಫಿ ದತ್ತ ಹೀಗೆ ಅವೈದಿಕ ಚಿಂತನಾ ಪ್ರಸ್ಥಾನಗಳ ನೆಲೆಯಲ್ಲಿ ನಡೆದು ಶ್ರಮವಹಿಸುತ್ತಿರುವ ಕರ್ನಾಟಕ ಸಮಗ್ರ ತತ್ವ ಪದಗಳ ಪ್ರಕಟಣಾ ಯೋಜನೆಯ ಸಂಪಾದಕರಾಗಿ ನಟರಾಜ್ ಬೂದಾಳು. ಕತೆಗಾರರು ಎಸ್ ಗಂಗಾಧರಯ್ಯ, ಲತಾ ಬೂದಾಳು, ಕೋಮಲ ಬಾಡೇನಹಳ್ಳಿ, ಕವಯತ್ರಿ ಗೀತಾಲಕ್ಷಿ ಅವ್ರುಗುಂಟ ನಾನುವೆ ಜೊತೆಯಲ್ಲಿ. ಹಿಂದಿನ ವರ್ಷದಿಂದುಲೂವೇ ಜಾಲಗಿರಿ ಹೂ ನೋಡಲು ಹೋಗುವುದು ಇವರ್ಸುವೂ ಮುಂದುವರಿತು. ಕಾಡು ಹಾದಿ ಏಣುಗುಂಟುವೂ ಗಿರಿ ನೆತ್ತಿವರಿವಿಗೂ ನೆಡಿವಾಗ ನಾನು ಹೆಚ್ಚು ಮಾತನಾಡಿದ್ದೇ ಎದೆಗೆ ಆತು ಬಂದಂತಹ ಪೂರ್ವಿಕರ ಕತೆಗಳ ಜೊತೆಯಲ್ಲಿ ಅವರ ಗದ್ದುಗೆಗಳ ಮಗ್ಗುಲುಗಳಲ್ಲಿ ಆಲಿಸಿದ ಮಾತಗಳಾಗಿ. ಕೊರಳಿಗೆ ತಿರುವಿಕೊಂಡ ಅರಿವೆ ಹಾಸಿ ಮಗ್ಗಲಾಗುವವರೆವಿಗೂ ಇವೇ ಮಾತುಕತೆಗಳಾದವು.

ಕನ್ನಡದ ಕಾವ್ಯದಲ್ಲಿ ಕೇಳಿದ್ದಂತಹ ಗುಡ್ಲು ಕುಂಟೆ ಮತ್ತು ರಾಮೇದೇವರ ಕಾಡು ಪ್ರದೇಶಗಳು ಇಂದಿಗೂ ಹೊಂದಿದ್ದ ತಾರೆ ತ್ಯಾಗ ಕಮರ ಮರಡಿ ಬಯಲುಗಳು ಕಣ್ಣಿಗಂತೂ ಯತೇಚ್ಚವಾಗಿ ಕಂಡವು. ಮಾರ್ಚ್ ಮೊದಲ ವಾರಕ್ಕೆ ಗಿರಿ ಸಾಲುಗಳಲ್ಲಿ ಜಾಲಗಿರಿ ವನದ ಉತ್ಸವದ ತೇರು ಇನ್ನಷ್ಟು ಸೃಜನಶೀಲವಾಗಬಹುದು. ಕನ್ನಡದ ಕಾವ್ಯಗಳಾಗಿ ಹಿರಿಯರು ಎದೆಗಿಳಿಸಿಕೊಂಡ ಕಾನುಗಳಿವು. ಕರ್ನಾಟಕದ ಪಶುಪಾಲನಾ ಸಂಸ್ಕೃತಿ ಕಟ್ಟಿಕೊಂಡ ಕರ್ನಾಟಕಾಂತರ್ಗತ ಕನ್ನಡದ ಕಾವ್ಯಗಳ ಆವರಣಗಳು. ಈ ಕಾನುಗಳ ಭೌಗೋಳಿಕ ಪ್ರದೇಶಗಳಲ್ಲಿ ನಾವು ನಡೆದ ಕಡೆಯೆಲ್ಲಾ ಅಪುರೂಪದ ಐತಿಹ್ಯಗಳು.

ಅವದೂತ ಶಾಂತವೀರರ ಗದ್ದುಗೆ ಓಣಿಗುಂಟವಾ ಹೋದರೆ ನೊಣವಿನಕೆರೆ ಬಯಲು ದಾಟಿದರೆ ಜುಂಜಪ್ಪನ ಕಾವ್ಯದಲ್ಲಿ ಬರುವ ಗಂಟೇನಹಳ್ಳಿ ಭೂತನ ತೊರೆ ಹಳ್ಳ. ಮಂದೆ ಕರಿಯಾಲ್ದ ತೊರೆ. ಅತ್ತಲಾಗಿ ಅಪ್ಪಣ್ಣ ಚಿತ್ರದೇವರ ಕಾವುಲು, ಗುಡ್ಡೇನಹಳ್ಳಿ ಕೆರೆ. ಅಲ್ಲೇ ಗುಡ್ಡೇನಳ್ಳಿ ಕೆರಿ ದಿಣ್ಣೆ ಮೇಲೆ ನಾವು ಬುತ್ತಿ ಬಿಚ್ಚಿದು. ಅಲ್ಲಿಂದ್ಲುವೆ ನಡೆದದ್ದೆಲ್ಲಾ ಗುಡ್ಲು ಕುಂಟೆ ಗಿಡ.

ನಿಸರ್ಗ ಸಹಜ ಸೌಂದರ್ಯದ ಜಾಲಗಿರಿ ಜಾಲದ ಘಮ್ಮನೆಯ ಘಮಲು. ಧೂಪುಕಣಗಿಲೆ ಹೂವು ಹೋಲುವ ಎಸಳು ಕಿರಿದಾದ ಮೈಯ್ಯೆಲ್ಲಾ ಹೂವಾಡಿಸಿ ಕೊಂಡಿದ್ದ ಕಾಡು ಬಿಕ್ಕೆ. ಶಿವರಾತ್ರಿ ಕಳೆದರೂ ಉಳಿದು ಮುಗಿಯದ ಮುತ್ತಗುದ ಹೂವು. ಶಿವರಾತ್ರಿ ಸಿಗುಳು ನೀರಿಗೆ ಕಾಯ್ದುಕೊಂಡು ನಿಂತ ಜಾಲಗಿರಿ ವನ ಒಂದುಕಡೆಯಾದರೆ, ಇನ್ನೊಂದು ಕಡೆ; ಕಾಡೇ ಉಗಾದಿಯ ಉಗುರು ನೀರಿಗೆ ಎಲೆ ಉದುರಿಸಿ ಬೆತ್ತಲಾಗಿ ನಿಂತ ಸಸ್ಯ ಕೋಟಿಯ ಅಡವಿ.

ಗಿರಿಕಾಣೋ ಗಿರಿ
ನವುಲು ಬಣ್ದು ಗಿರಿ
ಗಿರಿಯ ಮೇಲೆರಡು
ಹುಲಿಕರಡಿ ಹುಲ್ಲೇಮರಿ
ಶಿವ್ನಿಗು ವಾಲ್ಗುವಾ ಮಾಡೇವೋ

ಕಾಡಿನ ವಿಸ್ಮಯವೇ ಕಾವ್ಯಮಯವಾದುದು.

ಒಳ್ಳೊಳ್ಳೆ ಹೂವು,ಎಲ್ಲೆಲ್ಲಿ ಅರಿಳೇವೋ! ಎಂದುಕೊಂಡಾಗಲೆಲ್ಲಾ ಕಣ್ಣು ಪರುವಿಗೆ ಜಾಲಗಿರಿ ಹೂವು ಕಾಣಾವು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?