ತುಮಕೂರು: ರಾಜ್ಯದಲ್ಲಿ 15 ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದೇ ನಮ್ಮ ಮೊದಲು ಗುರಿ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದರು.
ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಅನರ್ಹ ಶಾಸಕರು ಪ್ರಜಾತಂತ್ರದ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಬಿಜೆಪಿ ಅವರಿಗೆ ಬೆಂಬಲ ನೀಡಿ ಟಿಕೆಟ್ ಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಸೋಲಿಸುವುದು ನಮ್ಮ ಗುರಿಯಾಗಿದೆ ಎಂದು ಸ್ಪಷ್ಟಪಡಿಸಿದರು.
ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ದಿನೇಶ್ ಉಪಚುನಾವಣೆಯ ಫಲಿತಾಂಶ ಬಂದ ನಂತರ ಅವೆಲ್ಲ. ಈಗಲೇ ನಾವು ಏನನ್ನೂ ಹೇಳುವುದಿಲ್ಲ. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಪ್ರಸ್ತಾವೂ ಮಾಡಿಲ್ಲ. ಆ ಕಡೆಯಿಂದಲೂ ಬಂದಿಲ್ಲ. ರಾಜಕಾರಣದಲ್ಲಿ ಸಂದರ್ಭ, ಸನ್ನಿವೇಶಗಳು ಬದಲಾದಂತೆ ತೀರ್ಮಾನಗಳು ನಡೆಯುತ್ತವೆ. ಆದರೂ ಮೈತ್ರಿ ವಿಚಾರ ಪ್ರಸ್ತಾಪವಾಗಿಲ್ಲ ಎಂದು ಹೇಳಿದರು.
ಸಂವಿಧಾನದ ನಿಯಮಗಳನ್ನು ಧಿಕ್ಕರಿಸಿ ಜನರಿಗೆ ಮೋದ ಮಾಡಿರುವ ಅನರ್ಹ ಶಾಸಕರು ಜನರೇ ಓಡಿಸಿಕೊಂಡು ಹೋಗಿ ಹೊಡೆಯುತ್ತಾರೆ. ಅವರು ಏನೆಲ್ಲಾ ಮಾಡಿದ್ದಾರೆ. ಮುಂಬೈಗೆ ಹೋಗಿದ್ದು, ನಾಟಕ ಮಾಡಿದ್ದನ್ನು ಜನರು ನೋಡಿದ್ದಾರೆ. 15 ಜನರಲ್ಲಿ ಕೆಲವರು ಮತ್ತೆ ಪಕ್ಷಕ್ಕೆ ಮರಳಿ ಬರಲು ಸಿದ್ದವಿದ್ದರು ನಾವೇ ಬೇಡವೆಂದು ಹೇಳಿದೆವು ಎಂದರು.
ಬೈರತಿ ಬಸವರಾಜು, ಎಚ್.ಟಿ. ಸೋಮಶೇಖರ್ ಮತ್ತು ಮುನಿರತ್ನ ಕೆಲವು ನಾಯಕರನ್ನು ಭೇಟಿ ಮಾಡಿ ಮತ್ತೆ ಪಕ್ಷಕ್ಕೆ ಬರುತ್ತೇವೆ ಎಂದು ಹೇಳಿ ಕಳಿಸಿದರು. ಪಕ್ಷಕ್ಕೆ, ಜನರಿಗೆ ಮೋಸ ಮಾಡಿದವರನ್ನು, ಬೆನ್ನಿಗೆ ಚೂರಿ ಹಾಕಿದವರನ್ನು ಹೇಗೆ ಹತ್ತಿರ ಸೇರಿಸಿಕೊಳ್ಳುವುದು ಅಂತಲೇ ಬರುವುದು ಬೇಡ ಎಂದೆವು.
ಇಂತಹ ಅನರ್ಹ ಶಾಸಕರನ್ನು ಬಿಜೆಪಿ ಸೇರಿಸಿಕೊಂಡು ಸ್ಪರ್ಧೆಗೆ ಇಳಿಯುವಂತೆ ಮಾಡಿದೆ. ಅನರ್ಹರ ಸೋಲು ಖಚಿತ. ಬಿಜೆಪಿಗೆ ಜನ ತಕ್ಕ ಪಾಠ ಕಲಿಸುತ್ತಾರೆ. ಡಿಸೆಂಬರ್ 9ರ ನಂತರ ರಾಜ್ಯದಲ್ಲಿ ಬದಲಾವಣೆ ಸಂಭವಿಸಲಿದೆ ಎಂದು ತಿಳಿಸಿದರು.