ಬಿ.ಜಿ.ನಗರ: ರಾಷ್ಟ್ರಕವಿ ಕುವೆಂಪು ಅವರ ಸಮಗ್ರ ಸಾಹಿತ್ಯವನ್ನು ವಿದ್ಯಾರ್ಥಿಗಳಿಂದ ಓದಿಸಬೇಕು ಎಂಬುದು ಆದಿಚುಂಚನಗಿರಿ ಮಠಾಧ್ಯಕ್ಷರಾಗಿದ್ದ ಪದ್ಮಭೂಷಣ ಪುರಸ್ಕೃತ ಡಾ. ಶ್ರೀ ಶ್ರೀ ಬಾಲಗಂಗಾಧರ ನಾಥ ಮಹಾಸ್ವಾಮೀಜಿಗಳ ಆಶಯವಾಗಿತ್ತು ಎಂದು ಆದಿಚುಂಚನಗಿರಿ ವಿಶ್ವವಿದ್ಯಾನಿಲಯದ ಮಾನವಿಕ ಹಾಗೂ ಸಮಾಜ ವಿಜ್ಞಾನದ ಮುಖ್ಯಸ್ಥರಾದ ಡಾ.ಎ.ಟಿ.ಶಿವರಾಮು ಹೇಳಿದರು.

ಇಲ್ಲಿನ ವಿ.ವಿ.ಯ ಪದವಿ ಕಾಲೇಜಿನಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಕುವೆಂಪು ಓದು ಕಮ್ಮಟದಲ್ಲಿ ಮಾತನಾಡಿದರು.
ಶ್ರೀಗಳಾದ ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರು ರಾತ್ರಿ ಕಾರ್ಯಕ್ರಮ ಮುಗಿಸಿ ಎಷ್ಟೇ ತಡವಾಗಿ ಬಂದರೂ ಅರ್ಧ ಗಂಟೆ ಕಾಲ ಓದದೇ ನಿದ್ದೆಗೆ ಹೋಗುವುದಿಲ್ಲ. ಓದಿಗೆ ಅಷ್ಟೇ ಪ್ರಾಮುಖ್ಯತೆ ನೀಡುತ್ತಾರೆ. ವಿದ್ಯಾರ್ಥಿಗಳು ಸಹ ಓದಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕೆನ್ನುವುದು ಶ್ರೀಗಳ ಆಶಯವಾಗಿದೆ ಎಂದರು.
ವರ್ಷಕ್ಕೇ ಇಂತಿಷ್ಟು ಪುಸ್ತಕ ಓದಬೇಕೆಂಬ ಗುರಿಯನ್ನು ಪ್ರತಿಯೊಬ್ಬರು ಹೊಂದಬೇಕು ಎಂದರು.
ಕಾರ್ಯಕ್ರಮದಲ್ಲಿ ವಿ.ವಿ.ಕುಲಪತಿ ಡಾ.ಎಂ.ಎ.ಶೇಖರ್, ಕುಲಸಚಿವರಾದ ಡಾ. ಸಿ ಕೆ ಸುಬ್ಬರಾಯ, ಡಾ.ಸುಭಾಷ್ ರಾಜಮಾನೆ,.ಎಸ್.ಗಂಗಾಧರಯ್ಯ, ಪ್ರಾಂಶುಪಾಲರಾದ ರೋಹಿತ್ ಎನ್ ಆರ್. ಡಾ . ವಾಸುದೇವಮೂರ್ತಿ ಟಿ.ಎನ್. ಡಾ.ಶ್ವೇತಾರಾಣಿ ಎಚ್. ಇದ್ದರು.