ಬಿ.ಜಿ.ನಗರ: ಕುವೆಂಪು ಸಾಹಿತ್ಯ ಓದುವುದೆಂದರೆ ವಿಶ್ವ ಮಾನವನಾಗುವತ್ತ ಮನುಷ್ಯ ರೂಪುಗೊಳ್ಳಲು ಓದುವುದಾಗಿದೆ ಎಂದು ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಪತಿ ಎಂ.ಎ.ಶೇಖರ್ ಅಭಿಪ್ರಾಯಪಟ್ಟರು.
ಬಿ.ಜಿ.ನಗರದ ಆದಿಚುಂಚನಗಿರಿ ವಿಶ್ವವಿದ್ಯಾನಿಲಯದ ಬಿಜಿಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸಹಯೋಗದೊಂದಿಗೆ ಗುರುವಾರ ಆಯೋಜಿಸಿದ್ದ “ಕುವೆಂಪು ಓದು ” ಕಮ್ಮಟದಲ್ಲಿ ಮಾತನಾಡಿದರು.

ಕುವೆಂಪು ಸಾಹಿತ್ಯದ ಓದಿಗಾಗಿ ಇಂತಹ ಕಮ್ಮಟಗಳ ಆಯೋಜನೆ ಅವಶ್ಯಕ ಎಂದರು. ಕುವೆಂಪು ಸಾಹಿತ್ಯದ ಪರಂಪರೆ ಅತಿ ದೊಡ್ಡದು ಎಂದರು.
ಜಗತ್ತಿನ ಯಾವ ಮಗವೂ ಕೂಡ ಸುಲಲಿತವಾಗಿ ಕಲಿಯಬಹುದಾದ ಭಾಷೆ ಎಂದರೆ ಅದು ಕನ್ನಡವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಆದಿಚುಂಚನಗಿರಿ ವಿ ವಿ ಯ ಕುಲಸಚಿವರಾದ ಡಾ. ಸಿ ಕೆ ಸುಬ್ಬರಾಯ ಅವರು ಮಾತನಾಡಿ, ಕುವೆಂಪು ಅವರು ನಿರಂಕುಶಮತಿಗಳಾಗಿ ಎಂದು ವಿದ್ಯಾರ್ಥಿಗಳಿಗೆ ಸಂದೇಶ ನೀಡಿದ್ದಾರೆ. ಇಂದಿನ ಯುವ ಜನತೆ ಕುವೆಂಪು ಅವರ ಸಾಹಿತ್ಯವನ್ನು ಓದಬೇಕು. ಬದುಕಿನ ಮಾರ್ಗವನ್ನು ತೋರುವಂತಹ ಸಾಹಿತ್ಯದ ಓದು ಇಂದಿನ ತುರ್ತು ಕೂಡ ಎಂದರು.

ಕುವೆಂಪು ರೈತನನ್ನು ಯೋಗಿ ಎಂದಿದ್ದಾರೆ. ಸಾಹಿತ್ಯ ಎನ್ನುವುದು ಒಂದು ಸಂವೇದನೆ, ವೈಚಾರಿಕತೆ ಬೆಳೆಸಿಕೊಳ್ಳಲು ಕುವೆಂಪು ಅವರ ಓದು ಮುಖ್ಯವಾಗಿದೆ ಎಂದು ಕಾರ್ಯಕ್ರಮ ಉದ್ಘಾಟಿಸಿದ ಎಸ್. ಗಂಗಾಧರಯ್ಯ ಹೇಳಿದರು.
ಕಮ್ಮಟದ ನಿರ್ದೇಶಕರಾದ ಡಾ. ಸುಭಾಷ್ ರಾಜಮಾನೆ, ವಿ.ವಿ.ಯ ಮಾನವಿಕ ಹಾಗೂ ಸಮಾಜವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ಎ ಟಿ ಶಿವರಾಮು, ಪಾಂಶುಪಾಲರಾದ ರೋಹಿತ್ ಎನ್ ಆರ್. ಸಹ ಪ್ರಾಧ್ಯಾಪಕರಾದ ಡಾ. ವಾಸುದೇವಮೂರ್ತಿ ಟಿ ಎನ್, ಡಾ. ಶ್ವೇತಾರಾಣಿ ಹೆಚ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಸಹಾಯಕ ಪ್ರಾಧ್ಯಾಪಕರಾದ ಹೇಮರಾಜ್ ಸಿ.ಆರ್. ಅವರು ವಂದಿಸಿದರು. ಸಹಾಯಕ ಪ್ರಾಧ್ಯಾಪಕಿ ರಕ್ಷಾ ಎಸ್.ವಿ. ಕಾರ್ಯಕ್ರಮ ನಿರೂಪಿಸಿದರು.
ಕಮ್ಮಟದಲ್ಲಿ ಕುವೆಂಪು ಅವರ ಕವಿತೆಗಳ ವಾಚನ, ಸಾಹಿತ್ಯದ ಓದು ಮತ್ತು ಚರ್ಚೆ ನಡೆಯಿತು.