ತುಮಕೂರು ಲೈವ್

ಕೊಬ್ಬರಿಗೆ ಬೆಂಬಲ ಬೆಲೆ: ಮಾಜಿ ಸಂಸದ ಎಸ್ ಪಿಎಂ ಧರಣಿ

ತುಮಕೂರು; ಕ್ವಿಂಟಾಲ್ ಕೊಬ್ಬರಿಗೆ ಕನಿಷ್ಠ 20 ಸಾವಿರ ನೀಡುವಂತೆ ಒತ್ತಾಯಿಸಿ ಮಾಜಿ ಸಂಸದ ಎಸ್.ಪಿ. ಮುದ್ದಹನುಮೇಗೌಡ ನೇತೃತ್ವದಲ್ಲಿ ತುಮಕೂರಿನ ಬಿಜಿಎಸ್ ವೃತ್ತದಲ್ಲಿ ಪ್ರತಿಭಟನಾ ಧರಣಿ ನಡೆಸಲಾಯಿತು.

ಸಾಂಕೇತಿಕ ಧರಣಿಯಲ್ಲಿ ನೂರಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡು ಕೊಬ್ಬರಿ ಮತ್ತು ಅಡಿಕೆಗೆ ವೈಜ್ಞಾನಿಕ ಬೆಂಬಲ ಬೆಲೆ ನೀಡಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಕೆ.ಎನ್.ರಾಜಣ್ಣ, ಸರ್ಕಾರ ರಚಿಸಿರುವ ಸಮಿತಿಯ ತೆಂಗು ಬೆಳೆಯಲು 11 ಸಾವಿರ ರೂಪಾಯಿ ಖರ್ಚು ಬರುತ್ತಿದೆ ಎಂದು ಹೇಳುತ್ತಿದೆ. ಆದರೆ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಕೊಬ್ಬರಿಗೆ ಕೇವಲ 9-10 ಸಾವಿರ ಇದೆ. ಇದರಿಂದ ರೈತರಿಗೆ ತುಂಬಾ ಅನ್ಯಾಯ ವಾಗಲಿದೆ ಎಂದು ತಿಳಿಸಿದರು.

ಕೊಬ್ಬರಿ ಉತ್ಪಾದನೆಗೆ ಹೆಚ್ಚು ಖರ್ಚು ತಗಲುತ್ತಿದೆ. ಕಡಿಮೆ ಬೆಲೆಗೆ ಮಾರಾಟವಾದರೆ ತೆಂಗು ಬೆಳೆಗಾರರು ಆರ್ಥಿಕ ದುಸ್ಥಿತಿ ಎದುರಿಸಬೇಕಾಗಿದೆ. ಹೀಗಾಗಿ ತೆಂಗು ಮತ್ತು ಅಡಿಕೆ ಬೆಳೆಗಾರರ ನೆರವಿಗೆ ಕೇಂದ್ರ ಸರ್ಕಾರ ಬರಬೇಕು ಎಂದು ಒತ್ತಾಯಿಸಿದರು.

ಕಬ್ಬು ಬೆಳೆಗೆ ಬೆಳೆ ಕೊಯ್ಲಿಗೆ ಬರುವ ಮುನ್ನವೇ ಬೆಂಬಲ ಬೆಲೆ ನಿಗದಿಪಡಿಸಲಾಗುತ್ತದೆ. ಆದರೆ ತೆಂಗು ಬೆಳಗೆ ಅಂತಹ ಕ್ರಮ ಕೈಗೊಳ್ಳುತ್ತಿಲ್ಲ. ರೈತರು ತೆಂಗು ಬೆಳೆಯಲು ವೆಚ್ಚ ಮಾಡುವ ಒಂದೂವರೆ ಪಟ್ಟು ಹಣವನ್ನು ರೈತರಿಗೆ ನೀಡಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರ ಸೂಕ್ತವಾಗಿ ಸ್ಪಂದಿಸಬೇಕು ಎಂದು ಮನವಿ ಮಾಡಿದರು.

ಸರ್ಕಾರ ರೈತರ ಮನವಿಗೆ ಸ್ಪಂದಿಸದಿದ್ದರೆ ತೆಂಗು ಬೆಳೆಯುವ ಜಿಲ್ಲೆಗಳಲ್ಲಿ ರೈತರನ್ನು ಸಂಘಟಿಸಿ ಬೃಹತ್ ಹೋರಾಟ ರೂಪಿಸಲಾಗುವುದು. ಈ ಹೋರಾಟ ಯಾವುದೇ ಸರ್ಕಾರದ ವಿರುದ್ಧವೂ ಅಲ್ಲ. ನಾವು ರೈತರ ಪರವಾಗಿ ಹೋರಾಟ ಮಾಡುತ್ತೇವೆ. ತೆಂಗು ಮತ್ತು ಅಡಿಕೆಗೆ ವೈಜ್ಞಾನಿಕ ಬೆಂಬಲ ನೀಡಬೇಕು ಎಂದು ಹೇಳಿದರು.

ಪ್ರತಿಭಟನಾ ಧರಣಿಗೆ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಜಿ.ಸಿ.ಬೈಯ್ಯಾರೆಡ್ಡಿ ಬೆಂಬಲಿಸಿ ಮಾತನಾಡಿ ರೈತರ ಸಮಸ್ಯೆಗಳಿಗೆ ಸರ್ಕಾರಗಳು ಸ್ಪಂದಿಸಬೇಕು ಎಂದು ಆಗ್ರಹಿಸಿದರು.

Comment here