ಮಹೇಂದ್ರ ಕೃಷ್ಣಮೂರ್ತಿ
ತುಮಕೂರು: ಸಾವಿಗೀಡಾದ ಕೊರೊನಾ ವ್ಯಕ್ತಿಯ ಶವವನ್ನು ಜಿಲ್ಲಾಸ್ಪತ್ರೆಯ ವೈದ್ಯರು ಪರೀಕ್ಷಾ ವರದಿ ಬರುವ ಮುನ್ನವೇ ಸಂಬಂಧಿಕರಿಗೆ ನೀಡಿದ ನಂತರ ಸಾರ್ವಜನಿಕವಾಗಿ ಈಗ ಕೇಳಿಬಂದಿರುವ ಹಲವು ಪ್ರಶ್ನೆಗಳಿಗೆ ಜಿಲ್ಲಾಡಳಿತ ಉತ್ತರ ನೀಡಬೇಕಾಗಿದೆ.
ಕೊರೊನೊ ಸೋಂಕಿತ ಹಾಗೂ ಸಂಶಯದ ವೇಳೆ ಸಾವಿಗೀಡಾದ ಪ್ರಕರಣಗಳಲ್ಲಿ ಶವ ವಿಲೇವಾರಿ ಬಗ್ಗೆ ಮಾನದಂಡಗಳನ್ನು ವಿಶ್ವ ಆರೋಗ್ಯ ಸಂಸ್ಥೆ, ಕೇಂದ್ರ ಸರ್ಕಾರ ನೀಡಿವೆ. ಈ ಮಾನದಂಡಗಳನ್ನು ಇಲ್ಲಿ ಏಕೆ ಪಾಲಿಸಲಿಲ್ಲ?
ಇಬ್ಬಿಬ್ಬರು ವೈದ್ಯರು ಸ್ಯಾಬ್ ಪರೀಕ್ಷೆ ನಡೆಸಿದ್ದು ಈ ಆವಾಂತರಗಳಿಗೆ ಕಾರಣ ಎಂದು ಜಿಲ್ಲಾಧಿಕಾರಿ ಹೇಳಿಕೆ ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಆರೋಗ್ಯಾಧಿಕಾರಿ ನನಗೂ, ಜಿಲ್ಲಾಸ್ಪತ್ರೆಗೂ ಸಂಬಂಧವೇ ಇಲ್ಲ. ಈ ಘಟನೆ ಹೇಗಾಯಿತು ಎಂಬುದಕ್ಕೆ ಅವರನ್ನೇ (ಜಿಲ್ಲಾ ಶಸ್ತ್ರಚಿಕಿತ್ಸಕರು) ಕೇಳಬೇಕು ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದಾರೆ. ಆದರೆ ಪ್ರತಿದಿನ ರಾಜ್ಯ ಸರ್ಕಾರಕ್ಕೆ ಜಿಲ್ಲೆಯ ಕೊರೊನಾ ರೋಗಿಗಳ ಮಾಹಿತಿ, ಸಾವಿನ ಕುರಿತು ಲೆಕ್ಕ ನೀಡುವುದು ಜಿಲ್ಲಾ ಆರೋಗ್ಯಾಧಿಕಾರಿ ಕೆಲಸ. ಹೀಗಿದ್ದರೆ ಇಷ್ಟು ದಿನ ಜಿಲ್ಲಾಸ್ಪತ್ರೆಯ ಮೇಲೆ ಇವರು ನಿಗಾವಹಿಸಿರಲಿಲ್ಲವೇ?
ಇದೇ ಅಧಿಕಾರಿ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಲು ತಂಡ ರಚಿಸಿರುವುದಾಗಿ ಹೇಳಿದ್ದಾರೆ. ಅಂದ ಪಕ್ಷದಲ್ಲಿ ತಂಡ ರಚಿಸಲು ಅಧಿಕಾರ ಇದೆಯೇ? ಈ ತಂಡದಲ್ಲಿ ಯಾರಿದ್ದಾರೆ ಎಂಬುದನ್ನು ಹೇಳಬೇಕಾಗಿದೆ.
ಇಬ್ಬಿಬ್ಬರು ವೈದ್ಯರು ರಕ್ತ, ಸ್ವ್ಯಾಬ್ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದರು, ಇದು ಒಬ್ಬರಿಗೊಬ್ಬರಿಗೆ ಗೊತ್ತಿರಲಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಅವರೂ ಸಹ ಹೇಳಿಕೆ ನೀಡಿದ್ದಾರೆ. ಗಂಭೀರ ಸೋಂಕಿನ ಚಿಕಿತ್ಸೆ ನೀಡುವ ವಿಚಾರದಲ್ಲೂ ಒಬ್ಬ ತೀವ್ರ ಸೋಂಕಿನಿಂದ ಬಳಲುತ್ತಿದ್ದ ರೋಗಿಯ ಮಾಹಿತಿ ಆಸ್ಪತ್ರೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ಇರಲಿಲ್ಲವೇ ಎಂಬ ಪ್ರಶ್ನೆ ಮೂಡುತ್ತದೆ. ಇದಕ್ಕೆ ಉತ್ತರ ಏನು?
ಕಾರ್ಯಭಾರದ ಒತ್ತಡದ ಕಾರಣ ಜಿಲ್ಲಾ ಶಸ್ರ್ತ ಚಿಕಿತ್ಸಕರು ಯಾವಾಗಲೂ ಆಸ್ಪತ್ರೆಯಲ್ಲಿ ಕೂರಲು ಸಾಧ್ಯವಿಲ್ಲ. ಜಿಲ್ಲಾಸ್ಪತ್ರೆಯ ಹಾಗೂ ಹೋಗು ನೋಡಿಕೊಳ್ಳುವ ಜವಾಬ್ದಾರಿ ಹೊತ್ತಿರುವ ಸ್ಥಾನಿಕ ವೈದ್ಯಾಧಿಕಾರಿಯ ಕೆಲಸ ಏನು? ಇವರ ಗಮನಕ್ಕೂ ತಾರದೇ ಶವವನ್ನು ಕೊಡಲಾಯಿತೇ? ಪರೀಕ್ಷೆ ಎರಡು ಸಲ ನಡೆಸಿದ್ದು ಇವರಿಗೂ ಗೊತ್ತಿರಲಿಲ್ಲವೇ? ಇಡೀ ಆಸ್ಪತ್ರೆಯನ್ನೇ ಕೋವಿಡ್ ಎಂದು ಪರಿಗಣಿಸಲಾಗಿದೆ. ಹೀಗಿದ್ದು, ಒಬ್ಬ ಸಂಶಯಿತ ವ್ಯಕ್ತಿ, ಅದರಲ್ಲೂ ಆಸ್ಪತ್ರೆಯಲ್ಲೇ ಸಾವಿಗೀಡಾದ ವ್ಯಕ್ತಿಯ ಬಗ್ಗೆ ನಿಗಾ ವಹಿಸಿರಲಿಲ್ಲವೇ? ಶವವನ್ನು ಹೀಗೆ ತರಾತುರಿಯಲ್ಲಿ ಚಿಕಿತ್ಸೆ ನೀಡಿದ ಹಿಸ್ಟರಿ ನೋಡದೇ ಕೊಡಲು ಅನುಮತಿ ನೀಡಿದ್ದು ಹೇಗೆ? ಇಲ್ಲ, ಇವರ ಗಮನಕ್ಕೂ ಬಾರದೇ ಶವ ನೀಡಲಾಗಿತ್ತೇ?
ಏಕಾಗಿ ಈ ಅವಸರ ತೋರಿದರು ಎಂಬುದಕ್ಕೆ ಉತ್ತರ ದೊರಕಬೇಕಾಗಿದೆ.
ಈ ಸೋಂಕು ಚೈನ್ ಲಿಂಕ್ ತರಾ ಸಂಬಂಧ ಹೊಂದಿದೆ. ಶವ ನೀಡಿದ ತಪ್ಪಿಗೆ ಈಗ ಸ್ವ್ಯಾಬ್ ಪರೀಕ್ಷೆ ನಡೆಸಬೇಕಾದವರ, ಕ್ವಾರಂಟೈನ್ ಗೆ ಒಳಪಡಿಸುವರ ಖರ್ಚು ವೆಚ್ಚದಿಂದ ಸರ್ಕಾರದ ಖಜಾನೆಗೆ ಆಗುವ ನಷ್ಟ ಭರಿಸುವವರು ಯಾರು? ಆ ಭಾಗದ ನಾಲ್ಕೈದು ಊರುಗಳ ರೈತರ ಪಾಡು ಹೇಳ ತೀರದು. ಈ ಆರ್ಥಿಕ ನಷ್ಟಕ್ಕೆಲ್ಲ ಹೊಣೆ ಯಾರನ್ನು ಮಾಡಬೇಕು?
ಒಂದು ಸಣ್ಣ ತಪ್ಪು ಎಷ್ಟೆಲ್ಲ ನಷ್ಟಕ್ಕೆ ಕಾರಣವಾಗಲಿದೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
ಈ ಮೊದಲು ಸಾವಿಗೀಡಾದ ಕರೊನಾ ಸೋಂಕಿತರಲ್ಲದವರ ಶವವನ್ನು ನಾನು ಹೇಳಿದರೂ ಕೊಡಲಿಲ್ಲ ಎಂದು ಮಾಜಿ ಶಾಸಕರೊಬ್ಬರು ಹೇಳಿದ್ದಾರೆ. ಇದೂ ಕೂಡ ತಪ್ಪೇ. ವೈದ್ಯರ ಮೇಲೆ ಒತ್ತಡ ಹೇರುವುದನ್ನು ರಾಜಕಾರಣಿಗಳು ಬಿಡಬೇಕು. ನನಗೇ ಮಾಹಿತಿ ನೀಡಿಯೇ ಶವ ಕೊಡಬೇಕೆಂಬ ಹಾಲಿ ಶಾಸಕರ ಹೇಳಿಕೆಯೂ ತಪ್ಪೇ. ವೈದರಿಗೆ ಒತ್ತಡ ಇಲ್ಲದೇ ಕೆಲಸ ಮಾಡಲು ಅವಕಾಶ ಕೊಡಬೇಕು. ರಾಜಕಾರಣಿಗಳು ಹೇಳಿದರೆ ಮಾತ್ರ ಶವ ಬೇಗ ಸಿಗಲಿದೆ ಎಂಬ ಸಾರ್ವಜನಿಕ ಅಭಿಪ್ರಾಯ ತಪ್ಪಬೇಕು.
ಮಂಡ್ಯ ಪ್ರಕರಣದಲ್ಲೂ ಪ್ರಾಥಮಿಕ ಆಸ್ಪತ್ರೆಯ ವೈದ್ಯರೊಬ್ಬರು ಯಾವುದೇ ಮುಂಜಾಗ್ರತ ಕ್ರಮ ಅನುಸರಿಸದೇ ಆಂಬುಲೆನ್ಸ್ ನಲ್ಲಿ ಮುಂಬೈನಿಂದ ಬಂದ ಶವ ನೋಡಿ ಇಕ್ಕಟ್ಟಿಗೆ ಸಿಲುಕಿದ್ದಾರೆ. ಜನರು ಸಾಯುತ್ತಿದ್ದಾರೆ ಎಂದರೂ ಹಳ್ಳಿಗೆ ಬಂದು ನೋಡದ ವೈದ್ಯರು ಸತ್ತ ಶವ ನೋಡಲು ಹೋಗಿದ್ದಾರೆ ಎಂದರೆ ಇದರ ಹಿಂದಿರುವ ರಾಜಕೀಯ ಒತ್ತಡವನ್ನು ಯಾರಾದರೂ ಅರ್ಥ ಮಾಡಿಕೊಳ್ಳಬಲ್ಲರು.
ಪ್ರಾಣವನ್ನೇ ಒತ್ತೆ ಇಟ್ಟು ಪರೀಕ್ಷೆ ನಡೆಸುವ, ರೋಗಿಗಳನ್ನು ನೋಡಿಕೊಳ್ಳುವ ವೈದ್ಯರು, ಸಿಬ್ಬಂದಿ ಅಧಿಕಾರಿಗಳು ಮಾಡುವ ತಪ್ಪುಗಳಿಂದಾಗಿ ಮಾನಸಿಕ ಹಿಂಸೆಗೆ ಸಿಕ್ಕುವಂತಾಗುತ್ತದೆ. ಹೀಗಾಗಿ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕಾಗಿದೆ. ಶವ ಕೊಡುವ ಮುನ್ನ ತುಸು ಯೋಚಿಸಿದ್ದರೆ ಇಷ್ಟೆಲ್ಲ ಅವಾಂತರ, ಮಾನಸಿಕ ಬೇಸರ, ಒತ್ತಡಗಳನ್ನು ತಡೆಯಬಹುದಿತ್ತು ಅಲ್ಲವೇ?
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳ ಮೇಲೆ ಜವಾಬ್ದಾರಿಯೂ ಹೆಚ್ಚಿದೆ ಅನ್ನುವುದನ್ನು ಮರೆಯಬಾರದು.ಇಷ್ಟೆಲ್ಲದರ ನಡುವೆಯೂ, ಜೀವವನ್ನೆ ಒತ್ತೆ ಇಟ್ಟು ನಮಗಾಗಿ ಕೆಲಸ ಮಾಡುತ್ತಿರುವ ವೈದ್ಯರು, ವೈದ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಕರೊನಾ ವಾರಿಯರ್ಸ ಗಳಿಗೆ ಒಂದು ಚಪ್ಪಾಳೆ ತಟ್ಟೋಣವೇ?