Tuesday, November 12, 2024
Google search engine
Homeಸಾಹಿತ್ಯ ಸಂವಾದಅಂತರಾಳಚಂದ್ರಿಕಾ ಎಂಬ ‘ಚಿಟ್ಟಿ’

ಚಂದ್ರಿಕಾ ಎಂಬ ‘ಚಿಟ್ಟಿ’

ಜಿ.ಎನ್.ಮೋಹನ್


ಈಕೆ ನನಗೆ ಪರಿಚಯವಾದದ್ದು ಒಂದು ಕವಿತೆಯ ಮೂಲಕ..

ನನ್ನ ನೆನಪು ಇನ್ನೂ ಕೈಕೊಡುವ ಕಾಲಕ್ಕೆ ಬಂದಿಲ್ಲ ಎನ್ನುವುದಾದರೆ ಆ ಕವಿತೆಯ ಹೆಸರು- ‘ಸರಯೂ ನದಿಯ ದಂಡೆಯಲ್ಲಿ’.

ನನ್ನ ‘ಅಣ್ತಮ್ಮ’ ಎಸ್ ವೈ ಗುರುಶಾಂತ್ ಒಂದು ಪದ್ಯಗಳ ಕಟ್ಟನ್ನು ನಾನಿದ್ದ ಕಲಬುರ್ಗಿಗೆ ಕಳಿಸಿ ಎಲ್ಲವನ್ನೂ ಓದಿ ಬಹುಮಾನ ಕೊಡು ಎಂದಿದ್ದ. ಹಾಗಾಗಿ ಬಿಸಿಲ ಬೆಳದಿಂಗಳ ನಗರಿಯಲ್ಲಿ ಕೂತು ಕವಿತೆಗಳ ಸರಮಾಲೆಯನ್ನೇ ಹರಡಿಕೊಂಡಿದ್ದ ನನಗೆ ಆ ಬಿಸಿಲಿನ ಶಾಖ ಇನ್ನಷ್ಟು ಹೆಚ್ಚಿಸುವಂತೆ ಮಾಡಿದ್ದು ಈ ಕವಿತೆ.

ಅದು ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಉರುಳಿಸಿದ ಬಗ್ಗೆ ಇದ್ದ ಕವಿತೆ- ‘ಸರಯೂ ನದಿಯ ತೀರದಲ್ಲಿ’ . ಬರೆದದ್ದು ಕುವೆಂಪು ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ವಿದ್ಯಾರ್ಥಿನಿ.

ಇಂತಹ ಕವಿತೆಗಳು ಘೋಷಣೆಗಳಾಗಿ ಅಬ್ಬರಿಸಿ ಬೊಬ್ಬಿರಿದುಬಿಡುವ ಅಪಾಯವೇ ಹೆಚ್ಚಿದ್ದ ದಿನಗಳಲ್ಲಿ ಈ ಹುಡುಗಿ ಕವಿತೆ ತಣ್ಣಗೆ ತಣ್ಣನೆಯ ಕ್ರೌರ್ಯವನ್ನು ಬಿಚ್ಚಿಡುತ್ತಿತ್ತು.

ಕವಿತೆ ಬರೆದವರು ಯಾರು ಎಂದು ಬಹುಮಾನ ಘೋಷಿಸಿದಾಗ ಗೊತ್ತಾಯಿತು- ಆಕೆ ಪಿ ಚಂದ್ರಿಕಾ

ನಾನು ಪಿ ಚಂದ್ರಿಕಾ ಕವಿತೆಗಳ ಲೋಕಕ್ಕೆ ಹೆಜ್ಜೆ ಹಾಕಿ ಬಂದದ್ದು ಹೀಗೆ. ಆ ನಂತರ ಚಂದ್ರಿಕಾ ಕವಿತೆಗಳು ನನ್ನಿಂದ ತಪ್ಪಿಸಿಕೊಂಡಿಲ್ಲ.

‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ನನ್ನ ಕೈಗಿಟ್ಟದ್ದು ‘ಸೂರ್ಯಗಂಧಿ ಧರಣಿ’ಯನ್ನು .

ಆ ವೇಳೆಗಾಗಲೇ ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಎನ್ನುವ ಕವನ ಸಂಕಲನ ಹಕ್ಕುಚ್ಯುತಿ ಮಂಡಿಸಿತ್ತು. ಸಂಕಲನದ ಶೀರ್ಷಿಕೆಯೇ ನನ್ನನ್ನು ಚಿತ್ ಮಾಡಿ ಹಾಕಿತ್ತು. ಆ ನಂತರದ ಸಂಕಲನ ಸೂರ್ಯಗಂಧಿ.. ತಮ್ಮ ಒಡಲು ಸಂಭ್ರಮಿಸಿ ಪಲ್ಲವಿಸಲು ರೆಡಿ ಆಗುತ್ತಿದ್ದಾಗ ಕಂಡುಂಡ ಭಾವನೆಗಳ ಕೊಲಾಜ್ ಇದು. ಅಲ್ಲಿಂದ ಅವರ ಕವಿತೆಗಳು ನನ್ನೊಳ ಹೊಕ್ಕಾಡಿದೆ

ಪಿ ಚಂದ್ರಿಕಾ ನನಗೆ ಚಂದ್ರಿಕಾ ಅಲ್ಲ ‘ಚಿಟ್ಟಿ’ . ಎರಡನೆಯ ಬಾರಿ ನಾಮಕರಣ ಸಂಭ್ರಮ ಅನುಭವಿಸಿದಾಕೆ. ತೊಟ್ಟಿಲಲ್ಲಿ ಇದ್ದಾಗ ಕೊಟ್ಟ ಹೆಸರು ದೊಡ್ಡವರ ರೀತಿ ದನಿ ಹೊರಡಿಸುತ್ತಿತ್ತು. ಆದರೆ ಹಲವು ಕವಿತಾ ಸಂಕಲನ ಹೊತ್ತು ನಡೆಯುವಾಗ ಈಕೆ ಬದಲಾಗಿದ್ದು ಪುಟ್ಟ ಜಡೆಯ ಚಿಟ್ಟಿಯಾಗಿ

ಇದು ಯಾಕೆ ನನಗೆ ನೆನಪಾಗುತ್ತಿದೆ ಎಂದರೆ ಈ ‘ಚಂದ್ರಿಕಾ ಹಾಗೂ ಚಿಟ್ಟಿ’ ಎರಡರ ನಡುವಿನ ತುಯ್ದಾಟವೆ ಇವರ ಎಲ್ಲಾ ಬರಹಗಳ ಉಸಿರು.

ಚಂದ್ರಿಕಾಗೆ ‘ಚಿಟ್ಟಿ’ ಬೇಕು ಆದರೆ ಲೋಕಕ್ಕೆ ‘ಚಂದ್ರಿಕಾ’ ಬೇಕು ಈ ಎರಡು ತೊಯ್ದಾಟಗಳ ಮಧ್ಯೆ ಇವರ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ , ಕಾದಂಬರಿ ಮೈತಳೆದು ನಿಂತಿವೆ. ಹಾಗಾಗಿ ಅವರ ಕವಿತೆ ಕಥೆ ಕಾದಂಬರಿ ಎಲ್ಲವೂ ಸೇರಿ ಒಂದೇ ಕೃತಿ

ಚಂದ್ರಿಕಾ ಒಳಗೆ ಆಡುವ ಆ ಬಾಲ್ಯದ ಕಣ್ಣಾ ಮುಚ್ಚಾಲೆಯಾಟ ಅವರನ್ನು ಕಾಡುವ, ನಮ್ಮೊಳಗಿನ ತುಯ್ದಾಟಕ್ಕೂ ಉಸಿರು ನೀಡುವ ಬರಹಗಾರಳನ್ನಾಗಿ ಮಾಡಿಬಿಟ್ಟಿದೆ.

ಚಂದ್ರಿಕಾ ಕವಿತೆಗಳ ಈ ಆಟವೇ ನನ್ನನ್ನು ಅವರ ‘ತಾಮ್ರವರ್ಣದ ತಾಯಿ’ ಬಗ್ಗೆ ಮಾತನಾಡಲು ವೇದಿಕೆಯ ಮೇಲೆ ನಿಲ್ಲುವಂತೆ ಮಾಡಿತ್ತು.

ಆ ಕಾರಣಕ್ಕಾಗಿ ಅವರ ಕವಿತೆಗಳನ್ನು ಬಗೆಯುತ್ತಾ ಹೋದಾಗ ಗೊತ್ತಾಗಿಬಿಟ್ಟಿದ್ದು ಚಂದ್ರಿಕಾ ನನ್ನಂತೆಯೇ ಅಕ್ಷರ ಲೋಕದಿಂದ ದೃಶ್ಯ ಲೋಕಕ್ಕೆ ಗುಳೆ ಎದ್ದು ಹೋದವರು ಅಂತ.

ಆದರೆ ಇಲ್ಲೊಂದು ಟ್ವಿಸ್ಟ್ ಇದೆ- ಅಕ್ಷರ ಲೋಕದಿಂದ ದೃಶ್ಯ ಲೋಕಕ್ಕೆ ಹೋದವರನ್ನು ‘ಕಳೆದು ಹೋದವರು’ ಎಂದು ಕರೆದು ಕೈತೊಳೆದುಕೊಂಡು ಬಿಡುತ್ತದೆ ಬರಹದ ಜಗತ್ತು

ಆದರೆ ಚಂದ್ರಿಕಾ ಛಲಗಾತಿ. ಆಕೆ ಹಾಗೆ ಗುಳೆ ಹೋಗಿ ದೃಶ್ಯ ಜಗತ್ತಿನ ಹೆಡೆಮುರಿ ಕಟ್ಟಿ ಅಕ್ಷರ ಲೋಕಕ್ಕೆ ಎಳೆತಂದು ಬಿಟ್ಟರು. ಅವರ ಯಾವುದೇ ಕವನ ನಿಮ್ಮ ಎದುರಿಟ್ಟುಕೊಳ್ಳಿ. ಅಲ್ಲಿ ಆ ಕವಿತೆಗಳು ದೃಶ್ಯವಾಗಿ ನಿಮ್ಮ ಕಣ್ಣೆದುರಾಡದಿದ್ದರೆ ನನ್ನಾಣೆ.

ಅಷ್ಟೇ ಅಲ್ಲ ದೃಶ್ಯ ಮಾಧ್ಯಮ ಇವರ ಕವನಗಳನ್ನೂ ತಿದ್ದಿದೆ. ಇವರು ಹಿರಿ ತೆರೆಗೆ, ಕಿರು ತೆರೆಗೆ ಬರೆಯಲು ಹೊರಡುವುದಕ್ಕೆ ಮುನ್ನ ಹಾಗೂ ನಂತರದ ಕವಿತೆ ಓದಿ, ಚಂದ್ರಿಕಾ ಬದಲಾಗಿದ್ದು
ಗೊತ್ತಾಗಿಬಿಡುತ್ತದೆ

ಚಂದ್ರಿಕಾ ಏನನ್ನೇ ಆದರೂ ತೀವ್ರವಾಗಿ ಅನುಭವಿಸುವ ಹುಡುಗಿ. ಹಾಗಾಗಿಯೇ ಅವರ ಒಂದೊಂದು ಅನುಭವವೂ ಜೋಡಿ ರೆಕ್ಕೆ ಪಡೆದ ಕವಿತೆಗಳಾಗಿಬಿಡುತ್ತದೆ.

ಚಂದ್ರಿಕಾರ ಇನ್ನೊಂದು ಶಕ್ತಿ ಎಂದರೆ ಅವರು ತನ್ನ ಅನುಭವಕ್ಕೆ, ತನ್ನದೇ ಎನ್ನುವ ಅನುಭವಕ್ಕೆ ಅಕ್ಷರ ಮೂಡಿಸಲು ಇನ್ನೊಬ್ಬರ ಶಬ್ದಗಳ ಹಂಗಿಗೆ ಬೀಳುವುದೇ ಇಲ್ಲ, ತನ್ನದೇ ರೂಪಕಗಳನ್ನು ಕಟ್ಟಿ ಕೊಳ್ಳುತ್ತಾರೆ.

ಅವರ ರೂಪಕಗಳು ಒಂದು ಸುಳಿಯಲ್ಲಿ ನಮ್ಮನ್ನು ಸಾಕಷ್ಟು ಕಾಲ ಸಿಕ್ಕಿಸಿ ತಿರುಗಿಸುತ್ತದೆ. ಸುಳಿಯಲ್ಲಿ ಸಿಕ್ಕ ಅನುಭವಕ್ಕೆ ಮಾತು ಕೊಡುವುದು ಹೇಗೆ? ಅದು ಅನುಭವ ಅಷ್ಟೇ.. ಹಾಗೆ ಚಂದ್ರಿಕಾ ಬರಹಗಳ ಓದಿನ ಕಥೆ. ಅದಕ್ಕೆ ಮಾತು ಕೊಡುವುದು ಕಷ್ಟವೇ

ಚಂದ್ರಿಕಾ ಒಂದೇ ಸಮಯಕ್ಕೆ ಸಂಭಾಳಿಸುವ ಹಲವು ಲೋಕವಿದೆಯಲ್ಲಾ ಅದು ನನಗೆ ಅಚ್ಚರಿ ತರಿಸಿದೆ. ಮನೆ, ಅಕ್ಷರ ಹಾಗೂ ದೃಶ್ಯ ಜಗತ್ತನ್ನು ಅವರು ಒಂದೇ ಕಾಲಕ್ಕೆ ಮಣಿಸುತ್ತಾರೆ.

ಅಷ್ಟೇ ಎಂದುಕೊಂಡಿದ್ದೆ ಅವರು ನನ್ನ ಜೊತೆ ‘ಚಿಟ್ಟಿ’ ಎನ್ನುವ ಹೆಸರನ್ನು ಉಸುರುವವರೆಗೆ.

ಅವರು ನನ್ನೊಡನೆ ಒಂದು ದಿನ ‘ಚಿಟ್ಟಿ ಎಂಬುವವಳಿದ್ದಳು..’ ಎಂದು ಶುರು ಮಾಡಿದಾಗ ನಾನು ಗೊಳ್ಳನೆ ನಕ್ಕು ಒಂದು ಜೋಕ್ ಹೇಳಿದ್ದೆ. ‘ಒಂದೂರಲ್ಲಿ ಒಬ್ಬ ರಾಜ ಇದ್ದನಂತೆ ಅಂದಾಗ ಕೇಳಿಸಿಕೊಳ್ಳುತ್ತಿದ್ದವರು ಹೇಳುತ್ತಾರೆ ‘ಇರ್ಲಿ ಬಿಡು ಏನಿವಾಗ’ ಅಂತ.

ಚಂದ್ರಿಕಾ ‘ಚಿಟ್ಟಿ ಅಂತ ಒಬ್ಬಳಿದ್ದಳು’ ಎಂದಾಗ ನನಗೂ ಹಾಗೆ ಕೇಳಿಸಿತ್ತು ಆ ಕಾರಣಕ್ಕಾಗಿಯೇ ‘ಇರ್ಲಿಬಿಡು ಏನಿವಾಗ..?’ ಎಂದಿದ್ದೆ.

ಆದರೆ ಚಂದ್ರಿಕಾ ಒಳಗೇ ಚಿಟ್ಟಿ ನಡೆದುಕೊಂಡೇ ಬಂದಿದ್ದಾಳೆ ದಶಕಗಳ ಕಾಲ. ಹಾಗಾಗಿಯೇ ಆಕೆ ಚಂದ್ರಿಕಾ. ಒಂದು
ಅದಮ್ಯ ನೆನಪಿನ ಈ ಹುಡುಗಿ ತನ್ನ ನೆನಪಿನ ಓಣಿಯಲ್ಲಿ ನಡೆಯುತ್ತಲೇ ಇದ್ದಾಳೆ.

ನನಗೋ ಡಿಸ್ನಿ ಲ್ಯಾಂಡ್ ನಲ್ಲಿ ಇಂದು ಮತ್ತು ಹಿಂದು ಎರಡನ್ನೂ ಹೊತ್ತುಕೊಂಡು ನಡೆಯುವ ಯಾವುದೋ ಮ್ಯಾಜಿಕ್ ಕನ್ಯೆಯಂತೆ ಚಂದ್ರಿಕಾ ಅನಿಸಿಬಿಡುತ್ತಾರೆ..

ಇವರು ಎಷ್ಟು ತಮ್ಮ ನೆನಪುಗಳನ್ನು ಹೊದ್ದು ನಡೆಯುತ್ತಾರೆ ಎಂದರೆ ಇವರ ಜೊತೆಗಿನ ಒಂದು ಫೋನ್ ಮಾತೂ ಸಹಾ ಮಾತಾಗಿರುವುದಿಲ್ಲ.. ಫೋನಿನ ಆಚೆಗಿರುವ ಕಿವಿ ಲಿಪಿಕಾರ ಗಣೇಶನದ್ದಿರಬೇಕು ಎನ್ನುವಂತೆ ಆಕೆ ವ್ಯಾಸಳಾಗಿಬಿಡುತ್ತಾಳೆ

ನಾನೋ ನೆನಪಿನ ಹಂಗುಗಳಿಂದ ಹೊರ ಹಾರಲು ಕಾಯುತ್ತಿರುವವ. ಅವರೋ ನೆನಪಿನ ಕೋಟೆ ಕಟ್ಟಿ ಬದುಕುತ್ತಿರುವವರು ಹಾಗಾಗಿ ನಾನು ಚಂದ್ರಿಕಾ ಎಂದರೂ, ಚಂದ್ರಿಕಾ ಫೋನ್ ಎಂದರೂ ಒಂದು ಮಾರು ದೂರವೇ ಇರುತ್ತೇನೆ

ಅವರು ಚಿಟ್ಟಿ ಎಂದದ್ದಷ್ಟೇ ಗೊತ್ತು , ನಾನು ನನ್ನೊಳಗಿನ ‘ಡೋರ್ ನಂ ೧೪೨’ ಕಾಲದ ಹುಡುಗನ ಸಂಕಟ, ತಲ್ಲಣಗಳನ್ನ ಹೊರಗೆಳೆದುಕೊಂಡದ್ದೂ ಆಯ್ತು.

ಚಂದ್ರಿಕಾಗೆ ಬರಿ ಎಂದೆ. ಆಕೆ ‘ಯಾವುದೀ ಪ್ರವಾಹವು..’ ಎನ್ನುವಂತೆ ಬರೆಯುತ್ತಲೇ ಹೋದರು. ‘ಅವಧಿ’ ಅವರ ಪ್ರವಾಹಕ್ಕೆ ಲೆಡ್ ಟಿ ವಿ ಯಂತೆ ಕೆಲಸ ಮಾಡಿತು.

ಅವರೂ ಆ ನೆನಪ ಪ್ರವಾಹದಲ್ಲಿ ಕೊಚ್ಚಿಹೋದರೇನೋ.. ಚಿಟ್ಟಿಗೆ ಎದೆ ಗುಬ್ಬಿ ಮೂಡಿದ್ದೇ ತಡ ದಿಢೀರ್ ಅಂತ ಅವಳನ್ನು ಆಚೆ ಹಾಕಿಯೇ ಬಿಟ್ಟರು

ಹೀಗೆ ಚಿಟ್ಟಿ ಕಾದಂಬರಿ ದಿಢೀರ್ ಮುಗಿಯಿತು, ಆದರೆ ಅವರ ನೆನಪುಗಳಲ್ಲ. ಹಾಗಾಗಿ ಚಿಟ್ಟಿ ಇನ್ನೊಂದು ಹೆಸರು ಹೊದ್ದು ಯಾವಾಗ ಬೇಕಾದರೂ ಹೊರಗೆ ಕಾಲಿಟ್ಟಾಳು.

ಚಂದ್ರಿಕಾಗೆ ಬರೆಯುವುದು ಯಾರಿಗೋ ಅಲ್ಲ, ಪ್ರಕಟಿಸಲೂ ಅಲ್ಲ ಅದು ಅವರಿಗೆ ‘ತಾನೊಬ್ಬಳೇ ಆಡುವ ಆಟ’

ಇನ್ನೂ ಪ್ರೆಸ್ ನ ಇಂಕಿನ ಘಮ ಆರದಿರುವಾಗ, ಬಿಸಿ ತಣ್ಣಗಾಗದಿರುವಾಗಲೇ ಚಂದ್ರಿಕಾ ‘ಚಿಟ್ಟಿ’ ಕಾದಂಬರಿಯ ಮೊದಲ ಪ್ರತಿ ನನ್ನ ಕೈಗಿಟ್ಟರಲ್ಲಾ.. ಆಗ ಓಲಾಡಿದ ನೆನಪುಗಳೇ ಇವು..

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?