ಮಧುಗಿರಿ :ಕಾಡಿನಿಂದ ಊರಿಗೆ ಬಂದು ಮನುಷ್ಯ ಮತ್ತು ಪ್ರಾಣಿಗಳ ಮೇಲೆ ದಾಳಿ ನಡೆಸುವ ಚಿರತೆಯ ಕುರಿತು ಜಾಗೃತೆ ವಹಿಸುವಂತೆ ತಹಶೀಲ್ದಾರ್ ಡಾ॥ಜಿ ವಿಶ್ವನಾಥ್ ತಿಳಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಪ್ರಮುಖವಾಗಿ ಚಿರತೆಗಳು ಒಂಟಿ ಮನೆ ಇರುವ ಕಡೆ ಸಂಚು ನಡೆಸಿ ದಾಳಿಗೆ ಮುಂದಾಗುವ ಸ್ವಭಾವ ಹೊಂದಿದ್ದು , ಮನೆಯವರು ತಮ್ಮ ಚಿಕ್ಕ ಮಕ್ಕಳನ್ನು ಒಂಟಿಯಾಗಿ ಬಿಡದೆ ಹಾಗೂ ಸಂಜೆಯ ನಂತರ ಹೊರಗಡೆ ಬಾರದಂತೆ ನೋಡಿಕೊಳ್ಳುವುದು ಅವಶ್ಯಕ ಎಂದರು .
ಹೊಲ ಗದ್ದೆಗಳಲ್ಲಿ ಒಂಟಿಯಾಗಿ ಕಾರ್ಯನಿರ್ವಹಿಸದೇ ಗುಂಪುಗಳಲ್ಲಿ ಕಾರ್ಯನಿರ್ವಹಿಸುವುದು, ತಮ್ಮ ಮನೆಯ ಸುತ್ತಮುತ್ತ ಪೊದೆ ಇರದಂತೆ ನೋಡಿಕೊಳ್ಳುವುದು ಮತ್ತು ತ್ಯಾಜ್ಯ ವಸ್ತುಗಳು ಇಲ್ಲದಂತೆ ನೋಡಿಕೊಳ್ಳಬೇಕು ಎಂದರು .
ನಾಯಿ ಮಾಂಸ ಚಿರತೆಗೆ ಅತ್ಯಂತ ನೆಚ್ಚಿನ ಆಹಾರವಾಗಿದ್ದು , ನಾಯಿಗಳು ಇರುವ ಕಡೆ ಹೆಚ್ಚು ನಿಗಾ ವಹಿಸಬೇಕು. ಮನುಷ್ಯರ ಮೇಲೆ ಅದು ಎರಗುವ ಸಾಧ್ಯತೆಗಳು ಇವೆ ಎಂದು ತಿಳಿಸಿದರು .
ಸಾಮಾನ್ಯವಾಗಿ ಚಿರತೆಗಳು ನಾಯಿಗಳು, ಮೇಕೆಗಳು ಕುರಿಗಳು, ಇರುವ ದೊಡ್ಡಿ ಅಥವಾ ಸ್ಥಳಗಳಲ್ಲಿ ದಾಳಿ ನಡೆಸಲು ಮುಂದಾಗುತ್ತವೆ ಆದ್ದರಿಂದ ಅಂತಹ ಸ್ಥಳಗಳಲ್ಲಿ ವಿದ್ಯುತ್ ದೀಪ ಅಳವಡಿಸುವುದರಿಂದ ಚಿರತೆಗಳು ಬೆಂಕಿ ಎಂದು ಭಾವಿಸಿ ಹೆದರಿ ಓಡಿ ಹೋಗುತ್ತವೆ ಎಂದರು .
ಪೌಲ್ಟ್ರಿ ಫಾರಂ, ಮಾಂಸದಂಗಡಿಗಳು ಮುಂತಾದವೆಡೆ ಉತ್ಪತ್ತಿಯಾಗುವ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡದೆ ಊರಿನ ಹೊರ ವಲಯಗಳಲ್ಲಿ ಗುಂಡಿ ತೋಡಿ ಮಣ್ಣಿನಿಂದ ಮುಚ್ಚಿ ವಾಸನೆ ಬರದಂತೆ ಕ್ರಮ ವಹಿಸಿ ಎಂದು ಪುರಸಭೆಯವರಿಗೆ ತಹಶೀಲ್ದಾರ್ ಅವರು ಸೂಚಿಸಿದರು .
ಕಸಬಾ ಹೋಬಳಿಯ ಅಗಸರ ಹೊಳೆ ,ಕಮ್ಮನಕೋಟೆ ,ಆವೇ ಕಟ್ಟೆ , ದೊಡ್ಡೇರಿ ಹೋಬಳಿಯ ತಿಮ್ಮಲಾಪುರ ಮತ್ತು ,ಮಿಡಿಗೇಶಿ ಹೋಬಳಿಯ ಚಿನ್ನೇನಹಳ್ಳಿ ಗ್ರಾಮದ ಸುತ್ತಮುತ್ತ ಚಿರತೆಗಳು ಹೆಚ್ಚು ಕಾಣಿಸಿಕೊಳ್ಳುತ್ತಿದ್ದು , ಈ ಸ್ಥಳಗಳಲ್ಲಿ ಹೆಚ್ಚಿನ ನಿಗಾ ಇಡಲಾಗಿದೆ ಎಂದರು .
ಅರಣ್ಯ ಇಲಾಖೆಯ (ರೇಂಜರ್
ಫಾರೆಸ್ಟ್ ) ಜಿ ವಾಸುದೇವಮೂರ್ತಿ ಮಾತನಾಡಿ ಮೊಲ ಕಾಡು ಹಂದಿ ಮತ್ತು ನಾಯಿ ಚಿರತೆಯು ಅತಿ ಹೆಚ್ಚು ಇಷ್ಟಪಡುವ ಆಹಾರವಾಗಿದ್ದು ,ಇವ್ಯಾವೂ ಸಿಗದೇ ಇದ್ದಾಗ ಮನುಷ್ಯನ ಮೇಲೆ ಅದರಲ್ಲೂ ಚಿಕ್ಕಮಕ್ಕಳ ಮೇಲೆ ಎರಗುತ್ತವೆ ಎಂದರು .
ನೀಲಗಿರಿ ಮರಗಳ ಮರೆಯಲ್ಲಿ ಕುಳಿತು ಹೊಂಚು ಹಾಕಿ ಬೇಟೆಯಾಡುವುದು ಚಿರತೆಗೆ ಮಾಮೂಲಾಗಿದೆ, ಹಾಗಾಗಿ ಎಲ್ಲೆಡೆ ನೀಲಗಿರಿ ಮರಗಳನ್ನು ತೆರವು ಮಾಡುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು .
ಪಿಎಸ್ಐ ಕಾಂತರಾಜು ಮಾತನಾಡಿ ಚಿರತೆಯನ್ನು ಕಂಡಾಗ ಹೆದರಿ ಓಡಿ ಹೋಗದೆ, ಅದನ್ನು ಹಿಮ್ಮೆಟ್ಟಿಸಲು ಮುಂದಾದಲ್ಲಿ ಅದು ಹೆದರಿ ಓಡಿ ಹೋಗುತ್ತದೆ ಎಂದರು .
ಡಿಡಿಪಿಐ ಕಚೇರಿಯ ಪ್ರಾಣೇಶ್ ,ಪುರಸಭೆಯ ಕಂದಾಯಾಧಿಕಾರಿ ಉಮೇಶ್ ಗೀತಾ ಉಪಸ್ಥಿತರಿದ್ದರು .