Friday, May 24, 2024
Google search engine
Homeಸಾಹಿತ್ಯ ಸಂವಾದಅಂತರಾಳಜನ್ಮ‌ದಿನಾಂಕ ಹುಡುಕಲು ಪೊಲೀಸ್ ಬುದ್ಧಿ ಬಳಸುತ್ತಾ...

ಜನ್ಮ‌ದಿನಾಂಕ ಹುಡುಕಲು ಪೊಲೀಸ್ ಬುದ್ಧಿ ಬಳಸುತ್ತಾ…

ಧನಂಜಯ


“ಜನುಮ ದಿನ” ದಿನಾಂಕ 18-4-2020. ನನಗೆ 41 ವರ್ಷ ತುಂಬಿದ ದಿನ.ಹುಟ್ಟಿನಿಂದ ಜೀವನ, ಓದಿನಿಂದ ಬುದ್ಧಿ, ಬುದ್ದಿಯಿಂದ ಪ್ರಬುದ್ಧತೆ, ಇವುಗಳಿಗೆ ಪೂರಕವಾಗಿ ವಿವೇಕ.ಇವೆಲ್ಲವನ್ನ ಮೈಗೂಡಿಸಿಕೊಂಡು ಬೆಳಸಿಕೊಂಡದ್ದು ಒಳ್ಳೆಯತನದ ಬದುಕು ಆರಕ್ಕೆರದ ಮೂರಕ್ಕಿಳಿಯದ ಆದರ್ಶ.

ಸದಾ ಯಶಸ್ಸು ಬಯಸುವ ಮನಸ್ಸು ಗೊಂದಲದ ಗೂಡಾದರೂ ಅಲ್ಲಿ ಒಳ್ಳೆಯತನವೇ ಮೇಲುಗೈ.ಆ ಒಳ್ಳೆಯತನದಿಂದ ಕೈ ತಪ್ಪಬಹುದಾಗಿದ್ದ ಅವಕಾಶಗಳೆಲ್ಲಾ ಭಗವಂತನ ಕೃಪೆಯಿಂದ ಕೈ ಹಿಡಿದವು. ಅದಕ್ಕೆ ಏನೋ ನನ್ನ ದೇವರ ಮನೆಯ ಬಾಗಿಲ ಮೇಲೆ ಯಾವಾಗಲೂ ‘ಒಳ್ಳೆಯತನವೇ ದೇವರು’ ಎಂಬ ಸ್ಲೋಗನ್ ಇದೆ.

ನಂಬಿಕೆಯ ದೇವರ ಪಟದ ಮುಂದೆ ಕೂತು ನಿತ್ಯ ಪೂಜಿಸುವಾಗ, ಎಲ್ಲೋ ಯಾರೋ ಪುಣ್ಯಾತ್ಮ ಬರೆದ ಸಾಲುಗಳು ಮಕ್ಕಳ ಗಾಯನದಿಂದ ಕಿವಿಗೆ ಇಂಪು ತಂದು ಒಂದೊಂದೇ ಸಾಲುಗಳ ಲಹರಿಯು ಕೇಳಿಸಲಾರಂಭಿಸಿದಾಕ್ಷಣ ದೇವರ ಮನೆಯಲ್ಲಿ ಮನಸ್ಸು ಮೌನಕ್ಕೆ ಜಾರಿ ಧ್ಯಾನಕ್ಕೆ ಹೊರಳಿ, ಹಾಡಿನ ಸಾಲಿನಂಥ ಜೀವನ ಸಾಗಿಸಲು ಅವಕಾಶ ಮಾಡಿ ಕೊಡೆಂದು ದೇವರಲ್ಲಿ ಮೊರೆಯಿಡುತ್ತದೆ.

“ಇನ್ನಷ್ಟು ಬೇಕೆನ್ನುವ ಹೃದಯಕ್ಕೆ ನೆಮ್ಮದಿಯು ಎಲ್ಲಿವುದು ರಾಮ, ನನ್ನಿಷ್ಟದಂತೆಲ್ಲ ಕೊಟ್ಟಿರುವೆ ರಾಮ, ಕಷ್ಟಗಳ ಕೊಡಬೇಡ ಎನಲಾರೆ ರಾಮ, ಕಷ್ಟ ಸಹಿಸುವ ಸಹನೆ ಕೊಡೆನಗೆ ರಾಮ, ಕಷ್ಟ ಸಹಿಸುವ ಸಹನೆ ಇನ್ನಷ್ಟು ರಾಮ, ಕಷ್ಟ ಸಹಿಸುವ ಸಹನೆ ನಿನ್ನಷ್ಟು ರಾಮ, ಒಳಿತಿನೆಡೆಗೆ ಮುನ್ನೆಡವ ಮನಸ್ಸು ಕೊಡು ರಾಮ” ಜೊತೆಗೆ ಕೈ ಕಾಲು ಚೆನ್ನಾಗಿರುವುವಂತ ದೃಢಕಾಯ ಆರೋಗ್ಯ ಕೊಟ್ಟು ಕಾಪಾಡು. ಉಳಿದೆಲ್ಲಾ ಕಷ್ಟ ಕಾರ್ಪಣ್ಯಗಳನ್ನು ಶ್ರಮ ವಹಿಸಿ ದುಡಿಯುತ್ತಾ, ಸಹನೆಯಿಂದ ಎದುರಿಸುತ್ತೇನೆ.

ನೀ ಕೊಡುವ ಭಾಗ್ಯದ ಜೊತೆಗೆ ನಾ ಜತನದಿಂದ ಕಾಪಾಡಿಕೊಳ್ಳಬೇಕಾದ ಆರೋಗ್ಯ ಭಾಗ್ಯದಿಂದ ಉಳಿದಿದೆಲ್ಲಾ ಆಯಸ್ಸು ಇನ್ನೂ ಬೋನಸ್ ರೂಪದಲ್ಲಿದಿರುತ್ತದೆಂದು ತಿಳಿದು ನಾಲ್ಕು ಕಾಲ ಜನ ಮೆಚ್ಚುವ ರೀತಿಯಲ್ಲಿ ಬಾಳು ಸವೆಸುತ್ತೇನೆ.

ಇಷ್ಟೆಲ್ಲಾ ಯೋಚಿಸುವ ನನಗೆ ಕೆಲವೇ ವರ್ಷಗಳ ಹಿಂದಿನವರೆಗೂ ನನಗೆ ಹುಟ್ಟಿದ ದಿನವೇ ಖಚಿತವಾಗಿರಲಿಲ್ಲ.ಅಕ್ಷರ ತಿದ್ದಿದ ಸ್ಕೂಲ್ ಮಾಸ್ಟರ್ ಅಪ್ಪನ ಅರೆ ಬರೆ ನೆನಪಿಂದ ಖಚಿತವಾಗಿ ತಿಳಿದುಕೊಳ್ಳಲಾರದೇ ಶಾಲೆಗೆ ಸೇರ್ಪಡೆ ಮಾಡಿಕೊಳ್ಳುವ ಮಾಸದ ಮೊದಲ ದಿನವನ್ನೇ( ಬಹುತೇಕ ಆ ದಶಕದವರೆಗೆ ಹುಟ್ಟಿದವರ ಜನ್ಮ ದಿನವೆಲ್ಲಾ ಹೀಗೆ) ಬರೆದುಕೊಂಡು ಆ ದಿನವೇ ಜನ್ಮ ದಿನವಾಗಿಸಿಬಿಟ್ಟರು.

ಆದರೆ ನಿಜವಾಗಿಯೂ ಏಪ್ರಿಲ್ 18 ನನ್ನ ಹುಟ್ಟಿದ ದಿನ ಎಂಬುದು ಖಚಿತವಾಗಿ ಗೊತ್ತಾದದ್ದು, ಅದೂ ಎಂ ಎ ಮುಗಿದ ಮೇಲೆ, ಉದ್ಯೋಗಕ್ಕೆಂದು ಹುಡುಕಾಟದಲ್ಲಿ ತೊಡಗಿಕೊಂಡಾಗ. ಗೊತ್ತಿಲ್ಲದೇ ವಯಸ್ಸು ಜಾರಿ ಹೋಗುತ್ತಿದ್ದಾಗ. ಮೊದಲೇ ನನ್ನದು ವಯಸ್ಸಿಗೆ ಮೀರಿದ ದೇಹ ಬೆಳವಣಿಗೆ ಬೇರೆ, ಇದನ್ನರಿಯದ,ನನ್ನನ್ನು ಸಹಿಸದ ಜನ ಇಷ್ಟು ವಯಸ್ಸಾದರೂ ಕೆಲಸವಿಲ್ಲವೆಂದು ಕಿಚಾಯಿಸುತ್ತಿದ್ದಾಗ, ಜನ್ಮ ದಿನಾಂಕದ ಬಗ್ಗೆ ಅನುಮಾನ ಮತ್ತು ಗೊತ್ತು ಹಿಡಿಯಬೇಕೆಂಬ ಕುತೂಹಲ ಇವೆರಡೂ ಒಟ್ಟೊಟ್ಟಿಗೆ ಮೂಡಿತು.

ನನ್ನಪ್ಪ ನನ್ನಣ್ಣಂದಿರ ಜಾತಕ ಬರೆಸಿದ್ದರಿಂದ ಅವರ ಜನ್ಮ ದಿನಾಂಕಗಳು ಸರಿಯಾಗಿದ್ದದ್ದು, ಆದರೆ ನನ್ನ ಜಾತಕ ಬರೆಯಬೇಕಿದ್ದ ಪಕ್ಕದೂರಿನ ಅದೇ ಸುಬ್ಬಾಶಾಸ್ತ್ರಿಗಳು ಇದ್ದಕ್ಕಿದ್ದಂತೆ ಇಹಲೋಕ ತ್ಯಜಿಸಿದ್ದರಿಂದ ನನ್ನ ಜಾತಕ ಅಪ್ಪನ ಕೈ ಸೇರಲೂ ಇಲ್ಲ, ಜನ್ಮದಿನಾಂಕ ಖಚಿತ ವಾಗಲೂ ಇಲ್ಲ.

ಕುತೂಹಲದ ವಿಶಾಲತೆ ಜಾಸ್ತಿಯಾಗಿ, ಅಮ್ಮ ಆಗಾಗ ತನ್ನ ನೆನಪೋಲೆಯಿಂದ ಬಿಚ್ಚಿಡುತ್ತಿದ್ದ ಕೆಲವು ಸಹಜ ಸಂಗತಿಗಳಿಂದ ಅಂದರೆ, ನೀನು ಹುಟ್ಟಿದ್ದು ಬುಧವಾರ ಹಾಗಾಗಿ(ಕ್ಷೌರ) ಚೌರ ಮಾಡಿಸಿಕೊಳ್ಳಬೇಡ, ಹುಟ್ಟಿದ ವಾರ ಮಾಡಿಸಿಕೊಳ್ಳಬಾರದೆಂಬುದು ನಮ್ಮ ಸಂಪ್ರದಾಯ.

ಇನ್ನೂಂದು,ನೀನು ಹುಟ್ಟಿದ ದಿನ ಪ್ರತಿ ವರ್ಷ ನೆಡೆಯುವಂತೆ ಆ ವರ್ಷವೂ ನಮ್ಮ ಮನೆ ದೇವರ ಜಾತ್ರೆಯ ಜಲಧಿ ಉತ್ಸವಿತ್ತು.ನಿಮ್ಮ ಚಿಕ್ಕಪ್ಪ ನನಗೆ ಡೆಲಿವರಿ ಆದ ಮೇಲೆ ಆ ಉತ್ಸವಕ್ಕೆ ಹೋದರು.

ಮತ್ತೊಂದು ನೀನು ಹುಟ್ಟುವ ಎರಡು ವರ್ಷ ಮುಂಚೆ ನಿನ್ನಣ್ಣ ಹುಟ್ಟಿದ್ದು,(ಅವನ ಜಾತಕವಿದ್ದುದರಿಂದ ಅವನ ಜನ್ಮ ದಿನ ಕರಾರುವಾಕ್ಕಾಗಿತ್ತು) ಎಂದು ಪದೇ ಪದೇ ಹೇಳುತ್ತಿದ್ದ ಮಾತುಗಳನ್ನು ಆಧಾರವಾಗಿಟ್ಟುಕೊಂಡು, ಜನ್ಮ ದಿನದ ಜಾಡು ಹಿಡಿಯಲು ಪೋಲಿಸ್ ಬುದ್ದಿ ಬಳಸಲು ಮುಂದಾದೆ. ಅದಕ್ಕೆ ಆಧಾರವಾಗಿ ಉಳಿದುಕೊಂಡದ್ದು,ಹುಟ್ಟುವ ದಿನ ಜಲಧಿ ಉತ್ಸವ ಏರ್ಪಡಿಸಿದ್ದ ನಮ್ಮ ಮನೆ ದೇವರಾದ ಬಡವನಹಳ್ಳಿಯ ರಂಗನಾಥ ಸ್ವಾಮಿಯ ದೇವಸ್ಥಾನ. ಹುಡುಕುವ ಕಾಲಕ್ಕೆ ಆ ನಮ್ಮ ಚಿಕ್ಕಪ್ಪನ ಮಗನೇ ಮನೆ ದೇವರ ಕುಲ ಗೌಡಿಕೆಯ ಉತ್ತರಾಧಿಕಾರಿ ಜವಾಬ್ದಾರಿ ಹೊತ್ತಿದ್ದು ನನಗೆ ರೊಟ್ಟಿಯೇ ಜಾರಿ ತುಪ್ಪಕ್ಕೆ ಬಿದ್ದಂತಾಯಿತು.

ಪ್ರತಿ ವರ್ಷ ಚಾಚು ತಪ್ಪದೇ ಜಾತ್ರೆಗೆಂದು ಹೊರಡಿಸುತ್ತಿದ್ದ ಆಹ್ವಾನ ಪತ್ರಿಕೆಗಳನ್ನು ದೇವಸ್ಥಾನದಲ್ಲಿ ಸಂಗ್ರಹಿಟ್ಟಿರುವುದನ್ನು ಅವನಿಂದಲೇ ಖಚಿತ ಪಡಿಸಿಕೊಂಡು, ಹುಟ್ಟಿದ ಇಸವಿಯ ಆಚೀಚಿನ ಮೂರು ಮೂರು ವರ್ಷದ ಪತ್ರಿಕೆಗಳನ್ನು ಹೊರ ತೆಗಿಸಿ ಅಮ್ಮನ ನೆನಪೋಲೆಯ ಮಾತುಗಳಿಗೆ ಹೋಲಿಕೆ ಮಾಡಿದಾಗ 1979 ನೇ ಇಸವಿಯಲ್ಲಿ 18 ನೇ ತಾರೀಖು ಅಮ್ಮ ಹೇಳಿದ ಬುಧವಾರ, ಅವತ್ತೇ ಜಲಧಿ ಉತ್ಸವ .

ನೂರಕ್ಕೆ ನೂರರಷ್ಟು ಹುಟ್ಟಿದ ದಿನದ ಬಗೆಗಿನ ಗೊಂದಲಕ್ಕೆ ತೆರೆ ಬಿದ್ದದ್ದು. ಅವತ್ತಿಂದ ಏಪ್ರಿಲ್ 18 ಹುಟ್ಟಿದ ದಿನವಾಯಿತು. ಈ ಹುಟ್ಟಿದ ದಿನವೋ ಅಥವಾ ಆ ಹುಟ್ಟಿದ ಗಳಿಗೆಯೋ ನನ್ನನ್ನು ಸಾಮಾನ್ಯರಿಗಿಂತ ಸ್ವಲ್ಪ ಭಿನ್ನವಾದ ಆಲೋಚನಾ ಮನಸ್ಸಿನವನನ್ನಾಗಿಸಿ, ಬದುಕಿನ ಪಯಣದಲ್ಲಿ, ಯಶಸ್ಸಿನ ಹಾದಿಯೆಡೆಗೆ ಸಾಗಲು ಪಟ್ಟ ಪರಿಶ್ರಮಕ್ಕೆ ಭಗವಂತನ ಕೃಪೆಯು ನನ್ನ ಪಾಲಿಗೆ ಒಲಿದು,26ನೇ ವರ್ಷಕ್ಕೆ ಸರಿಯಾಗಿ ಉದ್ಯೋಗ, 27ನೇ ವರ್ಷಕ್ಕೆ ಮದುವೆ, ಮೂವತ್ತಾ ನಾಲ್ಕು ವಯಸ್ಸು ಮುಟ್ಟುವ ಮುಂಚೆ ಕಿರುತಿಗೆ, ಆರತಿಗೆಂದು ಮಕ್ಕಳಿಬ್ಬರು. ನಲವತ್ತು ವರ್ಷಕ್ಕೆ ಸರಿಯಾಗಿ ಕನಸು ಕಂಡ ಸ್ಥಳದಲ್ಲೇ ಸ್ವಂತ ಮನೆ.

ನಲವತ್ತೊಂದು ವರ್ಷದ ವಯಸ್ಸು ಮುಗಿದರೂ ಬಿ ಪಿ, ಶುಗರ್ ನಂತ ಸಾಮಾನ್ಯ ಕಾಯಿಲೆಗಳು ದೇಹಕ್ಕೆ ಎಡತಾಕದಂತ ಆರೋಗ್ಯ ಭಾಗ್ಯ.ಇದರ ನಡುವೆ ಹಳೆಯ ನೆನಪುಗಳ ಮೆಲುಕು ಹಾಕಿದರೆ,80ರ ದಶಕದ ಆಸು ಪಾಸಿನಲ್ಲಿ ಹುಟ್ಟಿದ ನಾನು ಮತ್ತು ನನ್ನ ಸಮಕಾಲೀನರೆಲ್ಲರೂ ಎಷ್ಟರ ಮಟ್ಟಿಗೆ ಧನ್ಯರೆನಿಸುವುದೋ ಹಾಗೆ ನತದೃಷ್ಟರೂ ಕೂಡ ಹೌದು ಎಂದೆನಿಸುವುದು ಅಷ್ಟೇ ಸತ್ಯ.

ಕಾರಣ ಪ್ರಾಕೃತಿಕವಾಗಿ ಸೋಸಲ್ಲ್ಪಟ್ಟ ಕೆರೆಯ ಆ ಸಿಹಿ ನೀರನ್ನು ನಿರ್ಭಯವಾಗಿ ಕುಡಿಯುತ್ತಾ, ಈಜುತ್ತಾ , ಜೇನು ಸವಿಯುತ್ತಾ ,ನಲಿವಿನಿಂದ, ಆರೋಗ್ಯಪೂರ್ಣವಾಗಿ ಸಾಗುತ್ತಿದ್ದ ಬದುಕು ಇಂದು ಅಂತರ್ಜಲದ ಮಟ್ಟದ ಕುಸಿತದಿಂದ ಸಿಗುವ ಸ್ವಲ್ಪ ನೀರನ್ನು ತಂತ್ರಜ್ಞಾನದ ಮೂಲಕ ಸೋಸಿ ಯೋಚಿಸಿ ಕುಡಿಯಬೇಕಿದೆ.

ಬಯಲು ಪ್ರದೇಶದಲ್ಲಿ ಧಾರೆಯಾಗಿ ಹರಿವ ನೀರು ನೋಡುವುದು ಕನಸಿನ ಮಾತಾಗಿದೆ. ಒಂದು ತಂತ್ರಜ್ಞಾನದ ಆವಿಷ್ಕರವಾಗಿ ಅದಕ್ಕಿಂತ ಸುಧಾರಿತ ಆವಿಷ್ಕರಕ್ಕೆ ಒಂದು ತಲೆಮಾರಿನ ಅರ್ಧದಷ್ಟು ಆಯಸ್ಸು ಕಳೆಯಬೇಕಾದ ಕಾಲವನ್ನು ನಮ್ಮ ಸಮಕಾಲೀನರು ನಾವು ನೀವುಗಳು ನೋಡಿದ್ದೇವೆ. ಅದೇ 90ರ ದಶಕದ ನಂತರ ಅದರ ವೇಗ ಶರವೇಗದಂತಾಗಿ 2G ಯಿಂದ 5Gಯೇ ಬಂದಾಯ್ತು.

ಬ್ಲಾಕ್ ಅಂಡ್ ವೈಟ್ ಟಿ ವಿ ಯಿಂದ ಕಲರ್ ಪುಲ್ ನ ವಿವಿಧ ಹಂತಗಳನ್ನು ದಾಟಿ ಥಿಯೇಟರ್ ನಲ್ಲಿನ ತರ ಕರ್ವಡ್ ಟಿ ವಿ ಯು ಹೋಗಿ,ಮತ್ತೂ ಸುಧಾರಿತ ಆವಿಷ್ಕರವಾಗುತ್ತಿರುವುದನ್ನು ದಶಕ ತುಂಬುವುದರಲ್ಲಿ ನೋಡಿದ್ದೇವೆ. ಈ ತಂತ್ರಜ್ಞಾನದ ಫಲವಾಗಿ ಅಂಗೈಯಲ್ಲೇ ಎಲ್ಲವೂ ಸಿಗುವಂತಾಗಿರುವುದರಿಂದ ಮರಳಿ ಹಳ್ಳಿಗೆ ಹಿಂದಿರುಗಿದ್ದೇನೆ.

ಇಂದಿನ ಜೀವಿತಾವಧಿಯಲ್ಲಿ, ಹುಟ್ಟು ನಿಧಾನವಾದರೂ ಸಾವಿನ ವೇಗ ಹೆಚ್ಚಿದೆ. ಸಾವಿಗೆ ನಾವು ಹೇಳುವ ಸಾಂತ್ವನ, ದು:ಖತಪ್ತರು ತಡೆದುಕೊಳ್ಳುವ ದುಃಖ ತೀರ ಗಂಭೀರ ಭಾವುಕರೆನಿಸಿಕೊಂಡವರಲ್ಲೂ ಅದು ಕೆಲವೇ ಗಂಟೆಗಳಿಗಿಳಿದಿದೆ.ಕುಡಿತ ಮುಕ್ಕಾಲು ಪಾಲು ಸರ್ವರಿಗೂ ವ್ಯಾಪಿಸಿ,ತಲೆಗೇರುವ ಮತ್ತಿನ ಪರಿಣಾಮದಿಂದ ಭಯ ನಿರ್ಭಯ ರೂಪ ತಾಳಿ,ರಸ್ತೆಯಲ್ಲಿ ತನ್ನದೇ ಲೋಕದಲ್ಲಿ ಸಾಗುವುದರಿಂದ, ತಾನೇ ತಾನಾಗಿ ಧೈರ್ಯ ಬಂದೊದಗುವುದರಿಂದ ದೆವ್ವ ಪಿಶಾಚಿಗಳ ಭಯ ಮತ್ತು ಕಲ್ಪನೆ ಕಡಿಮೆಯಾಗಿದೆ.

ಬೆಳಗಾಗೆದ್ದು, ಭಾವನಾತ್ಮಕ ಒಡನಾಟವಿಟ್ಟುಕೊಂಡಿದ್ದ ಮೂಕ ಪ್ರಾಣಿಗಳಾದ ದನಕರುಗಳ ಸಂಖ್ಯೆ ಕ್ಷೀಣಿಸಿ,ಯಂತ್ರಗಳು ಮಾನವೀಯತೆಗೆ ಮರುಗದವಾಗಿರುವುದರಿಂದ ಮನುಷ್ಯನೂ ಯಂತ್ರದಂತಾಗುತ್ತಿದ್ದಾನೆ.

ಊರುಗಳಲ್ಲಿನ ಯುವಕರೆಲ್ಲಾ ಮದುವೆಯಾದ ಕೂಡಲೇ ಕೂಡು ಕುಟುಂಬದಲ್ಲಿ ತಮ್ಮ ಸ್ವತಂತ್ರತೆಗೆ ಅಡ್ಡಿಯಾಗುವುದೆಂಬ (ಅತಂತ್ರ ಬದುಕಿನೆಡೆಗೆ ತೆರಳಲು) ಕುಂಟು ನೆಪವೊಡ್ಡಿ,ನಗರದ ಸುಲಭ ಸೌಲಭ್ಯಗಳ ಸೌಕರ್ಯಕ್ಕೆ ಮಾರು ಹೋಗಿ ನಗರ ಸೇರುತ್ತಿರುವುದರಿಂದ ಹಳ್ಳಿಗಳೆಲ್ಲಾ ಮುದುಕರ ತಾಣಗಳಾಗಿವೆ.

ಕ್ಯೂನಲ್ಲಿ ನಿಂತು ನಿಂತು ಟಿಕೇಟ್ ಸಿಗದೇ ಬ್ಲಾಕ್ ನಲ್ಲಿ ಹೆಚ್ಚು ದುಡ್ಡು ತೆತ್ತು ಯುದ್ಧ ಗೆದ್ದ ರೀತಿಯಲ್ಲಿ ಸೀಟ್ ನಲ್ಲಿ ಕುಳಿತು ಸಿನಿಮಾ ನೋಡುವ ಕಾಲ ಬದಲಾಗಿ ಬುಕ್ ಮೈ ಶೋ ನಲ್ಲಿ ರೇಟಿಂಗ್ ನೋಡಿ ಹೋಗುವವರನ್ನು ನೋಡುತ್ತಿದ್ದೇವೆ.

ಇಂತಹ ನೂರೆಂಟು ಬದಲಾವಣೆಗಳ ಕಾಲ ಘಟ್ಟದಲ್ಲಿ’ ಕೊರೊನಾ’ವೆಂಬ ಮಹಾಮಾರಿ ವಕ್ಕರಿಸಿ ದಿಕ್ಕು ತೋಚದಂತೆ ಮಾಡಿಟ್ಟಿದೆ.ದುಡ್ಡಿದ್ದವರಿಗೆ ಖರ್ಚು ಮಾಡಲಾಗದ ಸ್ಥಿತಿ, ದಿನದ ದುಡಿಮೆಯಿಂದಲೇ ಬದುಕು ಸಾಗಿಸುತ್ತಿದ್ದವರಿಗೆ ಕೆಲಸವಿಲ್ಲದಾಗಿದೆ.ಉತ್ಸಾಹದೀ ಕಲಿಯಬೇಕಾದ ಮಕ್ಕಳಿಗೆ ಶೈಕ್ಷಣಿಕ ವರ್ಷವನ್ನೇ ಮೂಂದೂಡಬೇಕಾದ ಪರಿಸ್ಥಿತಿ ಬಂದಿದೆ.

ಮನೆಯ ಒಳಗಿನ ನೋವನ್ನು ಮರೆಯಲು ಪಾರ್ಕ್ನಲ್ಲಿ ಕುಳಿತು ಸಮಾನ ವಯಸ್ಕರೊಡನೆ ಹರಟುತ್ತಿದ್ದ ಹಿರಿಯ ಜೀವಿಗಳು ಮನೆಯೊಳಗೆ ಬಂಧಿಯಾಗಿದ್ದಾರೆ.

ಇಂತಹ ಕೆಟ್ಟ ಕೊರೊನಾ ಕಾಲ ಘಟ್ಟ ದಲ್ಲಿ ನನ್ನ 41ನೇ ಹುಟ್ಟಿದ ದಿನ ಬಂದೊದಗಿದೆ.ನಾನು ಯಾವತ್ತೂ ಕೇಕ್ ಕತ್ತರಿಸಿಯೋ ಇಲ್ಲಾ ಅದ್ಧೂರಿ ಪಾರ್ಟಿ ಮಾಡಿಯೋ ಜನ್ಮ ದಿನವನ್ನು ಆಚರಿಕೊಂಡವನ್ನಲ್ಲ, ಅಂಥ ಮನಸ್ಥಿತಿಯು ನನ್ನದಲ್ಲ.ಅಂದು ಪೂರ್ಣ ಪ್ರಮಾಣದ ಶ್ರಮಜೀವಿಯಾಗಿರಲು ಬಯಸುತ್ತೇನೆ.

ಸಮಾಜದಲ್ಲಿನ ತೀವ್ರಗತಿಯ ಬದಲಾವಣೆ ನಡುವೆ ಇಂದಿಗೂ ಒಳ್ಳೆಯತನವೇ ದೇವರೆಂದು ಧೃಡವಾಗಿ ನಂಬಿ ಅದರ ಫಲವನ್ನು ಅನಭವಿಸಿದ್ದೇನೆ. ಅದುವೇ ಸರಿದಾರಿಯೆಂದು ಮುನ್ನಡೆಯುತ್ತಿರುವ ಈ ನಿಮ್ಮ ಧನಂಜಯ ಇನ್ನಷ್ಟು ಗಟ್ಟಿಯಾಗಿ ನಮ್ಮೆದುರಿಗೆ ನಿಂತು ಸಾಧಿಸಬೇಕಿಂದಿರುವುದನ್ನು ಸಾಧಿಸಿ, ನಾವಂದುಕೂಂಡಂತಿರುವ,ನಾವಿಟ್ಟಿರುವ ನಂಬಿಕೆಯನ್ನು ಉಳಿಸಿ,ಬದಲಾಗದ ಅದೇ ಧನಂಜಯನಾಗಿ ಉಳಿಯಲೆಂದು ಹಾರೈಸಿ.

ನಾವು ಯಾರ(ನಮ್ಮ ನಮ್ಮ ಮಕ್ಕಳ) ಭವಿಷ್ಯಕ್ಕಾಗಿ ಶ್ರಮಿಸುತ್ತಿದ್ದೇವೋ ಅವರುಗಳಿಗೆ ಈ ರೋಗ ತಾಗದಂತೆ,ಹಾಗೆಯೇ ಬದುಕಲ್ಲಿ ನಮ್ಮ ಆಶ್ರಯವನ್ನೇ,ಸಂತೋಷವನ್ನೇ ನಂಬಿಕೊಂಡಿರುವ,ಮನೆಯ ಹಿರಿಯ ಜೀವಿಗಳಿಗೆ ಈ ರೋಗ ಕಂಟಕಪ್ರಾಯ ವಾಗದಂತೆ ನಾವು ನೀವೆಲ್ಲರೂ ಚಾಚು ತಪ್ಪದೇ ಲಾಕ್ ಡೌನ್ ನಿಯಮಗಳನ್ನು ಪಾಲಿಸಿ,ಅಮೂಲ್ಯ,ಅಪರೂಪದ ಮಾನವ ಸಂಪನ್ಮೂಲವನ್ನ ಉಳಿಸಿ, ದೇಶವನ್ನು ಈ ಮಹಾಮಾರಿಯಿಂದ ಮುಕ್ತಗೊಳಿಸಲು ಕೈಲಾದಷ್ಟು ಶ್ರಮಿಸೋಣ…. ಇಂತಿ ನಿಮ್ಮ ಪ್ರೀತಿಯ ಕುವಿಧ……

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?