Monday, October 14, 2024
Google search engine
Homeಸಾಹಿತ್ಯ ಸಂವಾದಅಂತರಾಳಟಿ ಆರ್ ಪಿ ರೇಸ್ ನಲ್ಲಿ ಕುದುರೆ ಮುಂದಿರಬೇಕು ಅಷ್ಟೇ..

ಟಿ ಆರ್ ಪಿ ರೇಸ್ ನಲ್ಲಿ ಕುದುರೆ ಮುಂದಿರಬೇಕು ಅಷ್ಟೇ..

ಜಿ.ಎನ್.ಮೋಹನ್


‘ಈಟಿವಿ’ ಬೆಂಗಳೂರು ಮುಖ್ಯಸ್ಥರಾಗಿದ್ದ, ಗೆಳೆಯ ರಂಗನಾಥ ಮರಕಿಣಿ ನನಗೆ ಫೋನ್ ಮಾಡಿದಾಗ ರಾತ್ರಿ 11 ಗಂಟೆ.

‘ಸಾರ್ ಇನ್ನರ್ಧ ಗಂಟೆಯೊಳಗೆ ಮೈಸೂರಿನಲ್ಲಿ ಒಂದು ಎನ್ ಕೌಂಟರ್ ನಡೆಯುತ್ತೆ, ನಮ್ಮ ಟೀಂನ ಅಲರ್ಟ್ ಮಾಡಿ’ ಅಂದ.

ಅರೆ! ಇನ್ನರ್ಧ ಗಂಟೆಯೊಳಗೆ ಎನ್ ಕೌಂಟರ್ ಆಗುತ್ತದೆ ಎನ್ನುವುದು ಗೊತ್ತಾಗುವುದಾದರೂ ಹೇಗೆ?

ಅದು ಇನ್ನರ್ಧ ಗಂಟೆಯಲ್ಲಿ ಈ ರೋಡಿನಲ್ಲಿ ಆಕ್ಸಿಡೆಂಟ್ ಆಗಿ ನಾಲ್ಕು ಜನ ಸಾಯುತ್ತಾರೆ ಅಂತ ಹೇಳೋ ಥರಾನೇ.

ಯಾವ ಜ್ಯೋತಿಷಿ ಎಷ್ಟೇ ಕವಡೆ ಹಾಕಿದರೂ ಇಂತಹ ನಿಚ್ಚಳ ಭವಿಷ್ಯ ಹೇಳಲು ಸಾಧ್ಯವೇ ಇಲ್ಲ.

ಆದರೂ ಇದು ‘ನ್ಯೂಸ್’ ವಿಷಯ. ರಿಸ್ಕ್ ತೆಗೆದುಕೊಳ್ಳುವಂತಿಲ್ಲ. ನಿಂಗೆ ಹೇಗೆ ಗೊತ್ತಾಯ್ತು..? ಅಂತ ಕೇಳುವುದು ನ್ಯೂಸ್ ಬಿಸಿನೆಸ್ ನಲ್ಲಿ ಮೊದಲ ಮೂರ್ಖತನ.

ಹಾಗಾಗಿ ಮೈಸೂರಿನಲ್ಲಿದ್ದ ಟೀಂಗೆ ರೆಡಿ ಇರಲು ಹೇಳಿದೆ. ವರದಿಗಾರ, ಕ್ಯಾಮರಾಮನ್, ಟೆಕ್ನೀಶಿಯನ್ ಎಲ್ಲರೂ ‘ಆನ್ ದಿ ಟೋಸ್’ ಇದ್ದರು.

ಮರಕಿಣಿ ಮತ್ತೆ ಫೋನ್ ಮಾಡಿದಾಗ 11.45. ಈಗ ನಮ್ಮ ಟೀಂ ರೀಂಗ್ ರೋಡಿಗೆ ಹೋಗಲಿ, ಅಲ್ಲಿ ಎನ್ ಕೌಂಟರ್ ಆಗುತ್ತೆ ಅಂದ.

ಆಶ್ಚರ್ಯ, ಆದರೂ ನಿಜ.

ಲಷ್ಕರ್ ಎ ತೊಯಿಬಾ ತಂಡದೊಂದಿಗೆ ಗುಂಡಿನ ಚಕಮಕಿ ನಡೆದು ಶಂಕಿತ ಉಗ್ರಗಾಮಿಗಳು ಬಂಧಿಸಲ್ಪಟ್ಟರು.

ಮರುಕ್ಷಣ ‘ಈಟಿವಿ’ಯ ನ್ಯೂಸ್ ಈ ಎಕ್ಸ್ ಕ್ಲೂಸಿವ್ ಸುದ್ದಿಯನ್ನು ದೊಡ್ಡ ದನಿಯಲ್ಲಿ ಬಿತ್ತರಿಸುತ್ತಿತ್ತು.

ಮೊನ್ನೆ ಗೆಳೆಯರೊಬ್ಬರಿಗೆ ಬೇಕಾಗಿದ್ದ ಪುಸ್ತಕ ಹುಡುಕಲು ನನ್ನ ಮಾಧ್ಯಮ ಪುಸ್ತಕ ಸಂಗ್ರಹಕ್ಕೆ ಕೈಹಾಕಿದೆ.

ನೂರೆಂಟು ಕಟ್ಟುಗಳನ್ನು ಹುಡುಕುತ್ತಿದ್ದಾಗ ಕೈಗೆ ತಾಕಿದ್ದು ವೈಎನ್ ಕೆ ಅವರ ‘ಇದು ಸುದ್ದಿ ಇದು ಸುದ್ದಿ’.

ಓದಿದಾಗ ಕಾಲಕೋಶದಲ್ಲಿ ಕೂತು ಬಟನ್ ಒತ್ತಿ ಸುಂಯ್ಯನೆ ಮೂರು ದಶಕ ಹಿಂದಕ್ಕೆ ಸರಿದಂತಾಯಿತು.

ಹೌದಲ್ಲಾ?.. ಸುದ್ದಿ ಎಷ್ಟೊಂದು ಬದಲಾಗಿ ಹೋಗಿದೆ ಎನಿಸಿತು.

ಮೈಸೂರಿನ ಸುದ್ದಿಗೆ ನಾವು ಕೊಟ್ಟ ಬಣ್ಣ ಎಷ್ಟು.. ನಮಗೆ ಹೇಗೆ ಫೋನ್ ಕರೆ ಬಂತು? ಹೇಳಿದ್ದೇನು? ನಂತರ ನಮ್ಮ ಟೀಂ ರೆಡಿ ಮಾಡಿದ್ದು ಹೇಗೆ? ಅವರು ಹೇಳಿದ ಜಾಗ ಹೇಗೆ ತಲುಪಿಕೊಂಡರು? ಎನ್ ಕೌಂಟರ್ ಜಾಗ, ಅಲ್ಲಿದ್ದ ಗುಂಡು, ಶಸ್ತ್ರಾಸ್ತ್ರ, ಪೊಲೀಸ್ ಜೀಪ್ ಗಳ ಸದ್ದು, ಕೆಂಪುದೀಪ..

ಪಕ್ಕಾ ಎನ್ ನರಸಿಂಹಯ್ಯ ಪತ್ತೇದಾರಿ ಕಾದಂಬರಿಯ ಹಾಗೆ. ಬಯಸಿದ್ದು ಸಿಕ್ಕಿಹೋಗಿತ್ತು. ಅಂದಿನ ಟಿಆರ್ ಪಿ ಸರ್ರನೇ ಮೇಲೇರಿತ್ತು.

ಸುದ್ದಿ ಇವತ್ತು ಸುದ್ದಿಯಾಗಿ ಮಾತ್ರ ಉಳಿದಿಲ್ಲ. ಅದು ಮನರಂಜನೆಯೂ ಆಗಿ ಬದಲಾಗಿ ಹೋಗಿದೆ.

‘ಮೈಸೂರಿನ ರಿಂಗ್ ರೋಡಿನಲ್ಲಿ ಎನ್ ಕೌಂಟರ್: ಇಬ್ಬರ ಬಂಧನ’ ಎನ್ನುವ ಸುದ್ದಿಯ ಶೈಲಿ ಈಗ ಪತ್ರಿಕೆಗೆ ಪ್ರಸಾರವನ್ನೂ ತರುವುದಿಲ್ಲ. ಚಾನಲ್ ಗೆ ಟಿಆರ್ ಪಿಯನ್ನೂ ದಕ್ಕಿಸಿಕೊಡುವುದಿಲ್ಲ.

ಈಗ ಹೆಚ್ಚು ಪ್ರಸಾರ, ಹೆಚ್ಚು ಟಿಆರ್ ಪಿ ಬೇಕು ಎಂದರೆ ಹೆಚ್ಚು ಸದ್ದು ಮಾಡಬೇಕು. ಸುದ್ದಿ ಮತ್ತು ಸದ್ದು ಕೈಹಿಡಿದರೆ ಮಾತ್ರ ನಂಬರ್ 1 ಸ್ಥಾನ.

‘ಈಟಿವಿ’ಯಲ್ಲಿ ಕೆ ಎಂ ಮಂಜುನಾಥ್ ಮುಖ್ಯಸ್ಥರಾಗಿದ್ದಾಗಲೇ ನನಗೆ ಈ ಸದ್ದಿನ ಮಹತ್ವ ಗೊತ್ತಾಗಿದ್ದು. ಚಿಕ್ಕಮಗಳೂರಿನ ಕಾಡುಗಳಲ್ಲಿ ಗುಂಡಿನ ಸದ್ದು ಕೇಳಿದೆ ಎಂಬ ಸುದ್ದಿ ತೇಲಿಬಂತು.

ಮಂಜುನಾಥ್ ಇದನ್ನು ಕೈಗೆತ್ತಿಕೊಂಡವರೇ ಬೇಕಾದ ಎಲ್ಲಾ ಮಸಾಲೆ ಅರೆದರು. ಅಬ್ಬರ, ಸದ್ದು ಎಲ್ಲಾ ಸೇರಿಕೊಂಡಿತು. ಪರಿಣಾಮ ಸಿಕ್ಕೆಡೆಯೆಲ್ಲಾ ಈ ಸುದ್ದಿ ಚರ್ಚೆಯಾಗಿ ಹೋಯಿತು.

‘ಟಿವಿ9’ ರಾಯಚೂರಿನ ಕೊಳವೆ ಬಾವಿಯಲ್ಲಿ ಬಿದ್ದ ಮಗುವನ್ನು ಎತ್ತುವ ಪ್ರಕರಣದ ನೇರ ಪ್ರಸಾರಕ್ಕೆ ಮುಂದಾದಾಗ ಆ ಚಾನಲ್ ಗೆ ತಾನು ಕೇವಲ ಮಗುವನ್ನು ಮಾತ್ರ ಮೇಲಕ್ಕೆತ್ತುತ್ತಿಲ್ಲ, ಪಾತಾಳದಲ್ಲಿ ಹುದುಗಿ ಹೋಗಿರುವ ತನ್ನ ಟಿಆರ್ ಪಿಯನ್ನೂ ಮೇಲಕ್ಕೆತ್ತುತ್ತಿದ್ದೇನೆ ಎಂಬುದು ಗೊತ್ತಿತ್ತು.

ಒಂದು ಸಾಹಸ, ಒಂದು ಸಸ್ಪೆನ್ಸ್, ಜೀವನ್ಮರಣದ ನಡುವಿನ ಉಯ್ಯಾಲೆ, ಕ್ಷಣ ಕ್ಷಣದ ಕುತೂಹಲ, ಹತಾಶೆ ಎಲ್ಲವೂ ಇದ್ದ ಈ ಸುದ್ದಿಗಿಂತ ಟಿಆರ್ ಪಿ ತಂದುಕೊಡುವ ಮತ್ತೊಂದು ಸುದ್ದಿ ಸಿಗಲು ಸಾಧ್ಯವೇ ಇರಲಿಲ್ಲ.

ಬೆಂಗಳೂರಿನ ದಿಕ್ಕು ದಿಕ್ಕುಗಳಲ್ಲಿ ಸ್ಫೋಟಕ ಇಟ್ಟಾಗ ಅದನ್ನು ದೊಡ್ಡ ದನಿಯಲ್ಲಿ, ಉಸಿರುಗಟ್ಟಿ ಹೇಳಿದರೆ ಮಾತ್ರ ಸುದ್ದಿ.

ಎರಡನೇ ಮದುವೆಯಲ್ಲಿ ಸಿಕ್ಕಿಹಾಕಿಕೊಂಡಾತನಿಗೆ ಬೀಳುವ ಒದೆ ನೇರಾನೇರ ನೋಡಬಹುದು.

ರೈಲ್ವೆ ಇಲಾಖೆ ಪರೀಕ್ಷೆ ಬರೆಯುವವರ ಮೇಲೆ ನಡೆಯುವ ದಾಳಿ ಚಾನಲ್ ಗುಂಡಿ ಒತ್ತಿದರೆ ‘ಬಿಲ್ಕುಲ್ ಮುಫ್ತ್’.

ತಮ್ಮ ಆಫೀಸ್ ಮೇಲೆ ನಡೆಯುವ ದಾಳಿಯೂ ನೇರಾ ನೇರ ನಿಮ್ಮ ಮನೆಯಂಗಳಕ್ಕೆ.

ಆ ಕ್ಷಣದಲ್ಲೇ ಸುದ್ದಿ ಒದಗಿಸುವ ಧಾವಂತದಲ್ಲಿ ಮೊದಲು ಬಲಿಯಾದದ್ದು-ನಿಖರತೆ.

ಚಾನಲ್ ಗಳಲ್ಲಿ ಈ ಸಮಸ್ಯೆಯಾದರೆ ಪತ್ರಿಕೆಗಳಿಗೆ ಸುದ್ದಿ ಎನ್ನುವುದು ಚಾನಲ್ ಗಳಿಂದಾಗಿ ಇಷ್ಟೊಂದು ತಂಗಳಾಗಿ ಹೋಯಿತಲ್ಲ ಎಂಬ ಚಿಂತೆ.

ಸುದ್ದಿ, ಮನರಂಜನೆಯ ಜೊತೆ ಮಿಲಾಕತ್ ಅದದ್ದು ಈ ಹಂತದಲ್ಲೇ.

ಇದಕ್ಕೆ Infotainment ಎನ್ನುವ ಗೌರವದ ಹೆಸರೂ ಬಂತು. ಮಸಾಲೆ ದೋಸೆ ಹಾಗೂ ಬರ್ಗರ್ ಎರಡೂ ಸೇರಿದ್ರೆ ಯಾವ ರುಚಿ ಇರುತ್ತೆ ಅದೇ ಥರಾ ಈಗಿನ ಸುದ್ದಿ ಸಹ ಅಂತ ವಿಶ್ಲೇಷಣೆ ಸಿಗ್ತು.

ಮುಖ್ಯಮಂತ್ರಿಗಳನ್ನ ಪೊಲಿಟಿಕಲ್ ರಿಪೋರ್ಟರ್ ಸಂದರ್ಶನ ಮಾಡೋದು ಹಳೆ ಸ್ಟೈಲಾಗಿ ಹೋಯ್ತು. ಆ ಜಾಗಕ್ಕೆ ರಮ್ಯಾ ಬಂದು ಕುಳಿತಳು. ಪ್ರಶ್ನೆಗಳೂ ಬದಲಾಗಿ ಹೋದವು. ಗೆಸ್ಟ್ ಎಡಿಟರ್ ಗಳ ಕಾಲವೂ ಬಂತು.

ಮಂಗಳೂರಿನಲ್ಲಿದ್ದಾಗ ಅಲ್ಲಿನ ಡೈರಿಯಲ್ಲಿ ಕೆಲಸ ಮಾಡುತ್ತಿದ್ದ ಗೆಳೆಯರೊಬ್ಬರು ‘ಹಾಲು ಅತ್ಯಂತ ಬೇಗ ಹಾಳಾಗೋ ಪದಾರ್ಥ ಅನ್ಕೊಂಡಿದ್ದೆ. ಆದರೆ ಈಗ ಅರ್ಥ ಆಗ್ತಿದೆ. ನ್ಯೂಸ್ ಅನ್ನೋದು ಅದಕ್ಕಿಂತ Most Perishable item ಅಂತ ತಬ್ಬಿಬ್ಬಾಗಿ ಹೇಳಿದರು.

ಇದು ಇವತ್ತಿನ ಮಾಧ್ಯಮಗಳಿಗೆ ಗೊತ್ತಾಗಿ ಹೋಗಿದೆ. ಸುದ್ದಿ ಅನ್ನೋದನ್ನ ಹಾಗೇ ಇಟ್ಟರೆ ಒಡೆದು ಹೋಗುತ್ತೆ. ಉಪಯೋಗ ಇಲ್ಲ. ಬಚ್ಚಲಿಗೆ ಚೆಲ್ಲಬೇಕಾಗುತ್ತೆ ಅಂತ.

ಹಾಗಾಗೀನೆ ಸುದ್ದಿಯನ್ನ ಕಾಯಿಸ್ತಾರೆ. ಖೋವಾ ಮಾಡ್ತಾರೆ, ಬರ್ಫಿ ಮಾಡ್ತಾರೆ, ಬಾಸುಂದಿ ಮಾಡ್ತಾರೆ, ಲಸ್ಸಿ ಮಾಡ್ತಾರೆ, ಮೂಲ ಅದು ಹಾಲೇ, ಆದರೆ ರೂಪ ಮಾತ್ರ ಬೇರೆ.

‘ಗಜನಿ’ ಚಿತ್ರ ಧಾಂ, ಧೂಮ್ ಅಂತ ಸುದ್ದಿ ಮಾಡ್ತಿದ್ದಾಗ ಒಂದು ಭಿನ್ನವಾದ ವರದಿ ಬಂತು.

ಅಮೀರ್ ಖಾನ್ ಮೈ ಮೇಲೆ ಬರೆದಿದ್ದ ಫೋನ್ ನಂಬರ್ ಗೆ ವರದಿಗಾರ ರಿಂಗ್ ಕೊಟ್ರೆ ಅರೆ! ತಗೊಂಡಿದ್ದು ಒಬ್ಬ ಹುಡುಗಿ. ಹಾಲನ್ನ ಬರ್ಫಿ ಮಾಡೋದು ಅಂದ್ರೆ ಹೀಗೇ.

‘ಗಜನಿ’ ಅನ್ನೋ ಹಾಲು, ಫೋನ್ ನಂಬರ್ ಅನ್ನೋ ಬರ್ಫಿ. ‘ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ, ವಿಠ್ಠಲನೆಂಬೋ ತುಪ್ಪ’ ಎರಡೂ ಇರಬೇಕಾದ ಕಾಲ.

ಬೆಂಗಳೂರಿನಲ್ಲಿ ನವೀನ್ ಅಮ್ಮೆಂಬಳ, ಜ್ಯೋತಿಷಿ ಚಂದ್ರಶೇಖರ ಸ್ವಾಮೀಜಿ ಹಿಂದೆ ಮುಂದೆ ಸುತ್ತುತಾ ಇದ್ದಾಗಲೇ ಏನೋ ಬಾರಿ ಸುದ್ದಿ ತರ್ತಾನೆ ಅಂತ ಊಹಿಸೋದಿಕ್ಕೆ ಕಷ್ಟ ಇರ್ಲಿಲ್ಲ.

ಅಭಿಷೇಕ್ ಬಚನ್, ಐಶ್ವರ್ಯ ರೈ ಕುಂಡಲಿ ಹಿಡ್ಕೊಂಡು ಅಜಿತಾಬ್ ಬಚನ್ ಬಂದಾಗ ‘ಈಟಿವಿ’ ಕ್ಯಾಮೆರಾ ಸರ್ರಂತ ಸುತ್ತೋದಿಕ್ಕೆ ಶುರುವಾಯ್ತು.

ಸ್ವಾಮಿ ಮತ್ತು ವರದಿಗಾರನ ನಡುವಿನ ಹೊಸ ಒಡಂಬಡಿಕೆ ಇಡೀ ವಾರ ‘ಈಟಿವಿ’ಯನ್ನು ಟಿಆರ್ ಪಿಯಲ್ಲಿ ಮೇಲೇರಿಸಿತ್ತು.

ಇವತ್ತು ಯಾವುದೇ ನ್ಯೂಸ್ ನೋಡಿದರೂ ಅದು ‘ರೆಸಿಪಿ ಬುಕ್’ ಥರಾ ಕಾಣುತ್ತೆ.

ಎರಡು ಸೌಟು ನೀರಿಗೆ ಅರ್ಧ ಚಮಚ ಉಪ್ಪು. ಕುಟ್ಟಿ ಹದಮಾಡಿದ ಏಲಕ್ಕಿ ಎರಡು, ಕಣ್ಣಳತೆಯಷ್ಟು ನಿಂಬೆ ಹುಳಿ ಅನ್ನೋ ಥರಾ ಸೀರಿಯಸ್ ಆಗಿರೋ ಒಂದಷ್ಟು ನ್ಯೂಸ್, ಥಳಕು ಬಳಕು ಎರಡು ಮೆಟ್ರೋ ನ್ಯೂಸ್, ಒಂದು ಬಾಲಿವುಡ್ ಜ್ಹಲಕ್, ಒಂದು ಸ್ಪೋರ್ಟ್ಸ್, ಕೊನೆ ಹನಿ ಅಂತ ಒಂದು ಲೈಟ್ ಐಟಂ. ಬೇಕಾದರೆ ಆಗೀಗ ಗರಂ ಮಸಾಲ.

ಇದು ಚಾನಲ್ ಕಥೆ ಆದರೆ, ಪೇಪರ್ ಗಳಲ್ಲಿ ನಾರಾಯಣ ಮೂರ್ತಿ ಮಗಳ ಮದುವೆ ಅನ್ನೋದು ಸುದ್ದಿ ಮಾತ್ರ ಅಲ್ಲ, ಅದರ ಜೊತೆ ಅದು ಯಾವ ಕಲ್ಯಾಣ ಮಂಟಪ, ಅದರ ರೇಟ್ ಎಷ್ಟು, ಅದರಲ್ಲಿ ಈವರೆಗೂ ಆಗಿರೋ ಫೇಮಸ್ ಮದ್ವೆ ಯಾವ್ಯಾವುದು. ಮದುವೇನಲ್ಲಿ ಎಷ್ಟು ಜನ ಯೂನಿಫಾರ್ಮ್ ರಹಿತ ಪೊಲೀಸರು ಇರ್ತಾರೆ ಅನ್ನೋ ಸುದ್ದಿ.

ಸುದ್ದಿ ಈ ಥರಾ ಇರಬೇಕಾ? ಆ ಥರಾ ಇರಬೇಕಾ ಅನ್ನೋ ಪ್ರಶ್ನೆಯೇ ಇಲ್ಲ. ಸ್ಪರ್ಧೆ ಇದೆ. ಮೊದಲು ಒಂದೇ ಮಾಧ್ಯಮದ ಒಳಗೆ ಸ್ಪರ್ಧೆ ಇತ್ತು. ಈಗ ಅದರ ಜೊತೆ ಬೇರೆ ಮಾಧ್ಯಮಗಳ ಜೊತೇನೂ ಗುದ್ದಾಡ್ಬೇಕು ಅನ್ನೋ ಪರಿಸ್ಥಿತಿ. ಹಾಗಾಗಿ ನೂರೆಂಟು ಶಾರ್ಟ್ ಕಟ್ ಗಳು ಬೇಕು.

ಸುದ್ದಿ ಮನರಂಜನೆ ಆದರೂ ಆಗ್ಲಿ, ಅಥವಾ ‘ಸಿಟಿಜನ್ ಕೇನ್’ ಸಿನೆಮಾದಲ್ಲಿ ಬರೋ ಹಾಗೆ ಸುದ್ದಿ ಸ್ಫೋಟಿಸ್ಬೇಕು ಅಂತ ತಾವೇ ಸುದ್ದಿ ಆಗೋ ಅಂತ ಕ್ರೈಂ ಆದರೂ ಮಾಡ್ಲಿ- ರೇಸ್ ನಲ್ಲಿ ಕುದುರೆ ಮುಂದಿರಬೇಕು ಅಷ್ಟೇ.

‘ಸರ್ಕಾರ್’ ಅಂತ ಒಂದು ಪ್ರೋಮೋ ಮಾಡಿದ್ವಿ. ಇವತ್ತಿನ ಸುದ್ದಿಯನ್ನ ಚಿತ್ರ ಗೀತೆಗಳಿಗೆ ಅಡಾಪ್ಟ್ ಮಾಡೋದು. ಆದ್ರೆ ಇದು ಯಾವ ಥರಾ ಆಗೋಯ್ತು ಅಂದ್ರೆ, ಜನ ಪ್ರೋಮೋ ನೋಡೋಕೆ ಅಂತ ನ್ಯೂಸ್ ಬುಲೆಟಿನ್ ನೋಡೋ ಕಾಲ ಬಂತು.

ಸಂಗೀತ ಕಚೇರಿನಲ್ಲಿ ಹಾಡುಗಾರನ್ನೇ ಸೈಡ್ ಗೆ ತಳ್ಳಿ ಪಕ್ಕವಾದ್ಯದವರೇ ಮಿಂಚಿದ್ರೆ ಹೇಗಿರುತ್ತೆ ಹಾಗಾಗಿ ಹೋಯ್ತು.

ಇದನ್ನೇ Committee of Concerned Journalists ಸಮಾವೇಶ ಈಗೇನೋ ‘ಸರಿ ಆದ್ರೆ ಇದು ಮಾಧ್ಯಮಕ್ಕೆ ಒಳ್ಳೇದಲ್ಲ’ ಅಂತ ವಾರ್ನ್ ಮಾಡಿದೆ.

ಸುದ್ದಿ ಯಾವ್ದು? ಕಲ್ಪನೆ ಯಾವ್ದು? ಅನ್ನೋ ಗೆರೆ ಮಾಯಾ ಆಗಿ ಹೋದ್ರೆ ಸುದ್ದಿ ಯಾರು ನಂಬ್ತಾರೆ ಅಂತ ಆತಂಕ ವ್ಯಕ್ತಪಡಿಸಿದೆ.

ಅಷ್ಟೇ ಅಲ್ಲ ಮುಂದೆ ಯಾವ್ ಥರಾ ಪತ್ರಕರ್ತರು ರೂಪುಗೊಳ್ತಾರೆ ಅನ್ನೋದನ್ನ ಯೋಚಿಸಿ ಅಂತ ಕೇಳ್ತಾ ಇದೆ.

ಸುದ್ದೀನ ಗೆಲ್ಲಿಸೋದಕ್ಕೆ ಅಂತ ಈ ಸ್ಪೀಡ್ ನಲ್ಲಿ ಮನರಂಜನೆ ಜೊತೆ ಥಳುಕು ಹಾಕ್ತಾ ಇದ್ರೆ ಸಿನೆಮಾ ಹಾಲ್ ನಲ್ಲಿ ನ್ಯೂಸ್ ಬುಲೆಟಿನ್ ಪ್ರದರ್ಶಿಸೋ ಕಾಲಾನೂ ಬರುತ್ತೇನೋ?

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?