ಕೆ.ಇ.ಸಿದ್ದಯ್ಯ ಅವರು ಜನಪರ ಪತ್ರಕರ್ತ, ಹೋರಾಟಗಾರ ಹಾಗೂ ಲೇಖಕರು. ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರರಾದ ಅವರು ಅವಕಾಶ ಬಳಸಿಕೊಂಡಿದ್ದರೆ ಯೂನಿವರ್ಸಿಟಿಯಲ್ಲಿ ಪ್ರೊಫೆಸರ್ ಆಗುತ್ತಿದ್ದರು. ವಸೂಲಿಬಾಜಿಯ ಕೆಲಸ ಬೇಡವೆಂದು ಸುಮ್ಮನಾದವರು.
ತುಮಕೂರಿನ ಪ್ರಜಾಪ್ರಗತಿಯಿಂದ ಪತ್ರಿಕೋದ್ಯಮ ಆರಂಭಿಸಿದ ಅವರು ಈ ಟಿವಿಯಲ್ಲಿ ಹಲವು ವರ್ಷ ಹೈದರಾಬಾದ್, ಬೆಂಗಳೂರಿನಲ್ಲಿ ಸೇವೆ ಸಲ್ಲಿಸಿದವರು. ಸದ್ಯ, ತುಮಕೂರಿನಲ್ಲಿರುವ ಅವರು ಸಮುದಾಯದ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ.
ಕವಿದ ಮೋಡದ ಕೆಳಗೆ ನರಳುತಿವೆ ಜೀವ
ಹಗಲಿರುಳು ಹರಿದರೂ ಬೆವರಹೊಳೆ ಭಾರ
ತುಂಬದಿದು ತಂಬೂರಿ ಬರುಡುಯ ಚೀಲ
ಮೀಟುತಿದೆ ಹದವರಿತು ಹೊರಡಿಸುತ ನಾದ.
ಕಡುಕಪ್ಪು ಬಲುಚಂದ ಒಳಗೊಳಗೆ ವಿಷಪೂರ
ಅಲ್ಲಿ ವರ್ಣದ ಕೂಗು, ಇಲ್ಲಿ ಗೋವಿನ ಸೋಗು
ಮಾಯದ ಮಾತೊಳಗೆ ಹೊಳೆಯುತಿವೆ ದೇಶ
ಕುದಿಯುತಿದೆ ಬೇಯುತಿದೆ ತಿನ್ನಲಾಗದ ಅನ್ನ,
ಆಗ ಯಗ್ನದ ಕುಂಡ, ಈಗ ಭಕ್ತಿಯ ಕೆಂಡ
ದಹಿಸುತಿವೆ ಹಸಿದೇಹ ಒಡಲೊಳಗೆ ಕಂದ
ಕಣ್ಣಹೊಳೆ ಹರಿಸಿ ಚೀರಿತಿವೆ ಕರಿ ಇರುವೆ
ರಣಕೇಕೆ ಹಾಕುತಿವೆ ಋಣದ ಹುಳುಗಳ ದಂಡು.
ತಲೆಭುಜವು ಮೇಲಲ್ಲ, ಪಾದ ಪಾವನವಲ್ಲ
ಹಾರವನ ಆಟವಿದು ಕೊನೆ ಮೊದಲೇ ಇಲ್ಲ
ಅರಿಯುತಲಿ ಮರೆಯದಿರುವ ಉರುಹೊಡೆ ಎಲ್ಲ
ಕಲಿಯುತಲಿ ಕತ್ತಲೆಯ ಕೂಪದಿಂ ಹೊರ ಬಾ.
ಸಾಕೇತಪುರವಾಸಿ ದಕ್ಕದದು.ನಿನಗೆ
ಹಿತ್ತಾಳೆ ಕಿವಿಯೂತ ಕೋದಂಡ ಬಲಿತ
ಚೋರರೊಳ ಚೋರನಾಳ್ವಿಕೆಯ ಕಾಲ
ಬೆಳಗು ಕತ್ತಲೆಯತ್ತ ಚಲಿಸುತಿದೆ ‘ಮನು’ಕುಲ
ಬಾ ಬಾರೋ ಬೆಳಕೆ ಕರುಣೆಯ ತಿಳಿಕೊಳವೆ
ಒಳಸುಳಿಯ ಸೂಸಿ ಕೈಹಿಡಿದು ನಡೆಸು
ಬರಿಗಾಲ ನಡಿಗೆಗೆ ಚೈತನ್ಯ ನೀಡು
ಬರಿವೊಡಳ ಬಾಳ್ವೆಯಲಿ ನೆಮ್ಮದಿಯ ತುಂಬು.