ತುಮಕೂರ್ ಲೈವ್

ತಲೆ ಚಂಡಾಡಿದವರು ಎರಡೇ ದಿನದಲ್ಲಿ ಅಂದರ್

ತುಮಕೂರು: ಕೊರಟಗೆರೆ ತಾಲ್ಲೂಕಿನ ಜಿ. ನಾಗೇನಹಳ್ಳಿ ಬಳಿ ಡಿ.19ರಂದು ಸಂಜೆ ಯುವಕನೊಬ್ಬನನ್ನು ಲಾಂಗು ಮಚ್ಚುಗಳಿಂದ ಕೊಚ್ಚಿದ್ದ ಆರೋಪಿಗಳು ಕೃತ್ಯ ನಡೆದ ಎರಡೇ ದಿನದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಮಧುಗಿರಿ ತಾಲ್ಲೂಕಿನ ಪುರವರ ಹೋಬಳಿ ಕೊಂಡವಾಡಿಯ ಸಿ.ರಂಜಿತ್ ಕುಮಾರ್(28) ಆಲಿಯಾಸ್ ರಂಜಿತ್, ದೊಡ್ಡಬಳ್ಳಾಪುರ ತಾಲ್ಲೂಕಿನ ಮಾಳೇನಹಳ್ಳಿಯ ಎಂ.ಎಚ್.ಮುನಿರಾಜು(24) ಆಲಿಯಾಸ್ ಮುನಿಯಾ, ಬೆಂಗಳೂರು ಬಗಲಗುಂಟೆಯ ಮಂಜುನಾಥ(21) ಆಲಿಯಾಸ್ ಬಟ್ಲು, ಮಧುಗಿರಿ ತಾಲ್ಲೂಕಿನ ದೊಡ್ಡೇರಿ ಹೋಬಳಿ ಕಾವಣದಾಲದ ನಾರಾಯಣ(27) ಆಲಿಯಾಸ್ ಕುರುಡ, ಕುಣಿಗಲ್ ತಾಲ್ಲೂಕು ಹುಲಿಯೂರುದುರ್ಗಾ ಹೋಬಳಿ ಗಿಡದ ಕೆಂಚನಹಳ್ಳಿಯ ಸುನಿಲ್(21), ಬಗಲಗುಂಟೆಯ ನರಸಿಂಹಮೂರ್ತಿ(21), ಅನಂತಪುರ ಜಿಲ್ಲೆ ಮಡಕಶೀರಾ ತಾಲ್ಲೂಕಿನ ಅಗಳಿ ಮಂಡಲ ಮದೂಡಿಯ ಸುರೇಶ(24) ಬಂಧಿತ ಆರೋಪಿಗಳು.

ಇವರೆಲ್ಲರೂ ಸದ್ಯ ಬೆಂಗಳೂರಿನ ಬಗಲಗುಂಟೆಯಲ್ಲಿ ವಾಸವಾಗಿದ್ದರು. ಸುನಿಲ ಅಂತಿಮ ವರ್ಷದ ಬಿಎಸ್ಸಿ ವಿದ್ಯಾರ್ಥಿ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ವಿವರ: ಡಿ. 19ರಂದು ಗುರುವಾರ ಸಂಜೆ 6 ಗಂಟೆ ಸುಮಾರಿನಲ್ಲಿ ಕೊರಟಗೆರೆ, ದಾಬಸ್ಪೇಟೆ ರಾಜ್ಯ ಹೆದ್ದಾರಿ ರಸ್ತೆಯ ಜಿ.ನಾಗೇನಹಳ್ಳಿ ಬಳಿ ಪ್ರೇಮಿಗಳಿಬ್ಬರು ಸ್ಕಾರ್ಪಿಯೋ ವಾಹನದಲ್ಲಿ ಹೋಗುತ್ತಿದ್ದಾಗ ಇನ್ನೊಂದು ಸ್ಕಾರ್ಪಿಯೋ ವಾಹನದಲ್ಲಿ ಅಡ್ಡಗಟ್ಟಿದ ಏಳು ಜನ ದುಷ್ಕರ್ಮಿಗಳು ಶ್ರೀನಿವಾಸ್(25) ಎಂಬಾತನನ್ನು ಪ್ರೇಯಸಿ ಎದುರಿನಲ್ಲೆ ಲಾಂಗು, ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದರು.

ಕೊಲೆಯಾದ ಶ್ರೀನಿವಾಸ ಮಧುಗಿರಿ ತಾಲ್ಲೂಕಿನ ಬಿದರಗೆರೆ ವಾಸಿ. ಶ್ರೀನಿವಾಸ ಹಾಗೂ ಬಗಲಗುಂಟೆ ವಾಸಿ ಅಕ್ಷತಾ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಈ ಹಿನ್ನೆಯಲ್ಲಿ ಮನೆಯವರು ಒಪ್ಪಿ ಮದುವೆ ನಿಶ್ಚಯವೂ ಆಗಿತ್ತು. ಡಿ.19ರಂದು ಮಧುಗಿರಿ ತಾಲ್ಲೂಕಿನ ಬಿದರಗೆರೆ ಗ್ರಾಮಕ್ಕೆ ಇಬ್ಬರೂ ಬಂದು ವಾಪಸ್ ಆಗುವಾಗ ಜಿ. ನಾಗೇನಹಳ್ಳಿ ಬಳಿ ಶ್ರೀನಿವಾಸನ ಕೊಲೆ ಮಾಡಲಾಗಿತ್ತು. ಶ್ರೀನಿವಾಸ ಬೆಂಗಳೂರಿನ ಬಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರೌಡಿ ಶೀಟರ್ ಆಗಿದ್ದ. ಕೊಲೆ ಮಾಡಿದ ಆರೋಪಿಗಳ ವಿರುದ್ಧವು ವಿವಿಧ ಪೊಲೀಸ್ ಠಾಣೆಯಲ್ಲಿ ವಿವಿಧ ಪ್ರಕರಣಗಳಲ್ಲಿ ಕ್ರಿಮಿನಲ್ ಕೇಸು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತ್ಯಕ್ಷ ದರ್ಶಿ ಶ್ರೀನಿವಾಸನ ಹೆಂಡತಿ ಅಕ್ಷತಾ ನೀಡಿದ ಹೇಳಿಕೆ ಮೇರೆಗೆ ಮಧುಗಿರಿ ಡಿವೈಎಸ್ಪಿ ಎಂ.ಪ್ರವೀಣ್ ನೇತೃತ್ವದಲ್ಲಿ ಮೊಬೈಲ್ ಜಾಡು ಹಿಡಿದು ಬೆನ್ನು ಹತ್ತಿದ ಪೊಲೀಸ್ ತಂಡ ದಾವಣಗೆರೆ ಜಿಲ್ಲೆಯ ಚನ್ನಗಿರಿ ಬಳಿ ಸ್ಕಾರ್ಪಿಯೋ ವಾಹನದ ಸಮೇತ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರಿಂದ ಒಂದು ಕಪ್ಪು ಬಣ್ಣದ ಸ್ಕಾರ್ಪಿಯೋ ವಾಹನ, ಲಾಂಗು, ಮಚ್ಚು, ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಕೊರಟಗೆರೆ ಸಿಪಿಐ ಎಫ್.ಕೆ.ನದಾಫ್, ಪಿಎಸೈ ಬಿ.ಸಿ.ಮಂಜುನಾಥ, ಕೋಳಾಲ ಪಿಎಸೈ ನವೀನ್ ಕುಮಾರ್, ಮಧುಗಿರಿ ಪಿಎಸೈ ಕಾಂತರಾಜು, ಎಎಸೈ ಯೋಗೀಶ್, ಸಿಬ್ಬಂದಿಗಳಾದ ಮೋಹನ್, ಜಯಸಿಂಹ, ನರಸಿಂಹರಾಜು, ನರಸಿಂಹಮೂರ್ತಿ, ವಿಷ್ಣುಕದಂ, ನಾರಾಯಣ, ಗಂಗಾಧರ್ ಇದ್ದರು. ಪ್ರಕರಣ ನಡೆದು ಎರಡೇ ದಿನದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಸಿಬ್ಬಂಧಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ.ವಂಶಿಕೃಷ್ಣ, ಹೆಚ್ಚುವರಿ ವರಿಷ್ಠಾಧಿಕಾರಿ ಉದೇಶ್ ಅವರು ಅಭಿನಂಧಿಸಿದ್ದಾರೆ.

Comment here