ತುಮಕೂರು: ತಿಪ್ಪೂರು ಗ್ರಾಮದ ರೈತರೊಬ್ಬರಿಗೆ ಸೇರಿದ ತೆಂಗು ಮತ್ತು ಅಡಿಕೆ ಮರಗಳನ್ನು ಅಮಾನುಷವಾಗಿ ಕತ್ತರಿಸಿರುವ ಕ್ರಮವನ್ನು ಖಂಡಿಸಿ ನೊಂದ ರೈತ ಮಹಿಳೆಗೆ ಸೂಕ್ತ ಪರಿಹಾರ ನೀಡುವಂತೆ ಕುಪ್ಪೂರು ಮತ್ತು ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಅಧಿಕಾರಿಗಳ ಕ್ರಮಕ್ಕೆ ಛೀಮಾರಿ ಹಾಕಿದವು.ಸಿದ್ದಮ್ಮ ಅವರಿಗೆ ಸೇರಿದ 50 ತೆಂಗು ಮತ್ತು 150ಕ್ಕೂ ಅಡಿಕೆ ಮರಗಳನ್ನು ಕತ್ತರಿಸಿ ಹಾಕಲು ಆದೇಶಿಸಿದ ತಹಶೀಲ್ದಾರ್ ಹಾಗೂ ಕಂದಾಯ ಮತ್ತು ಗ್ರಾಮ ಲೆಕ್ಕಾಧಿಕಾರಿ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
.ತಿಪ್ಪೂರು ಗ್ರಾಮದಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಬಂದ ರೈತರು, ಸಿದ್ದಮ್ಮ ಅವರಿಗೆ ಆಗಿರುವ ನಷ್ಟವನ್ನು ಕೂಡಲೇ ಸರ್ಕಾರ ಭರಿಸಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ತಿಪ್ಪೂರಿನಲ್ಲಿ ಅಧಿಕಾರಿಗಳು ಮಾಡಿರುವುದು ತಪ್ಪು. ಯಾವುದೇ ಕಾರಣಕ್ಕೂ ಮರಗಳನ್ನು ಕಡಿಯಬಾರದಿತ್ತು. ರೈತರ ತೋಟಕ್ಕೆ ನುಗ್ಗಿ ಇಂತಹ ಕೃತ್ಯ ನಡೆಸಿರುವುದು ಸರಿಯಲ್ಲ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ಆನಂದ ಪಟೇಲ್ ಮೊದಲಾದವರು ಉಪಸ್ಥಿತರಿದ್ದರು.