ತುಮಕೂರ್ ಲೈವ್

ತುಮಕೂರಿನಲ್ಲಿ ಮ್ಯಾನ್ಹೋಲ್ ಗಳ ಕಾಟ…!

ಸ್ಮಾರ್ಟ್ ಸಿಟಿ ತುಮಕೂರಿನಲ್ಲಿ ಒಳಚರಂಡಿಯ ಮ್ಯಾನ್ ಹೋಲ್ ಗಳು ತುಂಬಿ ಹರಿಯುತ್ತಿದ್ದರೂ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ.

ಸಾವಿರಾರು ಕೋಟಿ ರೂಪಾಯಿ ಹಣ ವೆಚ್ಚ ಮಾಡಿ ಒಳಚರಂಡಿಗಳನ್ನು ನಿರ್ಮಾಣ ಮಾಡಿದ್ದರೂ ಮ್ಯಾನ್ ಹೋಲ್ ಗಳಲ್ಲಿ ಕೊಳಚೆ ನೀರು ರಸ್ತೆಗಳಿಗೆ ಹರಿಯುವುದು ಮಾತ್ರ ನಿಂತಿಲ್ಲ.

ತುಮಕೂರಿನ ಪ್ರಮುಖ ಬಡಾವಣೆಯಾದ ಸೋಮೇಶ್ವರ ಪುರಂನ 8ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆಯಲ್ಲಿ ಕಳೆದ ಒಂದು ವಾರದಿಂದಲೂ ಒಳಚರಂಡಿಯ ಮ್ಯಾನ್ ಹೋಲ್ ತುಂಬಿ ರಸ್ತೆಗೆ ಹರಿಯುತ್ತಿದೆ.

ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ದುರ್ನಾತ ಬೀರುವ ನೀರು ರಸ್ತೆಗೆ ಹರಿಯದಂತೆ ಪಾಲಿಕೆಗೆ ಮನವಿ ಮಾಡಿದ್ದರೂ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಪಾಲಿಕೆ ಸಂಪೂರ್ಣ ವಿಫಲವಾಗಿದೆ.

ಈ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ಒಳಚರಂಡಿ ನಿರ್ಮಾಣ ಮಾಡಲಾಗಿದೆ. ಅಂದರೆ ಪೂರ್ವಕ್ಕೆ ರಸ್ತೆ ತ್ಗಗ್ಗಾಗಿದೆ. ಆ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವುದು ಬಿಟ್ಟು ರಸ್ತೆ ಎತ್ತರವಿರುವ ಪಶ್ಚಿಮದ ಭಾಗಕ್ಕೆ ಒಳಚರಂಡಿಯ ಸಂಪರ್ಕ ಕಲ್ಪಿಸಿರುವುದು ಇಲ್ಲಿ ಪದೇ ಪದೇ ಮ್ಯಾನ್ ಹೋಲ್ ತುಂಬಿ ಹರಿಯಲು ಕಾರಣವಾಗಿದೆ.

ಮ್ಯಾನ್ ಹೋಲ್ ಗಳು ಮಳೆ ಬಂದಾಗ ಹರಿಯುವುದು ಸಾಮಾನ್ಯ. ಆದರೆ ಇಲ್ಲಿ ನಿರಂತರವಾಗಿ ಉಕ್ಕಿ ಹರಿಯುತ್ತಲೇ ಇರುತ್ತದೆ ಮಲಯುಕ್ತ ನೀರು. ರಸ್ತೆಯಲ್ಲಿ ಓಡಾಡಲು ಕೂಡ ಕಷ್ಟವಾಗಿದೆ. ಈ ಮ್ಯಾನ್ ಹೋಲ್ ತುಂಬಿ ರಸ್ತೆಗೆ ಹರಿದರೆ ಈ ರಸ್ತೆಯ ಬಹುತೇಕ ಮನೆಗಳ ಸಂಪರ್ಕಗಳು ತುಂಬಿ ಮಲಯುಕ್ತ ದುರ್ವಾಸೆ ಬೀರುವ ನೀರು ಮನೆಗಳಿಗೆ ಹರಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಮ್ಯಾನ್ ಹೋಲ್ ತುಂಬುತ್ತಿದ್ದಂತೆ ಶೌಚಾಲಯದ ಕಮೋಡ್ ಗಳು ತುಂಬಿ ಮನೆಯ ಆವರಣ ಮತ್ತು ಮನೆಗೆ ಹರಿದು ಗೊಬ್ಬು ನಾತ ಬೀರುತ್ತದೆ. ವಾರಕ್ಕೆ ಏನಿಲ್ಲವೆಂದರೂ ಒಂದು ದಿನ ಶೌಚಾಲಯಗಳು ಬ್ಲಾಕ್ ಆಗುತ್ತವೆ. ಪ್ರತಿ ಬಾರಿ ನಗರ ಪಾಲಿಕೆಯ ಸಕ್ಕಿಂಗ್ ಮಿಷನ್ ನಿರ್ವಾಹಕರಿಗೆ ಪೋನ್ ಮಾಡಿದರೆ ಅವರು ಬಂದು ಸ್ವಚ್ಛ ಮಾಡಿ ನೂರಾರು ರೂಪಾಯಿ ವಸೂಲಿ ಮಾಡಿಕೊಂಡು ಹೋಗುತ್ತಿದ್ದಾರೆ.

ಪದೇ ಪದೇ ಹಣ ನೀಡುವುದು ಆಗುತ್ತಿಲ್ಲ. ಪಾಲಿಕೆ ಅಧಿಕಾರಿಗಳ ಬೇಜವಾಬ್ದಾರಿಯ ಕಾರಣಕ್ಕೆ ಶೌಚಾಲಯಗಳ ಸಂಪರ್ಕಗಳು ತುಂಬಿ ಹರಿದರೆ ನಾವೇಕೆ ಹಣ ಕೊಡಬೇಕು. ಪಾಲಿಕೆಯ ಅಧಿಕಾರಿಗಳೇ ಸ್ವಚ್ಛ ಮಾಡಬೇಕು. ನಮ್ಮ ಮನೆಗಳ ಶೌಚಾಲಯಗಳು ಸಮರ್ಪಕವಾಗಿಲ್ಲದಿದ್ದರೆ ನಾವು ಹಣ ನೀಡಲು ಸಿದ್ದ. ಆದರೆ ಒಳಚರಂಡಿಯನ್ನೇ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿದ್ದು, ಅದನ್ನು ಕೂಡಲೇ ಪೂರ್ವದ ದಿಕ್ಕಿಗೆ ಸಂಪರ್ಕ ಕಲ್ಪಸಿದರೆ ಈ ಸಮಸ್ಯೆ ಬಗೆಹರಿಯುತ್ತದೆ ಎಂದು ಆ ಬೀದಿಯ ಜನರು ಆಗ್ರಹಿಸಿದ್ದಾರೆ.

Comment here